ಗುಂಪು ಹತ್ಯೆ ಆರೋಪಿ ಬಿಜೆಪಿಗೆ ಅಧ್ಯಕ್ಷ, ವೈದ್ಯನ ವಿರುದ್ಧ ಮೇಲಿಂದ ಮೇಲೆ FIR !

Update: 2024-02-09 04:44 GMT
Editor : Ismail | Byline : ಆರ್. ಜೀವಿ

ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದ್ದರಿಂದಾಗಿ 63 ಮಕ್ಕಳನ್ನು ಬಲಿ ತೆಗೆದುಕೊಂಡ ಉತ್ತರಪ್ರದೇಶದ ಗೋರಖ್ಪುರದ ಸರ್ಕಾರಿ ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆ ದುರಂತ ಸಂಭವಿಸಿ ಆರೂವರೆ ವರ್ಷಗಳೇ ಕಳೆದಿವೆ.

2017ರ ಆಗಸ್ಟ್ನಲ್ಲಿ ಅಂಥದೊಂದು ಘೋರ ದುರಂತ ಸಂಭವಿಸಿದಾಗ, ಮಕ್ಕಳ ಜೀವ ಕಾಪಾಡಲು, ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಲು ಸ್ವಂತ ಹಣ ಖರ್ಚು ಮಾಡಿ ಕಾಳಜಿ ಮೆರೆದಿದ್ದ ಡಾ.ಕಫೀಲ್ ಖಾನ್ ಪ್ರಯತ್ನಗಳು ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದವು.

ಆದರೆ ದುರಂತ ನೋಡಿ,

ಹಾಗೆ ದೇಶಾದ್ಯಂತ ಹೀರೋ ಎಂದು ಹೊಗಳಿಸಿಕೊಂಡಿದ್ದ ಅದೇ ಕಫೀಲ್ ಖಾನ್ ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರಕ್ಕೆ ಮಾತ್ರ ವಿಲನ್ ಆಗಿ ಕಂಡಿದ್ದರು.

ಆಕ್ಸಿಜನ್ ಪೂರೈಕೆದಾರರಿಗೆ ಬಾಕಿ ಪಾವತಿಸದೆ ಇದ್ದುದರಿಂದ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡು ಈ ದುರಂತ ಸಂಭವಿಸಿದ್ದುದು ಬಯಲಾಗಿತ್ತು.

ಆದರೆ ಮಕ್ಕಳ ಪ್ರಾಣ ಉಳಿಸಲು ಹೋರಾಡಿದ್ದ ವೈದ್ಯ ಕಫೀಲ್ ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಟ್ಟಿತು ಯುಪಿ ಸರ್ಕಾರ.

ಡಾ.ಖಾನ್ ಅವರನ್ನೇ ಆದಿತ್ಯನಾಥ್ ಸರ್ಕಾರ ಕರ್ತವ್ಯ ಲೋಪದ ಆರೋಪದ ಮೇಲೆ ಹುದ್ದೆಯಿಂದ ಕಿತ್ತುಹಾಕಿತ್ತು. ಬಳಿಕ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿಸಿ ಜೈಲಿಗೆ ಕಳಿಸಲಾಯಿತು.

2019ರಲ್ಲಿ ನ್ಯಾಯಾಲಯ ಅವರನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆಗೊಳಿಸಿತು.

ಆದರೆ, ಕಥೆ ಅಲ್ಲಿಗೇ ನಿಂತಿದ್ದರೆ, ನಾವಿವತ್ತು ಇದನ್ನೆಲ್ಲ ಮತ್ತೊಮ್ಮೆ ಹೇಳಬೇಕಾಗಿರಲಿಲ್ಲ.

ಅವತ್ತು ಡಾ.ಖಾನ್ ವಿರುದ್ಧ ಹಗೆ ಸಾಧಿಸುವುದಕ್ಕೆ ನಿಂತ ಯುಪಿ ಸರ್ಕಾರ ಇವತ್ತಿಗೂ, ಆರೂವರೆ ವರ್ಷಗಳ ನಂತರವೂ ಬಿಡದೆ ಅವರನ್ನು ಕಾಡುತ್ತಿದೆ.  

ಅವರ ವಿರುದ್ಧ ನಿರಂತರ ಕೇಸು ದಾಖಲಿಸುತ್ತಲೇ ಬಂದಿದೆ, ಜೈಲಿಗೆ ಕಳಿಸುತ್ತಲೇ ಬಂದಿದೆ.  

ಎಂತೆಂತಹ ಅಪರಾಧಿಗಳೆಲ್ಲ ಇದೇ ಆದಿತ್ಯನಾಥ್ ಆಡಳಿತದಲ್ಲಿ ಆರಾಮವಾಗಿ ಇರುವಾಗ ಜೀವ ರಕ್ಷಿಸಲು ಹೋರಾಡಿದ ಹೀರೋನನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ನೋಡಿ.

