ರಾಯಚೂರು | ಅಕ್ರಮ ಮರಳು ಸಾಗಣೆಗೆ ಯತ್ನ: 18 ಟಿಪ್ಪರ್, 1 ಹಿಟಾಚಿ ವಶಕ್ಕೆ

ರಾಯಚೂರು : ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಹತ್ತಿರ ಹರಿಯುವ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆಯಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ಮಾನ್ವಿ ಪೊಲೀಸ್ ಠಾಣೆಯ ಪಿ.ಐ. ಸೋಮಶೇಖರ್ ಎಸ್. ಕೆಂಚ ರೆಡ್ಡಿ ನೇತೃತ್ವದ ತಂಡ ದಾಳಿ ಮಾಡಿ ಒಂದು ಹಿಟಾಚಿ ಹಾಗೂ 18 ಟಿಪ್ಪರ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಯಚೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪುಷ್ಪಲತಾ ಒಳಗೊಂಡ ತಂಡ ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ದಾಳಿ ನಡೆಸಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವ ವಾಹನಗಳನ್ನು ವಶಕ್ಕೆ ಪಡೆದು ಮಾನ್ವಿ ಪೊಲೀಸ್ ಠಾಣೆಯಲ್ಲಿ ವಾಹನ ಮಾಲಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಟಿಪ್ಪರ್ ಗಳು ಯಾರಿಗೆ ಸೇರಿದೆ ಎನ್ನುವುದು ತಿಳಿದುಬಂದಿಲ್ಲ. ಟಿಪ್ಪರ್ ಚಾಲಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಎಸ್.ಪಿ ಪುಟ್ಟಮಾದಯ್ಯ ಅವರ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಗಿದೆ.