ಇಸ್ರೇಲ್ ನರಮೇಧದ ರಕ್ತಸಿಕ್ತ ಹೆಜ್ಜೆಗುರುತುಗಳು

Update: 2024-10-07 09:16 GMT

ಇಸ್ರೇಲ್ ಕಳೆದ 80 ವರ್ಷಗಳಿಂದ ಫೆಲೆಸ್ತೀನಿಯರ ಮೇಲೆ ಅತಿಕ್ರಮಣ, ಆಕ್ರಮಣ ಎರಡನ್ನೂ ನಡೆಸುತ್ತಲೇ ಬಂದ ಕರಾಳ ಇತಿಹಾಸವಿದೆ.

ಆತ್ಮ ರಕ್ಷಣೆಯ ನೆಪದಲ್ಲಿ, ಭಯೋತ್ಪಾದನೆಯ ವಿರುದ್ಧದ ಹೋರಾಟ ಎಂಬ ಹೆಸರಲ್ಲಿ ಫೆಲೆಸ್ತೀನ್‌ನಲ್ಲಿ ಅಮಾಯಕ ಮಹಿಳೆಯರು, ಮಕ್ಕಳು ಎಂದು ಲೆಕ್ಕಿಸದೆ ನರಮೇಧ ನಡೆಸುತ್ತಲೇ ಬಂದಿದೆ ಇಸ್ರೇಲ್ .

ಬಡ ಫೆಲೆಸ್ತೀನಿಯರ ಮೇಲೆ ಬಾಂಬ್‌ಗಳು, ಕ್ಷಿಪಣಿಗಳ ಮಳೆ ಸುರಿಸುವುದು ಇಸ್ರೇಲ್ ಗೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

150ಕ್ಕೂ ಹೆಚ್ಚಿನ ದೇಶಗಳಿಂದ ಬಂದ ವಲಸಿಗ ಯಹೂದಿಗಳಿಗೆ ಆಶ್ರಯ ನೀಡಿದ ಇಸ್ರೇಲ್‌ನ ಒಟ್ಟು ಜನಸಂಖ್ಯೆ ಕೇವಲ 94 ಲಕ್ಷದ ಆಸುಪಾಸಿನಲ್ಲಿದೆ.

ಈ ದೇಶದ ಅಮಾನುಷವಾದ ಜನಾಂಗೀಯವಾದಿ ಧೋರಣೆಗಳಿಂದಾಗಿ, ಇವರಿಗೆ ಆಶ್ರಯ ಕೊಟ್ಟಿದ್ದ ಫೆಲೆಸ್ತೀನ್‌ನಲ್ಲಿ ಈಗ ಲಕ್ಷಾಂತರ ಮಂದಿ ಜೀವ ಕಳಕೊಂಡಿದ್ದಾರೆ, ಚಿತ್ರಹಿಂಸೆಗೆ ಗುರಿಯಾಗಿದ್ದಾರೆ, ಬೀದಿ ಪಾಲಾಗಿದ್ದಾರೆ, ನಿರಾಶ್ರಿತರಾಗಿದ್ದಾರೆ.

ಸರಿಸುಮಾರು 70 ಲಕ್ಷಕ್ಕೂ ಹೆಚ್ಚಿನ ಫೆಲೆಸ್ತೀನ್ ಜನ ನಿರ್ವಸಿತರಾಗಿ ಹತ್ತಾರು ದೇಶಗಳಲ್ಲಿ ದಿಕ್ಕಿಲ್ಲದೆ ಅಲೆದಾಡುವ ಅಥವಾ ನಿರಾಶ್ರಿತ ಶಿಬಿರಗಳಲ್ಲಿ ಬದುಕಬೇಕಾದ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಗಾಝಾದಲ್ಲಿ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ.

ಇದು ಕೇವಲ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಸಮಸ್ಯೆ ಎಂದು ನೀವು ತಪ್ಪಾಗಿ ತಿಳಿಯಬಾರದು. ಅದಕ್ಕಾಗಿಯೇ, ಇಸ್ರೇಲ್ ಕಳೆದ 80 ವರ್ಷಗಳಿಂದ ಫೆಲೆಸ್ತೀನಿಯರ ಮೇಲೆ ನಿರಂತರ ಆಕ್ರಮಣ ನಡೆಸುತ್ತಿದೆ ಎಂಬುದನ್ನು ಮೊದಲೇ ಪ್ರಸ್ತಾಪಿವಿದ್ದೇವೆ.

ಈಗ ಫೆಲೆಸ್ತೀನ್ ಮೇಲಿನ ಇಸ್ರೇಲ್ ಆಕ್ರಮಣಕ್ಕೆ ಸಂಬಂಧಿಸಿ 2023ರ ಅಕ್ಟೋಬರ್ 7ರಿಂದ ಪ್ರಾರಂಭಿಸಿ 2024ರ ಅಕ್ಟೋಬರ್ 4 ರವರೆಗಿನ ಪ್ರಮುಖ ಘಟನೆಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಇಸ್ರೇಲ್ ಆತ್ಮ ರಕ್ಷಣೆಯ ಹೆಸರಿನಲ್ಲಿ ಕಳೆದ ಒಂದು ವರ್ಷದಿಂದ ನಡೆಸುತ್ತಾ ಬಂದಿರುವ ನರಮೇಧವನ್ನು ನಿಮ್ಮ ಮುಂದಿಡುವ ಪ್ರಯತ್ನ ಇದಾಗಿದೆ.

 

► 2023ರ ಅಕ್ಟೋಬರ್ 7ರಂದು ಹಮಾಸ್ ಬೆಂಬಲಿತ ಸಶಸ್ತ್ರ ಪಡೆಗಳು ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿಯೊಂದನ್ನು ನಡೆಸಿದವು.

ವರ್ಷಗಳಿಂದ ದಮನಿಸಲ್ಪಟ್ಟ, ತಮ್ಮದೇ ನೆಲದಲ್ಲಿ ನಿರಾಶ್ರಿತರಂತೆ ಜೀವಿಸುತ್ತಿದ್ದ ಹಮಾಸ್ ಸೈನಿಕರು ಯಾರೂ ನಿರೀಕ್ಷಿಸದ ರೀತಿಯಲ್ಲಿ ಕ್ಷಿಪಣಿ ಸೇರಿ ಶಸ್ತ್ರಾಸ್ತ್ರಗಳ ಮೂಲಕ ಸಂಘಟಿತ ದಾಳಿಯನ್ನು ನಡೆಸಿದ್ದರು. ಇಸ್ರೇಲಿನ ಕ್ಷಿಪಣಿ ನಿರೋಧಕ ಐರನ್ ಡೋಮನ್ನು ಭೇದಿಸುವಲ್ಲೂ ಹಮಾಸ್ ಯಶಸ್ಸು ಖಂಡಿತ್ತು.

"Operation Al-Aqsa Floodʼ ಎಂದು ಹಮಾಸ್ ಕರೆದಿದ್ದ ಈ ದಾಳಿಯಲ್ಲಿ 1,195 ಇಸ್ರೇಲಿಗರು ಮೃತಪಟ್ಟಿದ್ದರು.

ಅದರ ಮರುದಿನ 2023ರ ಅಕ್ಟೋಬರ್ 8ರಂದು ಇಸ್ರೇಲ್, ಫೆಲೆಸ್ತೀನ್ ಮೇಲೆ ಪೂರ್ಣ ಪ್ರಮಾಣದ ಯುದ್ಧದ ಘೋಷಣೆ ಮಾಡಿತು.

ಅವತ್ತಿನಿಂದ ಇವತ್ತಿನವರೆಗೂ ಆತ್ಮರಕ್ಷಣೆ ಹಾಗೂ ಪ್ರತಿದಾಳಿಯ ಹೆಸರಲ್ಲಿ ಅಮಾಯಕರ ಮೇಲೆ ದಾಳಿ ನಡೆಯುತ್ತಲೇ ಇದೆ. ಅದಕ್ಕೆ ತಡೆ ಬಿದ್ದೇ ಇಲ್ಲ.

► 2023ರ ಅಕ್ಟೋಬರ್ 8 ರಂದು, ದಿವಂಗತ ಇರಾನ್ ಅಧ್ಯಕ್ಷ ಇಬ್ರಾಹೀಂ ರಯೀಸಿ ಇರಾನ್ ಫೆಲೆಸ್ತೀನಿಯರ ಕಾನೂನುಬದ್ಧ ರಕ್ಷಣೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು.

ಇಸ್ರೇಲ್ ಈ ಪ್ರದೇಶದಲ್ಲಿ ರಾಷ್ಟ್ರಗಳ ಭದ್ರತೆಗೆ ಅಪಾಯವನ್ನುಂಟು ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಟೆಹರಾನ್‌ನಲ್ಲಿ, ಫೆಲೆಸ್ತೀನಿಯರ ಪರ ಬ್ಯಾನರ್‌ಗಳನ್ನು ಪ್ರದರ್ಶಿಸಲಾಯಿತು. ಲೆಬನಾನಿನ ಹಿಜ್ಬುಲ್ಲಾ ಫೆಲೆಸ್ತೀನಿಯರ ಬೆಂಬಲಕ್ಕೆ ನಿಂತು ಇಸ್ರೇಲ್ ಮೇಲೆ ದಾಳಿ ನಡೆಸಿತು.

► 2023ರ ಅಕ್ಟೋಬರ್ 9ರಂದು ಗಾಝಾ ಪಟ್ಟಿಗೆ ಇಸ್ರೇಲ್ ಮೂಲಕ ನೀಡಲಾಗುತ್ತಿದ್ದ ಎಲ್ಲಾ ರೀತಿಯ ಸೌಲಭ್ಯಗಳನ್ನು ನಿಷೇಧಿಸಿ ಇಸ್ರೇಲ್ ರಕ್ಷಣಾ ಮಂತ್ರಿ ಆದೇಶಿಸಿದರು.

ಗಾಝಾ ಪಟ್ಟಿಯಲ್ಲಿ ವಿದ್ಯುತ್ ಕಡಿತ, ಆಹಾರ ಸಾಮಗ್ರಿಗಳ ಪೂರೈಕೆಯನ್ನು ಇಸ್ರೇಲ್ ಸ್ಥಗಿತಗೊಳಿಸಿತು.

ಪುಟ್ಟ ಮಕ್ಕಳು, ಮಹಿಳೆಯರು ಎಂದು ಪರಿಗಣಿಸದೆ ಯಾವುದೇ ಕರುಣೆಯಿಲ್ಲದೆ ಆಕ್ರಮಿಸಲು ಇಸ್ರೇಲ್ ಮುಂದಾಯಿತು.

► 2023ರ ಅಕ್ಟೋಬರ್ 10 ರಂದು ಗಾಝಾದ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ದಾಳಿಯ ಮಧ್ಯೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಈ ಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್‌ನೊಂದಿಗೆ ದೃಢವಾಗಿ ನಿಲ್ಲುತ್ತಾರೆ ಎಂದು ಎಕ್ಸ್‌ನ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಹೇಳಿದರು.