ಯಾಕಿಂಥ ದ್ವೇಷ ಅದಕ್ಕೆ?

ನಿಮಗೆ ಅಚ್ಚರಿಯಾಗಬಹುದು.

ಅವತ್ತು ಸುಳ್ಳು ಆರೋಪ ಹೊರೆಸಿ ಆಸ್ಪತ್ರೆ ದುರಂತ ಪ್ರಕರಣದಲ್ಲಿ ಜೈಲಿಗೆ ಕಳಿಸಿದ್ದ ಕೇಸ್ನಿಂದ ಹಿಡಿದು ಈವರೆಗೆ ಡಾ.ಖಾನ್ ವಿರುದ್ಧ ಯುಪಿ ಸರ್ಕಾರ ಆರು ಕೇಸ್ಗಳನ್ನು ಹಾಕಿದೆ.

6ನೇ FIR ಖಾನ್ ವಿರುದ್ಧ ದಾಖಲಾದದ್ದು 2023ರ ಡಿಸೆಂಬರ್ 1ರಂದು.

ಇನ್ನೂ ವಿಚಿತ್ರವೆಂದರೆ, ಆ FIR ಅವರ ವಿರುದ್ದ ದಾಖಲಾದದ್ದು ಯಾರೋ ಕೆಲವರ ಮಧ್ಯೆ ನಡೆಯಿತೆನ್ನಲಾದ ಸಂಭಾಷಣೆಯ ಬಗ್ಗೆ ಯಾವನೋ ಒಬ್ಬ ಬಂದು ಕೊಟ್ಟ ದೂರನ್ನು ಆಧರಿಸಿ.

ಹೇಗೆ ಉತ್ತರ ಪ್ರದೇಶದ ಯುಪಿ ಸರ್ಕಾರ ನೆಪಗಳನ್ನು ಹುಡುಕಿ ಹುಡುಕಿ ಡಾ. ಖಾನ್ ಅವರನ್ನು ಕಾಡುತ್ತಿದೆ ಎನ್ನೋದಕ್ಕೆ ಇದೊಂದು ನಿದರ್ಶನ.

ಗೋರಖ್ಪುರ ದುರಂತದ ಬಗ್ಗೆ 2021ರಲ್ಲಿ ಖಾನ್ ಬರೆದ ಪುಸ್ತಕದ ವಿಚಾರವೂ ಈ ಪ್ರಕರಣದಲ್ಲಿ ಬರುತ್ತದೆ.

ಯಾರೋ ಕೆಲವರು ಮಾತಾಡಿಕೊಳ್ಳುತ್ತಿದ್ದರು. ಅವರ ಮಾತಿನಲ್ಲಿ ಖಾನ್ ವಿಚಾರವೂ ಬಂದಿತ್ತು. ಖಾನ್ ಗುಪ್ತವಾಗಿ ಪುಸ್ತಕ ಪ್ರಕಟಿಸಿದ್ದು, ಅದನ್ನು ಗುಟ್ಟಾಗಿಯೇ ರಾಜ್ಯಾದ್ಯಂತ ಹಂಚುತ್ತಿದ್ದಾರೆ. ಜನರನ್ನು ಎತ್ತಿಕಟ್ಟಿ, ಹಿಂದೂಗಳ ಸರ್ಕಾರವನ್ನು ಬೀಳಿಸಲು ನೊಡುತ್ತಿದ್ದಾರೆ ಎಂಬುದು ಈಗ ಖಾನ್ ಮೇಲೆ ಯುಪಿ ಪೊಲೀಸರು ಹೊರಿಸಿರುವ ಹೊಸ ಆರೋಪವಾಗಿದೆ.

ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ತಮ್ಮ ನಿಜಬದುಕಿನ ವಿವರಗಳನ್ನೇ ಹೋಲುವ ಪಾತ್ರವನ್ನು ಸೃಷ್ಟಿಸಲಾಗಿದ್ದು, ಅದರಿಂದಾಗಿ ಮತ್ತೆ ಗೋರಖ್ಪುರ ದುರಂತ ಗಮನ ಸೆಳೆದ ಹಿನ್ನೆಲೆಯಲ್ಲಿ ಇಂಥದೊಂದು ಕೇಸ್ ಹಾಕಿರುವ ಸಾಧ್ಯತೆ ಇದೆ ಎಂಬುದು ಡಾ.ಖಾನ್ ಅನುಮಾನ.

ಪೊಲೀಸರು ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ 10 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾನೂನುಬಾಹಿರ ಸಭೆ, ರಾಷ್ಟ್ರೀಯ ಒಗ್ಗಟ್ಟಿಗೆ ಧಕ್ಕೆ, ನಕಲಿ ಸಹಿ, ನಕಲಿ ಸಹಿಯನ್ನೇ ಅಸಲಿ ಎಂಬಂತೆ ಬಳಸುವುದು, ಶಾಂತಿ ಭಂಗ ಉಂಟುಮಾಡಲು ನಿಂದನೆ, ತೊಂದರೆ ಉಂಟುಮಾಡುವ ಹೇಳಿಕೆಗಳು,ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಉದ್ದೇಶದಿಂದ ಪದಗಳ ಬಳಕೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶಪೂರಿತ ಕೃತ್ಯಗಳು ಸೇರಿದಂತೆ ಹಲವು ಆಪಾದನೆಗಳನ್ನು ಅವರ ಮೇಲೆ ಹೊರಿಸಲಾಗಿದೆ.

