ರಾಯಚೂರು | ಎಸೆಸೆಲ್ಸಿ ಪರೀಕ್ಷೆಗೆ ಪೂರ್ವ ತಯಾರಿ ಸಂಪೂರ್ಣ : 97 ಪರೀಕ್ಷಾ ಕೇಂದ್ರಗಳಲ್ಲಿ ಕಠಿಣ ಭದ್ರತೆ

ಸಾಂದರ್ಭಿಕ ಚಿತ್ರ
ರಾಯಚೂರು : 2024-25 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಪೂರ್ವ ತಯಾರಿ ಸಿದ್ಧವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ, ರಾಯಚೂರು ಪ್ರಕಟಣೆ ತಿಳಿಸಿದೆ.
ಮಾನ್ಯ ಜಿಲ್ಲಾಧಿಕಾರಿ ರಾಯಚೂರು ಅವರ ಅಧ್ಯಕ್ಷತೆಯಲ್ಲಿ ಮಾ.19ರಂದು ನಡೆದ ವಿಡಿಯೋ ಸಂವಾದದಲ್ಲಿ ನೀಡಲಾದ ಸೂಚನೆಗಳನ್ವಯ, ಜಿಲ್ಲೆಯಲ್ಲಿ ದೇವದುರ್ಗ (15), ಲಿಂಗಸೂಗೂರು (18), ಮಾನವಿ (18), ರಾಯಚೂರು (27), ಸಿಂಧನೂರು (19) ಸೇರಿ ಒಟ್ಟು 97 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆ ನಡೆಯಲಿದೆ. ಭದ್ರತಾ ವ್ಯವಸ್ಥೆ: 97 ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಲು, ಹಾಗೂ ಪರೀಕ್ಷಾ ಸಾಮಗ್ರಿಗಳ ರಕ್ಷಿತ ಸಾಗಣೆಗೆ ಎಸ್ಕಾರ್ಟ್ ವ್ಯವಸ್ಥೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಲಾಗಿದೆ. ಜೊತೆಗೆ ಎಲ್ಲ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಹಾಯಕರ ನೇಮಕ:
ಪ್ರತಿಯೊಂದು ಕೇಂದ್ರಕ್ಕೆ ಮುಖ್ಯ ಅಧೀಕ್ಷಕ, ಉಪ ಅಧೀಕ್ಷಕ, ಜಾಗೃತ ದಳದ ಅಧಿಕಾರಿಗಳು, ಕೊಠಡಿ ಮೇಲ್ವಿಚಾರಕರು, ಮೊಬೈಲ್ ಸ್ವಾಧೀನಾಧಿಕಾರಿಗಳು ಹಾಗೂ ಅಭೀರಕ್ಷಕರನ್ನು ನೇಮಕ ಮಾಡಲಾಗಿದೆ.
ಸಿ.ಸಿ.ಟಿ.ವಿ ನಿಗಾವ್ಯವಸ್ಥೆ:
ಎಲ್ಲಾ ಕೇಂದ್ರಗಳಲ್ಲಿ ಯತಾ ಪ್ರಕಾರ ಸಿ.ಸಿ.ಟಿ.ವಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದೆ. ನಿರಂತರ ವಿದ್ಯುತ್ ಪೂರೈಕೆಗಾಗಿ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.
ಉಚಿತ ಬಸ್ ಪ್ರಯಾಣ:
ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಸೂಚನೆ ನೀಡಲಾಗಿದ್ದು, ಡಿಪೋ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲು ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಪ್ರಸಕ್ತ ಮಾಹಿತಿ ಪತ್ರಿಕೆಗೆ ನೀಡಿ, ಸಾರ್ವಜನಿಕರ ಜಾಗೃತಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಕಟಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.