ದೇವದುರ್ಗ | ಶಾಸಕಿ, ಅಧಿಕಾರಿಗಳಿಂದ ಅಂಬೇಡ್ಕರ್ ಅವರಿಗೆ ಅವಮಾನ : ಹನುಮಂತ ಮನ್ನಾಪುರ್ ಆರೋಪ

ದೇವದುರ್ಗ: ಪಟ್ಟಣದ ಹೃದಯ ಭಾಗದಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದ ದುರಸ್ಥಿ ಕಾಮಗಾರಿ ಮಂದಾಗತಿಯಲ್ಲಿ ಸಾಗಿದ್ದು, ಕೂಡಲೇ ಅಂಬೇಡ್ಕರ್ ಜಯಂತಿ ಒಳಗಡೆ ಕಾಮಗಾರಿ ಮುಗಿಸದಿದ್ದರೆ ಮಾ.21 ರಂದು ರಾಜ್ಯ ಹೆದ್ದಾರಿ ತಡೆದು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರಗತಿಪರ ಸಂಘಟನೆಯ ಒಕ್ಕೂಟದ ಮುಖಂಡರಾದ ಹನುಮಂತಪ್ಪ ಮನ್ನಾಪುರ ಹಾಗೂ ಮೋಹನ್ ಬಲ್ಲಿದವ್ ಪತ್ರಿಕಾಗೋಷ್ಠಿ ಮೂಲಕ ಎಚ್ಚರಿಸಿದರು.
ದೇವದುರ್ಗ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆಗೆ ಆಯ್ಕೆಯಾದ ಶಾಸಕಿ ಕರೆಮ್ಮ ಜಿ.ನಾಯಕ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ದುರಸ್ಥಿ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರುವ ಮೂಲಕ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಂಬೇಡ್ಕರ್ ವೃತ್ತದ ಮರು ನಿರ್ಮಾಣ ಕಾಮಗಾರಿಯ ಟೆಂಡರ್ ಕರೆದು ಕಳೆದ 19 ತಿಂಗಳ ಗತಿಸಿದರೂ ವೃತ್ತದ ಕಾಮಗಾರಿ ಮುಗಿಸದೆ ಶಾಸಕರು ಮತ್ತು ತಾಲೂಕು ಅಧಿಕಾರಿ ವಲಯ ತೀರ ಅವಮಾನ ಮಾಡುತ್ತಿದ್ದಾರೆ. ಸಾಕಷ್ಟು ಬಾರಿ ಕಾಮಗಾರಿ ವಿಳಂಬ ಮಾಡದಂತೆ ಮನವಿ/ಹೋರಾಟ ಮಾಡಿಕೊಂಡು ಬಂದರೂರು ಸಹ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ತಾಲೂಕು ಆಡಳಿತಕ್ಕೆ ಹಾಗೂ ಶಾಸಕಿಗೆ ಇದರ ಬಗ್ಗೆ ಗೊತ್ತಿದ್ದರೂ ಕಾಮಗಾರಿ ಮುಗಿಸದೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮೋಹನ್ ಬಲ್ಲಿದವ್, ಮಹಾಂತೇಶ್ ಭವಾನಿ, ಮಂಜುನಾಥ್ ಹೇರುಂಡಿ, ಬಸವರಾಜ, ಕ್ರಾಂತಿ ಕುಮಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.