ರಾಯಚೂರು | ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ವ್ಯಾಪಾರಸ್ಥರ ವಿರೋಧ

ರಾಯಚೂರು : ‘ಇಲ್ಲಿನ ಎಂ.ಈರಣ್ಣ ವೃತ್ತದಿಂದ ಆಕಾಶವಾಣಿ ಕೇಂದ್ರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಮಾವಿನಕೆರೆಗೆ ಹೊಂದಿಕೊಂಡಿರುವ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲು ಮಹಾನಗರ ಪಾಲಿಕೆ ಮುಂದಾಗಿರುವುದು ಸರಿಯಲ್ಲ, ಕೂಡಲೇ ನಿರ್ಧಾರ ಹಿಂಪಡೆಯಬೇಕು ಎಂದು ಎಂ.ಈರಣ್ಣನವರ ತರಕಾರಿ ಮಾರಾಟಗಾರರ ಹಾಗೂ ರೈತ ಉತ್ಪಾದಕರ ಸಂಘದ ಕಾರ್ಯದರ್ಶಿ ಮುಹಮ್ಮದ್ ವಸೀಮ್ ಒತ್ತಾಯಿಸಿದರು.
‘ಮಾವಿನಕೆರೆಯ ಬಳಿಯ ತರಕಾರಿ ಮಾರುಕಟ್ಟೆಯನ್ನು ತೀನ್ ಖಂದಿಲ್ ಬಳಿಯ ಉಸ್ಮಾನಿಯಾ ತರಕಾರಿ ಮಾರುಕಟ್ಟೆಗೆ ಸ್ಥಳಾಂತರ ಮಾಡಲು ಮಹಾನಗರ ಪಾಲಿಕೆ ಮುಂದಾಗಿದ್ದು, ಈಗಾಗಲೇ ಸಿದ್ಧತೆ ನಡೆಸಿದೆ. ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಕಿರಿದಾಗಿದೆ. ಸಾರ್ವಜನಿಕ ವಾಹನ ನಿಲುಗಡೆ ವ್ಯವಸ್ಥೆ ಇಲ್ಲ, ಮೂಲಸೌಕರ್ಯ ಕೊರತೆ ಇರುವುದರಿಂದ ಸ್ಥಳಾಂತರ ಮಾಡಿದರೆ ಅನಾಕೂಲವಾಗಲಿದೆ ಎಂದು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
‘ಜಿಲ್ಲಾಡಳಿತ ಕೋವಿಡ್ ನಲ್ಲಿ ತರಕಾರಿ ಮಾರುಕಟ್ಟೆ ವಿಕೇಂದ್ರೀಕರಣದ ಭಾಗವಾಗಿ ನಗರ ಸಭೆಗೆ ನಿರ್ದೇಶನ ನೀಡಿ ತರಕಾರಿ ವರ್ತಕರಿಗೆ ತರಕಾರಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ ತರಕಾರಿ ಮಾರುಕಟ್ಟೆ ಲಭ್ಯ ಇರುವುದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನುಕೂಲವಾಗಿದೆ. ಇಲ್ಲಿನ ಮಾರುಕಟ್ಟೆ ಸ್ಥಳಾಂತರಿಸಿದರೆ ಈ ತರಕಾರಿ ಮಾರುಕಟ್ಟೆ ಮೇಲೆ ಅವಲಂಬಿತರಾಗಿರುವ ಅನೇಕ ಕುಟುಂಬಗಳು ಬೀದಿಗೆ ಬರುತ್ತವೆ ಎಂದು ಅಳಲು ತೊಡಿಕೊಂಡರು.
‘ಉಸ್ಮಾನಿಯಾ, ತೀನ್ ಕಂದೀಲ್ ಬಳಿ ಮಾರುಕಟ್ಟೆಯಲ್ಲಿ ಸುಮಾರು ವರ್ಷಗಳಿಂದ ಹಲವು ಸವಾಲುಗಳನ್ನು ಎದುರಿಸಿ ಸಂಕಷ್ಟ ಅನುಭವಿಸಿದ್ದೇವೆ. ವ್ಯಾಪಾರ ವಹಿವಾಟು ನಷ್ಟವಾಗಿ ವರ್ತಕರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. ದಾಸ್ತಾನಿಡುವ ಪದಾರ್ಥಗಳಿಗೆ ಭದ್ರತೆ ಇಲ್ಲ. ಉತ್ತಮ ವಾತಾವರಣ ಇಲ್ಲ ಎಂದು ದೂರಿದರು.
'ಸ್ಥಳಾಂತರವನ್ನು ಕೈ ಬಿಡಬೇಕು. ಮಹಾನಗರ ಪಾಲಿಕೆ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೆ ನಾವು ಬದ್ಧರಾಗಿದ್ದೇವೆ. ನಿಗದಿತ ಸಮಯದಲ್ಲೇ ವಹಿವಾಟು ನಡೆಸುತ್ತೇವೆ' ಎಂದರು.
ಅಲಿ ಫೀರ್, ಜೂಬೆದ್ ಖಾನ್, ರಘು, ಉಮ್ಮೆಶ, ಜಾನಿಕ್ ರಾಮ ಉಪಸ್ಥಿತರಿದ್ದರು