ರಾಯಚೂರಿನಲ್ಲಿ ಸೈನ್ಸ್ ಪಾರ್ಕ್, ಡಿಜಿಟಲ್ ತಾರಾಲಯ ನಿರ್ಮಾಣಕ್ಕೆ ಸಚಿವ ಬೋಸರಾಜು ಸಭೆ

ರಾಯಚೂರು : ನಗರದಲ್ಲಿ ಸೈನ್ಸ್ ಪಾರ್ಕ್, ಡಿಜಿಟಲ್ ತಾರಾಲಯ ಕುರಿತು ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಭೋಸರಾಜು ನಿರ್ಮಾಣದ ನೀಲಿನಕ್ಷೆ ವಿನ್ಯಾಸ ಅಂತಿಮಗೊಳಿಸಿದರು.
ಕೇಂದ್ರ ಸರ್ಕಾರದ ಸಹಯೋಗದಲ್ಲಿ ತಾರಾಲಯ ನಿರ್ಮಾಣಕ್ಕೆ ಏಪ್ರಿಲ್ ಅಂತ್ಯದೊಳಗೆ ಡಿಪಿಆರ್ ಸಿದ್ಧಪಡಿಸಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಂಸದ ಕುಮಾರ ನಾಯಕ, ಜಿಲ್ಲಾಧಿಕಾರಿ ನಿತೀಶ್ ಕೆ. ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ವಿನ್ಯಾಸಗಾರರು ನೀಡಿದ ನೀಲನಕ್ಷೆಯನ್ನು ಪರಿಶೀಲಿಸಿ ಅಂತಿಮಗೊಳಿಸಿದರು. ಅಲ್ಲದೆ ಆಧುನಿಕ ಡಿಜಿಟಲ್ ತಾರಾಲಯದ ಚರ್ಚೆ ಮಾಡಿದರು.
ಈ ವೇಳೆ ಮಾತನಾಡಿದ ಸಚಿವರು, ವಿಜ್ಞಾನ ತಂತ್ರಜ್ಞಾನ ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ 10 ಮೀಟರ್ ವಿಸ್ತೀರ್ಣವುಳ್ಳ ಆಧುನಿಕ ಡಿಜಿಟಲ್ ತಾರಾಲಯಕ್ಕೆ ಈಗಾಗಲೇ ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ತಾರಾಲಯವನ್ನು ನಿರ್ಮಿಸಲಾಗುವುದು. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವಿಜ್ಞಾನ ಕೇಂದ್ರಗಳನ್ನು ನಿರ್ಮಿಸಲು ಆದ್ಯತೆ ನೀಡಿದ್ದು, ರಾಯಚೂರು ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ ನಿರ್ಮಾಣದ ಕಾರ್ಯವನ್ನು ತಕ್ಷಣವೇ ಚುರುಕುಗೊಳಿಸುವಂತೆ ಸೂಚಿಸಿದರು.
ಡಿಡಿಎಲ್‍ಆರ್ ಹಾಗೂ ತಹಸೀಲ್ದಾರರಿಂದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಭೂಮಿಯ ಒಟ್ಟು ವಿಸ್ತೀರ್ಣದ ವರದಿ ಪಡೆದ ಅವರು, ಸದರಿ ವಿಜ್ಞಾನ ಕೇಂದ್ರದ 10 ಎಕರೆ ಭೂಮಿಯಲ್ಲಿ ನೂತನ ವಿಜ್ಞಾನ ಕೇಂದ್ರದ ನಿರ್ಮಾಣಕ್ಕೆ ಬಳಕೆಯಾಗುವ ಸ್ಥಳವನ್ನು ಪರಿಶೀಲಿಸಿದರು.
ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಂ ನ ನಿರ್ದೇಶಕ ಸಾಜು ಭಾಸ್ಕರನ್, ಹುಬ್ಬಳ್ಳಿಯ ಸಂಕಲ್ಪ ಅಸೋಸಿಯೇಟ್‍ನ ಮಹೇಶ್ ಹಿರೇಮಠ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಭಿಯಂತರರಾದ ಸವಿತಾ ಎನ್.ಪಾಟೀಲ್, ಡಿಡಿಪಿಐ ಕೆ.ಡಿ.ಬಡಿಗೇರ್, ತಾಂತ್ರಿಕ ವಿಭಾಗದ ಸಂಯುಕ್ತ ಶ್ರೀನಿವಾಸ್ ಗಿರೀಶ್ ಬಾಬು, ರುದ್ರಪ್ಪ ಅಂಗಡಿ, ಬಸವರಾಜ ಪಾಟೀಲ್ ಸೇರಿದಂತೆ ಅನೇಕರಿದ್ದರು.