ಎಲಾನ್ ಮಸ್ಕ್ ಸ್ಟಾರ್ಲಿಂಕ್ ವಿರೋಧಿಸಿದವರಿಂದಲೇ ಈಗ ಸೇವೆ ನೀಡಲು ಒಪ್ಪಂದ!

ಎಲಾನ್ ಮಸ್ಕ್ | PC : @ElonMuskAOC
ಹೊಸ ಪೈಪೋಟಿ ಎದುರಿಸುವ ಬದಲು ಜೊತೆಯಾಗಿ ಕೆಲಸ ಮಾಡುವುದೇ ಕ್ಷೇಮ. ದೇಶದ ಇಂಟರ್ನೆಟ್ ಸೇವೆಯಲ್ಲಿ ಈಗ ಇಂಥದೊಂದು ನೀತಿಗೆ ಎರಡು ಪ್ರಬಲ ಕಂಪನಿಗಳಾದ ಏರ್ ಟೆಲ್ ಮತ್ತು ಜಿಯೋ ತಯಾರಾಗಿವೆ.
ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಹಲವು ದೇಶಗಳಲ್ಲಿ ನೀಡುತ್ತಿರುವ ಎಲಾನ್ ಮಾಸ್ಕ್ ಅವರ ಸ್ಟಾರ್ಲಿಂಕ್ ಭಾರತಕ್ಕೆ ಬರುತ್ತಿರುವಾಗ, ಅದಕ್ಕೆ ಎದುರಾಗಿ ನಿಲ್ಲುವ ಬದಲು ಜೊತೆಯಾಗೀ ಹೋಗುವುದಕ್ಕೆ ಎರಡೂ ಪ್ರಮುಖ ಕಂಪನಿಗಳು ಮುಂದಾಗಿವೆ.
ಅಮೆರಿಕದ ಇಂಟರ್ನೆಟ್ ದೈತ್ಯ, ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಯ ಅಂಗಸಂಸ್ಥೆಯಾದ ಸ್ಟಾರ್ ಲಿಂಕ್ ಇಂಟರ್ನೆಟ್ ಕಂಪನಿ ಸದ್ಯದಲ್ಲೇ ಭಾರತಕ್ಕೆ ಕಾಲಿಡಲಿದೆ. ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ಸಂಸ್ಥೆಗಳು ಸ್ಟಾರ್ಲಿಂಕ್ ಇಂಟರ್ನೆಟ್ ಸೇವೆಯನ್ನು ಭಾರತದಲ್ಲಿ ತರಲು ಸ್ಪೇಸ್ಎಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿವೆ.
ಭಾರ್ತಿ ಏರ್ ಟೆಲ್ ಸಂಸ್ಥೆ ಸ್ಪೇಸ್ ಎಕ್ಸ್ ಜೊತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಜಿಯೋ ಪ್ಲಾಟ್ಫಾರ್ಮ್ಸ್ ಕೂಡ ಸಹಯೋಗದ ಒಪ್ಪಂದ ಮಾಡಿಕೊಂಡಿದೆ. ಹೀಗೆ ಸ್ಪರ್ಧೆಯಿಂದ ಸಹಯೋಗದ ಕಡೆಗೆ ಹೋಗುವ ಸುಳಿವು ಸಿಕ್ಕಿದೆ.
ಭಾರತದ ಟೆಲಿಕಾಂ ದೈತ್ಯ ಕಂಪನಿಗಳಾದ ಭಾರ್ತಿ ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ತಮ್ಮ ಗ್ರಾಹಕರಿಗೆ ಉತ್ತಮ ಸಂಪರ್ಕವನ್ನು ಒದಗಿಸುವ ಪ್ರಯತ್ನದಲ್ಲಿ ಭಾರತದಲ್ಲಿ ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಸೇವೆಗಳನ್ನು ಪ್ರಾರಂಭಿಸಲು ಪಾಲುದಾರಿಕೆ ಘೋಷಿಸಿವೆ. ಕಳೆದ ವರ್ಷದವರೆಗೂ ಈ ಎರಡೂ ಕಂಪನಿಗಳು ದೇಶಕ್ಕೆ ಅಮೆರಿಕನ್ ಕಂಪನಿಯ ಪ್ರವೇಶವನ್ನು ವಿರೋಧಿಸಿದ್ದವು.
