ಸಿಎಲ್‍ಪಿ ಸಭೆಯಲ್ಲಿ ಯಾವುದೇ ಗಲಾಟೆ ನಡೆದಿಲ್ಲ: ಸಚಿವ ಎನ್. ಎಸ್. ಭೋಸರಾಜು

ರಾಯಚೂರು: ಶಾಸಕಾಂಗ ಪಕ್ಷದ ಸಭೆಯಲ್ಲಿ ನನಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಇದು ಮಾಧ್ಯಮಗಳ ಸೃಷ್ಠಿ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
ಜಿಲ್ಲೆಯ ಮಾನ್ವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಏನು ಗಲಾಟೆಯಾಗಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿದ್ದಾರೆ. ಸಭೆಯಲ್ಲಿ ಗಲಾಟೆಯಾಗಿರುವ ಬಗ್ಗೆ ಮಾಧ್ಯಮದವರಿಗೆ ಹೇಗೆ ಗೊತ್ತಾಗುತ್ತದೆ. ಒಳ್ಳೆಯವರು ಯಾರು ಹೇಳಿಲ್ಲ. ಕಳ್ಳರು ಯಾರೋ ನಿಮಗೆ ಹೇಳಿರಬೇಕು. ಆ ರೀತಿ ಯಾವುದೇ ಗಲಾಟೆ ನಡೆದಿಲ್ಲ. ಮಾಧ್ಯಮದವರಿಗೆ ಈ ವಿಚಾರ ಯಾರು ಹೇಳಿದ್ದಾರೋ ಅವರೇ ಕಳ್ಳರು ಎಂದು ಸಿಡಿಮಿಡಿಗೊಂಡರು.
ಎಲ್ಲ ಶಾಸಕರು, ಮಂತ್ರಿಗಳ ಜತೆ ಬಗ್ಗೆ ಸಾಮಾನ್ಯವಾಗಿ ಚರ್ಚೆ ನಡೆಯಿತು. ಸಭೆ ಬಳಿಕ ವಕ್ತಾರರು, ಸಿಎಂ, ಡಿಸಿಎಂ ಮಾತನಾಡುತ್ತಾರೆ. ಟ್ರಾನ್ಸಫರ್ ವಿಚಾರದಲ್ಲಿ ನಾವೇನು ತಲೆಕೆಡಿಕೊಂಡಿಲ್ಲ. ಸೇಡಂನಲ್ಲಿ ಕಾರ್ಯಕ್ರಮಗಳು ಮೊದಲೆ ನಿಗದಿಯಾಗಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆರೋಗ್ಯ ಮೇಳಕ್ಕೆ ಬಂದಿಲ್ಲ ಎಂದು ಸಮಜಾಯಿಷಿ ಕೊಟ್ಟರು.