ರಾಯಚೂರು ಮಹಾನಗರ ಪಾಲಿಕೆ ಸಾಮಾನ್ಯ ಮಹಾಸಭೆ

Update: 2025-03-18 18:32 IST
Photo of Metting
  • whatsapp icon

ರಾಯಚೂರು : ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 200 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ಸೇರಿದಂತೆ 136 ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಲು ಮಾ.18ರ ಮಂಗಳವಾರ ದಂದು ನಗರದ ಮಹಾನಗರ ಪಾಲಿಕೆಯ ಹಳೇ ನಗರಸಭೆಯ ಕಟ್ಟಡದಲ್ಲಿ ನಡೆದ ಸಾಮಾನ್ಯ ಮಹಾಸಭೆ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಇತ್ತೀಚಿಗೆ ನಿಧನರಾದ ನಗರಸಭೆಯ ಮಾಜಿ ಸದಸ್ಯರಾದ ಬೋಳಬಂಡಿ ಕಟ್ಟಿಮನಿ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ನಂತರ ಸಭೆ ಪ್ರಾರಂಭವಾದ ಸಭೆಯಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆರಿದ್ದು, 200 ಕೋಟಿ ರೂ. ಕರಡು ಕ್ರಿಯಾಯೋಜನೆಯನ್ನು ಮಂಡಿಸಲಾಯಿತು.

ಈ ವೇಳೆ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀನಿವಾಸರೆಡ್ಡಿ ಅವರು ಮಾತನಾಡಿ, ನಗರದ ಎಲ್ಲಾ ವಾರ್ಡ್ ಗಳಿಗೆ ಅನುದಾನವನ್ನು ಸಮ ಹಂಚಿಕೆ ಮಾಡಿ, ರಸ್ತೆ ಸೇರಿದಂತೆ ಇತರೆ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಲಾಗಿದ್ದು, ಅನುಮೋದನೆ ನೀಡಬೇಕೆಂದರು. ಈ ವೇಳೆ ಮಹಾನಗರ ಪಾಲಿಕೆಯ ಸದಸ್ಯ ಎನ್.ಕೆ.ನಾಗರಾಜ ಸೇರಿ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ವಾಸಿಸುವ ಬಡಾವಣೆಗಳಿಗೆ ಹೆಚ್ಚು ಅನುದಾನ ಕಾಯ್ದಿರಿಸಬೇಕೆಂದು ಆಯುಕ್ತರಿಗೆ ಮನವಿ ಮಾಡಿದರು.

ಈ ವೇಳೆ ಪಾಲಿಕೆಯ ಆಯುಕ್ತರಾದ ಜುಬಿಲ್ ಮಹೋಪಾತ್ರ ಅವರು ಮಾತನಾಡಿ, 200 ಕೋಟಿ ರೂ. ಅನುದಾನ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಧೃಡೀಕರಣದ ನಂತರ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಸಲ್ಲಿಸಿದ ನಂತರ ಅಲ್ಲಿಂದ ಕೇಂದ್ರದ ಪ್ರಸ್ತಾವನೆ ಹೋಗುತ್ತದೆ ಎಂದರು. ಈ ಯೋಜನೆಯಲ್ಲಿ ಮುಖ್ಯರಸ್ತೆ ಸೇರಿದಂತೆ ಇತರೆ ದೊಡ್ಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅವಕಾಶವಿದೆ. ಇಡೀ ನಗರದಲ್ಲಿ ಕಾಮಗಾರಿಗಳನ್ನು ಆಯ್ಕೆ ಮಾಡಲಾಗಿದೆ. ಬೈಪಾಸ್, ಧೂಳು ಮುಕ್ತ ನಗರವನ್ನಾಗಿಸಲು ಈ ಅನುದಾನವನ್ನು ಬಳಸಬಹುದಾಗಿದೆ. ಇದು ಕರಡು ಕ್ರಿಯಾಯೋಜನೆಯಷ್ಟೇ ಈಗಲೂ ಬಿಟ್ಟು ಹೋದ ವಾರ್ಡ್ ಗಳು, ಇತರೆ ಸಲಹೆಗಳನ್ನು ನೀಡಬಹುದು ಎಂದರು.

ಮಹಾನಗರ ಪಾಲಿಕೆಯ ಸದಸ್ಯ ಶಶಿರಾಜ ಅವರು ಮಾತನಾಡಿ, 15ನೇ ಹಣಕಾಸು ಮಾತ್ರ ಇಲ್ಲಿಯವರೆಗೆ ಇತ್ತು. ಈಗ 200 ಕೋಟಿ ರೂ. ಕ್ರಿಯಾ ಯೋಜನೆ ರೂಪಿಸುವ ಸದಸ್ಯರೊಂದಿಗೆ ಚರ್ಚಿಸಿ ಆಯ್ಕೆ ಮಾಡಬಹುದಿತ್ತು ಎಂದರು.

