ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸಿ : ನ್ಯಾ.ಎಚ್.ಎ.ಸಾತ್ವಿಕ್

ರಾಯಚೂರು : ನಗರದ ದೇವಿನಗರದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಸಂಯುಕ್ತಾಶ್ರಯದಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಉಪಯೋಜನೆಯಡಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕತೆ ನಿರ್ಮೂಲನೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಹೆಚ್.ಎ. ಸಾತ್ವಿಕ್ ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡುವುದರ ಮೂಲಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸಬೇಕು. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸಾರ್ವಜನಿಕರಿಗೆ ಜಾಗೃತಿ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಮಾತನಾಡಿ, ಜಿಲ್ಲೆಯಾದ್ಯಂತ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ರಕ್ಷಣೆಗಾಗಿ ತಂಡದ ಮೂಲಕ ಹಠಾತ್ ದಾಳಿಗಳನ್ನು ಕೈಗೊಂಡು, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದು ಕಂಡುಬಂದಲ್ಲಿ ತಪ್ಪಿತಸ್ಥ ಮಾಲಕರ ವಿರುದ್ಧ ಸಂಬಂಧ ಪಟ್ಟ ಪೋಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಹಾಗೂ ಪತ್ತೆಹಚ್ಚಲಾದ ಬಾಲಕಾರ್ಮಿಕ /ಕಿಶೋರ ಕಾರ್ಮಿಕರನ್ನು ಕೆಲಸದಿಂದ ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಮತ್ತು ಇನ್ನೀತರೆ ಚಟುವಟಿಕೆಗಳಲ್ಲಿ ತೊಡಗಿಸುವುದು ಹಾಗೂ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನೆಯ ನಿರ್ದೇಶಕ ಮಂಜುನಾಥ ರೆಡ್ಡಿ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ -1986 ಹಾಗೂ ತಿದ್ದುಪಡಿ ಕಾಯ್ದೆ-2016 ರ ಕುರಿತು ಉಪನ್ಯಾಸ ನೀಡುತ್ತಾ, 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 14 ವರ್ಷ ಮೇಲ್ಪಟ್ಟು 18 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಅಪಾಯಕಾರಿ ವೃತ್ತಿ ಮತ್ತು ಪ್ರಕ್ರಿಯೆಗಳಲ್ಲಿ ನಿಷೇಧಿಸಲಾಗಿದೆ. ಒಂದು ವೇಳೆ ಅಂತಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ತಪ್ಪಿತಸ್ಥ ಮಾಲೀಕರ ವಿರುದ್ಧ ಸಂಬಂಧ ಪಟ್ಟ ಪೊಲೀಸ್ ಠಾಣೆಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ಮತ್ತು ತಿದ್ದುಪಡಿ ಕಾಯ್ದೆ-2016 ರಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ವ್ಯವಸ್ಥಾಪಕರು ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಶಿವಪ್ಪ ಉಪ್ರಾಳ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರುಕ್ಮಿಣಿ ಬಾಯಿ ಕಾರ್ಮಿಕ ನಿರೀಕ್ಷಕ ಮಹ್ಮದ್ ಉಮರ್ ಅಬ್ದುಲ್ ಘನಿ ಉಪಸ್ಥಿತರಿದ್ದರು