ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮುಖ ನೋಡಿಕೊಳ್ಳದ ಬಿ.ವೈ.ರಾಘವೇಂದ್ರ- ಈ‍ಶ್ವರಪ್ಪ

Update: 2024-04-09 05:36 GMT

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ್ತು ಬಂಡಾಯ ಅಭ್ಯರ್ಥಿ ಕೆ.ಎಸ್.ಈ‍ಶ್ವರಪ್ಪ ಅವರು ಮಂಗಳವಾರ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ವತಿಯಿಂದ ಶರಾವತಿ ನಗರದಲ್ಲಿರುವ ಆದಿಚುಂಚನಗಿರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವದಲ್ಲಿ ಇಬ್ಬರು ಭಾಗಿಯಾಗಿದ್ದರು.

ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ಬಿ.ವೈ.ರಾಘವೇಂದ್ರ ಮತ್ತು ಕೆ.ಎಸ್‌.ಈಶ್ವರಪ್ಪ ಪರಸ್ಪರ ಮುಖ ನೋಡಿಲ್ಲ,ಮಾತುಕತೆ ನಡೆಸಿಲ್ಲ. ಸಂಸದ ರಾಘವೇಂದ್ರ ಒಂದು ಬದಿಯಲ್ಲಿ, ಮತ್ತೊಂದು ಬದಿಯಲ್ಲಿ ಈಶ್ವರಪ್ಪ ಕುಳಿತಿದ್ದರು. ಯುಗಾದಿ ಉತ್ಸವ ಕಾರ್ಯಕ್ರಮದ ಬಳಿಕ ಆರೆಸ್ಸೆಸ್ ಮುಖಂಡರು, ಕಾರ್ಯಕರ್ತರು ಶುಭಾಷಯ ವಿನಿಮಯ ಮಡಿಕೊಂಡು, ಬೇವು ಬೆಲ್ಲ ಹಂಚಿದರು. ಈ ಸಂದರ್ಭ ರಾಘವೇಂದ್ರ ಮತ್ತು ಈಶ್ವರಪ್ಪ ದೂರ ದೂರವೆ ಉಳಿದು ಕಾರ್ಯಕ್ರಮದಿಂದ ಮರಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸುತ್ತೇನೆ. ಸಂಸದ, ನಾಯಕನಾಗಿ ಅಲ್ಲ ಸ್ವಯಂ ಸೇವಕನಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದರು.

ಬಿ.ವೈ.ವಿಜಯೇಂದ್ರ  ಅವರು ಕಳೆದ ಎರಡು ದಿನ ಶಿಕಾರಿಪುರದಲ್ಲಿ 16ಕ್ಕೂ ಹೆಚ್ಚು ಪ್ರಚಾರ ಸಭೆ ನಡೆಸಿದರು. ಶಿಕಾರಿಪುರ ಕ್ಷೇತ್ರದಲ್ಲೂ ಹೆಚ್ಚು ಮತಗಳು ಬಿಜೆಪಿಗೆ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 400 ಸ್ಥಾನದಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಯುಗಾದಿ ಹೇಗೆ ಮರಳಿ ಬರುತ್ತದೆಯೋ ಹಾಗೇ ಮತ್ತೆ  ಮತ್ತೆ ಮೋದಿ ಪ್ರಧಾನಿ ಆಗಲಿದ್ದಾರೆ ಎಂದರು.

ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಜನ್ಮ ತಾಳಿದ್ದು ಯುಗಾದಿ ದಿನ. ಹಿಂದೂ ಸಮಾಜಕ್ಕೆ ಯುಗಾದಿ ಹಬ್ಬ ವಿಶೇಷ ಹಬ್ಬ. ಎಲ್ಲ ಹಿಂದೂಗಳು ಒಂದಾಗಬೇಕು ಎಂಬ ಸ್ಪೂರ್ತಿ ಕೊಡುವ ಹಬ್ಬ ಯುಗಾದಿ. ಹಾಗಾಗಿ ಯುಗಾದಿ ಉತ್ಸವದಲ್ಲಿ  ಸ್ವಯಂಸೇವಕನಾಗಿ ಪಾಲ್ಗೊಂಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್‌.ಎನ್.ಚನ್ನಬಸಪ್ಪ ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News