ರಾಯಚೂರು | ಜಿಲ್ಲೆಯಲ್ಲಿ 42.7 ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು

ರಾಯಚೂರು : ಜಿಲ್ಲೆಯಲ್ಲಿ ಬುಧವಾರ 42.7 ಗರಿಷ್ಠ ತಾಪಮಾನ ದಾಖಲಾಗಿದ್ದು, ಜನ ತತ್ತರಿಸುವಂತಾಗಿದೆ. ಮತ್ತೊಂದೆಡೆ ಬಿಸಿಗಾಳಿಯ ಅರ್ಭಟದಿಂದ ಹೈರಾಣಾಗಿದ್ದಾರೆ.
ಬೇಸಿಗೆಯ ಬಿರುಬಿಸಿಲಿನ ಹೊಡೆತವು ಆರಂಭಗೊಂಡಿದ್ದು, ಜಿಲ್ಲೆಯಾದ್ಯಂತ ಉಷ್ಣಗಾಳಿ ಪರಿಣಾಮ ಗರಿಷ್ಠ ತಾಪಮಾನವು ದಾಖಲಾಗುತ್ತಿದೆ. ಮಂಗಳವಾರ 42.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಬುಧವಾರವೂ ಸಹ ಗರಿಷ್ಠ ತಾಪಮಾನ ಮುಂದುವರೆದಿದೆ. ಇದರಿಂದಾಗಿ ಜಿಲ್ಲೆ ಜನರು ಬೆಳಗ್ಗೆಯಿಂದಲೇ ಸೂರ್ಯನ ಸಕೆಯನ್ನು ಅನುಭವಿಸುವಂತಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ 42.7 ಡಿ.ಸೆ ಅದೇ ರೀತಿ ಬೀದರ್ ಮತ್ತು ಬಾಗಲಕೋಟೆ 41.9 ಡಿ.ಸೆ, ಬೆಳಗಾವಿಯಲ್ಲಿ 41.8, ಕಲಬುರಗಿಯಲ್ಲಿ 41.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ರಾಜ್ಯದ 17 ಜಿಲ್ಲೆಗಳಲ್ಲಿ 40 ಡಿ.ಸೆ.ಗೂ ಅಧಿಕ ತಾಪಮಾನ ದಾಖಲುಗೊಂಡಿದೆ.
ಉಷ್ಣಗಾಳಿ, ಗರಿಷ್ಠ ತಾಪಮಾನ ಏರಿಕೆ ಹಾಗೂ ಆರ್ದ್ರತೆ ಪ್ರಮಾಣವು ಹೆಚ್ಚಾಗಿರುತ್ತಿರುವುದರಿಂದ ವಾತಾವರಣದಲ್ಲಿ 1 ರಿಂದ 2 ಡಿ.ಸೆ. ಜಾಸ್ತಿಯಾಗುತ್ತಿದೆ. ಸಾರ್ವಜನಿಕರು ದೇಹ ತಂಪಾಗಿಸಿಕೊಳ್ಳಲು ಕಲ್ಲಂಗಡಿ, ಕರ್ಬೂಜಾ, ಎಳನೀರು ಸೇವನೆ ಮಾಡಿ ಅಗಾಗ ನೀರು ಕುಡಿಯಬೇಕು.ಹೊರಗೆ ಹೋಗುವಾಗ ತಲೆಗೆ ಟೊಪ್ಪಿ, ಕೊಡೆ ಬಳಸಬೇಕು ಹಾಗೂ ಅಗತ್ಯ ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ನೀಡುತ್ತದೆ.