ರಾಯಚೂರು: ಕಾರ್ಮಿಕ ವಿರೋಧಿ ಕೇಂದ್ರದ ವಿರುದ್ಧ ಟಿಯುಸಿಐ ಪ್ರತಿಭಟನೆ

ರಾಯಚೂರು: ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಿಂಧನೂರು ನಗರದ ಚೆನ್ನಮ್ಮ ವೃತ್ತದಲ್ಲಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ-(ಟಿಯುಸಿಐ )ಸಿಂಧನೂರು ತಾಲೂಕು ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ದೇಶ ಕಟ್ಟುವ ಕಾರ್ಮಿಕರ,ರೈತರ ವಿರೋಧಿಯಾಗಿ ಕಾಯ್ದೆಗಳನ್ನು ಜಾರಿಗೆ ತಂದು ಬಂಡವಾಳಶಾಹಿಪರ ಆಡಳಿತ ನಡೆಸುತ್ತಿದೆ. ಕಾರ್ಮಿಕರ ಶ್ರಮಶಕ್ತಿಯನ್ನು ಅಗ್ಗದ ದರದಲ್ಲಿ ಸುಲಿಗೆ ಮಾಡಿ, ಸೂಪರ್ ಪ್ರಾಫಿಟ್ ಗಳಿಸುವ ವಿದೇಶಿ ಹಾಗೂ ಸ್ವದೇಶಿ ಕಾರ್ಪೊರೇಟ್ ಕಂಪನಿಗಳಿಗೆ, ಬಂಡವಾಳಶಾಹಿ -ಮಾಲಿಕ ವರ್ಗಕ್ಕೆ ಸ್ವರ್ಗವಾಗುವ ನೀತಿ ನಿಯಮ ರೂಪಿಸಲಾಗುತ್ತಿದೆ ಎಂದು ದೂರಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷ ಹೊರಡಿಸುವ ಅಧಿಸೂಚನೆಗಳ ಪ್ರಕಾರ ನಿಗದಿಯಾದ ಕನಿಷ್ಠ ದಿನಗೂಲಿಯಲ್ಲಿ ಶೇಕಡಾ ಹತ್ತರಷ್ಟು ಕಾರ್ಮಿಕರಿಗೆ ಸಿಗುತ್ತಿಲ್ಲ. ಏಕೆಂದರೆ, ಕಾರ್ಮಿಕ ಇಲಾಖೆ ಮಾಲೀಕರ ಇಲಾಖೆಯಾಗಿ ಪರಿವರ್ತನೆಯಾಗಲು ಮೋದಿ ಸರ್ಕಾರ ಹೊಸ ಕಾನೂನು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಗತ್ಯ ಜೀವನ ಪದಾರ್ಥಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಕನಿಷ್ಠವಾಗಿ ಜೀವಿಸಲು ಕಾರ್ಮಿಕರ ಕುಟುಂಬವೊಂದಕ್ಕೆ ಮಿನಿಮಮ್ ಮಾಸಿಕ 30,000ರೂ. ಬೇಕಾಗುತ್ತದೆ. ಆದರೆ ಈಗ ಪಾವತಿಸುವ ಮಾಸಿಕ ಕೂಲಿದರವು ಕನಿಷ್ಠ 7000 ರೂ.ಗರಿಷ್ಠ 15000 ಆಗಿದೆ ಇದರಿಂದ ಜೀವನ ನಡೆಸುವುದು ದುಸ್ತರವಾಗಿದೆ ಎಂದು ದೂರಿದರು.
ಶ್ರಮಶಕ್ತಿ ಹಾಗೂ ರಕ್ತಸಿಕ್ತ ತ್ಯಾಗದಿಂದ ಕಟ್ಟಿದ ಬಹುಜನರ ಈ ದೇಶವನ್ನು ಇಂದು ಮೋದಿ ಸರ್ಕಾರ ಆರ್ ಎಸ್ ಎಸ್ ಐಡಿಯಾಲಜಿ ಅಡಿ ಹಿಂದೂರಾಷ್ಟ್ರ ಎಂದು ಘೋಷಿಸಲು ಹೊರಟಿದೆ. ಇದೊಂದು ಚಾರಿತ್ರಿಕ ಅಪರಾಧ. ಭಾರತದ ಜನತೆ ಎಂದೆಂದಿಗೂ ಸಹಿಸದ ದ್ರೋಹವಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಎಂ. ಗಂಗಾಧರ, ಜಿಲ್ಲಾ ಸಮಿತಿ ಸದಸ್ಯ ಹೆಚ್ ಆರ್ ಹೊಸಮನಿ, ಹುಲುಗಪ್ಪ ಬಳ್ಳಾರಿ, ಮುದಿಯಪ್ಪ ಹನುಮನಗರ ಕ್ಯಾಂಪ್, ಹನುಮಂತ,ಯಮನೂರ ಭೂತಲದಿನ್ನಿ, ದುರುಗಪ್ಪ ಬಸಪುರ, ಹನುಮಂತ, ಹುಚ್ಚಪ್ಪ, ಬಸವರಾಜ ಭೂತಲದಿನ್ನಿ, ಆಕಾಶ ಸೇರಿದಂತೆ ಇತರರು ಹೋರಾಟದಲ್ಲಿ ಪಾಲ್ಗೊಂಡಿದ್ದರು.