6 ದಶಕಗಳ ಇತಿಹಾಸದ ಶಾಲೆಗೆ ಬಿಜೆಪಿ ಶಾಸಕರಿಂದ ಅವಮಾನ
ಬಿಜೆಪಿಯ ದ್ವೇಷ ರಾಜಕಾರಣ ಎಷ್ಟು ಅಪಾಯಕಾರಿ ಮತ್ತು ಅಲ್ಪಸಂಖ್ಯಾತರನ್ನು ಹೇಗೆ ಅದು ಧರ್ಮದ ಹೆಸರಿನಲ್ಲಿ ಟಾರ್ಗೆಟ್ ಮಾಡುತ್ತದೆ, ಚುನಾವಣಾ ಲಾಭಕ್ಕಾಗಿ ಅದು ಏನು ಮಾಡುವುದಕ್ಕೂ ಹೇಸುವುದಿಲ್ಲ ಎಂಬುದಕ್ಕೆ ಮಂಗಳೂರು ಶಾಲೆಯೊಂದರಲ್ಲಿನ ಘಟನೆ ತಾಜಾ ಉದಾಹರಣೆ.
ಮಂಗಳೂರಿನ ಆ ಶಾಲೆಯಲ್ಲಿ ಹೇಗೆ ಶ್ರೀರಾಮನ ಹೆಸರನ್ನು ನೆಪ ಮಾಡಿಕೊಂಡು ಒಬ್ಬ ಶಿಕ್ಷಕಿಯನ್ನು ಬಲಿಪಶು ಮಾಡಲಾಯಿತು ? ಹೇಗೆ ಅವರಿಂದ ಕಲಿಯುವ ಮಕ್ಕಳನ್ನೇ ಅವರ ವಿರುದ್ಧ ಬಳಸಲಾಯಿತು ? ಹೇಗೆ ಇಬ್ಬರು ಶಾಸಕರು ಬಜರಂಗದಳದ ಗೂಂಡಾಗಳ ಹಾಗೆ ಬೆದರಿಕೆ ಹಾಕಿದರು ? ಒಂದು ಸುದೀರ್ಘ ಇತಿಹಾಸ ಇರುವ, ಸಾವಿರಾರು ಸರ್ವ ಧರ್ಮಿಯ ಮಕ್ಕಳಿಗೆ ಶಿಕ್ಷಣ ನೀಡಿರುವ ಶಾಲೆಯನ್ನು ಹೇಗೆ ಮತಾಂಧ ರಾಜಕಾರಣಕ್ಕಾಗಿ ಟಾರ್ಗೆಟ್ ಮಾಡಲಾಯಿತು ?
ಆ ಶಾಲೆಯ ಸುದೀರ್ಘ ಶೈಕ್ಷಣಿಕ ಸೇವೆಯನ್ನು ಮರೆ ಮಾಚುವ ಹಾಗೆ ಇಡೀ ಪ್ರಕರಣವನ್ನು ಹೇಗೆ ತಿರುಚಲಾಯಿತು ? ಒಂದು ಶಿಕ್ಷಣ ಸಂಸ್ಥೆಯನ್ನು, ಅಲ್ಲಿನ ಶಿಕ್ಷಕರನ್ನು ಹೇಗೆ ದುಷ್ಕರ್ಮಿಗಳ ಹಾಗೆ ಬಿಂಬಿಸಲಾಯಿತು ? ಮತ್ತು ಅದಕ್ಕಾಗಿ ಹೇಗೆ ಮಕ್ಕಳನ್ನೇ ಎದುರಿಟ್ಟು ಭಯಾನಕ ರಾಜಕೀಯ ಆಟ ಆಡಲಾಯಿತು ? ಕೊಚ್ಚುತ್ತೇವೆ, ಕೊಲ್ಲುತ್ತೇವೆ ಎಂದು ಭಾಷಣ ಮಾಡುವವರು ರಾಜಾರೋಷವಾಗಿ ತಿರುಗಾಡಿಕೊಂಡು ಸಾಮಾಜಿಕ, ರಾಜಕೀಯ ನಾಯಕರಾಗಿ ಮೆರೆಯುತ್ತಿರುವಲ್ಲಿ ಒಂದು ಭವ್ಯ ಶೈಕ್ಷಣಿಕ ಇತಿಹಾಸವಿರುವ ಶಾಲೆಯೊಂದನ್ನು ಹೇಗೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನಿಸಲಾಯಿತು ?
ಇದೆನ್ನೆಲ್ಲ ಗಮನಿಸುತ್ತಿದ್ದರೆ, ಮುಂಬರುವ ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ಅದೆಂತಹ ಕೋಮುವಾದಿ ರಾಜಕಾರಣ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ ಎಂಬುದು ಸ್ಪಷ್ಟವಾಗುತ್ತದೆ. ಇವರ ಈ ಕೊಳಕು ರಾಜಕೀಯದ ಟಾರ್ಗೆಟ್ ಆಗಿಬಿಟ್ಟ ಆ ಶಾಲೆಯ ಬಗ್ಗೆ, ಅದರ ಇತಿಹಾಸ, ಅದು ನಡೆಸಿಕೊಂಡು ಬಂದ ಶೈಕ್ಷಣಿಕ ಸೇವೆ ಎಷ್ಟು ದೊಡ್ಡದಾಗಿತ್ತು ಎಂಬ ವಿವರವನ್ನು ಸ್ವಲ್ಪ ಗಮನಿಸೋಣ. ಮಂಗಳೂರಿನ ವೆಲೆನ್ಸಿಯಾ ಹಾಗೂ ಜೆಪ್ಪು ಸಮೀಪದ ಸೈಂಟ್ ಜೆರೋಸಾ ಶಾಲೆಗೆ ಸುಮಾರು 60 ವರ್ಷಗಳ ಇತಿಹಾಸವಿದೆ.
1964ರಲ್ಲಿ 84 ವಿದ್ಯಾರ್ಥಿಗಳೊಂದಿಗೆ ಕನ್ನಡ ಮಾಧ್ಯಮ ಹೈಸ್ಕೂಲ್ ಆಗಿ ಸಿಸ್ಟರ್ಸ್ ಆಫ್ ಚಾರಿಟಿ ಸಂಸ್ಥೆಯ ನಿರ್ವಹಣೆಯಲ್ಲಿ ಆರಂಭಗೊಂಡ ಆ ಶಾಲೆಯಲ್ಲಿ 1972ರಿಂದ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಆರಂಭಿಸಲಾಗಿತ್ತು. ಈಗ 1ರಿಂದ 10ನೇ ತರಗತಿವರೆಗೂ ಆ ಶಾಲೆಯಲ್ಲಿ ಶಿಕ್ಷಣ ಒದಗಿಸಲಾಗುತ್ತಿದ್ದು, ಕಳೆದ ಆರು ದಶಕದ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಲ್ಲಿ ಶಿಕ್ಷಣ ಪಡೆದಿದ್ದಾರೆ.
ಇಲ್ಲಿ ಶಿಕ್ಷಣ ಪಡೆದ ಸಾಕಷ್ಟು ವಿದ್ಯಾರ್ಥಿಗಳಲ್ಲಿ ಬಹಳಷ್ಟು ಮಂದಿ ಇವತ್ತು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಅತಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಕೊಡುತ್ತ, ಮಹತ್ವದ ಶೈಕ್ಷಣಿಕ ಸೇವೆ ಸಲ್ಲಿಸುತ್ತಾ ಬಂದಿರುವ ಶಾಲೆ ಅದು. ಇಂಥ ಶಾಲೆಯ ವಿಚಾರದಲ್ಲಿ ಮತೀಯ ದ್ವೇಷ ಕಾರಲು ಒಂದು ನೆಪ ಹುಡುಕುತ್ತಿದ್ದವರಿಗೆ ಒಂದು ಪಿಳ್ಳೆನೆವ ಸಿಕ್ಕಿಬಿಟ್ಟಿತ್ತು.
ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಪಾಠವೊಂದರ ವೇಳೆ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪ ಮುಂದೆ ಮಾಡಿ, ಸಂಘಪರಿವಾರದ ಕಾರ್ಯಕರ್ತರು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಶಾಲೆಯೆದುರು ದೊಡ್ಡ ಹಂಗಾಮವನ್ನೆ ಸೃಷ್ಟಿಸಿದರು. ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಶಾಲೆಯ ಎದುರು ಜೈ ಶ್ರೀರಾಮ್ ಘೋಷಣೆ ಹಾಕಲಾಯಿತು. ಶಾಲೆಯ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕ ರಕ್ಷಕ ಸಮಿತಿ, ಶಿಕ್ಷಣ ಇಲಾಖೆಯ ಸಮಕ್ಷಮದಲ್ಲಿ ಶಾಲೆಯೊಳಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದ್ದ ವಿಚಾರವೊಂದನ್ನು, ಶಾಲೆಯ ಗೇಟಿನ ಹೊರಗೆ ಮಕ್ಕಳನ್ನು ಮುಂದಿಟ್ಟುಕೊಂಡು ಕೆಟ್ಟ ರಾಜಕೀಯಕ್ಕೆ ಬಳಸಲಾಯಿತು.
ವಿಚಾರದ ಸತ್ಯಾಸತ್ಯತೆಯನ್ನು ತನಿಖೆ ನಡೆಸಿ ಸೂಕ್ತ ನಿರ್ಧಾರಕ್ಕೆ ಶಾಲಾ ಆವರಣದೊಳಗೆ ಕ್ರಮ ವಹಿಸಬೇಕಾಗಿದ್ದ ಜನಪ್ರತಿನಿಧಿಗಳೇ ಅದಕ್ಕೆ ಒಂದು ಕೋಮು ಘಟನೆಯ ಬಣ್ಣ ಕೊಟ್ಟು ರಾಡಿಯೆಬ್ಬಿಸಿಬಿಟ್ಟರು. ಹಿಂದುತ್ವವಾದಿ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಆ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರಿಂದಲೇ ಘೋಷಣೆ ಹಾಕಿಸಿ ರಾಜಕೀಯ ಮಾಡಲಾಯಿತು.
ಶಾಲೆಯಲ್ಲಿ ಪಾಠದ ವೇಳೆ ನಿಜಕ್ಕೂ ಏನಾಯಿತು ಎಂಬುದನ್ನು ನೋಡುವುದಾದರೆ, ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆಂದು ಮಕ್ಕಳು ಪೋಷಕರಲ್ಲಿ ತಿಳಿಸಿದ್ದರೆನ್ನಲಾದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಶಿಕ್ಷಕಿ ಏನು ಹೇಳಿದರು ಎಂಬುದಕ್ಕೆ ಯಾವುದೇ ಆಧಾರವೂ ಇಲ್ಲ. ಆದರೆ ಈ ವಿಚಾರ ಮುಂದಿಟ್ಟು ಸಂಘ ಪರಿವಾರದ ಕಾರ್ಯಕರ್ತರು ಫೆ. 10ರಂದು ಶಾಲೆಯ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಂದು ಸ್ಥಳಕ್ಕೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಐವನ್ ಡಿಸೋಜ, ವಿದ್ಯಾರ್ಥಿಗಳು ಮತ್ತು ಪೋಷಕರ ಜತೆ ಮಾತನಾಡಿ ಬಿಇಒ ವರದಿ ನೀಡಲಿದ್ದಾರೆ ಎಂದರು.
ಶಿಕ್ಷಕಿಯ ವಿರುದ್ಧದ ಆರೋಪವನ್ನು ಮುಖ್ಯ ಶಿಕ್ಷಕಿ ಅಲ್ಲಗಳೆದಿದ್ದಾರೆ. ಆದರೂ ವಿಚಾರಣೆ ನಡೆಸಿ ಡಿಡಿಪಿಐ ಮೂಲಕ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು' ಎಂದು ಮಂಗಳೂರು ದಕ್ಷಿಣ ವಲಯ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಹೇಳಿದ್ದರು.
ಕನಿಷ್ಠ ಅಲ್ಲಿಗೆ ಈ ಪ್ರಕರಣ ಮುಕ್ತಾಯ ಆಗಬೇಕಿತ್ತು. ಆದರೆ ಸೋಮವಾರ ಸಂಘ ಪರಿವಾರದ ಕಾರ್ಯಕರ್ತರನ್ನು ಕಟ್ಟಿಕೊಂಡು ಬಿಜೆಪಿ ಶಾಸಕರೇ ಶಾಲೆಯ ಎದುರು ಪ್ರತಿಭಟನೆಗೆ ನಿಂತುಬಿಟ್ಟರು. ಶಾಲಾ ಆಡಳಿತ ಮಂಡಳಿ ಹಾಗೂ ಶಾಲೆಯ ಶಿಕ್ಷಕ ರಕ್ಷಕ ಸಮಿತಿ ನೇತೃತ್ವದಲ್ಲಿ ಬಗೆಹರಿಯಬೇಕಿದ್ದ ವಿಚಾರವನ್ನು ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ರಾಜಕೀಯಗೊಳಿಸಿಬಿಟ್ಟರು.
ಆ ಶಿಕ್ಷಕಿ ವಿರುದ್ಧ ಬಾಯಿಗೆ ಬಂದoತೆ ಆರೋಪಗಳ ಪಟ್ಟಿಯನ್ನೇ ಮಾಡಲಾಯಿತು. ತಮ್ಮ ಧೋರಣೆಯನ್ನು ಶಿಕ್ಷಕಿ ಮಕ್ಕಳ ಮೇಲೆ ಹೇರಿದ್ದಾರೆ ಎಂದು ವೇದವ್ಯಾಸ ಕಾಮತ್ ಹೇಳಿದರೆ, ಇನ್ನೂ ಒಂದು ಹೆಜ್ಜೆ ಮುಂದೆ ಎಂಬಂತೆ ಶಾಸಕ ಡಾ. ಭರತ್ ಶೆಟ್ಟಿ ಮಿಷನರಿ ಶಾಲೆ ತ್ಯಜಿಸಲು ಸಕಾಲ ಎಂಬ ಹೇಳಿಕೆ ನೀಡಿ ತಮ್ಮ ಕೋಮು ದ್ವೇಷ ತೋರಿಸಿಬಿಟ್ಟರು.
ಮಿಷನರಿ ಶಾಲೆಗಳಲ್ಲಿ ಎಲ್ಲ ಧರ್ಮಗಳ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಬದುಕು ರೂಪಿಸಿ ಕೊಂಡಿದ್ದನ್ನ ವೈದ್ಯರೂ ಆಗಿರುವ ಭರತ್ ಶೆಟ್ಟಿ ಮರೆತು ಬಿಟ್ಟರು. ಶಾಲಾ ಆಡಳಿತ ಮಂಡಳಿ ಹಾಗೂ ತನಿಖೆಗಾಗಿ ಆಗಮಿಸಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೇ ಬೆದರಿಸುವ ಧಾಟಿಯಲ್ಲಿ ಮಾತನಾಡಿದರು.
ಶಿಕ್ಷಕಿಯನ್ನು ಅಮಾನತುಗೊಳಿಸಬೇಕೆಂದು ಪಟ್ಟು ಹಿಡಿದರು. ಶಾಲೆಗೆ ಮುತ್ತಿಗೆ ಹಾಕುವುದಕ್ಕೂ ಸಂಘ ಪರಿವಾರದ ಕಾರ್ಯಕರ್ತರು, ಕೆಲ ಪೋಷಕರು ಯತ್ನಿಸಿದಾಗ ಪೊಲೀಸರು ತಡೆದರು. ಶಾಲಾ ಆವರಣದ ಒಳಗೆ ತೆರಳಿದ ವೇದವ್ಯಾಸ ಕಾಮತ್, ಮುಖ್ಯಶಿಕ್ಷಕಿ ಮತ್ತು ಶಾಲಾ ಆಡಳಿತ ಮುಖ್ಯಸ್ಥರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಧಾರ್ಮಿಕವಾಗಿಯೂ ಅವರನ್ನು ಟಾರ್ಗೆಟ್ ಮಾಡಿ ಶಾಸಕ ಮಾತನಾಡಿದರು. ಕೊನೆಗೆ ಶಾಲಾ ಆಡಳಿತ ಮಂಡಳಿಯವರು ಶಿಕ್ಷಕಿ ಪ್ರಭಾ ಅವರನ್ನು ಅಮಾನತುಗೊಳಿಸಿ ಪ್ರಕಟಣೆ ಹೊರಡಿಸಿದರು. ಆದರೆ ಶಿಕ್ಷಕಿಯ ತಪ್ಪನ್ನು ಶಾಲಾ ಆಡಳಿತ ಒಪ್ಪಿಕೊಂಡಿಲ್ಲ. ತಪ್ಪು ಒಪ್ಪಿಕೊಳ್ಳಲೇಬೇಕು ಎಂದು ಶಾಸಕ ಕಾಮತ್ ಮತ್ತೆ ಪಟ್ಟು ಹಿಡಿದರು.
ಈ ವೇಳೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ನಗರ ಪೊಲೀಸ್ ಆಯಕ್ತ ಅನುಪಮ್ ಅಗರ್ವಾಲ್ ಸ್ಥಳಕ್ಕಾಗಮಿಸಿ ಸೂಕ್ತ ಕ್ರಮದ ಭರವಸೆ ನೀಡಿದರು. ಅವಹೇಳನ ಮಾಡಿದ್ದಾರೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲದಿದ್ದರೂ, ಮಕ್ಕಳು ಹೇಳಿದರೆಂಬ ವಿಚಾರವನ್ನೇ ದೊಡ್ಡದು ಮಾಡಿ, ಶಿಕ್ಷಕಿಯ ವಿರುದ್ದ ಅವರಿಂದ ಕಲಿತ ಮಕ್ಕಳನ್ನೇ ಬಳಸಿಕೊಂಡು ಮಾಡಲಾದ ರಾಜಕೀಯಕ್ಕೆ ಶಿಕ್ಷಕಿ ಬಲಿಪಶುವಾಗಬೇಕಾಯಿತು.
ಕ್ರೈಸ್ತ ಮಿಷನರಿಗಳ ವಿರುದ್ಧವೇ ಜನರನ್ನು ಎತ್ತಿಕಟ್ಟುವ ರೀತಿಯಲ್ಲೂ ಶಾಸಕರಾದವರಿಂದ ಹೇಳಿಕೆಗಳು ಬಂದವು. ತನ್ನ ವೃತ್ತಿ ಬದುಕಿನಲ್ಲಿ ಅದೆಷ್ಟು ಸಾವಿರ ಮಕ್ಕಳಿಗೆ ನಿಸ್ವಾರ್ಥವಾಗಿ ಪಾಠ ಹೇಳಿರುವ ಆ ಹಿರಿಯ ಶಿಕ್ಷಕಿಗೆ ಬಿಜೆಪಿಯ ಶಾಸಕರು ಹಾಗೂ ಅವರ ಹಿಂದುತ್ವ ಪಡೆ ನೀಡಿರುವ ಗೌರವ ಇದು.
ಈ ಘಟನೆಯನ್ನು ರಾಜಕೀಯಗೊಳಿಸಿದ್ದು, ಇನ್ನೂ 14-15ನೇ ವಯಸ್ಸಿನ ಅಮಾಯಕ ಮಕ್ಕಳನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಿಕ್ಷಕಿಯ ವಿರುದ್ಧವೇ ಎತ್ತಿ ಕಟ್ಟಲಾಯಿತೆನ್ನುವುದು ನಿಜಕ್ಕೂ ಅತ್ಯಂತ ಕಳವಳಕಾರಿ ಮತ್ತು ಆಘಾತಕಾರಿ ಸಂಗತಿ. ಬಿಜೆಪಿ ಶಾಸಕರ ಈ ಗೂಂಡಾಗಿರಿ ಯನ್ನು ಶಾಲೆಗೆ ನುಗ್ಗಿ ಕ್ಲಾಸ್ ತೆಗೆದುಕೊಂಡ ಶಾಸಕರು ಎಂದು ಚಾನಲ್ ಗಳು ಒಂದಿಷ್ಟೂ ಕಾಳಜಿ, ಕಳವಳ ಇಲ್ಲದೆ ಪ್ರಸಾರ ಮಾಡುತ್ತಿವೆ. ಶಾಲೆಯನ್ನೇ ಕಟಕಟೆಯಲ್ಲಿ ನಿಲ್ಲಿಸಲು ಸಂಘ ಪರಿವಾರ ಹಾಗೂ ಬಿಜೆಪಿ ಜೊತೆ ಕೈಜೋಡಿಸಿ ನಿಂತು ಬಿಟ್ಟಿವೆ.
ಶಾಲೆಗೆ ಸಂಘ ಪರಿವಾರದವರು ಹಾಗೆ ಮುತ್ತಿಗೆ ಹಾಕಿದ್ದರ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಶಾಸಕ ವೇದವ್ಯಾಸ್ ಕಾಮತ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರದ್ದೇ ಕ್ರಮ, ನಿಯಮಗಳಿವೆ. ಆ ಪ್ರಕಾರ ತನಿಖೆ ನಡೆದು ಅಪರಾಧ ಸಾಬೀತಾದರೆ ಶಿಕ್ಷೆ ವಿಧಿಸುವುದು ಸರಿಯಾದ ವಿಧಾನ. ಬೀದಿನ್ಯಾಯ ವಿಧಿಸಲು ಇದು ಅರಾಜಕ ದೇಶ ಅಲ್ಲ, ಸರ್ವಾಧಿಕಾರಿಗಳ ನಾಡೂ ಅಲ್ಲ. ಶಾಸಕರಾದವರಿಗೆ ಈ ಜ್ಞಾನ ಇರಬೇಕು. ಶಾಸಕ ವೇದವ್ಯಾಸ ಕಾಮತ್ ಇದನ್ನೆಲ್ಲ ಧಿಕ್ಕರಿಸಿ ಶಾಲೆಗೆ ಮುತ್ತಿಗೆ ಹಾಕಿ ಗೂಂಡಾಗಿರಿ ಮೆರೆದಿರುವುದು ಆಘಾತಕಾರಿ ವಿಚಾರ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಅದರಲ್ಲೂ ಪ್ರಾಥಮಿಕ ಶಾಲೆಯ ಮುಗ್ಧ ವಿದ್ಯಾರ್ಥಿಗಳನ್ನು ತಮ್ಮದೇ ಶಾಲೆಯ ವಿರುದ್ಧ ಮುತ್ತಿಗೆಗೆ ಬಳಸಿರುವುದು, ಧಾರ್ಮಿಕ ಘೋಷಣೆಗಳನ್ನು ಕೂಗಿಸಿರುವುದು ನಾಚಿಕೆಗೇಡಿನ ಕೃತ್ಯ ಎಂದು ಅವರು ಟೀಕಿಸಿದ್ದಾರೆ. ಶಾಸಕನಿಗಿರಬೇಕಾದ ಕನಿಷ್ಠ ಪ್ರಜ್ಞೆ, ಸಮಾಜದ ಭವಿಷ್ಯದ ಕುರಿತು ಕಾಳಜಿ ವೇದವ್ಯಾಸ ಕಾಮತ್ ರಿಗೆ ಇಲ್ಲ ಎಂಬುದು ಇಂದಿನ ಘಟನೆಯಿಂದ ಸಾಬೀತಾಗಿದೆ. ಮಂಗಳೂರಿನ ಸಾಮಾನ್ಯ, ಕಡಿಮೆ ಆದಾಯದ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗಿರುವ ಡೊನೇಷನ್ ಹಾವಳಿ, ದುಬಾರಿ ಫೀಸು, ನಿಯಮ ಬಾಹಿರ ಶಿಕ್ಷಣ ವ್ಯವಸ್ಥೆಯ ಕುರಿತು ವಿಧಾನ ಸಭೆಯಲ್ಲಿ ಧ್ವನಿ ಎತ್ತಬೇಕಿದ್ದ ಶಾಸಕರು, ಅದರ ಬದಲಿಗೆ ಅಧಿವೇಶನ ತೊರೆದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೊಂದರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು, ಮತೀಯ ಭಾವನೆ ಕೆರಳಿಸಲು ಪ್ರಕರಣವನ್ನು ಬಳಸುತ್ತಿರುವುದು ಖಂಡನೀಯ. ಇದರ ಹಿಂದೆ ಲೋಕಸಭಾ ಚುನಾವಣೆಯ ಸಿದ್ಧತೆ ಇರುವುದು ಸ್ಪಷ್ಟ ಎಂದು ಹೇಳಿದ್ದಾರೆ.
ಜಿಲ್ಲಾಡಳಿತ, ಸರಕಾರ ಇಂತಹ ಗೂಂಡಾಗಿರಿಯನ್ನು ಸಹಿಸಬಾರದು, ಕಾನೂನಿನ ಪಾಠ, ಜವಾಬ್ದಾರಿಯನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಬೇಕು, ಹಿಂಸೆಗೆ ಪ್ರಚೋದಿಸುವ, ಗೂಂಡಾಗಿರಿ ಮೆರೆದಿರುವ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ಧಾರೆ.
ಅಂತೂ ಲೋಕಸಭೆ ಚುನಾವಣೆ ಹೊತ್ತಿಗೆ ಕೋಮುದ್ವೇಷ ಹರಡಿ ಲಾಭ ಪಡೆಯಲು ಪ್ರತಿಷ್ಠಿತ ಅಲ್ಪಸಂಖ್ಯಾತ ಶಾಲೆಯನ್ನು ಗುರಿ ಮಾಡಲಾಯಿತು, ಮಕ್ಕಳ ತಲೆಯೊಳಗೂ ಕೋಮು ದ್ವೇಷದ ವಿಷಬೀಜ ಬಿತ್ತಲಾಯಿತು. ಹಿಂದೂ ದೇವರ ಅವಹೇಳನ ಆರೋಪಕ್ಕೆ ತುತ್ತಾಗಿ ಶಿಕ್ಷಕಿ ಬಲಿಪಶುವಾಗಿರುವಾಗ, ನಿಜವಾಗಿಯೂ ಮಕ್ಕಳೊಳಗೆ ದ್ವೇಷಭಾವನೆ ತುಂಬುತ್ತಿದ್ದವರು ಮಾತ್ರ ಭಾರಿ ಪ್ರಚಾರ ಪಡೆದಿದ್ದರು.
ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ, 6 ದಶಕಗಳ ಇತಿಹಾಸವುಳ್ಳ ಒಂದು ಶಿಕ್ಷಣ ಸಂಸ್ಥೆ ಕೂಡ, ಅದು ಅಲ್ಪಸಂಖ್ಯಾತರ ಸಂಸ್ಥೆ ಎಂಬ ಕಾರಣಕ್ಕೆ ಇವರ ಹಿಂದುತ್ವ ರಾಜಕೀಯದ ಟಾರ್ಗೆಟ್ ಆಗಿಬಿಡುತ್ತದಲ್ಲ ಎಂಬುದರ ಬಗ್ಗೆ ತೀವ್ರ ಸಂಕಟವಾಗುತ್ತದೆ. ನಾನೂರು ಸೀಟು ಸುಲಭವಾಗಿ ಗೆದ್ದೇ ಬಿಡುತ್ತೇವೆ ಎಂದು ಹೇಳುವ ಪಕ್ಷ, ಇಡೀ ಜಗತ್ತಿಗೆ ನಾವು ವಿಶ್ವಗುರು ಎಂದು ಹೇಳಿಕೊಳ್ಳುವ ಪಕ್ಷ, ದೇಶದ ಜನರೆಲ್ಲರೂ ನಮ್ಮ ಜೊತೆಗೇ ನಿಂತಿದ್ದಾರೆ, ಬೇರೆ ಪಕ್ಷಗಳಿಗೆ ಠೇವಣಿಯೂ ಸಿಗೋದಿಲ್ಲ ಎಂದು ಹೇಳಿಕೊಳ್ಳುವ ಪಕ್ಷ, ದಕ್ಷಿಣ ಕನ್ನಡ ಕ್ಷೇತ್ರದಲ್ಲೇ ಎಂಟು ಬಾರಿ ಸತತ ಗೆದ್ದಿರುವ ಪಕ್ಷದ ಶಾಸಕರು ವರ್ತಿಸುವ ರೀತಿಯೇ ಇದು ?
ಹೀಗೆಲ್ಲ ಮಾಡಿ ಲೋಕಸಭಾ ಚುನಾವಣೆ ಗೆಲ್ಲುವ ದೈನೇಸಿ ಸ್ಥಿತಿ ಯಾಕಿದೆ ಆ ಪಕ್ಷಕ್ಕೆ ? ತನ್ನ ಶಕ್ತಿ ಕೇಂದ್ರ ಎಂದು ಹೇಳಿಕೊಳ್ಳುವ ಕ್ಷೇತ್ರದಲ್ಲಿ ಹೀಗೆಲ್ಲ ಒಂದು ಶಾಲೆಯ ವಿರುದ್ಧ ಜನರನ್ನು ಎತ್ತಿ ಕಟ್ಟಿ ತಮ್ಮ ಮತ ಬ್ಯಾಂಕ್ ಗಟ್ಟಿಗೊಳಿಸಬೇಕಾದ ಪರಿಸ್ಥಿತಿ ಆ ಪಕ್ಷಕ್ಕೆ ಬಂದಿದೆಯೇ ಹೋಗಲಿ, ಮಂಗಳೂರಿನ ಜನರಾದರೂ ಧರ್ಮದ, ಶ್ರೀರಾಮನ ಹೆಸರಲ್ಲಿ ಬಿಜೆಪಿ ಮಾಡುತ್ತಿರುವ ಈ ಹೇಸಿಗೆ ರಾಜಕಾರಣವನ್ನು ವಿರೋಧಿಸದಿದ್ದರೆ ಅವರನ್ನು ಬುದ್ಧಿವಂತರು ಎಂದು ತಿಳಿದುಕೊಂಡಿರುವ ಇತರರಿಗೆ ತೀರಾ ತದ್ವಿರುದ್ದ ಸಂದೇಶ ರವಾನೆ ಆಗುತ್ತದೆ.