► 2023ರ ಅಕ್ಟೋಬರ್ 11ರಂದು ಪ್ರತಿಯೊಬ್ಬ ಹಮಾಸ್ ಭಯೋತ್ಪಾದಕ ಸತ್ತ ವ್ಯಕ್ತಿ ಎಂದು ನೆತನ್ಯಾಹು ಹೇಳಿದರು. ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ವಿರೋಧ ಪಕ್ಷದ ನಾಯಕರಾದ ಬೆನ್ನಿ ಗ್ಯಾಂಟ್ ಅವರ ಜೊತೆಗಿದ್ದರು.

ಯುದ್ಧಕ್ಕೆ ಮತ್ತು ಶಾಂತಿಗಾಗಿ ಸಮಯವಿದೆ. ಈಗ ಯುದ್ಧದ ಸಮಯ ಎಂದು ವಿರೋಧ ಪಕ್ಷದ ನಾಯಕರಾದ ಬೆನ್ನಿ ಗ್ಯಾಂಟ್ ಹೇಳಿದರು.

ನಾವು ಅವರನ್ನು ಅಂದರೆ ಫೆಲೆಸ್ತೀನಿಯರನ್ನು ಭೂಮಿಯ ಮುಖದಿಂದ ಅಳಿಸಿಹಾಕುತ್ತೇವೆ ಎಂದು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಹೇಳಿದರು.

► 2023ರ ಅಕ್ಟೋಬರ್ 12ರಂದು ಗಾಝಾ ಪಟ್ಟಿಯ ವಿವಿಧ ಸ್ಥಳಗಳ ಮೇಲೆ ಇಸ್ರೇಲ್ ಏಕಾಏಕಿ ಬಾಂಬ್ ದಾಳಿ ನಡೆಸಿತು.

ಸಿರಿಯಾದ ಡಮಾಸ್ಕಸ್ ಮತ್ತು ಅಲೆಪ್ಪೊ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿತು.

► 2023ರ ಅಕ್ಟೋಬರ್ 13 ರಂದು ಫೆಲೆಸ್ತೀನ್ ಮೇಲೆ ಇಸ್ರೇಲ್ ನೇರವಾಗಿ ಭೂ ದಾಳಿ ನಡೆಸಿತು. ಇಸ್ರೇಲ್ ನಡೆಸಿದ ಈ ದಾಳಿ 6,50,000 ಜನರಿಗೆ ನೀರಿನ ಅಭಾವವನ್ನು ಸೃಷ್ಟಿಸುವ ಮೂಲಕ ನೇರ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

► ಅಕ್ಟೋಬರ್ 14 ರಂದು ಗಾಝಾದಲ್ಲಿ ಇನ್ನು ಮುಂದೆ ಶುದ್ಧ ಕುಡಿಯುವ ನೀರು ಸಿಗುವುದಿಲ್ಲ ಎಂದು UNRWA ಘೋಷಿಸಿತು ಮತ್ತು 20 ಲಕ್ಷ ಜನರು ಸಾಯುವ ಅಪಾಯದಲ್ಲಿದ್ದಾರೆ ಎಂದು ಹೇಳಿತು.

► 2023ರ ಅಕ್ಟೊಬರ್ 17 ರಂದು ರೋಗಿಗಳು ಹಾಗೂ ಗಾಯಾಳುಗಳಿಂದ ತುಂಬಿ ತುಳುಕುತ್ತಿದ್ದ ಗಾಝಾ ಸಿಟಿ ಆಸ್ಪತ್ರೆಯ ಮೇಲೆ ಇಸ್ರೇಲ್ ನಡೆಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 500 ಜನರು ಸಾವನ್ನಪ್ಪಿದರು.

► 2023ರ ಅಕ್ಟೊಬರ್ 18 ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲಿಗೆ ಭೇಟಿ ನೀಡಿದರು. ಕೋಪದಲ್ಲಿ 2001ರಲ್ಲಿ ನಾವು ಮಾಡಿದ ತಪ್ಪುಗಳನ್ನು ನೀವು ಮಾಡಬೇಡಿ ಎಂದು ಬೈಡನ್ ಹೇಳುತ್ತಾರೆ. ಆದರೆ ಅದರ ಜೊತೆಜೊತೆಗೇ ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ಘೋಷಿಸುತ್ತಾರೆ.

► 2023ರ ಅಕ್ಟೋಬರ್ 19ರಂದು ಇಂಗ್ಲೆಂಡಿನ ಅಂದಿನ ಪ್ರಧಾನಿ ರಿಷಿ ಸುನಕ್ ಇಸ್ರೇಲಿಗೆ ಭೇಟಿ ನೀಡಿದರು.

► 2023ರ ಅ.21ರಂದು ತಮ್ಮ ಮನೆಗಳನ್ನು ಬಿಟ್ಟು ತಕ್ಷಣ ತೆರಳುವಂತೆ ಉತ್ತರ ಗಾಝಾದ ನಿವಾಸಿಗಳಿಗೆ ಇಸ್ರೇಲ್ ಸೈನ್ಯ ಕರಪತ್ರದ ಮೂಲಕ ಸೂಚಿಸಿತು.

ಗಾಝಾ ಪಟ್ಟಿಯ ಉತ್ತರದಿಂದ ದಕ್ಷಿಣಕ್ಕೆ ಸ್ಥಳಾಂತರಗೊಳ್ಳದವರನ್ನು

ಹಮಾಸ್‌ನ ಸಹಚರರೆಂದು ಪರಿಗಣಿಸಲಾಗುವುದು ಎಂದು ಇಸ್ರೇಲ್ ಹೇಳಿತು.

► 2023ರ ಅಕ್ಟೋಬರ್ 27ರಂದು, ಇಸ್ರೇಲ್ ಪೂರ್ಣ ಪ್ರಮಾಣದ ಯುದ್ಧವನ್ನು ಆರಂಭಿಸಿತು. ಅದೇ ದಿನ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಫೆಲೆಸ್ತೀನ್ ಮತ್ತು ಇಸ್ರೇಲ್ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದ ಎಲ್ಲಾ ದಾಳಿಗಳನ್ನು ಖಂಡಿಸಲಾಯಿತು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗಾಝಾದ ಜನರಿಗೆ ಮಾನವೀಯ ನೆರವು ಮತ್ತು ಕದನ ವಿರಾಮಕ್ಕೆ ಆಗ್ರಹಿಸಿ ಜೋರ್ಡಾನ್ ನಿರ್ಣಯವನ್ನು ಮಂಡಿಸಿತು.

ನಿರ್ಣಯದ ಪರವಾಗಿ 121 ರಾಷ್ಟ್ರಗಳು ಮತ ಚಲಾಯಿಸಿದರೆ, ನಿರ್ಣಯದ ವಿರುದ್ಧ 14 ಮತಗಳು ಚಲಾವಣೆಯಾದವು. ಭಾರತ ಸೇರಿ 44 ದೇಶಗಳು ಮತದಾನದಿಂದ ಹೊರಗುಳಿದಿದ್ದವು.

► 2023ರ ಅಕ್ಟೋಬರ್ 28ರಂದು ಎರಡನೇ ಹಂತದ ಯುದ್ಧವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದರು.

► 2023ರ ಅಕ್ಟೋಬರ್ 31ರಂದು ಫೆಲೆಸ್ತೀನಿಯರ ಮೇಲೆ ನಿಷೇಧಿತ ಬಿಳಿ ಫೋಸ್ಫರಸ್ ಬಳಸಲಾಗಿದೆ ಎಂದು ಆ್ಯಮ್ನೆಸ್ಟಿ ಆರೋಪಿಸಿತು. ಇದಕ್ಕೆ ಪುಷ್ಟಿ ನೀಡುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

► 2023ರ ನವೆಂಬರ್ 2ರಂದು ಇರಾಕ್ ಬೆಂಬಲಿತ ಸಶಸ್ತ್ರ ಗುಂಪು ಇಸ್ರೇಲಿನ ಕಡಲ ತೀರದ ಮೇಲೆ ಕ್ಷಿಪಣಿ ದಾಳಿ ನಡೆಸಿತು.

ಅದೇ ದಿನ, ಇಸ್ರೇಲ್ ಮಿಲಿಟರಿ ಗಾಝಾ ನಗರವನ್ನು ಸಂಪೂರ್ಣವಾಗಿ ಸುತ್ತುವರಿಯಿತು. ಅಲ್ಲಿಂದ ಗಾಝಾದ ನಗರ ಪ್ರದೇಶಗಳ ಮೇಲೆ ಇಸ್ರೇಲ್ ಆಕ್ರಮಣ ಪ್ರಾರಂಭವಾಯಿತು ಮತ್ತು ಅದು ಈಗಲೂ ಮುಂದುವರಿದಿದೆ.

► 2023ರ ನವೆಂಬರ್ 4ರಂದು ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಇದನ್ನುUNRWA ವಕ್ತಾರರು ಕೂಡ ಖಚಿತಪಡಿಸಿದ್ದಾರೆ. ಈ ದಾಳಿಯಲ್ಲಿ 15 ಜನರು ಸಾವನ್ನಪ್ಪಿದರು ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡರು. ನಾಸರ್ ಮಕ್ಕಳ ಆಸ್ಪತ್ರೆಯ ಪ್ರವೇಶದ್ವಾರವನ್ನು ಗುರಿಯಾಗಿಟ್ಟುಕೊಂಡು ಮಾಡಿದ ಮತ್ತೊಂದು ದಾಳಿಯಲ್ಲಿ ಇಬ್ಬರು ಮಹಿಳೆಯರು ಬಲಿಯಾದರು.

ಅಲ್-ರಾಂತಿಸಿ ಆಸ್ಪತ್ರೆಯ ಅಡಿಯಲ್ಲಿ ಹಮಾಸ್ ನೆಲೆ ಇದೆ ಎಂದು ಆರೋಪಿಸಿ IDF ವೀಡಿಯೊವನ್ನು ಪ್ರಕಟಿಸಿತು. ಒತ್ತೆಯಾಳುಗಳಿಗಾಗಿ ಸಿದ್ಧಪಡಿಸಲಾದ ಶಸ್ತ್ರಾಸ್ತ್ರಗಳು ಮತ್ತು ಮೂಲಸೌಕರ್ಯಗಳನ್ನು ವೀಡಿಯೊ ತೋರಿಸಿತು. ಆದರೆ ಈ ವಾದಗಳನ್ನು ಸ್ಥಳೀಯ ಅಧಿಕಾರಿಗಳು ಸುಳ್ಳು ಎಂದರು.

ಅಲ್-ಶಿಫಾ ಆಸ್ಪತ್ರೆಯಲ್ಲಿIDF  ಕಮಾಂಡರ್ ರೋಗಿಗಳನ್ನು ದೂರ ಕಳುಹಿಸಿದ್ದಾರೆ ಎಂದು ವರದಿಯಾಯಿತು. ಇದರಿಂದ ಅಲ್ಲಿದ್ದ ರೋಗಿಗಳು ಮತ್ತು ನಿರ್ವಸಿತರು ಬೀದಿ ಪಾಲಾದರು.

► 2023ರ ನವೆಂಬರ್ 6ರಂದು ಇಸ್ರೇಲ್ ಕ್ಷಿಪಣಿಗಳು ಗಾಝಾ ಅಲ್ ನಾಸರ್ ಆಸ್ಪತ್ರೆಯ ಆವರಣ ಗೋಡೆಗೆ ಅಪ್ಪಳಿಸಿದವು. ಎಂಟು ಜನರು ಸಾವನ್ನಪ್ಪಿದರು ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡರು.

► 2023ರ ನವೆಂಬರ್ 16 ರಂದು IDF ಅಲ್-ಶಿಫಾ ಆಸ್ಪತ್ರೆಯನ್ನು ಪ್ರವೇಶಿಸಿತು.

► 2023ರ ನವೆಂಬರ್ 18 ರಂದು ಇಸ್ರೇಲಿ ದಾಳಿಗಳು ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ 80ಕ್ಕೂ ಹೆಚ್ಚು ಜನರನ್ನು ಕೊಂದವು.

► 2023ರ ನವೆಂಬರ್ 19ರಂದು ‘ಗ್ಯಾಲಕ್ಸಿ ಲೀಡರ್’ ಹೆಸರಿನ ಇಸ್ರೇಲ್ ಮೂಲದ ಹಡಗನ್ನು ಯಮನ್‌ನ ಹೌದಿ ಗುಂಪು ಹೈಜಾಕ್ ಮಾಡಿತು.

► 2023ರ ನವೆಂಬರ್ 24ರಂದು ಮೊದಲ ಬಾರಿಗೆ ಹಮಾಸ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಲಾಯಿತು. ಕದನ ವಿರಾಮ ಒಪ್ಪಂದದಂತೆ ಹಮಾಸ್ ಮತ್ತು ಇಸ್ರೇಲ್ ಪರಸ್ಪರ ಒತ್ತೆಯಾಳುಗಳ ಬಿಡುಗಡೆ ಮಾಡಿದವು.

► 2023ರ ಡಿಸೆಂಬರ್ 12ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನಿರ್ಣಯವೊಂದನ್ನು ಅಂಗೀಕರಿಸಿ, ತಕ್ಷಣದ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಕರೆ ನೀಡಿತು. ಭಾರತ ಈ ನಿರ್ಣಯದ ಪರವಾಗಿ ಮತ ಚಲಾಯಿಸಿತು.

► 2023ರ ಡಿಸೆಂಬರ್ 15ರಂದು ತಮ್ಮದೇ ಮೂರು ಪ್ರಜೆಗಳನ್ನು ತಪ್ಪಿ ಗುಂಡಿಕ್ಕಿ ಕೊಂದಿರುವುದಾಗಿ ಐಡಿಎಫ್ ಹೇಳಿಕೆ ಬಿಡುಗಡೆ ಮಾಡಿತು.

► 2023ರ ಡಿಸೆಂಬರ್ 18ರಂದು ಗಾಝಾದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಬಗ್ಗೆ ಡಾಕ್ಟರ್ಸ್ ವಿತ್‌ಔಟ್ ಬಾರ್ಡರ್ಸ್ ಮಾಹಿತಿ ನೀಡಿತು.

ದಕ್ಷಿಣ ಗಾಝಾದಲ್ಲಿ ಮಕ್ಕಳಿಗೆ ದಿನಕ್ಕೆ ಕುಡಿಯಲು 1.5 ಲೀಟರ್ ನೀರು ಮಾತ್ರ ಸಿಗುತ್ತಿದೆ, ಆದರೆ ಮಕ್ಕಳಿಗೆ ಬದುಕುಳಿಯಲು ಕನಿಷ್ಠ 3 ಲೀಟರ್ ನೀರಿನ ಅವಶ್ಯಕತೆ ಇದೆ ಎಂದು UNICEF ಹೇಳಿತು.

► 2023ರ ಡಿಸೆಂಬರ್ 20ರಂದು ಇಸ್ರೇಲ್ ನ ಹಡಗುಗಳು ಪ್ರವೇಶಿಸದಂತೆ ಮಲೇಶ್ಯ ನಿಷೇಧ ವಿಧಿಸಿತು.

► 2023ರ ಡಿಸೆಂಬರ್ 25ರಂದು 8 ಲಕ್ಷ ರೋಗಿಗಳು ಔಷಧಿ ಮತ್ತು ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ ಎಂದು ಗಾಝಾದ ಅರೋಗ್ಯ ಇಲಾಖೆ ಬೆಚ್ಚಿ ಬೀಳಿಸುವ ವರದಿ ಪ್ರಕಟಿಸಿತು.

► 2023ರ ಡಿಸೆಂಬರ್ 29ರಂದು ಇಸ್ರೇಲ್ ವಿರುದ್ಧ ದಕ್ಷಿಣ ಆಫ್ರಿಕಾ ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ನರಮೇಧದ ಪ್ರಕರಣವನ್ನು ದಾಖಲಿಸಿತು.

► 2024ರ ಜನವರಿ 2ರಂದು ಬೈರೂತ್‌ನ ದಹೀಹ್ ಉಪನಗರದಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಹಮಾಸ್ ನಾಯಕ ಸಾಲೀಹ್ ಅಲ್-ಅರೂರಿ ಮೃತಪಟ್ಟಿದ್ದಾರೆ.

► 2024ರ ಫೆಬ್ರವರಿ 3ರಂದು ಖಾನ್ ಯೂನಿಸ್ ನಗರವನ್ನು ವಶಪಡಿಸಿಕೊಂಡ ನಂತರ ಗಾಝಾದ ಸುರಕ್ಷಿತ ವಲಯ ಎಂದು ಕರೆಯಲ್ಪಡುವ ರಫಾ ಮೇಲೆ ಇಸ್ರೇಲ್ ಆಕ್ರಮಣ ಪ್ರಾರಂಭಿಸಿತು. ಪೂರ್ವ ಮತ್ತು ಮಧ್ಯ ರಫಾವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿತು.

► 2024ರ ಫೆಬ್ರವರಿ 29ರಂದು ಗಾಝಾ ನಗರದ ನೈರುತ್ಯ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ 100ಕ್ಕೂ ಹೆಚ್ಚು ಫೆಲೆಸ್ತೀನ್ ನಾಗರಿಕರು ಬಲಿಯಾಗಿದ್ದು, 750 ಮಂದಿ ಗಾಯಗೊಂಡಿದ್ದರು.

► 2024ರ ಮಾರ್ಚ್ 12 ರಂದು ಗಾಝಾ ಯುದ್ಧದಲ್ಲಿ ಮಾನವೀಯ ನೆರವು ಕುರಿತು ಚರ್ಚಿಸಲು ಭಾರತದ ಎನ್‌ಎಸ್‌ಎ ಅಜಿತ್ ದೋವಲ್ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಭೇಟಿ ಮಾಡಿದರು.

► 2024ರ ಎಪ್ರಿಲ್ 1ರಂದು ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ಇರಾನಿನ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ಕ್ಷೀಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ನ ಮುಖ್ಯಸ್ಥ ಮುಹಮ್ಮದ್ ರಝ ಝಹೇದಿ ಮೃತಪಟ್ಟರು.

► ಪ್ರತೀಕಾರವಾಗಿ 2024ರ ಎಪ್ರಿಲ್ 13 ರಂದು ಇಸ್ರೇಲ್ ಕಡೆಗೆ ಇರಾನ್ ಕ್ಷಿಪಣಿಗಳು, ಡ್ರೋನ್‌ಗಳನ್ನು ಉಡಾಯಿಸಿತು.

ಸಿರಿಯಾದಲ್ಲಿನ ಇರಾನ್ ಕಾನ್ಸುಲೇಟ್ ಮೇಲೆ ಮಾರಣಾಂತಿಕ ದಾಳಿಯ ಸುಮಾರು ಎರಡು ವಾರಗಳ ನಂತರ, ಇರಾನ್ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು 300 ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿ ನಡೆಸಿತು.

► 1979ರಲ್ಲಿ ರಾಜಪ್ರಭುತ್ವ ಕೊನೆಗೊಂಡ ನಂತರ ಇರಾನ್ ನೇರವಾಗಿ ಇಸ್ರೇಲ್ ಪ್ರದೇಶದ ಮೇಲೆ ಕ್ಷಿಪಣಿಗಳನ್ನು ಹಾರಿಸಿದ್ದು ಇದೇ ಮೊದಲು.

► 2024ರ ಎಪ್ರಿಲ್ 10 ರಂದು ಇಸ್ರೇಲ್-ಹಮಾಸ್ ಯುದ್ಧವನ್ನು ನೆತನ್ಯಾಹು ತಪ್ಪಾಗಿ ನಿಭಾಯಿಸಿದ್ದಾರೆ ಎಂದು ಬೈಡನ್ ಹೇಳಿದರು. ನಾನು ಅವರ ವಿಧಾನವನ್ನು ಒಪ್ಪುವುದಿಲ್ಲ ಎಂದು ಬೈಡನ್ ಹೇಳಿದರು.

► 2024ರ ಎಪ್ರಿಲ್ 19ರಂದು ಬಾರ್ಬಡೋಸ್ ಅಧಿಕೃತವಾಗಿ ಫೆಲೆಸ್ತೀನ್‌ಗೆ

ಔಪಚಾರಿಕವಾಗಿ ಪ್ರತ್ಯೇಕ ದೇಶವೆಂಬ ಮಾನ್ಯತೆಯನ್ನು ಘೋಷಿಸಿತು.

► 2024 ಮೇ 2ರಂದು ಟ್ರಿನಿಡಾಡ್ ಮತ್ತು ಟೊಬ್ಯಾಗೋ ದೇಶವು ಫೆಲೆಸ್ತೀನ್‌ಗೆ ಔಪಚಾರಿಕವಾಗಿ ಪ್ರತ್ಯೇಕ ದೇಶವೆಂಬ ಮಾನ್ಯತೆಯನ್ನು ಘೋಷಿಸಿತು.

► 2024ರ ಮೇ 7ರಂದು ಬಹಾಮಾಸ್ ದೇಶವು ಫೆಲೆಸ್ತೀನ್‌ಗೆ ಔಪಚಾರಿಕವಾಗಿ ಪ್ರತ್ಯೇಕ ದೇಶವೆಂಬ ಮಾನ್ಯತೆಯನ್ನು ಘೋಷಿಸಿತು.

