ಪ್ರಜಾಸತ್ತೆಯನ್ನು ಇವಿಎಂ ಹ್ಯಾಕ್ ಮಾಡದಿರಲಿ

Update: 2024-03-20 05:15 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತ ಜೋಡೊ ನ್ಯಾಯಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ‘ಇವಿಎಂ’ ವಿರುದ್ಧ ಸ್ಫೋಟಿಸಿದ್ದಾರೆ. ‘‘ಪ್ರಧಾನಿ ಮೋದಿಯವರು ಚುನಾವಣೆಯನ್ನು ಗೆಲ್ಲುತ್ತಿರುವುದು ಇವಿಎಂ ಮೂಲಕ. ಅವರ ಆತ್ಮ ಇವಿಎಂನಲ್ಲಿದೆ. ಇವಿಎಂ ಯಂತ್ರವನ್ನು ನಮಗೆ ಹಾಗೂ ನಮ್ಮ ತಜ್ಞರಿಗೆ ಪರಿಶೀಲಿಸಲು ತೋರಿಸುವಂತೆ ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೆವು. ಆದರೆ ಅದನ್ನು ತೋರಿಸಲು ಅವರು ನಿರಾಕರಿಸಿದ್ದರು’’ ಎಂದು ತಮ್ಮ ಭಾಷಣದಲ್ಲಿ ಆರೋಪಿಸಿದ್ದಾರೆ. ಈಗಾಗಲೇ ವಿರೋಧ ಪಕ್ಷಗಳ ಕೆಲವು ನಾಯಕರು ಇವಿಎಂ ವಿರುದ್ಧ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಕಾಂಗ್ರೆಸ್‌ನ ಕೆಲವು ನಾಯಕರಿಂದಲೂ ಈ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿಯವರು ಸ್ಪಷ್ಟ ಧ್ವನಿಯಲ್ಲಿ ಇವಿಎಂನ್ನು ವಿರೋಧಿಸಿದ್ದು ಇದೇ ಮೊದಲು. ಈ ಮೂಲಕ ಅವರು ಪ್ರಧಾನಿ ಮೋದಿಯವರು ಆಯ್ಕೆಯಾಗಿರುವುದು ಜನಮತದಿಂದಲ್ಲ, ಇವಿಎಂ ತಿರುಚುವ ಮೂಲಕ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ ಮುಂದಿನ ಚುನಾವಣೆಯನ್ನು ಅವರು ಅದೇ ರೀತಿಯಲ್ಲಿ ಗೆಲ್ಲಲಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ರಾಹುಲ್ ಗಾಂಧಿ ತಮ್ಮ ಹೇಳಿಕೆಯ ಮೂಲಕ ಚುನಾವಣಾ ಆಯೋಗದ ಮೇಲೆಯೂ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ನಡೆಯಲಿರುವ ಚುನಾವಣಾ ಪ್ರಕ್ರಿಯೆಯ ಮೇಲೆಯೇ ನಂಬಿಕೆಯಿಲ್ಲದ ಮೇಲೆ ಈ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಯಾಕೆ ಒಪ್ಪಿಕೊಂಡಿವೆ ಎನ್ನುವ ಪ್ರಶ್ನೆಯನ್ನು ಜನರು ಕೇಳುವಂತಾಗಿದೆ.

ಚುನಾವಣಾ ದಿನಾಂಕಗಳನ್ನು ಘೋಷಿಸುವ ಸಂದರ್ಭದಲ್ಲೇ, ಇವಿಎಂ ಪೂರ್ಣ ಪ್ರಮಾಣದಲ್ಲಿ ಸುರಕ್ಷಿತವಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿತ್ತು. ಕಾಂಗ್ರೆಸ್ ಪಕ್ಷದ ನಾಯಕರು ಇವಿಎಂನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಿಲ್ಲ. ‘ಮತ ಪತ್ರಗಳ ಮೂಲಕ ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸುತ್ತಿಲ್ಲ. ಇವಿಎಂ ಬಗ್ಗೆ ತಮ್ಮ ಕೆಲವು ಅನುಮಾನಗಳನ್ನು ಮುಂದಿಟ್ಟಿದ್ದಾರೆ ಮಾತ್ರವಲ್ಲ, ಕೆಲವು ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ಒತ್ತಾಯಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ, ಇವಿಎಂನ್ನು ನಮಗೆ ಅಥವಾ ನಮ್ಮ ತಜ್ಞರಿಗೆ ಪರಿಶೀಲಿಸಲು ಅವಕಾಶ ನೀಡಬೇಕು ಎನ್ನುವುದಾಗಿದೆ. ಎರಡನೆಯ ಮುಖ್ಯ ಬೇಡಿಕೆ, ಶೇ. ನೂರು ವಿವಿ ಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕು ಎನ್ನುವುದು. ‘ಇವಿಎಂನಲ್ಲಿ ಯಾವುದೇ ಲೋಪವಿಲ್ಲ’ ಎನ್ನುವುದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಾ ವಿರೋಧ ಪಕ್ಷಗಳ ಬೇಡಿಕೆಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಇವಿಎಂನ್ನು ತಿರುಚಲು ಸಾಧ್ಯವಿಲ್ಲ ಎಂದೇ ಇಟ್ಟುಕೊಳ್ಳೋಣ. ಆದರೆ ಚುನಾವಣೆಯ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಇವಿಎಂ ಮೇಲೆ ಈ ದೇಶದ ಒಂದು ಗುಂಪು, ಕೆಲವು ಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಿವೆ ಎಂದಾದರೆ, ಒಂದೋ ಆ ಅನುಮಾನವನ್ನು ಪರಿಹರಿಸಬೇಕು. ಇಲ್ಲವೇ ಆ ಯಂತ್ರವನ್ನೇ ಪಕ್ಕಕ್ಕಿಡಬೇಕು. ಚುನಾವಣಾ ಆಯೋಗ ಎರಡಕ್ಕೂ ಸಿದ್ಧವಿಲ್ಲ.

ಇಷ್ಟಕ್ಕೂ ಇವಿಎಂಗೆ ಪ್ರಮಾಣ ಪತ್ರವನ್ನು ನೀಡುತ್ತಿರುವ ಚುನಾವಣಾ ಆಯೋಗವೇ ಪಕ್ಷಗಳ ವಿಶ್ವಾಸವನ್ನು ಕಳೆದುಕೊಂಡಿದೆ. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸರಕಾರವನ್ನು ಬೀಳಿಸಲು ಆಯೋಗವೇ ಬಿಜೆಪಿಯೊಂದಿಗೆ ಶಾಮೀಲಾಗಿತ್ತು ಎನ್ನುವ ಕಳಂಕವನ್ನು ಅದು ಹೊತ್ತುಕೊಂಡಿದೆ. ದೇಶದ ಹಿರಿಯ ನಾಯಕ ಶರದ್ ಪವಾರ್ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಚುನಾವಣಾ ಆಯೋಗವನ್ನು ‘ಕೇಂದ್ರ ಸರಕಾರದ ಗುಲಾಮ’ ಎಂದು ಕರೆದಿದ್ದಾರೆ. ಈ.ಡಿ., ಸಿಬಿಐ ಮೊದಲಾದ ತನಿಖಾ ಸಂಸ್ಥೆಗಳಂತೆಯೇ ಚುನಾವಣಾ ಆಯೋಗವೂ ತನ್ನನ್ನು ಕೇಂದ್ರ ಸರಕಾರಕ್ಕೆ ಮಾರಿಕೊಂಡಿದೆ ಎಂದು ಆವರು ದೂರುತ್ತಿದ್ದಾರೆ. ಹೀಗಿರುವಾಗ ಇವಿಎಂ ವಿರುದ್ಧ ಇರುವ ಅಪನಂಬಿಕೆಯನ್ನು ನಿವಾರಿಸುವುದೆಂದರೆ ಪರೋಕ್ಷವಾಗಿ ತನ್ನ ಮೇಲಿರುವ ಅಪನಂಬಿಕೆಯನ್ನು ನಿವಾರಿಸಿದಂತೆ. ಆದರೆ ಇವಿಎಂನ ಕುರಿತಂತೆ ವಿರೋಧ ಪಕ್ಷಗಳ ಯಾವುದೇ ಬೇಡಿಕೆಗೆ ಸ್ಪಂದಿಸಲು ನಿರಾಕರಿಸುತ್ತಿರುವ ಚುನಾವಣಾ ಆಯೋಗ, ಈ ಮೂಲಕ ವಿರೋಧ ಪಕ್ಷಗಳ ಆರೋಪಗಳನ್ನು ಪುಷ್ಟೀಕರಿಸುತ್ತಿದೆ. ತಂತ್ರಜ್ಞಾನವನ್ನು ತಿರಸ್ಕರಿಸಿ ನಾವು ಮುಂದೆ ಹೆಜ್ಜೆ ಇಡಲು ಸಾಧ್ಯವಿಲ್ಲ ಎನ್ನುವ ಮಾತುಗಳನ್ನು ಚುನಾವಣಾ ಆಯೋಗ ಹೇಳುತ್ತಿದೆ. ಆದರೆ ಅತ್ಯಂತ ಶ್ರೀಮಂತ ದೇಶಗಳು ಇವಿಎಂನ್ನು ಕೈ ಬಿಟ್ಟಿರುವುದನ್ನು ವಿರೋಧ ಪಕ್ಷಗಳು ಉದಾಹರಣೆಯಾಗಿ ನೀಡುತ್ತಿವೆ. ಇವಿಎಂನಿಂದ ಚುನಾವಣೆಗಳನ್ನು ಅತಿ ಶೀಘ್ರವಾಗಿ ನಡೆಸಲು ಸಾಧ್ಯವಾಗುತ್ತದೆ ಎನ್ನುವುದು ಒಂದು ವಾದ. ಆದರೆ, ಜನತೆಯ ವಿಶ್ವಾಸವನ್ನು ಗಳಿಸಿಕೊಳ್ಳಲು ವಿಫಲವಾದ ಇವಿಎಂನಿಂದ ಚುನಾವಣೆ ಅದೆಷ್ಟು ಶೀಘ್ರವಾಗಿ ನಡೆದರೂ ಅದರಿಂದ ಪ್ರಜಾಸತ್ತೆಗೆ ಯಾವ ಲಾಭವೂ ಇಲ್ಲ. ಯಾವುದೇ ಅಕ್ರಮಗಳಿಲ್ಲದೆ ಚುನಾವಣೆ ನಡೆಯುವುದರಲ್ಲಿ ಪ್ರಜಾಸತ್ತೆಯ ಗೆಲುವಿದೆ. ವಿಪರ್ಯಾಸವೆಂದರೆ, ಈ ಬಾರಿ, ಸುಮಾರು ಎರಡೂವರೆ ತಿಂಗಳ ಕಾಲ ಚುನಾವಣೆ ಪ್ರಕ್ರಿಯೆಗಳು ನಡೆಯಲಿವೆ. ಎಪ್ರಿಲ್ 19ರಿಂದ ನಡೆಯುವ ಚುನಾವಣೆಯ ಫಲಿತಾಂಶ ಹೊರ ಬೀಳುವುದು ಒಂದೂವರೆ ತಿಂಗಳ ಬಳಿಕ. ಇವಿಎಂ ಇದ್ದೂ ಚುನಾವಣೆಯನ್ನು ಇಷ್ಟು ದೀರ್ಘವಾಗಿ ಎಳೆಯುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆಯನ್ನೂ ವಿರೋಧ ಪಕ್ಷಗಳು ಎತ್ತಿವೆ. ಆದರೆ ಆಯೋಗದ ಬಳಿ ಆ ಕುರಿತಂತೆಯೂ ಸ್ಪಷ್ಟ ಉತ್ತರವಿಲ್ಲ.

