ಮಹಿಳಾ ಸಬಲೀಕರಣಕ್ಕೆ ಸಾಧನವಾದ ಕರ್ನಾಟಕದ ‘ಗೃಹಲಕ್ಷ್ಮಿ’

‘ಗೃಹಲಕ್ಷ್ಮಿ’ ಸ್ವಾಗತಾರ್ಹ ಹೆಜ್ಜೆ. ಹಣಕಾಸಿನ ಬೆಂಬಲ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ, ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಾರ್ವಜನಿಕ ಜೀವನದಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ. ಆದರೆ, ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನಗದು ವರ್ಗಾಯಿಸಿದರೆ ಸರಕಾರದ ಕೆಲಸ ಮುಗಿದುಬಿಡುವುದಿಲ್ಲ. ಅದು ಸುಲಭವಾಗಿ ಅವರ ಕೈಸೇರುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದೂ ಅವಶ್ಯ.

Update: 2023-09-17 03:40 GMT

- ದಿವ್ಯಾ ಪ್ರದೀಪ್

ಕರ್ನಾಟಕ ಸರಕಾರ ಕಳೆದ ತಿಂಗಳು ಗೃಹಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸಿತು, ಇದರೊಂದಿಗೆ ತನ್ನ ಮಹತ್ವದ ಚುನಾವಣಾ ಪೂರ್ವ ಭರವಸೆಯನ್ನು ಕಾಂಗ್ರೆಸ್ ಪೂರೈಸಿದಂತಾಯಿತು. ಈ ನಗದು ವರ್ಗಾವಣೆ ಯೋಜನೆಯಡಿ ಕುಟುಂಬದ ಯಜಮಾನಿಯರಿಗೆ ಪ್ರತೀ ತಿಂಗಳು ಅವರ ಬ್ಯಾಂಕ್ ಖಾತೆಗಳಿಗೆ 2,000 ರೂ. ಜಮೆ ಮಾಡಲಾಗುತ್ತದೆ. ರಾಜ್ಯದಲ್ಲಿ ಪರಿಚಯಿಸಲಾದ ದೇಶದ ಅತಿದೊಡ್ಡ ನಗದು ವರ್ಗಾವಣೆ ಯೋಜನೆ ಇದು ಎಂದು ರಾಜ್ಯ ಸರಕಾರ ಹೇಳಿಕೊಂಡಿದೆ. 1 ಕೋಟಿ 9 ಲಕ್ಷ ಮಹಿಳೆಯರು ಈಗಾಗಲೇ ಯೋಜನೆಗೆ ಹೆಸರು ದಾಖಲಿಸಿಕೊಂಡಿದ್ದಾರೆ.

ಈ ಉಚಿತ ಯೋಜನೆಗಳ ಅನುಷ್ಠಾನ ರಾಜ್ಯವನ್ನು ದಿವಾಳಿಯಾಗಿಸುತ್ತದೆ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸಿದೆ. ಕೇಂದ್ರ ಸರಕಾರ ಹಣ ಅಥವಾ ಉಚಿತ ಸರಕುಗಳ ವರ್ಗಾವಣೆಯನ್ನು ಒಳಗೊಂಡ ಕಲ್ಯಾಣ ಯೋಜನೆಗಳಿಗೆ ಅಸಮ್ಮತಿ ವ್ಯಕ್ತಪಡಿಸಿರುವುದು ಇದೇ ಮೊದಲಲ್ಲ.

ಕೇಂದ್ರ ಸರಕಾರದ ವಿಮರ್ಶಾತ್ಮಕವಲ್ಲದ ರಾಜಕೀಯ ದೂಷಣೆಯ ಹೊರತಾಗಿಯೂ, ನಗದು ವರ್ಗಾವಣೆಯ ಹಿಂದಿನ ಸಾಮಾಜಿಕ ಉದ್ದೇಶಗಳ ವಸ್ತುನಿಷ್ಠ ಮತ್ತು ಸೂಕ್ಷ್ಮವಾದ ತಿಳುವಳಿಕೆ ಅಗತ್ಯವಿದೆ. ವಿಶೇಷವಾಗಿ ಅವರು ಮಹಿಳೆಯರಂತಹ ನಿರ್ದಿಷ್ಟ ಉಪವಿಭಾಗವನ್ನು ಗುರಿಯಾಗಿಸಿಕೊಂಡು ವಾದಿಸುವಾಗ ಇದು ಮುಖ್ಯ. ಇದನ್ನು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಅಂತರ್ಗತವಾಗಿರುವ ಕರ್ನಾಟಕದ ಮಹಿಳೆಯರ ಸಂದರ್ಭದಲ್ಲಿ ನಿರ್ದಿಷ್ಟ ವಾಸ್ತವಗಳ ಅರಿವಿನಲ್ಲಿ ಮಾಡಬೇಕು.

ನಗದು ವರ್ಗಾವಣೆಯ ಈ ಸಮರ್ಥನೀಯ ಕ್ರಮ, ಫಲಪ್ರದವಾದ ಪುನರ್ವಿತರಣಾ ಕಾರ್ಯತಂತ್ರವಾಗಿದೆ ಮತ್ತು ದೈಹಿಕ ಹಿಂಸೆಯನ್ನು ಕಡಿಮೆ ಮಾಡುವ ಮತ್ತು ಮಹಿಳೆಯರನ್ನು ಸಬಲಗೊಳಿಸುವ ವಿಷಯದಲ್ಲಿ, ಮಹಿಳೆಯರ ಜೀವನದಲ್ಲಿ ನಗದು ವರ್ಗಾವಣೆ ವಹಿಸಬಹುದಾದ ನಿರ್ದಿಷ್ಟ ಪಾತ್ರವೇನು ಎಂಬುದನ್ನು ಪರಿಶೀಲಿಸೋಣ.

ನಗದು ವರ್ಗಾವಣೆಗೆ ಸಂಬಂಧಿಸಿದಂತೆ ಎದ್ದಿರುವ ಕಳವಳವೆಂದರೆ, ಆಹಾರ, ಪೌಷ್ಟಿಕತೆ, ಆರೋಗ್ಯ ಮತ್ತು ಶಿಕ್ಷಣದಂತಹ ಅನೇಕ ಅಗತ್ಯ ಸೇವೆಗಳಿಂದ ರಾಜ್ಯ ಹಿಂದೆಗೆಯಬಹುದು ಎಂಬುದು. ಆದರೂ, ರಾಜ್ಯ ಸರಕಾರ ಇತ್ತೀಚೆಗೆ ಪರಿಚಯಿಸಿದ ಕಲ್ಯಾಣ ಯೋಜನೆಗಳ ಸಂದರ್ಭದಲ್ಲಿ, ಗೃಹಲಕ್ಷ್ಮಿ ಯೋಜನೆಯ ಮೂಲಕ ನಗದು ವರ್ಗಾವಣೆ ಸರಕುಗಳು ಮತ್ತು ಸೇವೆಗಳ ವಿತರಣೆಯೊಡನೆ ಪೂರಕವಾಗಿದೆ. ಉದಾಹರಣೆಗೆ, ಶಕ್ತಿ ಯೋಜನೆ ಎಲ್ಲಾ ಮಹಿಳೆಯರಿಗೆ ಅವರ ಆರ್ಥಿಕ ವರ್ಗವನ್ನು ಲೆಕ್ಕಿಸದೆ, ಐಷಾರಾಮಿಯಲ್ಲದ ಬಸ್ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುತ್ತದೆ ಮತ್ತು ಗೃಹಜ್ಯೋತಿ ಯೋಜನೆ ಕರ್ನಾಟಕದ ಮನೆಗಳಿಗೆ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ.

ಮಹಿಳೆಯರಿಗೆ ನಗದು ವರ್ಗಾವಣೆಯನ್ನು ಸಾಮಾಜಿಕ ಅನ್ಯಾಯ ಮತ್ತು ಆರ್ಥಿಕ ಅಂಚಿನಲ್ಲಿರುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಆಧಾರದಲ್ಲಿ ಸಮರ್ಥಿಸಬಹುದು. ಜಾಗತಿಕ ಲಿಂಗ ಅಂತರ ವರದಿ 2023ರ ಪ್ರಕಾರ, ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ ಎಂಬ ಮಾನದಂಡದಲ್ಲಿ (ಒಂದೇ ರೀತಿಯ ಕೆಲಸಕ್ಕಾಗಿ ವೇತನ ಸಮಾನತೆ, ಗಳಿಸಿದ ಆದಾಯ ಇತ್ಯಾದಿ ಸೂಚಕಗಳನ್ನು ಒಳಗೊಂಡಿದೆ) ಭಾರತ ಕೇವಲ ಶೇ. 36.7 ಲಿಂಗ ಸಮಾನತೆಯನ್ನು ಸಾಧಿಸಿದೆ.

ಐತಿಹಾಸಿಕವಾಗಿ, ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯಲ್ಲಿನ ಸುಧಾರಣೆ ಅವರ ಸಂಬಳ ರಹಿತ ಕೆಲಸದಲ್ಲಿನ ಇಳಿಕೆಗೆ ಸಂಬಂಧಿಸಿದೆ ಅಥವಾ ಅಂತಹ ಕೆಲಸವನ್ನು ಮಾರುಕಟ್ಟೆಯ ಕೆಲಸದೊಂದಿಗೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದೆ. ಪುರಾವೆಗಳು ಸೂಚಿಸುವ ಪ್ರಕಾರ, ಪುರುಷರು ಮತ್ತು ಮಹಿಳೆಯರ ನಡುವೆ ಸಂಬಳ ರಹಿತ ಮನೆಕೆಲಸದ ಹಂಚಿಕೆ ಅತ್ಯಂತ ಅಸಮಾನ ರೀತಿಯಲ್ಲಿದೆ. ಮಹಿಳೆಯರು ಅಂತಹ ಕೆಲಸದಲ್ಲಿ 7.2 ಗಂಟೆಗಳ ಕಾಲ ವ್ಯಯಿಸುವಾಗ ಪುರುಷರು ದಿನಕ್ಕೆ ಕೇವಲ 2.8 ಗಂಟೆ ಮಾತ್ರ ಅಂಥ ಕೆಲಸ ಮಾಡುತ್ತಾರೆ. ವೇತನದ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮಹಿಳೆಯರಿಗೆ ಪುರುಷರು ಅವಕಾಶ ಕೊಡುವುದು ಕಡಿಮೆ.

ಈ ಅಂಶಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ನಗದು ವರ್ಗಾವಣೆ ಮಹಿಳೆಯರು ಎದುರಿಸುತ್ತಿರುವ ಆರ್ಥಿಕ ಅಭದ್ರತೆಯ ಸಂಕಟವನ್ನು ನಿವಾರಿಸುತ್ತದೆ ಮತ್ತು ಇದೊಂದು ಉತ್ತಮ ಬಗೆಯ ಪರಿಹಾರವೆಂದು ಪರಿಗಣಿಸಬಹುದು. ಅದಲ್ಲದೆ ಕುಟುಂಬದ ಖಾಸಗಿ ವಲಯದಲ್ಲಿ ಮಹಿಳೆಯರು ಮಾಡುವ ಕೆಲಸದಲ್ಲಿ, ಅದು ಅವರು ಮಾಡಲೇಬೇಕಿರುವುದು ಎಂಬಂಥದ್ದೇನೂ ಇಲ್ಲ, ಮನೆಗೆಲಸವೂ ಮನ್ನಣೆಗೆ ಅರ್ಹ ಎಂಬ ಪರಿಕಲ್ಪನೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ವರ್ಗಾವಣೆ ಮಹತ್ವದ್ದಾಗಿದೆ.

ಮಹಿಳೆಯರಿಗೆ ಹೀಗೆ ನಗದು ವರ್ಗಾವಣೆ ಮಾಡುವುದು ಲಿಂಗಭೇದದ ಭಾವನೆಯನ್ನು ಪುನಃ ತಂದಿಡುತ್ತದೆ ಮತ್ತು ವೇತನದ ಉದ್ಯೋಗವನ್ನು ಹುಡುಕುವುದರಿಂದ ಮಹಿಳೆಯರನ್ನು ದೂರವಿಡುತ್ತದೆ ಮತ್ತು ಅವರನ್ನು ಮನೆಕೆಲಸದಲ್ಲಿಯೇ ಮತ್ತಷ್ಟು ಉಳಿಸಿಬಿಡುತ್ತದೆ ಎಂಬ ಆತಂಕ ಅಥವಾ ಕಳವಳಗಳು ಸರಿಯಲ್ಲ.

‘ಇನಿಶಿಯೇಟಿವ್ ಫಾರ್ ವಾಟ್ ವರ್ಕ್ಸ್ ಟು ಅಡ್ವಾನ್ಸ್ ವುಮೆನ್ ಆ್ಯಂಡ್ ಗರ್ಲ್ಸ್ ಇನ್ ದಿ ಇಕಾನಮಿ’ (ಐಡಬ್ಲ್ಯುಡಬ್ಲ್ಯುಎಜಿಇ) ಪ್ರಕಾರ, ಕರ್ನಾಟಕ ರಾಜ್ಯ ಭಾರತದಲ್ಲಿ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ (ಎಲ್ಎಫ್ಪಿಆರ್) ಅತ್ಯಧಿಕ ಪ್ರಮಾಣ ಹೊಂದಿದೆ. 2,000 ರೂ.ಗಳ ಸಣ್ಣ ವರ್ಗಾವಣೆ ಅವರನ್ನು ಕೆಲಸ ಮಾಡುವುದರಿಂದ ದೂರವಿಡುವಷ್ಟರ ಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಉದ್ಯೋಗದ ಸ್ಥಾನಮಾನದ ಮೂಲಕ ಕರ್ನಾಟಕದಲ್ಲಿ ಮಹಿಳಾ ಕಾರ್ಮಿಕರ ಹಂಚಿಕೆಯ ವಿಂಗಡಣೆಯ ವಿಶ್ಲೇಷಣೆ ಬಹುಪಾಲು ಗ್ರಾಮೀಣ ಮಹಿಳೆಯರು ಸ್ವಯಂ ಉದ್ಯೋಗ ಮತ್ತು ಸಾಂದರ್ಭಿಕ ದುಡಿಮೆಯಲ್ಲಿ ತೊಡಗಿಸಿಕೊಂಡಿರುವುದನ್ನು ಹೇಳುತ್ತದೆ. ಸುಮಾರು ಶೇ.67 ಸ್ವಯಂ ಉದ್ಯೋಗಿ ಮಹಿಳೆಯರು ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬ ಉದ್ಯಮಗಳಲ್ಲಿ ಸಂಬಳ ರಹಿತ ಕೆಲಸಗಾರರಾಗಿಯೇ ದುಡಿಯುತ್ತಿದ್ದಾರೆ.

ನಗರದ ಉದ್ಯೋಗಿ ಮಹಿಳೆಯರಿಗೆ ನಿಯಮಿತ ಸಂಬಳದ ಉದ್ಯೋಗಗಳು ಅತ್ಯಂತ ಸಾಮಾನ್ಯವಾಗಿದ್ದವು. ಆದರೆ ಅಂಥ ಉದ್ಯೋಗಗಳಲ್ಲಿ ಸುಮಾರು ಶೇ.62 ಯಾವುದೇ ಲಿಖಿತ ಉದ್ಯೋಗ ಒಪ್ಪಂದವಿಲ್ಲದವು. ಹಾಗಾಗಿ ಅಂಥ ಉದ್ಯೋಗಗಳ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ. ಕೋವಿಡ್ ಸಮಯದಲ್ಲಿ ಗಮನಿಸಿದಂತೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಳೆದುಕೊಂಡರು ಮತ್ತು ಆರ್ಥಿಕ ಹೊಡೆತಗಳ ಸಮಯದಲ್ಲಿ ಹೊಸ ಉದ್ಯೋಗಗಳು ಸಿಗುವ ಸಾಧ್ಯತೆಯೂ ಕಡಿಮೆ. ಆದ್ದರಿಂದ, ನಗದು ವರ್ಗಾವಣೆ ಮಹಿಳೆಯರಿಗೆ ಆದಾಯದ ಪೂರಕ ಮೂಲವಾಗಿದೆ, ಏಕೆಂದರೆ ಅನೇಕರು ವೇತನವಿಲ್ಲದ, ಕಡಿಮೆ ವೇತನ ಮತ್ತು ಅನಿಶ್ಚಿತ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರೇ ಆಗಿದ್ದಾರೆ.

ಮಹಿಳೆಯರಿಗೆ ನಗದು ವರ್ಗಾವಣೆ ಮಹಿಳೆಯರ ವಿರುದ್ಧ ಮನೆಯೊಳಗಿನ ಹಿಂಸೆಯನ್ನು ಕಡಿಮೆ ಮಾಡಿದೆ ಎಂದು ವರದಿಯಾಗಿದೆ. ಕೌಟುಂಬಿಕ ಹಿಂಸಾಚಾರಕ್ಕೆ ಪ್ರಚೋದಿಸುವ ಅಂಶಗಳಾಗಿ ಬಡತನ ಮತ್ತು ಆರ್ಥಿಕ ಅಭದ್ರತೆಯದ್ದು ನಿರ್ಣಾಯಕ ಪಾತ್ರ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (ಎನ್ಎಫ್ಎಚ್ಎಸ್) ವರದಿಯ ಪ್ರಕಾರ ಕರ್ನಾಟಕದಲ್ಲಿ ಶೇ.44ರಷ್ಟು ವಿವಾಹಿತ ಮಹಿಳೆಯರು ಸಂಗಾತಿಯಿಂದ ಹಿಂಸೆಯನ್ನು ಅನುಭವಿಸಿದ್ದಾರೆ. ಇದು ಭಾರತದ ರಾಜ್ಯಗಳಲ್ಲಿಯೇ ಅತಿ ಹೆಚ್ಚು. ಹಿಂದಿನ ಎನ್ಎಫ್ಎಚ್ಎಸ್-4 ವರದಿ, ರಾಜ್ಯದಲ್ಲಿ ಕೌಟುಂಬಿಕ ಹಿಂಸಾಚಾರ ಹೆಚ್ಚಿರುವುದನ್ನು ತೋರಿಸಿದೆ. ಇದು ರಾಜ್ಯದಲ್ಲಿ ಲಿಂಗ ಆಧಾರಿತ ಹಿಂಸೆಯ ಕಠೋರ ಚಿತ್ರವನ್ನು ಕೊಡುತ್ತದೆ. ಹಲವಾರು ಅಧ್ಯಯನಗಳು ಸೂಚಿಸಿದಂತೆ, ನಗದು ವರ್ಗಾವಣೆ ಕೌಟುಂಬಿಕ ಹಿಂಸೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದರೆ, ಇನ್ನೊಂದೆಡೆಯಿಂದ ಅದು ಲಿಂಗ ನ್ಯಾಯದ ಕಡೆಗೂ ಒಂದು ದೊಡ್ಡ ಹೆಜ್ಜೆಯಾಗಿದೆ.

ಮಹಿಳಾ ಸಬಲೀಕರಣವನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಸೂಚಕವೆಂದರೆ, ಮನೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ. ಏನನ್ನು ಬೇಯಿಸುವುದು, ಮಗುವನ್ನು ಯಾವಾಗ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವುದು ಎಂಬುದರಿಂದ ಹಿಡಿದು, ಮನೆಗೆ ಪ್ರಮುಖವಾಗಿ ಬೇಕಿರುವುದೇನು ಎಂಬಂಥ ಖರೀದಿ ನಿರ್ಧಾರಗಳವರೆಗೆ. ಸಂಪನ್ಮೂಲಗಳ ಬಳಕೆಯ ಮೇಲೆ ಹಿಡಿತವಿದ್ದರೆ ಮಾತ್ರ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಾರೆ.

ಹಕ್ಕು ಆಧಾರಿತ ಉದ್ಯೋಗ ಖಾತರಿ ಕಾರ್ಯಕ್ರಮದ (MGNREGA) ಸಬಲೀಕರಣದ ಪರಿಣಾಮಗಳನ್ನು ವಿಶ್ಲೇಷಿಸುವ ಯೇಲ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಮಹಿಳೆಯರ ಖಾತೆಗಳಿಗೆ ನೇರ ವೇತನದ ಜಮೆ, ಕೆಲಸದ ಕಡೆಗೆ ಉದಾರ ಮನೋಭಾವ ರೂಪಿಸುವಲ್ಲಿ ಮತ್ತು ತೆಗೆದುಕೊಳ್ಳಬಹುದಾದ ನಿರ್ಧಾರಗಳಲ್ಲಿ ಧನಾತ್ಮಕ ಪ್ರಭಾವವನ್ನು ಬೀರಿದೆ. ಗೃಹಲಕ್ಷ್ಮಿ ಯೋಜನೆಯನ್ನು ಮಹಿಳೆಯರು ನೇರವಾಗಿ ತಮ್ಮ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗಳಿಗೆ ಹಣವನ್ನು ಸ್ವೀಕರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ, ಸಂಪನ್ಮೂಲಗಳ ಬಳಕೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಅವರಿಗೆ ಇದು ಅನುವು ಮಾಡಿಕೊಡುತ್ತದೆ.

ಕರ್ನಾಟಕದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ನಗದು ವರ್ಗಾವಣೆಯ ಸಂಭಾವ್ಯ ಪಾತ್ರವನ್ನು ಗುರುತಿಸುವುದು ಮುಖ್ಯ, ವಿಶೇಷವಾಗಿ ರಾಜ್ಯ ಈ ವಿಚಾರದಲ್ಲಿ ಹಿಂದಿರುವ ಸಮಯದಲ್ಲಿ ಇದು ಅಗತ್ಯವಾಗಿದೆ. ಮನೆಯ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿವಾಹಿತ ಮಹಿಳೆಯರ ಶೇಕಡಾವಾರು ಪ್ರಮಾಣ (ಸ್ವತಃ ಆರೋಗ್ಯ ರಕ್ಷಣೆ, ಪ್ರಮುಖ ಮನೆ ಖರೀದಿಗಳು ಮತ್ತು ಕುಟುಂಬ ಅಥವಾ ಸಂಬಂಧಿಕರಿಗೆ ಭೇಟಿ ನೀಡುವುದು ಸೇರಿದಂತೆ) ಶೇ.82.7ರಿಂದ ಶೇ.80.4ಕ್ಕೆ ಇಳಿಕೆಯಾಗಿದೆ ಮತ್ತು ಕರ್ನಾಟಕ ಈ ವಿಚಾರದಲ್ಲಿ ಅತ್ಯಂತ ಹಿಂದುಳಿದಿರುವ ರಾಜ್ಯಗಳಲ್ಲಿ ಒಂದಾಗಿದೆ.

ಎನ್ಎಫ್ಎಚ್ಎಸ್-4 ಮತ್ತು ಎನ್ಎಫ್ಎಚ್ಎಸ್-5 ಎರಡೂ ವರದಿಗಳನ್ನು ಗಮನಿಸಿದರೆ, ಯಾವುದೇ ರೀತಿಯ ವೇತನದ ಕೆಲಸದಲ್ಲಿ ತೊಡಗಿರುವ ಮಹಿಳೆಯರ ಶೇಕಡಾವಾರು ಪ್ರಮಾಣ ಗಣನೀಯವಾಗಿ, ಅಂದರೆ ಶೇ.37ರಿಂದ ಶೇ.29ಕ್ಕೆ ಇಳಿಕೆಯಾಗಿದೆ. ಆದರೂ, ತಮ್ಮದೇ ಮೊಬೈಲ್ ಫೋನ್ ಹೊಂದಿರುವ ಮಹಿಳೆಯರು ಶೇ.47.1ರಿಂದ ಶೇ.61.8ಕ್ಕೆ ಏರಿಕೆಯಾಗಿದ್ದಾರೆ. ಮಹಿಳೆಯರಿಗೆ ತಮ್ಮ ಮೊಬೈಲ್ ಸಂಪರ್ಕಿತ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಸಾಕಷ್ಟು ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತೆಯನ್ನು ಒದಗಿಸಿದಲ್ಲಿ, ಗೃಹಲಕ್ಷ್ಮಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ನೆರವಾಗಲಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಸರಕಾರದ ಕಲ್ಯಾಣ ಯೋಜನೆಗಳಲ್ಲಿ ಗೃಹಲಕ್ಷ್ಮಿ ಸ್ವಾಗತಾರ್ಹ ಹೆಜ್ಜೆ. ಹಣಕಾಸಿನ ಬೆಂಬಲ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ, ಮನೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಾರ್ವಜನಿಕ ಜೀವನದಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ. ಆದರೂ ಇಲ್ಲೊಂದು ಎಚ್ಚರ ವಹಿಸಬೇಕಿರುವ ಅಂಶವಿದೆ. ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನಗದು ತಲುಪಿದರೆ ಸಾಕಾಗುವುದಿಲ್ಲ; ರಾಜ್ಯದ ಆರ್ಥಿಕ ಮೂಲಸೌಕರ್ಯ ಸುಲಭವಾಗಿ ಅವರನ್ನು ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದೂ ಅವಶ್ಯ. ಕೋವಿಡ್ ಸಮಯದಲ್ಲಿ ವರದಿಯಾದಂತೆ, ಹಣ ಪಡೆಯವ ಅವರ ಅವಕಾಶವನ್ನು ಬ್ಯಾಂಕ್ಗಳು ಯಾವುದೇ ಸ್ಪಷ್ಟ ಕಾರಣವಿಲ್ಲದೆ ನಿರಾಕರಿಸಬಹುದು. ಆಗ ಎಲ್ಲ ಕೆಲಸ ಬಿಟ್ಟು ಬ್ಯಾಂಕ್ಗಳಿಗೆ ಅಲೆದಾಡುವ ಸ್ಥಿತಿ ಬರಬಹುದು. ಮಹಿಳೆಯರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ಇಂಥ ಅನಗತ್ಯ ತೊಂದರೆಗಳನ್ನು ಎದುರಿಸುವಂತಾಗುವುದನ್ನು ತಪ್ಪಿಸಬೇಕು.

(ಕೃಪೆ:thewire.in)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!