ಕನ್ನಡ ಯೂಟ್ಯೂಬ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ ʼದೂತ - ಸಮೀರ್ʼ ವೀಡಿಯೊ

ಕನ್ನಡ ಯೂಟ್ಯೂಬ್ ಜಗತ್ತಿನಲ್ಲೊಂದು ಸಂಚಲನ ಸೃಷ್ಟಿಯಾಗಿದೆ. ಈವರೆಗೆ ಇಂಗ್ಲೀಷ್ , ಹಿಂದಿ ಯೂಟ್ಯೂಬ್ ಚಾನಲ್ ಗಳಲ್ಲಿ ಮಾತ್ರ ಕಾಣಲು ಸಿಗುತ್ತಿದ್ದ ಕೋಟಿಗಟ್ಟಲೆ ವೀಕ್ಷಣೆ, ಲಕ್ಷಗಟ್ಟಲೆ ಲೈಕ್ಸ್, ಸಾವಿರ ಸಾವಿರ ಕಮೆಂಟುಗಳು ಕನ್ನಡ ಯೂಟ್ಯೂಬ್ ಚಾನಲ್ ಒಂದರ ವಿಡಿಯೋಗೆ ಸಿಕ್ಕಿವೆ. ಅದೂ ಕೇವಲ ಐದೇ ದಿನಗಳಲ್ಲಿ.
ಆದರೆ ಈ ಭಾರೀ ಸಾಧನೆ ಮಾಡಿರುವ ಯೂಟ್ಯೂಬರ್ ಗೆ ಈಗ ದಾಖಲೆಗಳ ಜೊತೆ ಸಂಕಷ್ಟ, ಸವಾಲುಗಳೂ ಎದುರಾಗಿವೆ. ಬೆದರಿಕೆ, ಅವಹೇಳನ, ಆರೋಪಗಳ ಸುರಿಮಳೆಯಾಗಿದೆ.
ಸದ್ಯ ಕನ್ನಡ ಯೂಟ್ಯೂಬ್ ಲೋಕದಲ್ಲಿ ಹಾಗು ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೆವರಿಟ್ ಟಾಪಿಕ್ ಆಗಿರುವ ಈ ಯೂಟ್ಯೂಬ್ ಚಾನಲ್ ನ ಹೆಸರು ದೂತ - ಸಮೀರ್ ಎಂ ಡಿ ಎಂದು. ಯೂಟ್ಯೂಬರ್ ನ ಹೆಸರು ಸಮೀರ್.
ಇಡೀ ರಾಜ್ಯದ ಹಾಗು ದೇಶದ ಗಮನ ಸೆಳೆದಿದ್ದ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಈ ಯುವಕ ಮಾಡಿರುವ40 ನಿಮಿಷಗಳ ವಿಡಿಯೋ ಈಗ ಹೆಚ್ಚು ಕಡಿಮೆ ಕನ್ನಡದ ಎಲ್ಲ ಯೂಟ್ಯೂಬ್ ಚಾನಲ್ ಗಳ ದಾಖಲೆಗಳನ್ನು ಪುಡಿಗಟ್ಟಿ ಇತಿಹಾಸ ನಿರ್ಮಿಸಿದೆ.
ಅಪ್ಲೋಡ್ ಆದ ಐದೇ ದಿನಗಳಲ್ಲಿ ಈ ವೀಡಿಯೊ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದ್ದು, ಸುಮಾರು ಹತ್ತು ಲಕ್ಷ ಲೈಕ್ಸ್ ಸಿಕ್ಕಿದೆ, ಸುಮಾರು ನಲ್ವತ್ತು ಸಾವಿರದಷ್ಟು ಕಮೆಂಟ್ ಗಳು ಬಂದಿವೆ.
ಸುಮಾರು 2 ಲಕ್ಷದ ಆಸುಪಾಸು ಇದ್ದ ಚಾನಲ್ ನ subscribers ಗಳ ಸಂಖ್ಯೆ ಐದೇ ದಿನಗಳಲ್ಲಿ ಐದೂವರೆ ಲಕ್ಷ ದಾಟಿದೆ. ಒಟ್ಟಾರೆ ಈಗ ಎಲ್ಲಿ ನೋಡಿದರೂ ದೂತ ಸಮೀರ್ ಎಂಡಿ ಚಾನಲ್ ಹಾಗು ಸಮೀರ್ ಬಗ್ಗೆಯೇ ಚರ್ಚೆ. ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ವಿಡಿಯೋದ ಲಿಂಕ್ , ವಿಡಿಯೋದ ತುಣುಕುಗಳು ವೈರಲ್ ಆಗಿವೆ.
