ರೋಹಿತ್ ಕಾಯ್ದೆ ಶೀಘ್ರ ಜಾರಿಯಾಗಲಿ

Update: 2025-04-21 08:45 IST
ರೋಹಿತ್ ಕಾಯ್ದೆ ಶೀಘ್ರ ಜಾರಿಯಾಗಲಿ

  ರಾಹುಲ್ ಗಾಂಧಿ , ಸಿದ್ದರಾಮಯ್ಯ | PTI

  • whatsapp icon

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದಲ್ಲಿ ‘ಜಾತಿ ಅಸಮಾನತೆ’ಗಳು ಬೇರೆ ಬೇರೆ ಕಾರಣಗಳಿಗಾಗಿ ಚರ್ಚೆಯಲ್ಲಿರುವ ಹೊತ್ತಿನಲ್ಲೇ, ರೋಹಿತ್ ವೇಮುಲಾ ಕಾಯ್ದೆ ಅನುಷ್ಠಾನ ಪ್ರಕ್ರಿಯೆ ಮುನ್ನೆಲೆಗೆ ಬಂದಿದೆ. ರೋಹಿತ್ ವೇಮುಲಾ ಆತ್ಮಹತ್ಯೆಯ ಬೆನ್ನಿಗೇ ಹುಟ್ಟಿಕೊಂಡ ಪ್ರತಿಭಟನೆಗಳು ಅಂತಿಮವಾಗಿ ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ದಲಿತ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಶಿಕ್ಷಣವನ್ನು ತಮ್ಮದಾಗಿಸುವ ವಾತಾವರಣವೊಂದು ನಿರ್ಮಾಣವಾಗಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟವು. ಅದಕ್ಕಾಗಿ ರೋಹಿತ್ ವೇಮುಲಾ ಹೆಸರಿನಲ್ಲಿ ಕಾಯ್ದೆಯೊಂದನ್ನು ಜಾರಿಗೊಳಿಸಬೇಕು ಎಂದು ಒತ್ತಾಯಗಳು ಕೇಳಿಬಂದವು. ಕರ್ನಾಟಕದಲ್ಲೂ ವಿವಿಧ ವಿದ್ಯಾರ್ಥಿ ಸಂಘಟನೆಗಳು, ದಲಿತ ನಾಯಕರು ಈ ಕಾಯ್ದೆಗಾಗಿ ಧ್ವನಿಯೆತ್ತುತ್ತಲೇ ಬಂದಿದ್ದರು. ಇತ್ತೀಚೆಗಷ್ಟೇ ಈ ಕಾಯ್ದೆಗೆ ಸಂಬಂಧಿಸಿ, ವಿವಿಧ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದವು. ವಿಶ್ವವಿದ್ಯಾನಿಲಯಗಳು, ಕಾಲೇಜುಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅವರ ಮೇಲೆ ಪ್ರದರ್ಶನವಾಗುತ್ತಿರುವ ಅಸಹನೆ, ಇವುಗಳನ್ನು ತಡೆಯಲು ಪ್ರತ್ಯೇಕ ಕಾನೂನಿನ ಅಗತ್ಯವಿದೆ. ಇಲ್ಲವಾದರೆ ‘‘ವಿಶ್ವವಿದ್ಯಾನಿಲಯಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಹಗ್ಗ ಅಥವಾ ವಿಷವನ್ನು ಮೊದಲೇ ಕೊಟ್ಟು ಬಿಡಬೇಕು’’ ಎಂಬ ರೋಹಿತ್ ವೇಮುಲಾ ಮಾತಿನಂತೆ, ವಿದ್ಯಾರ್ಥಿಗಳಿಗೆ ಈ ದೌರ್ಜನ್ಯಗಳಿಂದ ಪಾರಾಗಲು ಆತ್ಮಹತ್ಯೆ ಕಟ್ಟ ಕಡೆಯ ದಾರಿಯಾಗಿ ಬಿಡಬಹುದು. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ತನ್ನನ್ನು ತಾನು ದಲಿತ ಪರ ಎಂದು ಕರೆದುಕೊಂಡಿದೆ. ಸಿದ್ದರಾಮಯ್ಯ ಅವರು ‘‘ನಾನು ಕೂಡ ದಲಿತ’’ ಎಂದು ಹೇಳಿಕೊಂಡಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳ್ಳಲು ಹಿಂಜರಿಕೆಯಾಕೆ ಎಂದು ಕೇಳುವುದು ಸಹಜವೇ ಆಗಿದೆ.