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಮತ್ತು ಸುನಿಲ್ ಮಿತ್ತಲ್ ಅವರ ಭಾರ್ತಿ ಏರ್ ಟೆಲ್ ಎರಡೂ ಆರಂಭದಲ್ಲಿ ಸ್ಪೇಸ್ಎಕ್ಸ್ ಭಾರತಕ್ಕೆ ಪ್ರವೇಶಿಸುವುದನ್ನು ವಿರೋಧಿಸಿದ್ದವು. ಸ್ಯಾಟಲೈಟ್ ಇಂಟರ್ನೆಟ್ ಕಂಪನಿಗೆ ಅವಕಾಶ ವಿರೋಧಿಸಿದ್ದಅಂಬಾನಿ ನಿಲುವನ್ನು ಮಿತ್ತಲ್ ಕೂಡ ಬೆಂಬಲಿಸಿದ್ದರು.
ಸ್ಯಾಟಲೈಟ್ ಕಂಪನಿಗಳು ಕೂಡ ಸಾಂಪ್ರದಾಯಿಕ ಟೆಲಿಕಾಂ ಕಂಪನಿಗಳಂತೆ ಪರವಾನಗಿ ಶುಲ್ಕ ಪಾವತಿಸಬೇಕು ಮತ್ತು ತಮ್ಮ ಟೆಲಿಕಾಂ ಸೇವೆಗಳಿಗೆ ಸ್ಪೆಕ್ಟ್ರಮ್ ಖರೀದಿಸಬೇಕು ಎಂದು ಅವರು ಪ್ರತಿಪಾದಿಸಿದ್ದರು. ಆದರೆ ಈಗ, ಥ್ರೆಟ್ ಎಂದು ಒಮ್ಮೆ ಪರಿಗಣಿಸಲಾಗಿದ್ದ ಕಂಪನಿಯೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿವೆ.
2022ರ ಅಕ್ಟೋಬರ್ ನಿಂದಲೂ ಸ್ಟಾರ್ ಲಿಂಕ್ ಭಾರತದೊಳಕ್ಕೆ ಬರಲು ಪ್ರಯತ್ನ ನಡೆಸಿತ್ತು. ಈಗ ಅಂತಿಮವಾಗಿ ಅದು ಭಾರತಕ್ಕೆ ಬರುತ್ತಿದ್ದು, ಅವತ್ತು ಸ್ಟಾರ್ ಲಿಂಕ್ಗೆ ಸ್ಪೆಕ್ಟ್ರಮ್ ಅನ್ನು ವಿರೋಧಿಸುವಾಗ ಜೊತೆಯಾಗಿದ್ದ
ಏರ್ ಟೆಲ್ ಮತ್ತು ಜಿಯೋ ಕಂಪನಿಗಳೇ ಈಗ ಅದರ ಸೇವೆಯನ್ನು ಇಲ್ಲಿ ನೀಡಲು ಪಾಲುದಾರಿಕೆ ಘೋಷಿಸಿವೆ. ಈ ಒಪ್ಪಂದದ ಮೂಲಕ, ಡೇಟಾ ಟ್ರಾಫಿಕ್ ವಿಷಯದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಜಿಯೋ ಹೊಮ್ಮಲಿದೆ ಎನ್ನಲಾಗಿದೆ.
ಇನ್ನೊಂದೆಡೆ, ಸ್ಟಾರ್ ಲಿಂಕ್ ಸೇವೆಗಳನ್ನು ನೀಡಲು ಸ್ಪೇಸ್ಎಕ್ಸ್ನೊಂದಿಗೆ ಕೆಲಸ ಮಾಡುವುದು ಮಹತ್ವದ ಮೈಲಿಗಲ್ಲು ಎಂದು ಏರ್ ಟೆಲ್ ಹೇಳಿಕೊಂಡಿದೆ. ಏರ್ ಟೆಲ್ ಮತ್ತು ಜಿಯೋ ಸಹಯೋಗದೊಂದಿಗೆ ಸ್ಟಾರ್ ಲಿಂಕ್ ಅಂತಿಮವಾಗಿ ಭಾರತಕ್ಕೆ ಬರುತ್ತಿದೆ.ಇವೆರಡೂ ಏರ್ ಫೈಬರ್ ಎಂಬ ತಮ್ಮದೇ ಆದ ವೈರ್ ಲೆಸ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಹೊಂದಿವೆ.
ಹಾಗಾದರೆ, ಸ್ಟಾರ್ ಲಿಂಕ್ ಇಂಟರ್ನೆಟ್ ಏರ್ ಟೆಲ್ ಮತ್ತು ಜಿಯೋ ಏರ್ ಫೈಬರ್ಗಿಂತ ಹೇಗೆ ಭಿನ್ನ?
ಏರ್ ಫೈಬರ್ ಮತ್ತು ಸ್ಟಾರ್ ಲಿಂಕ್ ಎರಡೂ ಸಾಂಪ್ರದಾಯಿಕ ಇಂಟರ್ನೆಟ್ ಸಂಪರ್ಕ ಕಷ್ಟಕರವಾದ ಪ್ರದೇಶಗಳಲ್ಲಿ ಸೇವೆ ಒದಗಿಸುವ ಉದ್ಧೇಶ ಹೊಂದಿವೆ. ಹಾಗಿದ್ದರೂ ಈ ಎರಡೂ ಸೇವೆಗಳ ನಡುವಿನ ಪ್ರಮುಖ ವ್ಯತ್ಯಾಸಗಳೆಂದರೆ ಅವುಗಳ ತಂತ್ರಜ್ಞಾನ. ಹಾಗೆಯೇ ಅವುಗಳ ಕಾರ್ಯಕ್ಷಮತೆ ಮತ್ತು ಬಳಕೆಯ ಸಂದರ್ಭಗಳಲ್ಲಿಯೂ ಭಿನ್ನತೆಯಿರುತ್ತದೆ.
ಏರ್ ಫೈಬರ್ ಸೇವೆಗಳು 5G ನೆಟ್ ವರ್ಕ್ ಮತ್ತು ಸುಧಾರಿತ ವೈಫೈ 6 ತಂತ್ರಜ್ಞಾನ ಬಳಸಿಕೊಂಡು ಮನೆಗಳು ಮತ್ತು ಉದ್ಯಮಗಳಿಗೆ ವೇಗದ ವೈರ್ಲೆಸ್ ಇಂಟರ್ನೆಟ್ ಅನ್ನು ಒದಗಿಸುತ್ತವೆ. ಏರ್ ಫೈಬರ್ ಸೇವೆಯಲ್ಲಿ ಜಿಯೋ ಮತ್ತು ಏರ್ ಟೆಲ್ ಎರಡೂ ತಮ್ಮ 5G ನೆಟ್ವರ್ಕ್ ಟವರ್ ಗಳನ್ನು ಅವಲಂಬಿಸಿ ಇಂಟರ್ನೆಟ್ ಸಿಗ್ನಲ್ ಗಳನ್ನು ಬಳಕೆದಾರರ ಮನೆಯಲ್ಲಿ ಇರಿಸಲಾಗಿರುವ ಮೇಲ್ಛಾವಣಿಯ ಆಂಟೆನಾ ಅಥವಾ ಒಳಾಂಗಣ ಸಾಧನಕ್ಕೆ ಪ್ರಸಾರ ಮಾಡುತ್ತವೆ.
ವಿಶೇಷ ಉಪಕರಣಗಳನ್ನು ಸ್ಥಾಪಿಸಲಾದ ನಿರ್ದಿಷ್ಟ ಪ್ರದೇಶಕ್ಕೆ 5G ಅನ್ನು ನಿರ್ದೇಶಿಸುವುದು ಮತ್ತು ನಂತರ ಸ್ಥಿರ ಸಂಪರ್ಕ ಮತ್ತು ವೇಗವನ್ನು ಒದಗಿಸಲು ಲಭ್ಯವಿರುವ ಬ್ಯಾಂಡ್ ವಿಡ್ತ್ ಅನ್ನು ಬಳಸುವುದು ಇದರ ಉದ್ದೇಶ.
ಏರ್ ಫೈಬರ್ ಉತ್ತಮ ಸಂಪರ್ಕ ನೀಡಲು ಕೇಂದ್ರೀಕೃತ ಸಿಗ್ನಲ್ ಶಕ್ತಿಯನ್ನು ಬಳಸುತ್ತದೆ. ಮನೆಯಲ್ಲಿ ಸ್ಥಾಪಿಸಲಾದ ಸಾಧನ ಹತ್ತಿರದ ಟವರ್ಗೆ ಸಂಪರ್ಕಿಸುತ್ತದೆ. ಫೈಬರ್ ಕೇಬಲ್ ಗಳನ್ನು ಹಾಕಲು ಸಾಧ್ಯವಿಲ್ಲದ ಪ್ರದೇಶಗಳಲ್ಲಿ ಈ ಸೇವೆ ಉಪಯುಕ್ತವಾಗಿದೆ.
ಜಿಯೋ ಮತ್ತು ಏರ್ ಟೆಲ್ ಎರಡರಿಂದಲೂ ಏರ್ ಫೈಬರ್ ಸಂಪರ್ಕ ಫೈಬರ್ ಬ್ರಾಡ್ ಬ್ಯಾಂಡ್ ಗೆ ಪರ್ಯಾಯವಾಗಿದೆ. ಆದರೆ ಇದು ಉಪಗ್ರಹ ಆಧಾರಿತವಲ್ಲ. ಬದಲಾಗಿ, ಇದು ವೈರ್ಲೆಸ್ 5G ಸಂಪರ್ಕವನ್ನು ಬಳಸುತ್ತದೆ. ಸ್ಟಾರ್ ಲಿಂಕ್ ಸಂಪೂರ್ಣವಾಗಿ ಭಿನ್ನವಾಗಿದೆ.
ಇದು ಸ್ಪೇಸ್ ಎಕ್ಸ್ ಉಪಗ್ರಹಗಳಿಂದ ಭೂಮಿಗೆ ಪ್ರಸಾರವಾಗುವ ಸ್ಯಾಟಲೈಟ್ ಇಂಟರ್ನೆಟ್ ಸೇವೆಯಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ವೇಗದ ಬ್ರಾಡ್ ಬ್ಯಾಂಡ್ ಅನ್ನು ತಲುಪಿಸಲು ವಿನ್ಯಾಸಗೊಳಿಸಲಾದ ಉಪಗ್ರಹಗಳನ್ನು ಬಳಸುತ್ತದೆ.
ಪ್ರಸ್ತುತ, ಕಕ್ಷೆಯಲ್ಲಿ ಸುಮಾರು 7,086 ಸ್ಟಾರ್ ಲಿಂಕ್ ಉಪಗ್ರಹಗಳಿವೆ. ಅವುಗಳಲ್ಲಿ 7,052 ಕಾರ್ಯನಿರ್ವಹಿಸುತ್ತಿವೆ. ಪರ್ವತಗಳು, ಸಮುದ್ರದ ಮಧ್ಯದಲ್ಲಿ, ಆಳವಾದ ಕಾಡುಗಳಲ್ಲಿ ಅಥವಾ ಇತರ ದೂರದ ಸ್ಥಳಗಳಲ್ಲಿ ಬಳಕೆದಾರರನ್ನು ಸಂಪರ್ಕಿಸಲು ಇದರಿಂದ ಸಾಧ್ಯ.
ಇದು ಕಾರ್ಯನಿರ್ವಹಿಸುವ ವಿಧಾನ ಸರಳವಾಗಿದೆ. ಮನೆಯ ನೆಲದ ಮೇಲೆ ಅಥವಾ ಛಾವಣಿಯ ಮೇಲೆ ಡಿಶ್ ಟಿವಿ ಆಂಟೆನಾದಂತೆ ಕಾಣುವ ಸ್ಟಾರ್ ಲಿಂಕ್ ಆಂಟೆನಾವನ್ನು ಸ್ಥಾಪಿಸಿದರೆ ಇಡೀ ಆಕಾಶ ನೋಟವನ್ನು ಅದು ಗ್ರಹಿಸುತ್ತದೆ.
ಸ್ಟಾರ್ ಲಿಂಕ್ ಉಪಗ್ರಹಗಳು ನೆಲದ ಮೇಲಿನ ಈ ಆಂಟೆನಾಕ್ಕೆ ಸಂಪರ್ಕಗೊಳ್ಳುತ್ತವೆ ಮತ್ತು ಒಮ್ಮೆ ಸಂಪರ್ಕಗೊಂಡ ನಂತರ ಬೀಮ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುತ್ತವೆ. ಅಂತಿಮ ಬಳಕೆದಾರರಿಗೆ ಮತ್ತು ಲ್ಯಾಪ್ ಟಾಪ್ಗಳು ಮತ್ತು ಫೋನ್ ಗಳಂತಹ ಅವರ ಸಾಧನಗಳಿಗೆ, ಸಂಪೂರ್ಣ ಸಂಪರ್ಕ ಸಾಮಾನ್ಯ ವೈಫೈ ಸಂಪರ್ಕದಂತೆ ಕೆಲಸ ಮಾಡುತ್ತದೆ.
ಮೋಡ ಅಥವಾ ಹವಾಮಾನ ಪರಿಸ್ಥಿತಿಗಳ ಹೊರತಾಗಿಯೂ ಸ್ಟಾರ್ ಲಿಂಕ್ ಸಂಪರ್ಕ ಸ್ಥಿರವಾಗಿರುತ್ತದೆ ಮತ್ತು ಅಡೆತಡೆಯಿಲ್ಲದೆ ಲಭ್ಯವಿರುತ್ತದೆ.