ಪಕ್ಷದ ವೇದಿಕೆಯಲ್ಲೇ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ: ಈಶ್ವರಪ್ಪ
ಶಿವಮೊಗ್ಗ,ಮಾ.23: ಪಕ್ಷದ ವೇದಿಕೆಯಲ್ಲೇ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ. ಬ್ರಹ್ಮ ಬಂದರೂ ನಾನು ವಾಪಸ್ ತೆಗೆದುಕೊಳ್ಳವುದಿಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪುನರುಚ್ಚರಿಸಿದ್ದಾರೆ.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನ ಸ್ಪರ್ಧೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಶಿವಮೊಗ್ಗ ಲೋಕಸಭೆ ಕ್ಷೇತ್ರ ಗೆಲ್ಲುತ್ತೇನೆ. ಗೆದ್ದು ನಾನು ಮೋದಿಗೆ ಬೆಂಬಲ ನೀಡುತ್ತೇನೆ ಎಂದರು.
ಒಂದು ಕುಟುಂಬದ ಕೈಯಲ್ಲಿ ರಾಜ್ಯ ಬಿಜೆಪಿ ಸಿಕ್ಕಿದೆ. ಅದರಿಂದ ಪಕ್ಷ ಹೊರ ತರಬೇಕಿದೆ. ಹಾಲಿ ಸಂಸದರ ಬಗ್ಗೆ ಕ್ಷೇತ್ರದಲ್ಲಿ ಆಕ್ರೋಶವಿದೆ. ನನ್ನ ಬಗ್ಗೆ ಕ್ಷೇತ್ರದ ಜನರಿಗೆ ಪ್ರೀತಿಯಿದೆ. ನನಗೆ ಆದ ಅನ್ಯಾಯವನ್ನು ಖಂಡಿಸಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮುಖಂಡರು ಬೆಂಬಲ ನೀಡುತ್ತಿದ್ದಾರೆ ಎಂದರು.
ಯಡಿಯೂರಪ್ಪನವರು ಹಿಂದುತ್ವ ಹೋರಾಟದ ನಾಯಕರನ್ನು ಪಕ್ಕಕ್ಕೆ ಸರಿಸಿದ್ದಾರೆ. ಮನೆಯಲ್ಲಿ ಒಬ್ಬರು ಕೇಂದ್ರ ಚುನಾವಣಾ ಸಮಿತಿ ಸದಸ್ಯರು , ಒಬ್ಬ ಎಂಪಿ ಹಾಗೂ ಮತ್ತೊಬ್ಬ ಎಂಎಲ್‌ಎ . ಜೊತೆಗೆ, ಆರು ತಿಂಗಳು ಹಠ ಹಿಡಿದು ಮಗನನ್ನು ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ಮಾಡಿದರು. ರಾಜ್ಯದಲ್ಲಿ ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ ರವಿ ಹಾಗೂ ಸದಾನಂದ ಗೌಡ ಎಲ್ಲರಿಗೂ ಅಪಮಾನ ಮಾಡಿದ್ದಾರೆ. ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು ಎಂದು ಕಿಡಿಕಾರಿದರು.
