ಮಾನ್ವಿ ಬೃಹತ್ ಆರೋಗ್ಯ ಮೇಳದ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

ರಾಯಚೂರು: ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಮಾ. 14ರಂದು ಮಾನವಿ ಪಟ್ಟಣಕ್ಕೆ ಭೇಟಿ ನೀಡಿ ಬೃಹತ್ ಆರೋಗ್ಯ ಮೇಳದ ಸಿದ್ದತೆಯನ್ನು ಪರಿಶೀಲಿಸಿದರು.
ಮಾನ್ವಿ ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾದ ಆರೋಗ್ಯ ಮೇಳದ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಂತಿಮ ಹಂತದಲ್ಲಿರುವ ಸಿದ್ಧತೆಯನ್ನು ಪರಿಶೀಲಿಸಿದರು.
ಇಎನ್‌ಟಿ, ಚರ್ಮರೋಗ, ದಂತ, ಶ್ವಾಸಕೋಶ, ಕ್ಯಾನ್ಸರ್ ತಪಾಸಣೆಗಾಗಿ ಆಯಾ ಕಡೆಗೆ ಪ್ರತ್ಯೇಕವಾಗಿ ನಿರ್ಮಿಸಲಾದ ವಿಭಾಗಗಳ ವೀಕ್ಷಣೆ ನಡೆಸಿದರು.
ಈ ಆರೋಗ್ಯ ಮೇಳದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಶುದ್ದ ಕುಡಿಯುವ ನೀರು, ಊಟ ಸೇರಿದಂತೆ ಮೂಲಸೌಕರ್ಯಗಳನ್ನು ಅಚ್ಚುಕಟ್ಟಾಗಿ ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವ ಸೇರಿದಂತೆ ಇತರರು ಇದ್ದರು.