ಲಕ್ನೋ ನಿವಾಸಿ ಮನೀಶ್ ಶುಕ್ಲಾ ಎಂಬ ವ್ಯಕ್ತಿ ಸಲ್ಲಿಸಿದ ದೂರಿನ ಆಧಾರದಲ್ಲಿ ಲಕ್ನೋ ದಕ್ಷಿಣ ಜಿಲ್ಲೆಯ ಕೃಷ್ಣನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಎಫ್‌ಐಆರ್ ಪೊಲೀಸರ ವ್ಯವಸ್ಥಿತ ನಾಟಕ ಎಂಬುದನ್ನೇ ತೋರಿಸುತ್ತದೆ ಎನ್ನುತ್ತಾರೆ ಅದನ್ನು ಗಮನಿಸಿರುವ ವಕೀಲರು.

ರಾಜ್ಯದಲ್ಲಿ ಗಲಭೆ ಉಂಟುಮಾಡಿ ಸರ್ಕಾರ ಬೀಳಿಸಲು ಪುಸ್ತಕವನ್ನು ರಹಸ್ಯವಾಗಿ ಹಂಚಲಾಗುತ್ತಿದೆ ಎಂಬ ಆರೋಪಕ್ಕೂ, ಗೋರಖ್‌ಪುರ ದುರಂತದ ಕುರಿತಾದ ಖಾನ್ ಅವರ ಪುಸ್ತಕದ ವಿಷಯಕ್ಕೂ ಯಾವ ಸಂಬಂಧವೂ ಇಲ್ಲ. ಪೊಲೀಸರು  ಹೇಳುತ್ತಿರುವುದು ಒಂದು ಕಟ್ಟುಕಥೆ ಎಂದು ಎಫ್‌ಐಆರ್ ಬಗ್ಗೆ ಆರ್ಟಿಕಲ್ 14 ಡಾಟ್ಕಾಂ ಪೋರ್ಟಲ್ ಜೊತೆ ಮಾತನಾಡಿರುವ ಸುಪ್ರೀಂ ಕೋರ್ಟ್ ವಕೀಲ ಶಾರುಖ್ ಆಲಂ ಹೇಳಿದ್ದಾರೆ.

ಪೊಲೀಸರ ಈ ನಡೆ ಅತಿ ಅಪಾಯಕಾರಿ ಎಂದು ಅವರು ಉಲ್ಲೇಖಿಸಿದ್ದಾರೆ.

ಖಾನ್ ವಿರುದ್ಧ ಪೊಲೀಸರು ನಡೆದುಕೊಂಡ ರೀತಿಯಲ್ಲಿಯೇ ಯುಪಿ ಸರ್ಕಾರದ ಹಗೆತನ ಬಯಲಾಗುತ್ತಿದೆ.

ಯಾರೋ ಹಾಗೆ ಮಾತನಾಡಿದರೆಂದು ತಾನು ಕೇಳಿದ್ದಾಗಿ ಯಾರೋ ಒಬ್ಬ ನೀಡುವ ದೂರು ಆಧರಿಸಿಯೇ ಪೊಲೀಸರು ಕೇಸು ಹಾಕುವುದೆಂದರೆ ಏನರ್ಥ?

FIR ಹಾಕಲು ಇಷ್ಟವಿಲ್ಲದೇ ಇರುವಾಗ ಇದೇ ಪೊಲೀಸರು ಪ್ರಾಥಮಿಕ ವಿಚಾರಣೆಯ ನೆಪ ಮುಂದೆ ಮಾಡುತ್ತಲೇ ಕಾಲ ತಳ್ಳುತ್ತಾರಲ್ಲವೆ?

ಅತ್ಯಾಚಾರಕ್ಕೊಳಗಾದವರು ಬಂದು ದೂರು ನೀಡಿದರೆ ಕೇಸು ದಾಖಲಿಸಿಕೊಳ್ಳಲು ಸತಾಯಿಸುವ ಇದೇ ಪೊಲೀಸರು, ಕಾನೂನನ್ನು ತಮಗೆ ಬೇಕಾದ ಹಾಗೆ ಬಳಸಿ ಆಟವಾಡಬಲ್ಲ ಇದೇ ಪೊಲೀಸರು, ಡಾ.ಖಾನ್ ವಿರುದ್ಧ ಮಾತ್ರ ಯಾರೋ ಒಬ್ಬ ಯಾವ ಆಧಾರವೂ ಇಲ್ಲದೆ ನೀಡಿದ ದೂರು ಕೊಟ್ಟ ತಕ್ಷಣವೇ ಒಂದೆರಡಲ್ಲ, 10 ಸೆಕ್ಷನ್ಗಳ ಅಡಿಯಲ್ಲಿ ಕೇಸ್ ಹಾಕಿಬಿಡುತ್ತಾರೆ.

ಹೇಗಿದೆ ಆದಿತ್ಯನಾಥ್ ಸರ್ಕಾರದಲ್ಲಿ ಪ್ರಾಮಾಣಿಕರಿಗೆ ಸಿಗುವ ಸುರಕ್ಷತೆ?

62 ವರ್ಷದ ಕಾಜಿಮ್ ಅಹ್ಮದ್ ಎಂಬವರನ್ನು ನಾಲ್ವರ ಗುಂಪು ಕಾರಿನೊಳಗೆ ಎಳೆದುಕೊಂಡು ಹೋಗಿ ಥಳಿಸಿ, ಆತನೊಂದಿಗೆ ತೀರಾ ಅನುಚಿತವಾಗಿ ವರ್ತಿಸಿ, ಕೋಮುವಾದಿ ನಿಂದನೆಗಳನ್ನು ಮಾಡಿದ ಕಳವಳಕಾರಿ ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಲು ಇದೇ ಯುಪಿ ಪೊಲೀಸರು ಒಂದೂವರೆ ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದ್ದರು ಎಂಬುದನ್ನು ವಕೀಲ ಶಾರುಖ್ ಆಲಂ ನೆನಪಿಸುತ್ತಾರೆ.

ಅಂಥದೊಂದು ದ್ವೇಷ ಅಪರಾಧದ ವಿಚಾರದಲ್ಲಿ ಪೊಲೀಸರು ತೋರಿದ ನಿರ್ಲಕ್ಷ್ಯದ ಬಗ್ಗೆ ಸುಪ್ರೀಂ ಕೋರ್ಟೇ ವಿಷಾದ ವ್ಯಕ್ತಪಡಿಸಬೇಕಾಗಿ ಬಂದಿತ್ತು.

ಅಂಥ ಯುಪಿ ಪೊಲೀಸರಿಗೆ ಖಾನ್ ವಿರುದ್ಧ ಯಾರೋ ಬಂದು ಆಧಾರವಿಲ್ಲದ ಕಥೆ ಹೇಳಿದರೆ ತಕ್ಷಣವೇ FIR ಹಾಕುವುದು ಅದೆಷ್ಟು ಸುಲಭ ನೋಡಿ.

ದೂರು ಬಂದ ದಿನವೇ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿಬಿಟ್ಟಿತ್ತು. ಯಾವ ಪ್ರಾಥಮಿಕ ತನಿಖೆಯ ಅಗತ್ಯವೂ ಪೊಲೀಸರಿಗೆ ಕಾಣಲೇ ಇಲ್ಲ. ಯಾಕೆಂದರೆ ಖಾನ್ ಮೇಲೆ ಕೇಸ್ ಹಾಕುವುದಕ್ಕೆ ಯುಪಿ ಸರ್ಕಾರ ಕಾದುಕೊಂಡೇ ಕೂತಿತ್ತು, ಹದ್ದಿನ ಹಾಗೆ.

2021 ರ ಜನವರಿಯಲ್ಲಿ ಖಾನ್ ಹೆಸರನ್ನು ಉತ್ತರ ಪ್ರದೇಶದ ಗಂಭೀರ ಅಪರಾಧಗಳ ಸುದೀರ್ಘ ದಾಖಲೆ ಹೊಂದಿರುವವರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಅರ್ಥ ಇಷ್ಟೇ, ಏನೇ ನೆಪ ಸಿಕ್ಕಿದರೂ ಖಾನ್ ಅವರನ್ನು ಸಿಲುಕಿಸುವುದಕ್ಕೆ ಸರ್ಕಾರ ನಿರ್ಧಾರ ಮಾಡಿಬಿಟ್ಟಿದೆ.

ಒಂದು ಪ್ರಕರಣ ಖಾನ್ ಪರವಾಗಿಬಿಟ್ಟರೆ, ಇನ್ನೊಂದು, ಬಳಿಕ ಮತ್ತೊಂದು - ಹೀಗೆ ಅವರ ವಿರುದ್ಧ ಕೇಸ್ ಹಾಕುತ್ತಲೇ ಹೋಗಲು ಸರ್ಕಾರ ತಯಾರಾಗಿಯೇ ನಿಂತಿದೆ.

ಖಾನ್ ವಿಚಾರದಲ್ಲಿನ ಯುಪಿ ಸರ್ಕಾರದ ಹಗೆತನ ಈಗಾಗಲೇ ಹೇಳಿದ ಹಾಗೆ ಶುರುವಾದದ್ದು ಗೋರಖ್ಪುರ ಆಸ್ಪತ್ರೆ ದುರಂತದ ಬಳಿಕ.

2017ರ ಆಗಸ್ಟ್ 10ರಂದು ಗೋರಖ್‌ಪುರದ BRD ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಜೀವ ಉಳಿಸಲು ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆಗೊಳಿಸಿದ, ಸತತ ಹೋರಾಟ ನಡೆಸಿದ ನಂತರದ ದಿನಗಳಲ್ಲಿ ಡಾ.ಖಾನ್ ಬದುಕೇ ಅಯೋಮಯವಾಗಿ ಹೋಯ್ತು.

ಸಾವಿಗೀಡಾದ 70ಕ್ಕೂ ಹೆಚ್ಚು ರೋಗಿಗಳಲ್ಲಿ 63 ಮಕ್ಕಳು ಸೇರಿದ್ದರು.

ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ಉಪನ್ಯಾಸಕರಾಗಿದ್ದ ಖಾನ್ ಅವರು ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಲು ಹಣವನ್ನು ಖರ್ಚು ಮಾಡಿದ್ದರು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಆಸ್ಪತ್ರೆಗೆ ಸಾಗಿಸಲು ಅರೆಸೇನಾಪಡೆಯ ಸಹಾಯನ್ನು ಕೋರಿದ್ದರು ಎಂಬುದು ವರದಿಯಾಗಿತ್ತು.

ಒಂದೆಡೆ ಖಾನ್ ಬಗ್ಗೆ ಹೊಗಳಿಕೆ ಕೇಳಿಬರುತ್ತಿರುವಾಗ, ಮಕ್ಕಳ ಸಾವಿನ ದುರಂತಕ್ಕಾಗಿ ಆದಿತ್ಯನಾಥ್ ಸರ್ಕಾರ ವ್ಯಾಪಕ ಟೀಕೆಗಳಿಗೆ ಒಳಗಾಗಿತ್ತು.

ಇದಕ್ಕಾಗಿ ಹಗೆ ತೀರಿಸಿಕೊಳ್ಳಲು ಕಡೆಗೆ ಖಾನ್ ಅವರನ್ನೇ ಬಲಿಪಶುವಾಗಿಸಲಾಯಿತು.

ಖಾನ್ ತಪ್ಪಿತಸ್ಥರಲ್ಲ. ಬದಲಾಗಿ ಅವರೇ ಆಕ್ಸಿಜನ್ ವ್ಯವಸ್ಥೆ ಮಾಡಲು ಹೆಣಗಾಡಿದ್ಧಾರೆ ಎಂದು ತನಿಖಾಧಿಕಾರಿಗಳೇ 2019ರ ಏಪ್ರಿಲ್ನಲ್ಲಿ ಸ್ಪಷ್ಟವಾಗಿ ಹೇಳಿದ ಮೇಲೂ ಅವರನ್ನು ಅಮಾನತು ಮಾಡಲಾಯಿತು.

ಹಿಂದಿನ ತನಿಖಾ ಸಮಿತಿ ಕೆಲ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬ ನೆಪ ಮುಂದೆ ಮಾಡಿ 2020ರ ಫೆಬ್ರವರಿಯಲ್ಲಿ ಮತ್ತೆ ತನಿಖೆ ಶುರು ಮಾಡಲಾಯಿತು.

ಆದರೆ ಅನಂತರ ತನಿಖೆಯನ್ನು ಹಿಂತೆಗೆದುಕೊಳ್ಳಲಾಯಿತು. ಬದಲಾಗಿ, 2021ರ ನವೆಂಬರ್ನಲ್ಲಿ ಖಾನ್ ಅವರನ್ನು ಕೆಲಸದಿಂದಲೇ ತೆಗೆಯಲಾಯಿತು.

ಸೇವೆಯಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿದ ಅವರ ಅರ್ಜಿ 2022ರ ಫೆಬ್ರವರಿಯಿಂದಲೂ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

ಖಾನ್ ಅವರ ಮನವಿಗೆ ಪ್ರತಿಕ್ರಿಯೆ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ 2023ರ ಡಿಸೆಂಬರ್ 5ರಂದು ಕೊನೆಯ ಅವಕಾಶವನ್ನು ನೀಡಿದೆ.

ಈಗ ಅವರ ವಿರುದ್ಧದ 6ನೇ ಪ್ರಕರಣವಂತೂ ಬರೀ ಊಹೆಗಳ ಆಧಾರದ ಮೇಲೆಯೇ ಇದೆ.

ಪ್ರಕರಣದಲ್ಲಿ ಖಾನ್ ಜೊತೆಗೆ ಇನ್ನೂ ನಾಲ್ಕೈದು ಅಪರಿಚಿತರನ್ನು ಸೇರಿಸಲಾಗಿದೆ. ಆ ಅಪರಿಚಿತರು ಯಾರೆಂಬುದನ್ನೇ ಗುರುತಿಸಲಾಗಿಲ್ಲ.

ದೂರುದಾರರನ್ನು ಹೊರತುಪಡಿಸಿ ಬೇರೆ ಸಾಕ್ಷಿಗಳಿಲ್ಲ.

ಘಟನಾ ಸ್ಥಳಕ್ಕೆ ಕರೆದಿದ್ದುದಾಗಿ ದೂರುದಾರ ಹೇಳಿದ್ದ, ಆತನ ಸ್ನೇಹಿತರೆನ್ನಲಾದ ಎರಡು ಮೂರು ಮಂದಿಯ ಹೆಸರುಗಳನ್ನು ಕೂಡ ಉಲ್ಲೇಖಿಸಲಾಗಿಲ್ಲ ಅಥವಾ ಸಾಕ್ಷಿಗಳೆಂದು ತೆಗೆದುಕೊಂಡಿಲ್ಲ.

ದೂರುದಾರ ಹೇಳುವ ಘಟನೆಯಲ್ಲಿ ಎಲ್ಲರೂ ಕತ್ತಲೆಯಲ್ಲಿ ಕಣ್ಮರೆಯಾದರು. ತಮಾಷೆಯೆಂದರೆ ಅವರೆಲ್ಲರ ಬದಲಾಗಿ, ಅದಕ್ಕಿಂತ ಹೆಚ್ಚಾಗಿ, ಆ ಸ್ಥಳದಲ್ಲಿ ಇಲ್ಲದೇ ಇದ್ದರೂ ಖಾನ್ ಅವರನ್ನು ಮುಖ್ಯ ಆರೋಪಿ ಎಂದು ಕೇಸ್ ಹಾಕಲಾಗಿದೆ.

ಸ್ಥಳದಲ್ಲಿ ಖಾನ್ ಬರೆದ ಪುಸ್ತಕ ಸಿಕ್ಕಿತು ಎಂಬುದು ಆರೋಪವಾದರೂ, ಆ ಪುಸ್ತಕವನ್ನು ಖಾನ್ ಬರೆದಿದ್ದಾರೆಯೇ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ, ಏಕೆಂದರೆ ಪುಸ್ತಕದಲ್ಲಿ ಲೇಖಕರ ಅಥವಾ ಪ್ರಕಾಶಕರ ಹೆಸರೇ ಇಲ್ಲ ಎಂದು ಸ್ವತಃ ದೂರುದಾರನೇ ಹೇಳಿದ್ದಾನೆ.

ಹೋಗಲಿ, ಆ ಪುಸ್ತಕವನ್ನು ಪೊಲೀಸರು ಜಪ್ತಿ ಮಾಡಿದ್ದಾರೆಯೇ ಎಂಬುದು ಕೂಡ ಎಫ್ಐಆರ್ನಲ್ಲಿ ಇಲ್ಲ.

ವಾಸ್ತವ ಹೀಗೆಲ್ಲ ಇರುವಾಗ, ಪುಸ್ತಕದಲ್ಲಿ ಲೇಖಕರ ಮತ್ತು ಪ್ರಕಾಶಕರ ಹೆಸರೇ ಇಲ್ಲದಿರುವಾಗ, ಅದು ಖಾನ್ ಅವರೇ ಬರೆದ ಪುಸ್ತಕ ಎಂಬುದು ಕೂಡ ಖಚಿತವಿಲ್ಲದೇ ಇರುವಾಗ ಹೇಗೆ ಅವರ ವಿರುದ್ಧ ಫೋರ್ಜರಿ ಕೇಸ್ ಹಾಕಲಾಗುತ್ತದೆ?

ಎಫ್ಐಆರ್ನಲ್ಲಿ ಪೂಜಾ ಸ್ಥಳ ಇಲ್ಲವೆ ಪವಿತ್ರ ವಸ್ತುವನ್ನು ಅಶುದ್ಧಗೊಳಿಸುವುದಕ್ಕೆ ಸಂಬಂಧಿಸಿದ ಸೆಕ್ಷನ್ 295ರ ಉಲ್ಲೇಖ ಕೂಡ ಇದೆ. ಆದರೆ ಈ ಪ್ರಕರಣದಲ್ಲಿ ಆ ಸೆಕ್ಷನ್ಗೆ ಸಂಬಂಧಿಸಿದ ಯಾವ ಅಂಶವೂ ಇಲ್ಲ.

ಇನ್ನೊಂದು ಸಂಗತಿಯೆಂದರೆ, ದೂರುದಾರ ಹೇಳಿದ ಸ್ಥಳದಲ್ಲಿ ಖಾನ್ ಇಲ್ಲದಿದ್ದರೂ, ಸೆಕ್ಷನ್ 143ರ ಅಡಿಯಲ್ಲಿ ಕಾನೂನುಬಾಹಿರ ಸಭೆಯ ಆರೋಪ ಹೊರಿಸಲಾಗಿದೆ.

ಇದು ನಿಜವಾಗಿಯೂ ಪೊಲೀಸರು ತಮಗೆ ಬೇಕಾದಂತೆ ಪ್ರಕರಣವನ್ನು ತಿರುಚಲು ಅಧಿಕಾರ ದುರುಪಯೋಗಪಡಿಸಿಕೊಂಡದ್ದರ ಉದಾಹರಣೆಯಂತೆಯೇ ತೋರುತ್ತದಲ್ಲವೆ?

ಇನ್ನು ಹೇಗೆಲ್ಲ ಪೊಲೀಸರು ಮತ್ತು ಯುಪಿ ಸರ್ಕಾರ ಖಾನ್ ಬೆನ್ನು ಬೀಳುತ್ತಲೇ ಇದೆ ಎಂಬುದನ್ನು ಸ್ವಲ್ಪ ಗಮನಿಸೋಣ.

2017ರ ಗೋರಖ್ಪುರ ಆಸ್ಪತ್ರೆ ದುರಂತ ಪ್ರಕರಣದಲ್ಲಿ 2018ರ ಸೆಪ್ಟೆಂಬರ್ 2ರಂದು ಬಂಧಿಸಲ್ಪಟ್ಟ ಏಳು ತಿಂಗಳ ಬಳಿಕ ಗೋರಖ್‌ಪುರ ಜಿಲ್ಲಾ ಜೈಲಿನಲ್ಲಿದ್ದ ಖಾನ್‌ ಅವರಿಗೆ 2018ರ ಏಪ್ರಿಲ್ 25ರಂದು ಅಲಹಾಬಾದ್ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿತ್ತು.

ಆದರೆ, ಜಾಮೀನಿನ ಮೇಲೆ ಹೊರಗಿದ್ದಾಗ 2018ರ ಸೆಪ್ಟೆಂಬರ್ 22ರಂದು, ಬಹ್ರೈಚ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿನ ಮಕ್ಕಳ ಸಾವಿನ ತನಿಖೆಗೆ ಹೋಗಿದ್ದ ಅವರನ್ನು ಆಸ್ಪತ್ರೆಗೆ ನುಗ್ಗಿದ ಆರೋಪದ ಮೇಲೆ ಬಂಧಿಸಲಾಯಿತು.

ಈ ಎರಡನೇ ಪ್ರಕರಣದಲ್ಲಿ ಜಾಮೀನು ಸಿಗುವ ಹೊತ್ತಿಗೆ 45 ದಿನಗಳನ್ನು ಜೈಲಿನಲ್ಲಿ ಕಳೆಯಬೇಕಾಯಿತು.

ಅದರಲ್ಲಿ ಬಿಡುಗಡೆಯಾದ ಒಂದೇ ದಿನದೊಳಗೆ ಅವರನ್ನು ವಂಚನೆಯ ಪ್ರಕರಣದಲ್ಲಿ ಮೂರನೇ ಬಾರಿಗೆ ಬಂಧಿಸಲಾಯಿತು. ಮತ್ತದು ಒಂಬತ್ತು ವರ್ಷಗಳಿಂದ ಬಾಕಿಯಿದ್ದ ಪ್ರಕರಣವಾಗಿತ್ತು.

ಅದಾದ ಬಳಿಕ, 2019ರ ಡಿಸೆಂಬರ್ 12ರಂದು, ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಷಣ ಮತ್ತು ಪ್ರಚೋದನಾಕಾರಿ ಹೇಳಿಕೆ ಆರೋಪದ ಮೇಲೆ ಖಾನ್ ಅವರನ್ನು ಮತ್ತೆ ಯುಪಿ ಪೊಲೀಸರು ಬಂಧಿಸಿದರು.

2020ರ ಫೆಬ್ರವರಿ 10ರಂದು ಖಾನ್‌ಗೆ ಜಾಮೀನು ಸಿಕ್ಕಿತಾದರೂ, ಮಥುರಾ ಜೈಲಿನಿಂದ ಅವರ ಬಿಡುಗಡೆಯಾಗಲಿಲ್ಲ.

ಮೂರು ದಿನಗಳ ನಂತರ, 2020ರ ಫೆಬ್ರವರಿ 13ರಂದು, ಯಾವುದೇ ಆರೋಪವಿಲ್ಲದೆ 12 ತಿಂಗಳವರೆಗೆ ವಶಕ್ಕೆ ತೆಗೆದುಕೊಳ್ಳಲು ಅವಕಾಶವಿರುವ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಖಾನ್ ವಿರುದ್ಧ ಅನ್ವಯಿಸಲಾಯಿತು.

ಖಾನ್ ಬಿಡುಗಡೆ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯಕಾರಿ ಎನ್ನಲಾಯಿತಲ್ಲದೆ, ಬಂಧನ ಆದೇಶವನ್ನು ಎರಡೆರಡು ಬಾರಿ ಮರು ಹೊರಡಿಸಲಾಯಿತು.

ಸುಮಾರು ಏಳು ತಿಂಗಳ ಕಾಲ, ಅಂದರೆ 2020ರ ಫೆಬ್ರವರಿ 13ರಿಂದ 2020ರ ಸೆಪ್ಟೆಂಬರ್ 1ರವರೆಗೆ ಖಾನ್ ಜೈಲಿನಲ್ಲಿರಬೇಕಾಯಿತು.

ಕಡೆಗೆ ಅಲಹಾಬಾದ್ ಹೈಕೋರ್ಟ್ 2019ರ ಡಿಸೆಂಬರ್ನಲ್ಲಿ, ಖಾನ್ ಮಾಡಿದರೆನ್ನಲಾದ ಭಾಷಣ ಮತ್ತು ಫೆಬ್ರವರಿ 2020ರಲ್ಲಿ NSA ಅಡಿ ಬಂಧಿಸಿರುವುದರ ನಡುವೆ ಯಾವುದೇ ಸಾಂದರ್ಭಿಕ ಸಂಬಂಧ ಇಲ್ಲವೆಂದು ಗಮನಿಸಿ, ತಕ್ಷಣ ಬಿಡುಗಡೆಗೆ ಆದೇಶಿಸಿತು.

ಅಷ್ಟಾದ ಮೇಲೂ ಸೇಡಿನ ಆಟ ಬಿಟ್ಟುಕೊಡದ ಯುಪಿ ಸರ್ಕಾರ, ಅಲಹಾಬಾದ್ ಹೈಕೋರ್ಟ್‌ನ ಆದೇಶ ಪ್ರಶ್ನಿಸಲು ಯತ್ನಿಸಿತ್ತು. ಆದರೆ, 2020ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿತು.

ಇಷ್ಟೆಲ್ಲ ಆಗುವ ಹೊತ್ತಿಗೆ ಖಾನ್ ನಾಲ್ಕು ವರ್ಷಗಳಲ್ಲಿ ಸುಮಾರು 500 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು.

2017ರಲ್ಲಿ ಆಸ್ಪತ್ರೆ ದುರಂತ ಪ್ರಕರಣದಲ್ಲಿ 9 ತಿಂಗಳು ಜೈಲು,

ಬಹ್ರೈಚ್‌ ಪ್ರಕರಣದಲ್ಲಿ ಸುಮಾರು 45 ದಿನಗಳ ಜೈಲು,

ವಂಚನೆ ಪ್ರಕರಣದಲ್ಲಿ 23 ದಿನಗಳ ಜೈಲುವಾಸ,

ಸಿಎಎ ವಿರೋಧಿ ಪ್ರತಿಭಟನೆಗಾಗಿ ಮಥುರಾ ಜೈಲಿನಲ್ಲಿ ಸುಮಾರು 7 ತಿಂಗಳು

ಮಾರ್ಚ್ 2022ರಲ್ಲಿ, ಡಿಯೋರಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯನ್ನು ಪರೀಕ್ಷಿಸಲು ಆಂಬ್ಯುಲೆನ್ಸ್ಗೆ ಬಲವಂತವಾಗಿ ಪ್ರವೇಶಿಸಿದ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಖಾನ್ ವಿರುದ್ಧ 5ನೇ ಎಫ್‌ಐಆರ್ ದಾಖಲಿಸಲಾಗಿತ್ತು.

ಇದಾದ ಬಳಿಕ 2023ರ ಡಿಸೆಂಬರ್ 1ರಂದು ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಿದ ಆರೋಪ ಹೊರಿಸಿ ದಾಖಲಾಗಿರುವುದು 6ನೇ ಎಫ್ಐಆರ್.

ಅತ್ಯಾಚಾರಿಗಳು, ಲೈಂಗಿಕ ಪೀಡಕರು, ಗುಂಪು ಹಲ್ಲೆ, ಹತ್ಯೆ ಆರೋಪಿಗಳು, ದ್ವೇಷ ಭಾಷಣ ಮಾಡುವವರು ರಾಜಾರೋಷವಾಗಿ ತಿರುಗಾಡುವ, ಇನ್ಸ್ ಪೆಕ್ಟರ್ ನನ್ನು ಕೊಂದು ಹಾಕಿದ ಗುಂಪು ಹತ್ಯೆ ಆರೋಪಿ ಬಿಜೆಪಿ ವಲಯ ಅಧ್ಯಕ್ಷನಾಗುವ ಯುಪಿ ಯಲ್ಲಿ ಒಬ್ಬ ಜನಪರ ವೈದ್ಯನ ಮೇಲೆ ಯಾರೋ ಬಂದು ಏನೋ ಹೇಳಿದರೆ ತಕ್ಷಣ ಎಫ್ ಐ ಆರ್ ಆಗುತ್ತೆ.

ಆದಿತ್ಯನಾಥ್ ಸರ್ಕಾರದ ದ್ವೇಷಕ್ಕೆ ಕೊನೆಯೇ ಇಲ್ಲವೆ?

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!