ರೋಹಿತ್ ವೇಮುಲಾ ಕಾನೂನು ಜಾರಿಗೊಳಿಸಲು ಎರಡು ದಿನಗಳ ಹಿಂದೆ ರಾಹುಲ್ ಗಾಂಧಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದರು. ಅದರ ಬೆನ್ನಿಗೇ ಇದೀಗ ಕಾಯ್ದೆಯ ಕರಡು ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿರುವುದು ಅಭಿನಂದನೀಯವಾಗಿದೆ. ರಾಹುಲ್ ಗಾಂಧಿಯವರ ಪತ್ರಕ್ಕೆ ಉತ್ತರಿಸಿರುವ ಸಿದ್ದರಾಮಯ್ಯ ಅವರು, ‘‘ರಾಹುಲ್ ಗಾಂಧಿಯವರೇ, ನಿಮ್ಮ ಸಹಾನುಭೂತಿಯ ಪತ್ರ ಮತ್ತು ನ್ಯಾಯಕ್ಕಾಗಿ ಅಚಲ ಧ್ವನಿಗೆ ಧನ್ಯವಾದಗಳು. ಜಾತಿ, ವರ್ಗ ಅಥವಾ ಗುರುತಿನ ಹೆಸರಿನಲ್ಲಿ ಯಾವುದೇ ವಿದ್ಯಾರ್ಥಿ ಎಂದಿಗೂ ತಾರತಮ್ಯ ಅಥವಾ ಬಹಿಷ್ಕಾರವನ್ನು ಎದುರಿಸದಂತೆ ನೋಡಿಕೊಳ್ಳಲು ನಮ್ಮ ಸರಕಾರ ಬದ್ಧ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ರೋಹಿತ್ ವೇಮುಲಾ ಕಾಯ್ದೆಯ ಕರಡು ರಚನೆಯನ್ನು ಪ್ರಾರಂಭಿಸಲು ನಾನು ಕಾನೂನು ತಂಡಕ್ಕೆ ನಿರ್ದೇಶನ ನೀಡಿದ್ದೇನೆ’’ ಎಂದು ತಿಳಿಸಿದ್ದಾರೆ. ಕರಡು ರಚನೆಗೆ ಆದೇಶ ನೀಡಿದಾಕ್ಷಣ ಕಾನೂನು ಜಾರಿಗೊಂಡೇ ಬಿಟ್ಟಿತು ಎಂದು ನಾವು ಸಂಭ್ರಮ ಪಡಬೇಕಾಗಿಲ್ಲ. ಜಾತಿ ಗಣತಿ ವರದಿ, ಒಳಮೀಸಲಾತಿ ಅನುಷ್ಠಾನದ ಗತಿಯನ್ನು ನೋಡುತ್ತಿರುವವರಿಗೆ ಈ ಕರಡು ಕಾನೂನಾಗಿ ಜಾರಿಗೊಳ್ಳುವ ಬಗ್ಗೆ ವಿಶೇಷ ನಿರೀಕ್ಷೆಗಳೇನೂ ಇಲ್ಲ.

ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗಾಗಿ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲೇ, ರೋಹಿತ್ ವೇಮುಲಾ ಕಾಯ್ದೆಯನ್ನು ಮಧ್ಯೆ ಎಳೆದು ತಂದಿರುವುದರ ಹಿಂದೆ ರಾಜಕೀಯ ತಂತ್ರಗಾರಿಕೆಯನ್ನು ಗುರುತಿಸುವವರಿದ್ದಾರೆ. ಒಳ ಮೀಸಲಾತಿ ಮತ್ತು ಜಾತಿಗಣತಿಯ ಕುರಿತ ಚರ್ಚೆಯನ್ನು ಬೇರೆ ದಿಕ್ಕಿಗೆ ತಿರುಗಿಸುವುದಕ್ಕಾಗಿ ರೋಹಿತ್ ಕಾಯ್ದೆಯನ್ನು ಮುನ್ನೆಲೆಗೆ ತರಲಾಗಿದೆ ಎಂದೂ ಕೆಲವರು ಆರೋಪಿಸುತ್ತಿದ್ದಾರೆ. ಈವರೆಗೆ ರೋಹಿತ್ ಕಾಯ್ದೆ ಜಾರಿಗೊಳಿಸುವ ಬಗ್ಗೆ ಮೌನವಾಗಿದ್ದವರು ಏಕಾಏಕಿ ಇದರ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಯಾಕೆ? ಎಂದು ಒಳ ಮೀಸಲಾತಿಯ ಹೋರಾಟಗಾರರು ಕೇಳುತ್ತಿದ್ದಾರೆ. ಜಾತಿಗಣತಿ, ಒಳ ಮೀಸಲಾತಿ, ರೋಹಿತ್ ಕಾಯ್ದೆ ಈ ಮೂರು ದಲಿತರ ಅಭಿವೃದ್ಧಿಯಲ್ಲಿ ಒಂದಕ್ಕೊಂದು ಬೆಸೆದುಕೊಂಡಿವೆ. ಒಂದನ್ನು ಜಾರಿಗೊಳಿಸುವ ಹೆಸರಿನಲ್ಲಿ ಇನ್ನೊಂದನ್ನು ನಿರ್ಲಕ್ಷಿಸಬೇಕಾಗಿಲ್ಲ. ರೋಹಿತ್ ಕಾಯ್ದೆಯು ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ತಾರತಮ್ಯಗಳನ್ನು ಎದುರಿಸುತ್ತಿರುವ ದಲಿತ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದು. ಈಗಾಗಲೇ ಶಾಲೆ ಕಾಲೇಜುಗಳು ರ್ಯಾಗಿಂಗ್‌ಗಳಿಗಾಗಿ ಸುದ್ದಿಯಾಗುತ್ತಿವೆ. ಶಿಕ್ಷಣದಲ್ಲಿ ಸಾಧನೆಯನ್ನು ಮಾಡಿದ ಕೇರಳದಲ್ಲಿ ಇತ್ತೀಚೆಗೆ ಇಬ್ಬರು ವಿದ್ಯಾರ್ಥಿಗಳು ಈ ರ್ಯಾಗಿಂಗ್‌ನಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಂಡರು. ಆದರೆ ಇಂತಹ ದೌರ್ಜನ್ಯ, ಅಸಮಾನತೆಗಳನ್ನು ದಲಿತ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ದಿನನಿತ್ಯ ಎದುರಿಸುತ್ತಿದ್ದಾರೆ. ಈ ಕುರಿತು ಪ್ರತಿಭಟಿಸಲೂ ಆಗದೆ ಒಳಗೊಳಗೆ ಬೇಯುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಈ ದೌರ್ಜನ್ಯದ ಕಾರಣದಿಂದ ಕಾಲೇಜುಗಳನ್ನು ಅರ್ಧದಲ್ಲೇ ತೊರೆಯುತ್ತಾರೆ. ಹಾಗೆಯೇ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಲಿತರ ಸ್ವಾಭಿಮಾನದ ಬದುಕು ತೆರೆದುಕೊಳ್ಳುವುದು ಶಿಕ್ಷಣದ ಮೂಲಕ. ಶಾಲೆ, ಕಾಲೇಜುಗಳ ಮೂಲಕವೇ ಅವರು ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕು. ಇದಕ್ಕೆ ಹೊರತಾದ ಬೇರೆ ದಾರಿ ಇಲ್ಲ. ಇಂತಹ ಶಾಲಾ ಕಾಲೇಜುಗಳಲ್ಲಿ ದಲಿತರು ಆತ್ಮವಿಶ್ವಾಸದಿಂದ ಓಡಾಡುವ, ಕಲಿಯುವ ವಾತಾವರಣ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ. ಆದುದರಿಂದ, ಇಲ್ಲಿ ಶಿಕ್ಷಕರಿಂದ, ಸಿಬ್ಬಂದಿಯಿಂದ, ಸಹ ವಿದ್ಯಾರ್ಥಿಗಳಿಂದ ಅವಮಾನಿತರಾಗದಂತೆ ದಲಿತರನ್ನು ಕಾಪಾಡಲು ಒಂದು ಕಾನೂನಿನ ಅಗತ್ಯವಿದೆ. ಮೊತ್ತ ಮೊದಲನೆಯದಾಗಿ ಕರಡು ರಚನೆಗೆ ಸೂಚನೆ ನೀಡಿದಾಕ್ಷಣ ಕಾನೂನು ಜಾರಿಯಾಗಿ ಬಿಡುವುದಿಲ್ಲ. ಅದು ಅಧಿಕೃತವಾಗಿ ಕಾನೂನಾಗಿ ಜಾರಿಗೊಳ್ಳಲು ಹಲವು ಪ್ರಕ್ರಿಯೆಗಳಿವೆ. ಈ ಹಿಂದೆ, ತಾನೇ ಆದೇಶ ನೀಡಿದ ಜಾತಿ ಗಣತಿಯ ವರದಿಯನ್ನು ಜಾರಿಗೊಳಿಸಲು ಸಿದ್ದರಾಮಯ್ಯ ಅವರು ತಿಣುಕಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇರುವ ಜಾತಿ ದೌರ್ಜನ್ಯ ತಡೆ ಕಾನೂನನ್ನೇ ಕೆಲವು ಶಕ್ತಿಗಳು ದುರ್ಬಲಗೊಳಿಸಲು ನೋಡುತ್ತಿರುವಾಗ, ದಲಿತರ ಪರವಾಗಿ ಹೊಸದೊಂದು ಕಾನೂನನ್ನು ಜಾರಿಗೊಳಿಸಲು ಅವಕಾಶ ನೀಡುತ್ತಾರೆ ಎಂದು ನಂಬುವಂತಿಲ್ಲ. ಜಾರಿಗೊಂಡ ಬಳಿಕ ಅದರ ಪರಿಣಾಮಕಾರಿ ಅನುಷ್ಠಾನದ ಅಗತ್ಯವೂ ಇದೆ. ಇಂದು ಜಾತಿ ದೌರ್ಜನ್ಯ ತಡೆ ಕಾನೂನಿನ ಮರೆಯಲ್ಲೇ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಅಸ್ಪಶ್ಯತೆಯನ್ನು ಯಾವ ಮುಜುಗರವೂ ಇಲ್ಲದೆ ಆಚರಿಸುತ್ತಿದ್ದಾರೆ. ಬರೇ ಕಾಟಾಚಾರಕ್ಕೆ ಇನ್ನೊಂದು ಕಾಯ್ದೆಯನ್ನು ಜಾರಿಗೊಳಿಸುವ ಅಗತ್ಯವಿದೆಯೆ? ಎನ್ನುವ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ಇದರ ಜೊತೆ ಜೊತೆಗೇ ಸರಕಾರ ಜಾತಿ ಗಣತಿ ವರದಿಯ ಅನುಷ್ಠಾನ ಮತ್ತು ಒಳ ಮೀಸಲಾತಿಯ ಜಾರಿಯ ಬಗ್ಗೆಯೂ ಸರಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಜಾತಿ ಗಣತಿಯು ದಲಿತರ ಸ್ಥಿತಿಗತಿಯ ಹಲವು ವಾಸ್ತವಗಳನ್ನು ತೆರೆದಿಡಲಿದ್ದರೆ, ಅದರ ಮುಂದುವರಿಕೆಯ ಭಾಗವಾಗಿ ಒಳ ಮೀಸಲಾತಿಯು ದಲಿತರ ಸ್ಥಿತಿಗತಿಗೆ ಅನುಗುಣವಾಗಿ ಸವಲತ್ತುಗಳನ್ನು ಸಮಾನವಾಗಿ ವಿತರಿಸಲು ಸಹಾಯ ಮಾಡಲಿದೆ. ಇದೇ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆಯೊಳಗಿರುವ ತಾರತಮ್ಯಕ್ಕೆ ದಲಿತ ಯುವ ಸಮೂಹ ಬಲಿಯಾಗದಂತೆ ನೋಡಿಕೊಳ್ಳಲು ರೋಹಿತ್ ವೇಮುಲಾ ಕಾನೂನನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರಕಾರ ಮುಂದಾಗಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News