‘ಇವಿಎಂ ಇಲ್ಲದೆ ಮೋದಿಯವರು ಚುನಾವಣೆ ಎದುರಿಸಲು ಸಾಧ್ಯವೇ ಇಲ್ಲ’ ಎಂದು ಗೊತ್ತಿದ್ದ ಮೇಲೆ ಕಾಂಗ್ರೆಸ್ ನಾಯಕರಾಗಿರುವ ರಾಹುಲ್ ಗಾಂಧಿ ಚುನಾವಣೆಗೆ ಮುನ್ನ ಯಾಕೆ ಉಳಿದೆಲ್ಲ ಪಕ್ಷಗಳನ್ನು ಸಂಘಟಿಸಿ ಇವಿಎಂ ವಿರುದ್ಧ ಹೋರಾಟ ನಡೆಸಲಿಲ್ಲ ಎನ್ನುವ ಪ್ರಶ್ನೆಯನ್ನೂ ಜನರು ಕೇಳುತ್ತಿದ್ದಾರೆ. ಇವಿಎಂ ಬಳಸಿಕೊಂಡು ನರೇಂದ್ರ ಮೋದಿಯವರು ಎರಡು ಬಾರಿ ಪ್ರಧಾನಿಯಾಗಿದ್ದಾರೆ. ಕನಿಷ್ಠ ಎರಡನೇ ಬಾರಿ ಪ್ರಧಾನಿಯಾದಾಗಲಾದರೂ ಎಚ್ಚೆತ್ತುಕೊಳ್ಳಲು ವಿರೋಧ ಪಕ್ಷಗಳಿಗೆ ಅವಕಾಶವಿತ್ತು. ಕಳೆದ ಐದು ವರ್ಷಗಳಲ್ಲಿ ಎಲ್ಲ ಪಕ್ಷಗಳನ್ನು ಜೊತೆಯಾಗಿಸಿ ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಅವರಿಗೆ ಸಾಧ್ಯವಾಗಬೇಕಾಗಿತ್ತು. ಚುನಾವಣಾ ಪ್ರಕ್ರಿಯೆಯಲ್ಲೇ ಲೋಪವಿದೆ ಎಂದು ಗೊತ್ತಾದ ಮೇಲೆ, ಆ ಚುನಾವಣೆಯನ್ನು ನೀವು ಯಾಕೆ ಒಪ್ಪಿಕೊಂಡಿರಿ ಎನ್ನುವ ಪ್ರಶ್ನೆಗೆ ವಿರೋಧ ಪಕ್ಷಗಳು ಉತ್ತರಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ, ‘‘ಇದು ಪ್ರಜಾಪ್ರಭುತ್ವದ ಕೊನೆಯ ಚುನಾವಣೆಯಂತೆ ಕಾಣುತ್ತಿದೆ’’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅಂದರೆ, ‘ಈ ಬಾರಿ ಪ್ರಧಾನಿ ಮೋದಿಯವರು ಮತ್ತೆ ಆರಿಸಿ ಬರಲಿದ್ದಾರೆ’ ಎನ್ನುವ ಅನುಮಾನ ಅವರಲ್ಲೂ ಇದ್ದಂತಿದೆ. ಕಾಂಗ್ರೆಸ್ ನಾಯಕರು ಈ ಮೂಲಕ, ಚುನಾವಣೆಗೆ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಭಾವಿಸಬೇಕಾಗುತ್ತದೆ.

ಇವಿಎಂ ತಂತ್ರಜ್ಞಾನ ಬಳಕೆ ಹಲವು ವಿರೋಧಾಭಾಸಗಳನ್ನು ಒಳಗೊಂಡಿದೆ. ಮೊದಲನೆಯದು, ಇವಿಎಂ ಜಾರಿಗೊಂಡಿರುವುದು ಯುಪಿಎ ಸರಕಾರದ ಅವಧಿಯಲ್ಲಿ. ಅಷ್ಟೇ ಅಲ್ಲ, ಇವಿಎಂನ್ನು ತಿರುಚಲಾಗುತ್ತದೆ ಎಂದು ಮೊದಲು ಆರೋಪಿಸಿದ್ದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ. ಅಂದಿನಿಂದ ಇಂದಿನವರೆಗೆ ಇವಿಎಂ ಕುರಿತಂತೆ ಹತ್ತು ಹಲವು ಅನುಮಾನಗಳನ್ನು ವಿವಿಧ ಪಕ್ಷಗಳ ನಾಯಕರು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇವಿಎಂ ವಿರುದ್ಧ ಒಕ್ಕೊರಲಿನ ಪ್ರತಿಭಟನೆಯನ್ನು ಸಂಘಟಿಸುವುದಕ್ಕೆ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಅಡ್ಡಿಯಾಗುತ್ತಿದ್ದವು. ಯಾಕೆಂದರೆ ಬಿಜೆಪಿಯೇತರ ಪಕ್ಷಗಳೂ ವಿಧಾನಸಭಾ ಚುನಾವಣೆಗಳಲ್ಲಿ ಬಹುಮತಗಳನ್ನು ಪಡೆಯುತ್ತಿವೆ. ಇದೀಗ ರಾಹುಲ್ ಗಾಂಧಿಯವರು ಇವಿಎಂ ವಿರುದ್ಧ ನೇರ ಆರೋಪ ಮಾಡಿರುವುದರಿಂದ, ಚುನಾವಣೆಗೆ ಮುನ್ನ ಚಹುನಾವಣಾ ಆಯೋಗ ಇವಿಎಂ ಕುರಿತಂತೆ ದೇಶದ ಜನತೆಗೆ ಕೆಲವು ಕನಿಷ್ಟ ಭರವಸೆಯನ್ನು ನೀಡಲೇಬೇಕಾಗಿದೆ. ಅದರಲ್ಲಿ ಮುಖ್ಯವಾಗಿ, ಈ ಬಾರಿ ವಿವಿಪ್ಯಾಟ್ ಚೀಟಿಗಳ ನೂರು ಶೇಕಡಾ ಎಣಿಕೆಯಾಗಬೇಕು. ಈ ಕನಿಷ್ಠ ಬೇಡಿಕೆಯನ್ನೂ ಒಪ್ಪಿಕೊಳ್ಳಲು ಚುನಾವಣಾ ಆಯೋಗಕ್ಕೆ ಕಷ್ಟವಾದರೆ, ಅದು ‘ಇವಿಎಂನ್ನು ತಿರುಚಲಾಗುತ್ತಿದೆ’ ಎನ್ನುವ ವಿರೋಧ ಪಕ್ಷಗಳ ಆರೋಪವನ್ನು ಒಪ್ಪಿಕೊಂಡಂತೆಯೇ ಸರಿ. ಯಾವ ಚುನಾವಣಾ ಪ್ರಕ್ರಿಯೆಯ ಮೇಲೆ ಜನರಿಗೆ ನಂಬಿಕೆಯೇ ಇಲ್ಲವೋ ಆ ಚುನಾವಣೆಯನ್ನು ನಡೆಸುವ ಅಗತ್ಯವಾದರೂ ಏನು? ಇಂತಹ ಚುನಾವಣೆಗೂ, ಚುನಾವಣೆಯನ್ನು ರದ್ದುಗೊಳಿಸುವುದಕ್ಕೂ ವಿಶೇಷ ವ್ಯತ್ಯಾಸವೇನೂ ಇಲ್ಲ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News