ಹಿರಿಯ ಸದಸ್ಯ ಜಯಣ್ಣ ಮಾತನಾಡಿ, ನಗರದ ಎಲ್ಲಾ ಪ್ರಮುಖ ರಸ್ತೆಗಳ ನಿರ್ಮಾಣಕ್ಕೆ ಅವಕಾಶವಿದೆ. ಸಮಗ್ರವಾದ ಯೋಜನೆ ರೂಪಿಸಬೇಕಿದೆ. ನಗರ ಸ್ಥಿತಿ ಗಂಭೀರವಾಗಿದೆ. ಅನೇಕ ಸದಸ್ಯರು ವಾರ್ಡವಾರು ಅನುದಾನ ನೀಡಬೇಕೆಂದು ಆಗ್ರಹಿಸಿದರು.

ನಗರಸಭೆ ಅನುದಾನದಲ್ಲಿ ಐದು ವಾಟರ್ ಟ್ಯಾಂಕರ್ ಖರೀದಿಗೆ 10 ಲಕ್ಷ ರೂ. ಹಾಗೂ ಇತರೆ ಕುಡಿಯುವ ನೀರಿನ ಕಾಮಗಾರಿಗೆ ಅನುಮೋದನೆ ನೀಡಲಾಯಿತು. ಚರಂಡಿಗಳ (ಸಿವರೇಜ್ ಹೋಲ್) ನಿರ್ವಹಣೆ ಆಧುನಿಕ ತಂತ್ರಜ್ಞಾನದ ಯಂತ್ರ ಖರೀದಿ, ಓವರ್ ಹೆಡ್ ಟ್ಯಾಂಕ್‌ಗಳನ್ನು ನಗರ ನೀರು ಮತ್ತು ಚರಂಡಿ ನಿಗಮಕ್ಕೆ ವಹಿಸಲು ತೀರ್ಮಾನಿಸಲಾಯಿತು.

ಮುಂದಿನ 15 ವರ್ಷದ ನಗರ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ರಾಂಪೂರು ಜಲಾಶಯ ಮತ್ತು ಚಿಕ್ಕಸೂಗೂರು ಜಲಾಶಯದಲ್ಲಿ ಕೆರೆ ನಿರ್ಮಾಣ ಹಾಗೂ ಕೃಷ್ಣ ಮತ್ತು ತುಂಗಭದ್ರ ನದಿ ನೀರು ಪೂರೈಕೆಗೆ ನಿರ್ವಹಣೆಗೆ ಖಾಸಗಿ ಸಂಸ್ಥೆಗೆ ವಹಿಸಲು ಸಭೆ ತೀರ್ಮಾನಿಸಿತು.

ಹಳೇ ಜಿಲ್ಲಾಧಿಕಾರಿಗಳ ಕಚೇರಿ ನವೀಕರಣಕ್ಕಾಗಿ 70 ಲಕ್ಷ ರೂ. ಬಿಡುಗಡೆ, ಬೇಸಿಗೆ ದಿನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ನೀರಿನ ಅರವಟ್ಟಿಗೆ, ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲು ಚರ್ಚಿಸಲಾಯಿತು. ಕೋಟೆ ಕಂದಕಗಳ ಒತ್ತುವರಿ ತೆರವುಗೊಳಿಸಲು ಸಭೆ ನಿರ್ಧರಿಸಲಾಯಿತು.

ಈ ವೇಳೆ ಸದಸ್ಯ ಜಯಣ್ಣ ಅವರು ಮಾತನಾಡಿ, ಒತ್ತುವರಿ ತೆರವು ಜನರ ಸಹಭಾಗಿತ್ವದಲ್ಲಿ ತೆರವು ನಡೆಯಬೇಕು. ಪರಿಶೀಲನೆ ನಡೆಸಿ ಅತಿಕ್ರಮಣ ತೆರವುಗೊಳಿಸಬೇಕೆಂದರು. ಕಂದಕ ಮತ್ತು ಮಾವಿನಕೆರೆ ಒತ್ತವರಿ ತೆರವುಗೊಳಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವೆಂದು ಜುಬಿನ್ ಮಹೋಪಾತ್ರ ಸದಸ್ಯರಿಗೆ ಮನವಿ ಮಾಡಿದರು.

ಸಭೆ ಪ್ರಾರಂಭದಲ್ಲಿ ಕಳೆದ ಸಭೆಗಳ ನಡುವಳಿಕೆ ನೀಡದೆ ಇರುವ ಕುರಿತು ಮಹಾನಗರ ಪಾಲಿಕೆಯ ಸದಸ್ಯರಾದ ಶಶಿರಾಜ ಹಾಗೂ ಜಯಣ್ಣ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಉಪ ಆಯುಕ್ತರಾದ ಗುರುಸಿದ್ದಯ್ಯ ಹಿರೇಮಠ ಅವರು ಮಾತನಾಡಿ, ಹಿಂದಿನ ಸಭೆಯ ನಡುವಳಿಕೆಯನ್ನು ಇನ್ನೂ ಎರಡು ದಿನದಲ್ಲಿ ಸದಸ್ಯರಿಗೆ ರವಾನಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷರಾದ ಸಾಜೀದ್ ಸಮೀರ್, ಪಾಲಿಕೆಯ ಆಯುಕ್ತರಾದ ಜುಬಿನ್ ಮಹೋಪಾತ್ರ ಸೇರಿದಂತೆ ಸದಸ್ಯರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News