ರಾಯಚೂರು ಜಿಲ್ಲೆಯಲ್ಲಿ ಮೊದಲ ದಿನದ ಎಸೆಸೆಲ್ಸಿ ಪರೀಕ್ಷೆ ಸುಗಮ

ರಾಯಚೂರು : ಇಂದಿನಿಂದ ಎಸೆಸೆಲ್ಸಿ ಪರೀಕ್ಷೆಗಳು ಆರಂಭವಾಗಿದ್ದು, ಜಿಲ್ಲೆಯಲ್ಲಿ 34,619 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 97 ಪರೀಕ್ಷಾ ಕೇಂದ್ರಗಳನ್ನು ತೆರಯಲಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಂ ಪಾಂಡ್ವೆ ಅವರು ಹೇಳಿದರು.
ಮಾ.21ರ ಶುಕ್ರವಾರ ದಂದು ಜಿಲ್ಲೆಯ ಮಾನ್ವಿ ತಾಲೂಕಿನ ಆದರ್ಶ ವಿದ್ಯಾಲಯ, ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ವೆಲಂಕಿ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದರು.
ನೀರಮಾನ್ವಿಯ ಆದರ್ಶ ವಿದ್ಯಾಲಯ ಪರೀಕ್ಷೆ ಕೇಂದ್ರಕ್ಕೆ ಬೇಟಿ ನೀಡಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಮಾಹಿತಿ ಪಡೆದರು.
ಕೇಂದ್ರದಲ್ಲಿ ಒಟ್ಟು 607 ವಿದ್ಯಾರ್ಥಿಗಳ ಪೈಕಿ 52 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದರು. ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ಒಟ್ಟು 387 ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಗೈರು, ವೆಲಂಕಿ ರಾಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಕೇಂದ್ರದಲ್ಲಿ ಒಟ್ಟು 536 ಪೈಕಿ 48 ವಿದ್ಯಾರ್ಥಿಗಳು ಗೈರು ಆಗಿರುವ ಮಾಹಿತಿಯನ್ನು ಪಡೆದುಕೊಂಡರು.
ಇನ್ನೂ ಪರೀಕ್ಷೆ ಕೇಂದ್ರಗಳಿಗೆ ನಿಯೋಜನೆಗೊಂಡ ಸಿಬ್ಬಂದಿಯವರಿಂದ ಪರೀಕ್ಷೆ ಸುಗಮವಾಗಿ ನಡೆಯುವ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಕರ್ತವ್ಯ ನಿರತ ಅಧಿಕಾರಿಗಳು ಹಾಗೂ ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.