ರಾಜ್ಯ ಬಿಜೆಪಿಯಲ್ಲಿ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪದಾಧಿಕಾರಿಗಳ ಆಯ್ಕೆ ನಡೆದಿಲ್ಲ. ಬಿ.ಎಸ್ ಯಡಿಯೂರಪ್ಪ ನನ್ನ ಮಗನಿಗೆ ಹಾವೇರಿ ಟಿಕೆಟ್ ಕೊಡಿಸುತ್ತೇನೆ ಪ್ರವಾಸ ಮಾಡಿ ಗೆಲ್ಲಿಸುತ್ತೇನೆ ಎಂದಿದ್ದರು. ಟಿಕೆಟ್ ಘೋಷಣೆಗೂ ಮುನ್ನ ರಾಘವೇಂದ್ರ ಅವರು ಕಾಂತೇಶ್ ಅವರಿಗೆ ಫೋನ್ ಮಾಡಿ ದೇವರಾಣೆಗೂ ನಿನಗೆ ಟಿಕೆಟ್ ಸಿಗುತ್ತೆ ಎಂದಿದ್ದರು. ಯಡಿಯೂರಪ್ಪ ನನ್ನ ಮೊಬೈಲ್ ಗೆ ಕರೆ ಮಾಡಿ, ದೆಹಲಿಗೆ ಹೋಗೋಣ ಬಾ ಎಂದರು. ನಾನು ಬರಲ್ಲ ಶೋಭಾ ಅವರನ್ನು ಕರೆದುಕೊಂಡು ಹೋಗಿ ಎಂದಿದ್ದೆ. ಕೇಂದ್ರ ಚುನಾವಣಾ ಸಮಾಚಾರ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಹೇಳಿದ್ದರು. ಈಗ ನೀರಿಗಿಳಿದ ಮೇಲೆ ಮಳೆಯೇನು, ಚಳಿಯೇನು? ನೇರವಾಗಿ ತೊಡೆ ತಟ್ಟಿದ್ದೇನೆ ಎಂದು ಹೇಳಿದರು.
ಬಿಎಸ್‌ವೈ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದಾರೆ. ಶೋಭಾ ಕರದ್ಲಾಂಜೆಗೆ ಹಠ ಮಾಡಿ ಬಿಎಸ್‌ವೈ ಟಿಕೆಟ್ ಕೊಡಿಸಿದ್ದಾರೆ. ನನಗೆ ಮೋಸ ಮಾಡಿದ್ದಾರೆ. ಈಗ ನನ್ನ ಸ್ಪರ್ಧೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ಜೊತೆ ನಡ್ಡಾ ಮಾತುಕತೆ ಮಾಡಿದ್ದಾರೆ,ಮನವೊಲಿಸುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿ ಪ್ರಚುರ ಪಡಿಸಲಾಗುತ್ತಿದೆ. ನನಗೆ ನಡ್ಡಾ ಕಾಲ್ ಮಾಡಿಲ್ಲ. ನಾನು ಸ್ಪರ್ಧೆ ಮಾಡುವುದು ಖಚಿತ. ಪಕ್ಷ ನನ್ನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ. ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ನಂತರ ಅವರೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದರು.
ಪಕ್ಷ ನನ್ನ ತಾಯಿ ಇದ್ದಂಗೆ. ತಾಯಿ ಮತ್ತು ಮಗನನ್ನು ದೂರ ಮಾಡಲು ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾನು ರಾಘವೇಂದ್ರ ಅವರನ್ನು ಸೋಲಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ತಿರುಗೇಟು ನೀಡುತ್ತೇನೆ. ಇದರ ಬಳಿಕ ವಿಜಯೇಂದ್ರ ಕೂಡಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಬಿಜೆಪಿಯಲ್ಲಿ ಬಿಎಸ್ ವೈ ಅವರು ಒಬ್ಬರೇ ನಾಯಕರು ಆಗಿ ಉಳಿಯಲಿ. ನನ್ನದು ಯಾವುದೇ ಅಭ್ಯಂತರವಿಲ್ಲ.ರಾಜ್ಯದಲ್ಲಿ ಸಾಕಷ್ಟು ಅಚ್ಚರಿ ಬೆಳವಣಿಗೆ ನಡೆಯಲಿದೆ. ರಾಷ್ಟ್ರಭಕ್ತ ಮುಸಲ್ಮಾನರು ನನ್ನ ಅದೃಶ್ಯ ಮತದಾರ ಪಟ್ಟಿಯಲ್ಲಿದ್ದಾರೆ. ಅವರು ನನಗೆ ಓಟು ಹಾಕುತ್ತಾರೆ ಎಂದು ಹೇಳಿದರು.