ಸುಮಾರು ನಲ್ವತ್ತು ನಿಮಿಷಗಳ ಈ ವಿಡಿಯೋದಲ್ಲಿ ಎಐ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗಿದೆ. ಸೌಜನ್ಯಳ ಮನೆ, ಧರ್ಮಸ್ಥಳ, ಅಲ್ಲಿನ ಬೇರೆ ಬೇರೆ ಸ್ಥಳಗಳು, ವ್ಯಕ್ತಿಗಳು ಎಲ್ಲರನ್ನೂ ಎಐ ಮೂಲಕವೇ ತೋರಿಸಲಾಗಿದೆ.
ಸೌಜನ್ಯ ಕೊಲೆ ಆರೋಪದ ಮೇಲೆ ಬಂಧಿತರು ನಿಜವಾದ ಆರೋಪಿಗಳೇ ಅಲ್ಲ, ಅಲ್ಲಿನ ಅತ್ಯಂತ ಪ್ರಭಾವಿ ಕುಟುಂಬದ ಆರೋಪಿಗಳನ್ನು ರಕ್ಷಿಸಲು ಯಾರನ್ನೋ ಫಿಕ್ಸ್ ಮಾಡಲಾಗಿದೆ, ಪೊಲೀಸರೇ ವಿಚಾರಣೆಯ ದಾರಿ ತಪ್ಪಿಸಿದ್ದಾರೆ , ಇಡೀ ಕೊಲೆ ಪ್ರಕರಣದ ಸರಿಯಾದ ವಿಚಾರಣೆ ನಡೆದೇ ಇಲ್ಲ ... ಹೀಗೆ ಈಗಾಗಲೇ ಹಲವಾರು ಬಾರಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಹೇಳಿರುವ ವಿಷಯಗಳನ್ನೇ ಈ ವಿಡಿಯೋದಲ್ಲಿ ಸಮೀರ್ ಹೇಳಿದ್ದಾರೆ.
ವೀಡಿಯೊ ಬಿಡುಗಡೆಯ ಬೆನ್ನಿಗೇ ವೀಕ್ಷಣೆ ಹಾಗು ಕಮೆಂಟ್ ಗಳ ಜೊತೆ ಯೂಟ್ಯೂಬರ್ ಪರ ಹಾಗು ವಿರುದ್ಧ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬಹಳಷ್ಟು ಜನರು ಯೂಟ್ಯೂಬರ್ ನನ್ನ ಹಾಡಿ ಹೊಗಳಿದ್ದಾರೆ, ಬೆಂಬಲಿಸಿದ್ದಾರೆ, ವಿಡಿಯೋದ ಕೆಳಗೆ ಇರುವ ಲಿಂಕ್ ಮೂಲಕ ಆರ್ಥಿಕ ನೆರವೂ ನೀಡಿದ್ದಾರೆ.
ಅದರ ಜೊತೆಜೊತೆಗೇ ಸಮೀರ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬೆದರಿಕೆ, ಆಕ್ರೋಶ, ಅಸಮಾಧಾನ, ಟೀಕೆ, ಆರೋಪಗಳೂ ಸಾಕಷ್ಟು ಕೇಳಿ ಬಂದಿವೆ. ಈ ವಿಡಿಯೋದ ಮೂಲಕ ಧರ್ಮಸ್ಥಳದ ಸೌಜನ್ಯ ರೇಪ್ & ಮರ್ಡರ್ ಕೇಸ್ ಕುರಿತು ಮತ್ತೆ ಚರ್ಚೆ ಜೋರಾಗಿದೆ.
ದೊಡ್ಡವರ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಮೀರ್ ಆರೋಪಿಸಿದ್ದಾರೆ. ವಿಡಿಯೋಗೆ ಧರ್ಮ, ಜಾತಿಯ ಥಳಕು ಹಾಕಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದೂ ಅವರು ಅಳಲು ತೋಡಿಕೊಂಡಿದ್ದಾರೆ. ತಾನು ಹಣ ಪಡೆದಿದ್ದೇನೆ ಎಂದು ಮಾಡಲಾಗುತ್ತಿರುವ ಆರೋಪಗಳೂ ಹುರುಳಿಲ್ಲದ್ದು ಎಂದು ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರು ತನಿಖೆ ಕೋರಿ ಹಾಗು ಸಿಬಿಐ ಮಕ್ಕಳ ವಿಶೇಷ ನ್ಯಾಯಾಲಯದ ಆದೇಶ ರದ್ದತಿ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗಳನ್ನು ಕಳೆದ ವರ್ಷ ಹೈಕೋರ್ಟ್ ರದ್ದುಗೊಳಿಸಿತ್ತು.
ಸೌಜನ್ಯ ತಂದೆ ಧರ್ಮಸ್ಥಳದ ಚಂದಪ್ಪ ಗೌಡ, ಪ್ರಕರಣದಲ್ಲಿ ಖುಲಾಸೆಗೊಂಡಿರುವ ಕಾರ್ಕಳ ತಾಲ್ಲೂಕಿನ ಕುಕುಂದೂರಿನ ಸಂತೋಷ್ ರಾವ್ ಹಾಗೂ ಸಿಬಿಐ ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ ಎಂ ಖಾಜಿ ಅವರ ವಿಭಾಗೀಯ ಪೀಠ ನಡೆಸಿತ್ತು.
2012ರ ಅಕ್ಟೋಬರ್ 9ರಂದು ಸೌಜನ್ಯಳನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳ್ತಂಗಡಿ ಠಾಣಾ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು.
ಸಿಬಿಐ ತನಿಖೆ ಪೂರ್ಣಗೊಳಿಸಿ ಸಂತೋಷ್ ರಾವ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯವು ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂದು ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿ 2023ರ ಜೂನ್ 16ರಂದು ಆದೇಶಿಸಿತ್ತು.
ಆ ಆದೇಶದಲ್ಲಿ ಪ್ರಾಸಿಕ್ಯೂಷನ್ ಅಂದ್ರೆ ತನಿಖಾಧಿಕಾರಿಗಳು ಈ ಅಪರಾಧ ಕೃತ್ಯದಲ್ಲಿ ಆರೋಪಿಯ ಪಾತ್ರ ಇರುವುದನ್ನು ಮತ್ತು ಆತನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದ್ದಾರೆ. ಘಟನೆ ಆದ ಅಲ್ಪ ಅವಧಿಯಲ್ಲಿಯೇ ನಡೆಸುವ ಮಾಹಿತಿ, ಸಾಕ್ಷ್ಯ ಸಂಗ್ರಹ ಸಮರ್ಪಕವಾಗಿ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಸಮೀರ್ ಮಾಡಿದ ವಿಡಿಯೋ ವೈರಲ್ ಆದ ನಂತರ ಸಮೀರ್ ಮನೆ ವಿಳಾಸ & ಮೊಬೈಲ್ ನಂಬರ್ ಕೂಡ ಲೀಕ್ ಆಗಿದೆಯಂತೆ. ಅಲ್ಲದೆ ಸಮೀರ್‌ಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೂಡ ಕೇಳಿ ಬಂದಿದೆ.
ಈ ಬಗ್ಗೆ ವಿಡಿಯೋ ಮಾಡಿರುವ ಯುಟ್ಯೂಬರ್ ಸಮೀರ್, ನನಗೆ ಕರೆ ಮಾಡಿ ಬೆದರಿಕೆಯನ್ನ ಹಾಕಲಾಗುತ್ತಿದೆ. ಯಾವ ಕ್ಷಣದಲ್ಲಿ ನನಗೆ ಏನು ಬೇಕಾದರೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಮೀರ್‌ಗೆ ಸಾಕಷ್ಟು ಬೆಂಬಲವೂ ವ್ಯಕ್ತವಾಗುತ್ತಿದ್ದು, ಸರ್ಕಾರ & ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಸಮೀರ್ ಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಜನ ಮನವಿ ಮಾಡುತ್ತಿದ್ದಾರೆ. ಹಾಗೇ ಈ ವಿಚಾರದಲ್ಲಿ ಏನಾದರೂ ಎಡವಟ್ಟು ಆದರೆ ಪರಿಣಾಮ ನೆಟ್ಟಗೆ ಇರಲ್ಲ, ಎಂದೂ ಹಲವರು ಎಚ್ಚರಿಕೆ ಸಂದೇಶ ರವಾನೆ ಮಾಡುತ್ತಿದ್ದಾರೆ .
ಯುಟ್ಯೂಬರ್ ಸಮೀರ್‌ಗೆ ಧರ್ಮ ನಿಂದನೆ ಮಾಡುತ್ತಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಯುಟ್ಯೂಬರ್ ಗಳೂ ಸಮೀರ್ ಅನ್ನು ಬೆಂಬಲಿಸಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ.