ಅಗ್ನಿವೀರ್ ನಲ್ಲೂ ಪ್ರಧಾನಿ ಮೋದಿ ‌ʼಯೂಟರ್ನ್ʼ!

Update: 2024-09-05 17:57 GMT

ಮೋದಿ ಮೈತ್ರಿ ಸರ್ಕಾರ ತನ್ನ ಮೂರನೆ ಅವಧಿಯಲ್ಲಿ ಮತ್ತೊಮ್ಮೆ ಯೂಟರ್ನ್ ಹೊಡೆಯುವಂತಾಯಿತೆ? ತಾನೇ ಸಮರ್ಥಿಸಿಕೊಂಡಿದ್ದ, ಕ್ರಾಂತಿಕಾರಿ ಕ್ರಮ ಎಂಬಂತೆ ಬಿಂಬಿಸಿದ್ದ ಯೋಜನೆಯ ಇಡೀ ಚೌಕಟ್ಟನ್ನೇ ಬದಲಿಸುವ, ನಿಯಮ ಬದಲಿಸುವ ಅನಿವಾರ್ಯತೆ ಈಗ ಮೋದಿ ಮೈತ್ರಿ ಸರ್ಕಾರಕ್ಕೆ ಎದುರಾಗಿದೆಯೆ? ಈಗ ಅಗ್ನಿವೀರ್ ಯೋಜನೆ ವಿಚಾರದಲ್ಲಿ ನಡೆದಿರುವ ಬದಲಾವಣೆ ಕುರಿತ ಚಿಂತನೆ ಏನು?

ಇಂಡಿಯಾ ಟುಡೇ ವರದಿ ಪ್ರಕಾರ, ಅಗ್ನಿವೀರ್ ನೇಮಕಾತಿಯಲ್ಲಿ ಕೇಂದ್ರ ಸರ್ಕಾರ ಭಾರೀ ದೊಡ್ಡ ಹೊಂದಾಣಿಕೆಗೆ ಚಿಂತನೆ ನಡೆಸಿದೆ.

ನೇಮಕಗೊಂಡ ಅಗ್ನಿವೀರ್ ಗಳಲ್ಲಿ 4 ವರ್ಷಗಳ ಬಳಿಕ ಕೇವಲ ಶೇ.25ರಷ್ಟು ಅಗ್ನಿವೀರ್ ಗಳನ್ನು ಸೇನೆಯ ಸಾಮಾನ್ಯ ಕೇಡರ್ ನಲ್ಲಿ 15 ವರ್ಷಗಳ ಪೂರ್ಣಾವಧಿ ಸೇವೆಗೆ ಉಳಿಸಿಕೊಳ್ಳುವುದು ಈ ಮೊದಲ ನಿಯಮವಾಗಿತ್ತು. ಆದರೆ ಈಗ ಅದನ್ನು ಶೇ.50ಕ್ಕೆ ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆ ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ ʼಇಂಡಿಯಾ ಟುಡೆʼ ವರದಿ ಮಾಡಿದೆ.

ಜೊತೆಗೆ ಅಗ್ನಿವೀರ್ ಗಳ ಪರಿಹಾರ ಮತ್ತಿತರ ಸೌಲಭ್ಯಗಳನ್ನು ಪರಿಶೀಲಿಸುವ ಸಾಧ್ಯತೆಯ ಬಗ್ಗೆಯೂ ಸರ್ಕಾರ ಚಿಂತನೆಯಲ್ಲಿದೆ ಎಂದು ವರದಿ ಹೇಳಿದೆ.

ಈ ಬದಲಾವಣೆಗಳು ಅಗ್ನಿವೀರ್ ಯೋಜನೆಯ ಒಟ್ಟಾರೆ ಚೌಕಟ್ಟನ್ನೇ ಪರಿಷ್ಕರಿಸುವ ನಿಟ್ಟಿನಲ್ಲಿದ್ದು, ಸೇನೆಗೆ ಸೇರಬಯಸುವ ಯುವಕರ ತೀವ್ರ ವಿರೋಧಕ್ಕೆ ಸರ್ಕಾರ ಮಣಿಯುವ ಒತ್ತಡಲ್ಲಿದೆ ಎನ್ನಲಾಗಿದೆ. ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಪ್ರಸ್ತುತ ಅಗ್ನಿವೀರ್‌ಗಳಲ್ಲಿ 4 ವರ್ಷಗಳ ನಂತರ ಉಳಿಸಿಕೊಳ್ಳಬೇಕಾದವರ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

4 ವರ್ಷಗಳ ಬಳಿಕ ಶೇ.25ರಷ್ಟು ಅಗ್ನಿವೀರ್ ಗಳನ್ನು ಮಾತ್ರ ಉಳಿಸಿಕೊಂಡು ಉಳಿದ ಶೇ.75 ಅಗ್ನಿವೀರ್ ಗಳನ್ನು ಸೇವೆಯಿಂದ ಬಿಡುಗಡೆ ಮಾಡಿ ಮನೆಗೆ ಕಳಿಸುವುದಕ್ಕೆ ಸೇನೆಯೊಳಗೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾತ್ರವಲ್ಲದೆ ಸೇನೆಗೆ ಸೇರಬಯಸುವವರು ಕೂಡ ಈ ನಿಯಮದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದ್ದರು.

ಈಗ 4 ವರ್ಷಗಳ ನಂತರ ಸೇನೆಯ ಭಾಗವಾಗಿ ಉಳಿಸಿಕೊಳ್ಳುವ ಅಗ್ನಿವೀರ್ ಗಳ ಪ್ರಮಾಣವನ್ನು ಶೇ.25ರಿಂದ ಶೇ.50ಕ್ಕೆ ಹೆಚ್ಚಿಸಬೇಕೆಂಬ ಸೇನೆಯ ಶಿಫಾರಸನ್ನು ಸರ್ಕಾರ ಪರಿಗಣಿಸುವ ಹಂತದಲ್ಲಿದೆ ಎಂಬುದನ್ನು ವರದಿ ಹೇಳಿದೆ.

ವಿವಿಧ ವಲಯಗಳ ಆಂತರಿಕ ಪ್ರತಿಕ್ರಿಯೆ ಮತ್ತು ಸಮೀಕ್ಷೆಗಳ ಆಧಾರದ ಮೇಲೆ ಸೇನೆ ಈಗಾಗಲೇ ಈ ಶಿಫಾರಸುಗಳನ್ನು ಸರ್ಕಾರಕ್ಕೆ ರವಾನಿಸಿದೆ ಎನ್ನಲಾಗಿದೆ. ಈ ಬದಲಾವಣೆಗಳನ್ನು ಕಾರ್ಯಗತಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಅಗ್ನಿಪಥ್ ಯೋಜನೆ ಸುಧಾರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ರಕ್ಷಣಾ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. ಆದರೆ ಯಾವಾಗಿನಿಂದ ಈ ಹೊಸ ನಿಯಮ ಜಾರಿಯಾಗಬಹುದು ಎಂಬುದು ಸದ್ಯಕ್ಕೆ ಸ್ಪಷ್ಟವಿಲ್ಲ.

ಮೋದಿ ಮೂರನೇ ಅವಧಿಯ ಸರ್ಕಾರ ಹೀಗೆ ಹಿಂದಕ್ಕೆ ಹೆಜ್ಜೆಯಿಡುತ್ತಿರುವುದು ಇದೇ ಮೊದಲಲ್ಲ. ಈಚೆಗೆ ಲ್ಯಾಟರಲ್‌ ಎಂಟ್ರಿ ಮೂಲಕ ಸರ್ಕಾರದ 45 ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದ ಕೇಂದ್ರ ಸರ್ಕಾರ, ಅಂಥ ನಿರ್ಧಾರ ಪ್ರಕಟಿಸಿದ 48 ಗಂಟೆಗಳಲ್ಲೇ ಯೂ ಟರ್ನ್ ಹೊಡೆದಿತ್ತು. ಅರ್ಜಿ ಆಹ್ವಾನಿಸಿದ್ದ ಯುಪಿಎಸ್‌ಸಿ ತನ್ನ ಜಾಹೀರಾತನ್ನು ಹಿಂಪಡೆದಿತ್ತು. ಹೊಸ ಪ್ರಸಾರ ಮಸೂದೆಗಳನ್ನು ತರುವ ವಿಚಾರದಲ್ಲಿಯೂ ಮೋದಿ ಸರ್ಕಾರಕ್ಕೆ ದೊಡ್ಡ ಹಿನ್ನಡೆಗಳಾದವು.

ಡಿಜಿಟಲ್ ಮಾಧ್ಯಮಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಉದ್ದೇಶದ ಪ್ರಸಾರ ಮಸೂದೆಯ ಕರಡನ್ನು ತೀವ್ರ ವಿರೋಧ ಮತ್ತು ವ್ಯಾಪಕ ಟೀಕೆಗಳ ಬಳಿಕ ವಾಪಸ್ ಪಡೆಯಬೇಕಾಯಿತು.

ಹಾಗೆಯೆ, ವಕ್ಫ್ ತಿದ್ದುಪಡಿ ಮಸೂದೆಯ ವಿಚಾರದಲ್ಲಿಯೂ ಮೋದಿ ಸರ್ಕಾರ ವಿಪಕ್ಷಗಳ ವಿರೋಧವನ್ನು ಮಾತ್ರವಲ್ಲಿ ತನ್ನದೇ ಮಿತ್ರಪಕ್ಷಗಳ ವಿರೋಧವನ್ನೂ ಎದುರಿಸಬೇಕಾಯಿತು. ಕಡೆಗೆ ಆ ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಿಶೀಲನೆಗೆ ಕಳಿಸಲು ಅದು ಒಪ್ಪಿಕೊಳ್ಳಬೇಕಾಯಿತು.

ಅದೇ ರೀತಿ ತಾನೇ ಸಮರ್ಥಿಸಿಕೊಂಡಿದ್ದ ಮತ್ತು ಸೇನೆಗೆ ಸೇರುವವರನ್ನು ನಾಲ್ಕೆ ವರ್ಷಗಳಲ್ಲಿ ನಿರುದ್ಯೋಗಿಗಳನ್ನಾಗಿ ಮಾಡಿಬಿಡುವ ರೀತಿಯಲ್ಲಿದ್ದ ಅಗ್ನಿವೀರ್ ಯೋಜನೆ ವಿಚಾರದಲ್ಲಿಯೂ ಈಗ ಮೋದಿ ಸರ್ಕಾರ ತನ್ನ ನಿಲುವು ತಿದ್ದಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ರಾಹುಲ್ ಗಾಂಧಿ ಅಗ್ನಿವೀರ್ ಯೋಜನೆಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಅದನ್ನು ರದ್ದು ಪಡಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ.

ಹರ್ಯಾಣದಲ್ಲಿ ವಿಧಾನ ಸಭಾ ಚುನಾವಣೆ ನಡೆಯುತ್ತಿದೆ. ಅಲ್ಲಿಂದ ಸೇನೆಗೆ ದೊಡ್ಡ ಸಂಖ್ಯೆಯ ಯುವಕರು ಅರ್ಜಿ ಹಾಕುತ್ತಾರೆ. ಅಲ್ಲಿ ಈಗಾಗಲೇ ರೈತರಿಂದ ಬಿಜೆಪಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!