ರಾಯಚೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾರ್ಚ್ 19 ರಂದು ಬೃಹತ್ ಪ್ರತಿಭಟನಾ ಸಮಾವೇಶ

ರಾಯಚೂರು: ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರದ ಬಳಿ ಇರುವ ದತ್ತಾಂಶಗಳನ್ನು ಪರಿಗಣಿಸಿ, ವಿಳಂಬ ನೀತಿ ಅನುಸರಿಸದೇ ʼಒಳಮೀಸಲಾತಿ ಜಾರಿ ಮಾಡಿ, ಇಲ್ಲ ಖುರ್ಚಿ ಖಾಲಿ ಮಾಡಿʼ ಎಂದು ಆಗ್ರಹಿಸಿ ಮಾರ್ಚ್ 19 ರಂದು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಒಳ ಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಮಹಾಪ್ರಧಾನ ಕಾರ್ಯದರ್ಶಿ ಜೆ. ಬಿ ರಾಜು ತಿಳಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿ ಮೂರು ತಿಂಗಳ ಅವಧಿಯಲ್ಲಿ ಆಯಾ ರಾಜ್ಯಗಳಿಗೆ ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ಇದೇ ಹೇಳಿ ಈಗ 7 ತಿಂಗಳಾದರದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾತ್ರ ದತ್ತಾಂಶಗಳ ನೆಪವೊಡ್ಡಿ ವಿಳಂಬ ನೀತಿಯನ್ನು ಅನುಸರಿಸುತ್ತಾ ಬಂದಿದೆ ಎಂದು ದೂರಿದರು.
ನೆರೆ ರಾಜ್ಯ ತೆಲಂಗಾಣದಲ್ಲಿ ಒಳ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಒಳಮೀಸಲಾತಿ ಜಾರಿಗೆ ಮಾಡಲಾಗುವುದು ಎಂದು ಭರವಸೆ ನೀಡಿದ ಮಾತು ಕಾಂಗ್ರೆಸ್ ಸರಕಾರ ತಪ್ಪಿದೆ ಎಂದು ದೂರಿದರು.
ನುಡಿದಂತೆ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸಮಾಜದ ಶ್ರೇಯಾ ಅಭಿವೃದ್ಧಿಗೆ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರದಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಪರಿಗಣಿಸಿ ವಿಳಂಬ ನೀತಿ ಅನುಸರಿಸದೆ ರಾಜ್ಯ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಬೇಕು.ನ್ಯಾ ಸದಾಶಿವ ಆಯೋಗದ ವರದಿ ಮತ್ತು ಒಳಮೀಸಲಾತಿ ವರ್ಗೀಕರಣ ಶಿಫಾರಸ್ಸುಗಳನ್ನು ಸಚಿವ ಸಂಪುಟದಲ್ಲಿ ಅಧಿಕೃತಗೊಳಿಸಿ ಹೆಚ್ಚಳವಾಗಿರುವ ಮೀಸಲಾತಿಯ ಶೇ. 17 ರ ಅನುಪಾತದಲ್ಲಿ ಹೆಚ್ಚುವರಿ ಶೇ.2 ಮೀಸಲಾತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇ.7 ರಷ್ಟು ಮೀಸಲಾತಿಯನ್ನು ನಿಗಧಿಪಡಿಸಬೇಕು.ಸಚಿವ ಸಂಪುಟವು ನಿರ್ಣಯಿಸಿದಂತೆ ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರಿ ಉದ್ಯೋಗಗಳಲ್ಲಿ ಸುಮಾರು 37 ಸಾವಿರ ಹುದ್ದೆಗಳ ನೇಮಕಾತಿಯನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವರಾಯ ಅಕ್ಕಿರಕಿ, ರಂಗಪ್ಪ ಕೋತಿಗುಡ್ಡ, ಚಂದ್ರಶೇಖರ, ರಮೇಶ ಸೇರಿದಂತೆ ಉಪಸ್ಥಿತರಿದ್ದರು.