► 2024ರ ಮೇ 19ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಹತರಾಗಿದ್ದು, ಘಟನೆಯಲ್ಲಿ ಇಸ್ರೇಲ್ ಕೈವಾಡವಿದೆ ಎಂಬ ಆರೋಪ ಕೇಳಿ ಬಂತು.

₹2024ರ ಮೇ 20ರಂದು ಹಮಾಸ್ ಮುಖ್ಯಸ್ಥರಾದ ಇಸ್ಮಾಯೀಲ್ ಹನಿಯೆಹ್, ಯಹ್ಯಾ ಸಿನ್ವರ್ ಮತ್ತು ಮುಹಮ್ಮದ್ ದಾಯೀಫ್ ಅವರನ್ನು ಬಂಧಿಸುವಂತೆ ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಆದೇಶಿಸಿತು

ಅದೇ ದಿನ ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋತ್ವ್ ಗಲ್ಯ್‌ಂಟ್ ಬಂಧನದ ಆದೇಶವೂ ಬಂತು.

► 2024ರ ಮೇ 22ರಂದು ಐರ್‌ಲ್ಯಾಂಡ್, ನಾರ್ವೆ ಮತ್ತು ಸ್ಪೇನ್ ದೇಶಗಳು ಫೆಲೆಸ್ತೀನ್‌ಗೆ ಔಪಚಾರಿಕವಾಗಿ ಪ್ರತ್ಯೇಕ ದೇಶವೆಂಬ ಮಾನ್ಯತೆಯನ್ನು ಘೋಷಿಸಿದವು.

► 2024 ಮೇ 24ರಂದು ದಕ್ಷಿಣ ಆಫ್ರಿಕಾದ ಮನವಿಯನ್ನು ಪರಿಗಣಿಸಿ ರಫಾದಲ್ಲಿನ ಕಾರ್ಯಾಚರಣೆ ಸ್ಥಗಿತಗೊಳಿಸಲು ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಇಸ್ರೇಲ್‌ಗೆ ಆದೇಶಿಸಿತು.

► 2024ರ ಜೂನ್ 4ರಂದು ಸ್ಲೊವೆನಿಯಾ ದೇಶವು ಫೆಲೆಸ್ತೀನ್‌ಗೆ ಔಪಚಾರಿಕವಾಗಿ ಪ್ರತ್ಯೇಕ ದೇಶವೆಂಬ ಮಾನ್ಯತೆಯನ್ನು ಘೋಷಿಸಿತು.

► 2024ರ ಜೂನ್ 21ರಂದು ಅರ್ಮೇನಿಯ ದೇಶವು ಫೆಲೆಸ್ತೀನ್‌ಗೆ

ಔಪಚಾರಿಕವಾಗಿ ಪ್ರತ್ಯೇಕ ದೇಶವೆಂಬ ಮಾನ್ಯತೆಯನ್ನು ಘೋಷಿಸಿತು.

► 2024ರ ಜುಲೈ 13ರಂದು ಹಮಾಸ್ ಮುಖ್ಯಸ್ಥ ಮುಹಮ್ಮದ್ ದಾಯೀಫ್ ಅವರ ಹತ್ಯೆ ನಡೆಯಿತು. ಗಾಝಾ ಪಟ್ಟಿಯಲ್ಲಿರುವ ಖಾನ್ ಯೂನಿಸ್ ಬಳಿಯ ಅಲ್-ಮವಾಸಿ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅವರು ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿತ್ತು. ಹಮಾಸ್ ಈ ವಾದವನ್ನು ತಿರಸ್ಕರಿಸಿತು.

► 2024ರ ಜುಲೈ 24ರಂದು ವಾಶಿಂಗ್ಟನ್‌ನಲ್ಲಿ ಇಸ್ರೇಲ್ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದಂತೆಯೇ ಬೆಂಜಮಿನ್ ನೆತನ್ಯಾಹು ಖಿಖ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಿದರು. ‘‘ನಾವು ನಮ್ಮನ್ನು ರಕ್ಷಿಸಿಕೊಳ್ಳುವುದು ಮಾತ್ರವಲ್ಲ. ನಾವು ನಿಮ್ಮನ್ನೂ ರಕ್ಷಿಸುತ್ತಿದ್ದೇವೆ... ನಮ್ಮ ಶತ್ರುಗಳು ನಿಮ್ಮ ಶತ್ರುಗಳು, ನಮ್ಮ ಹೋರಾಟವು ನಿಮ್ಮ ಹೋರಾಟ ಮತ್ತು ನಮ್ಮ

ಗೆಲುವು ನಿಮ್ಮ ಗೆಲುವಾಗಿದೆ ಎಂದು ಚಪ್ಪಾಳೆಗಳ ನಡುವೆ ಅವರು ಅಮೆರಿಕ ಕಾಂಗ್ರೆಸ್‌ಗೆ ಹೇಳಿದರು.

► 2024ರ ಜುಲೈ 30ರಂದು ದಕ್ಷಿಣ ಬೈರೂತ್‌ನಲ್ಲಿ ಹಿಜ್ಬುಲ್ಲಾ ಹಿರಿಯ ಕಮಾಂಡರ್ ಫವಾದ್ ಶುಕ್ರ್ ಹತ್ಯೆ ನಡೆಯಿತು.

► 2024ರ ಜುಲೈ 31 ರಂದು ಹಮಾಸ್ ಮುಖ್ಯಸ್ಥರಾದ ಇಸ್ಮಾಯೀಲ್ ಹಾನಿಯೆಹ್ ಹತ್ಯೆ ನಡೆಯಿತು. ಇರಾನ್‌ನ ನೂತನ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಹಾನಿಯೆಹ್ ಇರಾನಿನಲ್ಲೇ ನಡೆದ ಇಸ್ರೇಲ್‌ನ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟರು. ಇದಕ್ಕೆ ಉತ್ತರ ನೀಡದೆ ಬಿಡುವುದಿಲ್ಲ ಎಂದು ಹಮಾಸ್ ಪ್ರತಿಜ್ಞೆ ಮಾಡುತ್ತದೆ.

► 2024ರ ಆಗಸ್ಟ್ 23ರಂದು ಕುಡಿಯುವ ನೀರಿನ ಕೊರತೆಯಿಂದ ಗಾಝಾದಲ್ಲಿ ಮಕ್ಕಳು ಕಲುಷಿತ ನೀರು ಕುಡಿಯುತ್ತಿದ್ದಾರೆಂದು ಸಿ ಎನ್ ಎನ್ ವರದಿ ಮಾಡಿದೆ

► 2024ರ ಸೆಪ್ಟಂಬರ್ 22ರಂದು ಪ್ರಧಾನಿ ಮೋದಿ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ರನ್ನು ಅಮೆರಿಕದಲ್ಲಿ ಭೇಟಿಯಾದರು. ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಪ್ರಧಾನಮಂತ್ರಿಯವರು ಗಾಢ ಕಳವಳ ವ್ಯಕ್ತಪಡಿಸಿದರು ಮತ್ತು ಫೆಲೆಸ್ತೀನಿಯನ್ ಜನರಿಗೆ ಭಾರತದ ನಿರಂತರ ಬೆಂಬಲವನ್ನು ಪುನರುಚ್ಚರಿಸಿದರು.

► 2024ರ ಸೆಪ್ಟಂಬರ್ 27ರಂದು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಯಾಗಿದೆ. ದಕ್ಷಿಣ ಬೈರೂತ್ ಭದ್ರಕೋಟೆಯ ಮೇಲೆ ಇಸ್ರೇಲಿ ದಾಳಿಯಲ್ಲಿ ನಸ್ರಲ್ಲಾ ಜೊತೆಗೆ ಇರಾನಿನ ಜನರಲ್ ಕೂಡ ಬಲಿಯಾಗುತ್ತಾರೆ.

ನಸ್ರಲ್ಲಾ ಅವರ ಸಾವು ವ್ಯರ್ಥವಾಗುವುದಿಲ್ಲ ಎಂದು ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರು ಪ್ರತಿಜ್ಞೆ ಮಾಡಿದರು.

► 2024ರ ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಸುಮಾರು 200 ಕ್ಷಿಪಣಿಗಳ ಮೂಲಕ ಇರಾನ್ ದಾಳಿ ನಡೆಸಿದೆ.

► 2024ರ ಅಕ್ಟೋಬರ್ 4ರಂದು ಇರಾನ್‌ನ ಪರಮೋಚ್ಚ ನಾಯಕ ಟೆಹರಾನ್‌ನಲ್ಲಿ ಶುಕ್ರವಾರದ ನಮಾಝ್‌ನ ನೇತೃತ್ವ ವಹಿಸಿ ಅಗತ್ಯ ಬಿದ್ದರೆ ಮತ್ತೆ ಇಸ್ರೇಲ್ ಮೇಲೆ ದಾಳಿ ಮಾಡುವುದಾಗಿ ಸವಾಲು ಹಾಕಿದರು. ಇಸ್ರೇಲ್ ವಿರುದ್ಧ ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳು ಒಗ್ಗೂಡುವ ಅಗತ್ಯವಿದೆ ಎಂದು ಅವರು ಕರೆ ನೀಡಿದ್ದಾರೆ.

► 2024ರ ಅಕ್ಟೋಬರ್ 4ರಂದು ಗಾಝಾದಲ್ಲಿ ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿರುವ ಅಮೆರಿಕದ 99 ವೈದ್ಯರು ಅಮೆರಿಕ ಅಧ್ಯಕ್ಷ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಪತ್ರ ಬರೆದು ಇಸ್ರೇಲ್‌ಗೆ ನೀಡಲಾಗಿರುವ ಮಿಲಿಟರಿ, ಆರ್ಥಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಗಾಝಾದ ಯಾವುದೇ ಆಸ್ಪತ್ರೆಗಳು ಅಥವಾ ಇತರ ಆರೋಗ್ಯ ಕೇಂದ್ರಗಳಲ್ಲಿ ನಮ್ಮಲ್ಲಿ ಯಾರೂ ಫೆಲೆಸ್ತೀನ್ ಉಗ್ರ ಗಾಮಿ ಚಟುವಟಿಕೆಯನ್ನು ಒಮ್ಮೆಯೂ ನೋಡಿಲ್ಲ ಎಂದು ಅವರು ಹೇಳಿದ್ದಾರೆ.

ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ, ಗಾಝಾದಲ್ಲಿ ಕಳೆದೊಂದು ವರ್ಷದಿಂದ ಆಗಿರುವ ಸಾವಿನ ಸಂಖ್ಯೆ ಈಗಾಗಲೇ 1,18,000 ಮೀರಿದೆ, ಇದು ಗಾಝಾದ ಜನಸಂಖ್ಯೆಯ ಶೇ.5ಕ್ಕಿಂತ ಹೆಚ್ಚು ಎಂದು ವಿವರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!