ರಾಯಚೂರು | ನಕಲಿ ನೋಟು ಚಲಾವಣೆ; ಇಬ್ಬರ ಬಂಧನ

ಬಂಧಿತ ಆರೋಪಿಗಳು
ರಾಯಚೂರು : ನಗರದ ಹೈದರಬಾದ್ ರಸ್ತೆಯ ಶಮ್ಸ್ ಹೋಟೆಲ್ ನಲ್ಲಿ ಬಿರಿಯಾನಿ ಸೇವಿಸಿ ನಕಲಿ ನೋಟು ಚಲಾವಣೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಮಾರ್ಕೆಟ್ ಯಾರ್ಡ್ ಠಾಣೆಯ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಶಮ್ಸ್ ಬಿರಿಯಾನಿ ಹೋಟೆಲ್ ನಲ್ಲಿ ಚಿಕನ್ ಬಿರಿಯಾನಿ ಸೇವಿಸಿ ಬಳಿಕ 500 ರೂ. ಮುಖ ಬೆಲೆಯ ನಕಲಿ ನೋಟು ನೀಡಿದ್ದಾರೆ.
ಹೋಟೆಲ್ ಮಾಲಕ ಅನುಮಾನಗೊಂಡು ನೋಟನ್ನು ಪರಿಶೀಲಿಸಿದಾಗ ಆರೋಪಿಗಳಾದ ಮಂಜುನಾಥ ಹಾಗೂ ರಮೇಶ್ ಎನ್ನುವವರು ಅಸಲಿಯಂತೆ ಕಾಣುವ ಚಿಲ್ಡ್ರನ್ಸ್ ಬ್ಯಾಂಕ್ ಎಂದು ಬರೆದಿರುವ ಮಕ್ಕಳು ಆಡುವ ನೋಟುಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಬಳಿಕ ಹೋಟೆಲ್ ಮಾಲಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇಬ್ಬರು ಆರೋಪಿಗಳನ್ನು ಪೋಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೂ ಮುಂಚೆ 40 ಲಕ್ಷ ರೂ. ಖೋಟಾ ನೋಟುಗಳ ಚಲಾವಣೆಯ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಸೇರಿ ನಾಲ್ವರನ್ನು ಬಂಧಿಸಿ 40 ಲಕ್ಷ ರೂ. ನಕಲಿ ನೋಟುಗಳನ್ನು ಜಪ್ತಿ ಮಾಡಿದ ಪ್ರಕರಣದ ಬೆನ್ನಲ್ಲೆ ಮತ್ತೊಂದು ಪ್ರಕರಣ ದಾಖಲಾಗಿದ್ದು, ನಕಲಿ ನೋಟುಗಳ ಚಲಾವಣೆ ಹಾಗೂ ಮನಿ ಡಬ್ಲಿಂಗ್ ನಡೆಯುತ್ತಿರುವ ದೂರುಗಳು ಇಲಾಖೆಗೆ ಬಂದಿದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ.