ರಾಯಚೂರು | ಗ್ರಂಥಾಲಯ ಸಂಘದ 70ನೇ ಅಂತರ್‌ರಾಷ್ಟೀಯ ಸಮ್ಮೇಳನ

ರಾಯಚೂರು : ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ನವದೆಹಲಿಯ ಭಾರತೀಯ ಗ್ರಂಥಾಲಯ ಸಂಘ ಮತ್ತು ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ 2025ರ ಮಾ.20 ರಿಂದ 22 ರವರೆಗೆ ಹಮ್ಮಿಕೊಂಡ ಎರಡು ದಿನಗಳ 70ನೇ ಗ್ರಂಥಾಲಯ ಸಂಘದ ಅಂತಾರಾಷ್ಟೀಯ ಸಮ್ಮೇಳನಕ್ಕೆ ಮಾ.20ರಂದು ಚಾಲನೆ ಸಿಕ್ಕಿತು.
ನಗರದ ಕೃ.ವಿ.ವಿನ ಆವರಣದಲ್ಲಿ, “ಗ್ರಂಥಾಲಯ ಬಳಕೆದಾರರ ಸುಸ್ಥಿರ ಜ್ಞಾನಾರ್ಜನೆಯಲ್ಲಿ ಗ್ರಂಥಾಲಯ ಮತ್ತು ಕೃತಕ ಬುದ್ಧಿಮತ್ತೆಯ ಮಹತ್ವ”ದ ಕುರಿತ ಉದ್ದೇಶನ ಸಮ್ಮೇಳನಕ್ಕೆ ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಗ್ರಂಥಾಲಯಗಳು ಜ್ಞಾನದ ಭಂಡಾರವಿದ್ದಂತೆ. ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡು ಜ್ಞಾನಾರ್ಜಿತರಾಗಬೇಕೆಂದು ನೆರೆದಿದ್ದ ಸಮ್ಮೇಳನದ ಪ್ರತಿನಿಧಿಗಳಿಗೆ ಸಲಹೆ ಮಾಡಿದರು.
ಗ್ರಂಥಾಲಯ ಇಲ್ಲದೇ ಯಾವುದೇ ಶಿಕ್ಷಣ ಸಂಸ್ಥೆಯು ಶಿಕ್ಷಣ ನೀಡಲು ಅನರ್ಹ ಎಂದು ಅಭಿಪ್ರಾಯಪಟ್ಟರು. ಭಾರತದ ಇತಿಹಾಸವನ್ನು ತೆರೆದು ನೋಡಿದರೆ ತಕ್ಷಶಿಲಾ ಮತ್ತು ನಳಂದಾಗಳಂತಹ ವಿಶ್ವವಿದ್ಯಾಲಯಗಳು ಉತ್ಕೃಷ್ಠವಾದ ಗ್ರಂಥಾಲಯಗಳನ್ನು ಹೊಂದಿ ಇಡೀ ಜಗತ್ತಿಗೇ ಜ್ಞಾನವನ್ನೆರದಿವೆ. ಆದ್ದರಿಂದ ಪ್ರಸ್ತುತವಿರುವ ಗ್ರಂಥಾಲಯಗಳು ಇಂದಿನ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ಮುದ್ರಿತಪ್ರತಿ ಹಾಗೂ ಮೃದು ಪ್ರತಿಗಳನ್ನು ಉಪಯೋಗಿಸಿಕೊಂಡು ಸಾಗಬೇಕಾಗಿದೆ. ಭಾರತ ಸರ್ಕಾರವು ಎಲ್ಲಾ ಗ್ರಂಥಾಲಗಳಲ್ಲಿ ಆನ್ ಲೈನ್ ನಿಯತಕಾಲಿಕೆಗಳನ್ನು ಕೂಡ ಒದಗಿಸುತ್ತಿದ್ದು, ಇದರಿಂದಾಗಿ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ ಎಂದರು.
ಮುಂದಿನ 2047ರಲ್ಲಿ ಅಭಿವೃದ್ಧಿ ಹೊಂದಿದ ವಿಕಸಿತ ಭಾರತವನ್ನು ಕಾಣಬಹುದಾಗಿದ್ದು, ರಾಷ್ಟ್ರದ ಅಭಿವೃದ್ಧಿಗೆ ಗ್ರಂಥಪಾಲಕರ ಪಾತ್ರವೂ ಅತ್ಯಂತ ಮುಖ್ಯವಾಗಿರುತ್ತದೆ ಎಂದರು. ಪ್ರತಿಯೊಬ್ಬರಿಗೂ ಕೌಶಲ್ಯಾಭಿವೃದ್ಧಿ ಅತ್ಯಂತ ಮುಖ್ಯವಾಗಿದ್ದು, ಅದನ್ನು ಕೂಡ ಗ್ರಂಥಾಲಯಗಳಲ್ಲಿ ಅಳವಡಿಸಲು ಯೋಜಿಸಲಾಗುತ್ತಿದೆ. ಗ್ರಂಥಾಲಯಗಳ ನಿವರ್ಹಣೆ ಕೂಡ ಪ್ರಮುಖವಾಗಿದೆ ಮತ್ತು ಗ್ರಂಥಾಲಯಗಳನ್ನು ಸಮಯಾನುಸಾರ ತೆರೆಯದೆ ನಿರಂತರವಾಗಿ ತೆರೆದಿಡುವ ವ್ಯವಸ್ಥೆ ಆಗಬೇಕಿದೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಸೂಕ್ತವಾಗಿ ಉಪಯೋಗಿಸಿದಲ್ಲಿ ಗ್ರಂಥಾಲಯಗಳು ಬಳಕೆದಾರರಿಗೆ ಇನ್ನೂ ಹತ್ತಿರವಾಗಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ ಹನುಮಂತಪ್ಪ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಗ್ರಂಥಾಲಯಗಳು ಮುದ್ರಿತ ಪ್ರತಿಗಳಿಂದ ಡಿಜಟಲಿಕರಣಗೊಂಡು ಬಳಕೆದಾರರಿಗೆ ಅವಶ್ಯಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುತ್ತಿರುವುದು ಹೆಮ್ಮೆಯ ಸಂಗತಿ ಹಾಗೂ ಗ್ರಂಥಾಲಯದಲ್ಲಾದ ಹೊಸ ಮೈಲುಗಲ್ಲಾಗಿದೆ. “ದೇಶ ಸುತ್ತು ಇಲ್ಲವೇ ಕೋಶ ಓದು” ಎಂಬ ನಾಣ್ಣುಡಿಯಂತೆ ಇಂದಿನ ಗ್ರಂಥಾಲಯಗಳು ಜ್ಞಾನಗಳ ಆಗರವಾಗಿವೆ. ಇವುಗಳನ್ನು ಸದುಪಯೋಗಪಡಿಸಿಕೊಂಡರೆ ಮಾತ್ರ ಬಳಕೆದಾರರು ಯಶಸ್ವಿಯಾಗುವುದು ಖಂಡಿತ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ಸುಯಮೀಂದ್ರ ಕುಲಕರ್ಣಿ, ಭಾರತೀಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಮೋಹನ ಖೇರ್ಡೆ, ಪ್ರಧಾನ ಕಾರ್ಯದರ್ಶಿ ಡಾ.ಒ.ಎನ್.ಚೌಬೆ, ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ.ಎಚ್.ಎಸ್.ಸಿದ್ದಮಲ್ಲಯ್ಯ, ಗುಲಬರ್ಗಾ ವಿಸ್ವವಿದ್ಯಾಲಯದ ಗ್ರಂಥಪಾಲಕ ಡಾ.ಸುರೇಶ ಜಂಗೆ, ರಾಯಚೂರು ಕೃ.ವಿ.ವಿ ಯ ವ್ಯವ್ಯಸ್ಥಾಪನಾ ಮಂಡಳಿಯ ಗೌರವಾನ್ವಿತ ಸದಸ್ಯರಾದ ಶ್ರೀ ಬಸನಗೌಡ ಬ್ಯಾಗವಾಟ್, ಶ್ರೀ ಮಲ್ಲಿಕಾರ್ಜುನ.ಡಿ, ಶ್ರೀ ಮಲ್ಲೇಶ ಕೊಲಿಮಿ, ಡಾ.ಗುರುರಾಜ ಸುಂಕದ, ಸಂಘಟನ ಕಾರ್ಯದರ್ಶಿ ಡಾ.ಮಚೇಂದ್ರನಾಥ.ಎಸ್, ಸಹ ಸಂಘಟನ ಕಾರ್ಯದರ್ಶಿ ಡಾ.ಪಿಎಸ್.ಕಟ್ಟಿಮನಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 150ಕ್ಕೂ ಹೆಚ್ಚು ಪ್ರತಿನಿಧಿಗಳಿದ್ದರು.