ಉಗ್ರ ಪ್ರಕರಣಗಳಲ್ಲಿ ತಪ್ಪಾಗಿ ಸಿಲುಕಿಸಲ್ಪಟ್ಟವರಿಗೆ ಕಾನೂನು ನೆರವಿನ ಆಸರೆಯಾದ ಜಮೀಯ್ಯತ್ ಉಲಮಾ ಹಾಗು ಗುಲ್ಝಾರ್‌ ಅಝ್ಮಿ

Update: 2023-08-22 12:40 GMT

ಮುಂಬೈ: ಮುಂಬೈ ಸರಣಿ ರೈಲು ಸ್ಫೋಟ, ಔರಂಗಾಬಾದ್‌ ಶಸ್ತ್ರಾಸ್ತ್ರ ವಶ ಪ್ರಕರಣ ಮತ್ತು ಮಾಲೆಗಾಂವ್‌ ಸ್ಫೋಟ, ಹೀಗೆ ಮೂರು ಪ್ರಕರಣಗಳಲ್ಲಿ ಬಂಧಿತರಾಗಿದ್ದ 30ಕ್ಕೂ ಅಧಿಕ ಮುಸ್ಲಿಂ ಯುವಕರು 2006ರಲ್ಲಿ ಮುಂಬೈಯ ಜಮೀಯತ್ ಉಲಮಾ-ಎ-ಹಿಂದ್‌ ಕಚೇರಿಗೆ ನಿಸ್ಸಹಾಯಕರಾಗಿ ಪತ್ರ ಬರೆದು ತಮ್ಮನ್ನು ತಪ್ಪಾಗಿ ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂದು ದೂರಿದ್ದರಲ್ಲದೆ ತಮ್ಮ ಸಾಮಾಜಿಕ-ಆರ್ಥಿಕ ದುಸ್ಥಿತಿಯ ಬಗ್ಗೆಯೂ ವಿವರಿಸಿದ್ದರು. ಈ ಎಲ್ಲಾ ಯುವಕರೂ ನಿಷೇಧಿತ ಲಷ್ಕರ್-ಇ-ತಯ್ಯಬ್ಬ ಸಂಘಟನೆಯವರೆಂದು ಆರೋಪಿಸಲಾಗಿತ್ತು.

ಈ ಬೆಳವಣಿಗೆಯ ನಂತರ ಅಲ್ಲಿಯ ತನಕ ಕೇವಲ ಸಾಮಾಜಿಕ-ಧಾರ್ಮಿಕ ಸಂಘಟನೆಯಾಗಿ ಗುರುತಿಸಿಕೊಂಡಿದ್ದ ಜಮೀಯತ್ ಉಲಮಾ-ಎ-ಹಿಂದ್‌ ಉಗ್ರ ಸಂಬಂಧಿ ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂಬ ಸಂಶಯವಿದ್ದವರಿಗೆ ಕಾನೂನು ಸಹಾಯ ಕೇಂದ್ರವಾಗಿಯೂ ಮಾರ್ಪಟ್ಟಿತ್ತು. ಇದರ ಹಿಂದಿನ ಪ್ರೇರಕ ಶಕ್ತಿಯಾಗಿದ್ದವರು ಜಮೀಯತ್‌ನ ಹಿರಿಯ ಮುಖಂಡ ಗುಲ್ಝಾರ್‌ ಅಝ್ಮಿ. ಆಗ ಅವರಿಗೆ 74 ವರ್ಷ ವಯಸ್ಸಾಗಿತ್ತು.

ಇತ್ತೀಚೆಗೆ ಬಿದ್ದು ತಲೆಗೆ ಗಾಯಗೊಂಡಿದ್ದ ಅಝ್ಮಿ ಆಗಸ್ಟ್‌ 20ರಂದು ಮುಂಬೈಯ ಆಸ್ಪತ್ರೆಯಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರ ಕೊನೇ ಕ್ಷಣಗಳಿಗೂ ಮುನ್ನ ಅವರು ತಮ್ಮ ಕಚೇರಿಯಲ್ಲಿ ತಡ ಸಂಜೆಯವರೆಗೆ ಕೆಲಸ ಮಾಡುತ್ತಿದ್ದರು ಎಂದು ಅವರ ಸಹೋದ್ಯೋಗಿಗಳು ಹೇಳುತ್ತಾರೆ. ಜಮೀಯತ್‌ನ ಕಾನೂನು ಘಟಕದ ಕಾರ್ಯದರ್ಶಿಯಾಗಿ ಅವರು ಒಂದೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದರಲ್ಲದೆ 500 ಪ್ರಕರಣಗಳನ್ನು ನಿಭಾಯಿಸಿದ್ದರು.

ಒಬ್ಬ ವ್ಯಕ್ತಿಯನ್ನು ಒಂದು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆಯೆಂದಾದರೆ ಕಾನೂನು ಸಹಾಯ ಒದಗಿಸಬೇಕೆಂದು ಅವರು ಹೇಳುತ್ತಿದ್ದರು ಎಂದು ಅವರ ಸಹೋದ್ಯೋಗಿಗಳು ಹೇಳುತ್ತಾರೆ.

ಅವರು 75ಕ್ಕೂ ಅಧಿಕ ಪ್ರಕರಣಗಳನ್ನು ತಮ್ಮ ಕೊನೆ ದಿನಗಳಲ್ಲಿ ನಿಭಾಯಿಸುತ್ತಿದ್ದರು. ಇವುಗಳಲ್ಲಿ ಮರಣದಂಡನೆ ವಿಧಿಸಲ್ಪಟ್ಟ ಪ್ರಕರಣಗಳು ಹಾಗೂ 125 ಜೀವಾವಧಿ ಶಿಕ್ಷೆಯ ಪ್ರಕರಣಗಳು ಸೇರಿವೆ.

ಅಝ್ಮಿ ವಕೀಲರಾಗಿರಲಿಲ್ಲ. ಅವರು ಕಲಿತಿದ್ದು ಕೇವಲ 5ನೇ ತರಗತಿಯವರೆಗೆ, ಆದರೆ ಕಾನೂನಿನ ಕುರಿತು ಅವರಿಗಿದ್ದ ಜ್ಞಾನದಿಂದ ಹಲವರು ಅವರೊಬ್ಬ ವಕೀಲರೆಂದೇ ಭಾವಿಸಿದ್ದರು.

ಉತ್ತರ ಪ್ರದೇಶದ ಆಜಂಘರ್‌ನವರಾಗಿರುವ ಅಝ್ಮಿ ಯುವಕರಾಗಿದ್ದಾಗಲೇ ಹಲವಾರು ಸಾಮಾಜಿಕ-ಧಾರ್ಮಿಕ ಗುಂಪುಗಳ ಭಾಗವಾಗಿದ್ದರು ಹಾಗೂ 1950ರಿಂದ ಜಮೀಯತ್‌ ಉಲಮಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಜೀವಿತಾವಧಿಯಲ್ಲಿ 65 ವರ್ಷಗಳ ಕಾಲ ತಮ್ಮ ಸಮುದಾಯಕ್ಕಾಗಿ ಶ್ರಮಿಸಿದ್ದರು.

ಕಳೆದೆರಡು ದಶಕಗಳಲ್ಲಿ ದೇಶದ ಪ್ರತಿ ರಾಜ್ಯದಲ್ಲಿ ತಮ್ಮ ಸಂಘಟನೆಯ ಕಾನೂನು ತಂಡ ಹೊಂದಲು ಅವರು ಶ್ರಮಿಸಿದ್ದರು. ಉಗ್ರ ಸಂಬಂಧಿ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟ್‌ ತನಕ ಕೇಸ್‌ಗಳನ್ನು ಈ ತಂಡ ನಿಭಾಯಿಸುತ್ತಿತ್ತು. ಅವರೊಂದಿಗೆ ಕೆಲಸ ಮಾಡುತ್ತಿದ್ದ ವಕೀಲ ಶಾಹಿದ್‌ ಅಝ್ಮಿ 2010ರಲ್ಲಿ ಗ್ಯಾಂಗ್‌ಸ್ಟರ್‌ ಛೋಟಾ ರಾಜನ್‌ ಸಹವರ್ತಿಗಳಿಂದ ಹತ್ಯೆಗೀಡಾಗಿದ್ದರು. ಶಾಹಿದ್‌ ಅವರು 7/11 ರೈಲು ಸ್ಫೋಟ ಪ್ರಕರಣದ, 2006 ಮಾಲೆಗಾಂವ್‌ ಸ್ಫೋಟ, ಔರಂಗಾಬಾದ್‌ ಶಸ್ತ್ರಾಸ್ತ್ರ ವಶ ಪ್ರಕರಣ, ಘಾಟ್ಕೊಪರ್‌ ಸ್ಫೋಟ ಪ್ರಕರಣ ಹಾಗೂ ನವೆಂಬರ್‌ 26. 2008ರ ಮುಂಬೈ ಉಗ್ರ ದಾಳಿ ಪ್ರಕರಣದ ಹಲವು ಆರೋಪಿಗಳ ಪರ ವಕೀಲರಾಗಿದ್ದರು.

ಶಾಹಿದ್‌ ಸಾವಿನ ನಂತರ ಅಝ್ಮಿ ಅವರು ಕಾನೂನು ವಿದ್ಯಾಭ್ಯಾಸ ಪಡೆಯಲು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಿದ್ದರು. ಪ್ರತಿ ವರ್ಷ ಜಮೀಯತ್‌ ಸುಮಾರು 25-30 ಮುಸ್ಲಿಂ ಮತ್ತು ದಲಿತ ಸಮುದಾಯದ ಕಾನೂನು ವಿದ್ಯಾರ್ಥಿಗಳ ವಿದ್ಯಾಭ್ಯಾಸ ವೆಚ್ಚ ಭರಿಸುತ್ತಿದೆ.

ಪ್ರತಿ ಬಾರಿ ಪೊಲೀಸರು ಉಗ್ರ ಜಾಲ ಬೇಧಿಸಿದಾಗ ಈ ಪ್ರಕರಣದಲ್ಲಿ ಆರೋಪಿಗಳೆಂದು ಪೊಲೀಸರು ಗುರುತಿಸಿದವರ ಹಿನ್ನೆಲೆಯನ್ನು ತಿಳಿದು, ಅವರನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ತಿಳಿದಲ್ಲಿ, ಅವರಿಗೆ ಕಾನೂನು ಸಹಾಯ ಒದಗಿಸಲು ಅಝ್ಮಿ ಮುಂದೆ ಬರುತ್ತಿದ್ದರು.

ಅಕ್ಷರಧಾಮ್‌ ಸ್ಫೋಟ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ಘೋಷಣೆಯಾಗಿದ್ದ ಮುಫ್ತಿ ಅಬ್ದುಲ್‌ ಖಯ್ಯೂಂ ಮನ್ಸೂರಿಗೆ ಕಾನೂನು ಸಹಾಯ ಬೇಕಿದ್ದಾಗ ಆತನ ನೆರವಿಗೆ ಮೊದಲು ಬಂದಿದ್ದು ಅಝ್ಮಿ ಅವರು. ಮನ್ಸೂರಿಯನ್ನು ನಂತರ ಸುಪ್ರೀಂ ಕೋರ್ಟ್‌ ಖುಲಾಸೆಗೊಳಿಸಿತ್ತು.

“ನನ್ನನ್ನು ಹಾಗೂ ಪ್ರಕರಣದಲ್ಲಿ ಬಂಧಿತ ಇತರರನ್ನು ಭೇಟಿಯಾಗಲು ಅಝ್ಮಿ ಸಾಹಬ್‌ ಸಾಬರಮತಿ ಜೈಲಿಗೆ ಬಂದಿದ್ದರು. ಅವರು ಬರುವ ಅಗತ್ಯವಿರಲಿಲ್ಲ, ಆದರೂ ಬಂದಿದ್ದರು. ಪ್ರಕರಣವನ್ನು ಜಮೀಯತ್‌ ನಿಭಾಯಿಸುವುದೆಂದು ಅವರು ಭರವಸೆ ನೀಡಿದರು. ಮತ್ತು ಕೊನೆ ತನಕ ಅವರು ತಮ್ಮ ಮಾತು ಉಳಿಸಿಕೊಂಡರು,” ಎಂದು ಮನ್ಸೂರಿ ಹೇಳುತ್ತಾರೆ.

ಅಝ್ಮಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮನ್ಸೂರಿ ಮುಂಬೈಗೆ ಬಂದಿದ್ದರು. ಉಗ್ರ ಸಂಬಂಧಿ ಅಪರಾಧ ಪ್ರಕರಣಗಳಲ್ಲಿ ಆರೋಪ ಹೊತ್ತಿರುವವರು ಹಾಗೂ ಅವರ ಕುಟುಂಬಗಳ ಸಹಿತ ಸಾವಿರಾರು ಮಂದಿ ಅಝ್ಮಿ ಅವರಿಗೆ ಅಂತಿಮ ಗೌರವ ಸಲ್ಲಿಸಲು ಆಗಮಿಸಿದ್ದರು.

ಕೃಪೆ: thewire.in

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!