ಬ್ರೂನೈ: ರಾಜನಿಗೆ ವಿಲಾಸಿ ಜೀವನ, ಪ್ರಜೆಗೆ ಸುಖದ ಬದುಕು!

Update: 2024-09-05 17:54 GMT

ಈ ದೇಶದ್ದು, ಇದರ ರಾಜರದ್ದು ಸಿನಿಮಾಗಳಲ್ಲಿ ಕೇಳುವಂತ ಕತೆ. ಆದರೆ ಬಹುತೇಕ ಎಲ್ಲವೂ ನಿಜ ಅನ್ನೋದೇ ಈ ಕತೆಯ ವಿಶೇಷ. ಇನ್ನೂ ವಿಶೇಷ ಅಂದರೆ ಇಲ್ಲಿನ ರಾಜರ ವೈಭವದಷ್ಟೇ ಸುಖದ, ಆರಾಮದಾಯಕ ಬದುಕು ಇಲ್ಲಿನ ಸಾಮಾನ್ಯ ಜನರದ್ದು.

ಇಲ್ಲಿನ ಎಲ್ಲವೂ ವಿಶೇಷ, ಎಲ್ಲದರಲ್ಲೂ ಅತಿ ದೊಡ್ಡದು, ಅತಿ ದುಬಾರಿ, ಅತಿ ಹೆಚ್ಚು, ಅತಿ ವಿಲಾಸಿ ಎಂಬ ದಾಖಲೆ. ಪ್ರಧಾನಿ ಮೋದಿ ಅವರು ದಕ್ಷಿಣ ಏಷ್ಯಾದ ಬ್ರೂನೈಗೆ ಭೇಟಿ ನೀಡಿದ ಬಳಿಕ ರಾಜಪ್ರಭುತ್ವದ ಬ್ರೂನೈ ಈಗ ಚರ್ಚೆಯಲ್ಲಿದೆ.

ಬ್ರೂನೈ ಬಗ್ಗೆ ಮಾತನಾಡುವಾಗಲೆಲ್ಲಾ ಮೊದಲು ಚರ್ಚೆಯಾಗುವುದು ಆ ದೇಶದ ಸುಲ್ತಾನನ ವಿಷಯ. ವಿಶ್ವದ ಶ್ರೀಮಂತ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರ ಐಷಾರಾಮಿ ಜೀವನ, ಐಷಾರಾಮಿ ಅರಮನೆ, ಸಾವಿರಾರು ವಾಹನಗಳ ಸಂಗ್ರಹ ಬಹಳ ದೊಡ್ಡ ಆಕರ್ಷಣೆ.

ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ.

ಬ್ರೂನೈ ಸುಲ್ತಾನರ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ...



        ಹಸನಲ್ ಬೊಲ್ಕಿಯಾ  PC : economictimes.indiatimes.com


ಬ್ರೂನೈ, ಆಗ್ನೇಯ ಏಷ್ಯಾದ ಬೊರ್ನಿಯೊ ದ್ವೀಪದಲ್ಲಿರುವ ಸಣ್ಣ, ತೈಲಸಮೃದ್ಧ ರಾಷ್ಟ್ರ. ದೇಶ ಚಿಕ್ಕದಾದರೂ ಇದರ ಅರ್ಥ ವ್ಯವಸ್ಥೆ ಸದೃಢವಾಗಿದೆ. ತಲಾ ಆದಾಯ ಹೆಚ್ಚಿರುವ ಜಗತ್ತಿನ ಟಾಪ್ 5 ದೇಶಗಳಲ್ಲಿ ಒಂದಾಗಿದೆ. ಕಚ್ಚಾ ತೈಲ ಉತ್ಪಾದಕ ದೇಶಗಳಲ್ಲಿ ಬ್ರೂನೈ ಕೂಡ ಒಂದು.

ಬ್ರಿಟನ್ ನಿಂದ 1984ರಲ್ಲಿ ಸ್ವತಂತ್ರಗೊಂಡಿತು. ಅಲ್ಲಿಂದಲೂ ಇಲ್ಲಿ ರಾಜಸತ್ತೆ ನಡೆಯುತ್ತಿದೆ. ಸುಲ್ತಾನ್ ಆಗಿ, ಹಸನಲ್ ಬೊಲ್ಕಿಯಾ ಅವರು ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ಬ್ರೂನಿಯ ಪ್ರಧಾನ ಮಂತ್ರಿ, ರಕ್ಷಣಾ ಮಂತ್ರಿ ಮತ್ತು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸುತ್ತಾರೆ. ಅವರ ನಾಯಕತ್ವ ಆಧುನಿಕ ಆಡಳಿತ ಮತ್ತು ಸಾಂಪ್ರದಾಯಿಕ ಇಸ್ಲಾಮಿಕ್ ಮೌಲ್ಯಗಳೆರಡೂ ಬೆರೆತದ್ದಾಗಿದೆ.

ಬೊಲ್ಕಿಯಾ ಸುಲ್ತಾನ್ ಆದದ್ದು 1968ರಲ್ಲಿ. ಆಗ ಅವರಿಗೆ 21 ವರ್ಷ. ಅಲ್ಲಿಂದ ಅವರ ಆಳ್ವಿಕೆ ಮುಂದುವರಿದುಕೊಂಡು ಬಂದಿದೆ. 1946ರ ಜುಲೈ 15ರಂದು ಜನಿಸಿದ ಹಸನಲ್ ಬೊಲ್ಕಿಯಾ ಅವರಿಗೆ ಈಗ 77 ವರ್ಷ.

ಸುಲ್ತಾನ್ ಹಸನಲ್ ಬೊಲ್ಕಿಯಾ ಅಭಿವೃದ್ಧಿ ಕಾರ್ಯದಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ.


ಶ್ರೀಮಂತ ಮತ್ತು ಐಷಾರಾಮಿ ಜೀವನಶೈಲಿ ಮತ್ತು ಅಪಾರ ಆಸ್ತಿಗಾಗಿ ಹೆಸರಾಗಿರುವ ಸುಲ್ತಾನ್ ಪಾಲಿಗೆ ತೈಲ ನಿಕ್ಷೇಪಗಳು ಮತ್ತು ನೈಸರ್ಗಿಕ ಅನಿಲ ಬಹು ದೊಡ್ಡ ಆದಾಯದ ಮೂಲ. ಅವರು ಹಲವಾರು ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಾಯ್ದುಕೊಂಡು ಬಂದಿದ್ದಾರೆ. ಸಮಾಜಸೇವಾ ಸಂಸ್ಥೆಯನ್ನೂ ಸ್ಥಾಪಿಸಿರುವ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾರೆ. ದೇಶದಲ್ಲಿ ಆರೋಗ್ಯ ಸೇವೆ ಸಂಪೂರ್ಣ ಉಚಿತವಾಗಿದೆ. 400 ಮಿಲಿಯನ್ ಡಾಲರ್ ಆರೋಗ್ಯ ಸೇವೆಗಾಗಿಯೇ ಖರ್ಚಾಗುತ್ತದೆ.

ಇಲ್ಲಿನ ಜನ ಅದೆಷ್ಟೇ ವೈಯಕ್ತಿಕ ಆದಾಯ ಗಳಿಸಿದ್ರೂ ಅದಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಕಾರ್ಪೊರೇಟ್ ಕ್ಷೇತ್ರಕ್ಕೆ ಮಾತ್ರ ತೆರಿಗೆ. ಅದರಲ್ಲೂ ವಿದೇಶಿಯರು ಬಂದು ಹೂಡಿಕೆ ಮಾಡಿದ್ರೆ ಅದರಲ್ಲೂ ಅವರಿಗೆ ರಿಯಾಯ್ತಿ, ವಿನಾಯ್ತಿಗಳಿವೆ.

ಸುಲ್ತಾನರ ಅರಮನೆ ಜಗತ್ತಿನ ಅತಿ ದೊಡ್ಡ ಮಹಲುಗಳಲ್ಲಿ ಒಂದಾಗಿದೆ. ಈ ಅರಮನೆಯ ಮೌಲ್ಯ 2,550 ಕೊಟಿ ರೂ ಎನ್ನಲಾಗುತ್ತದೆ. ಅರಮನೆ 1,770 ಕೊಠಡಿಗಳನ್ನು ಹೊಂದಿದೆ. 5 ಈಜುಕೊಳಗಳು, 257 ಸ್ನಾನಗೃಹಗಳು ಇವೆ. 5 ಸಾವಿರ ಜನರಿಗೆ ಔತಣ ಕೂಟ ಏರ್ಪಡಿಸಬಲ್ಲ ವಿಶಾಲ ಬ್ಯಾಂಕ್ವೆಟ್ ಹಾಲ್ ಇದೆ. ಅರಮನೆಯಲ್ಲಿ 110 ಗ್ಯಾರೇಜ್‌ಗಳಿವೆ. ವಿಶ್ವದ ಅತಿ ದೊಡ್ಡ ಅರಮನೆಯೆಂದು ಗಿನ್ನಿಸ್ ದಾಖಲೆಯನ್ನೂ ಇದು ಹೊಂದಿದೆ.

ಸುಲ್ತಾನ್ ಬೋಯಿಂಗ್ 747 ಖಾಸಗಿ ವಿಮಾನವನ್ನು ಸಹ ಹೊಂದಿದ್ದಾರೆ. ಜಂಬೋ ಜೆಟ್ ಇದಾಗಿದೆ. ಚಿನ್ನದ ವಾಶ್ ಬೇಸಿನ್ ಅನ್ನು ಹೊಂದಿದೆ. ಸುಲ್ತಾನ್ ತನ್ನ ಮಗಳಿಗೂ ಏರ್ಬಸ್ ಎ 340 ವಿಮಾನವನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದರಂತೆ.

ಸುಲ್ತಾನರ ವಿಷಯದಲ್ಲಿ ಬಹಳ ಆಕರ್ಷಕವಾದ ಮತ್ತು ಚರ್ಚೆಯಾಗುತ್ತಿರುವ ಮತ್ತೊಂದು ಸಂಗತಿ ಅವರ ಕಾರುಗಳ ಸಂಗ್ರಹ. ಈ ಸುಲ್ತಾನರ ಬಳಿ 7,000 ಕಾರುಗಳಿವೆ. ಇದು ಅಂಧಾಜು 5 ಬಿಲಿಯನ್ ಡಾಲರ್ ಮೌಲ್ಯದ ವಿಶ್ವದ ಅತಿ ದೊಡ್ಡ ಕಾರುಗಳ ಸಂಗ್ರಹ. 500 ವಿಲಾಸಿ ರೋಲ್ಸ್ ರಾಯ್ಸ್, 300 ಫೆರಾರಿ ಕಾರುಗಳು ಅವರ ಸಂಗ್ರಹದಲ್ಲಿವೆ. ಸುಲ್ತಾನರ ಖಾಸಗಿ ರೋಲ್ಸ್ ರಾಯ್ಸ್ ಚಿನ್ನ ಲೇಪಿತವಾಗಿದ್ದು, ತೆರೆದ ಛಾವಣಿಯದ್ದಾಗಿದೆ. ವಾಹನದ ಮೇಲೆ ಛತ್ರಿಯಿರುವಂತೆ ವಿನ್ಯಾಸ ಮಾಡಲಾಗಿದೆ. ಸುಲ್ತಾನರ ಅರಮನೆ ಮುಂದೆ ಸದಾ ಒಂದು ರೋಲ್ಸ್ ರಾಯ್ಸ್ ನಿಂತಿರಲೇಬೇಕಂತೆ ಮತ್ತು ಅದರ ಇಂಜಿನ್ ದಿನದ 24 ಗಂಟೆಯೂ ಚಾಲೂ ಸ್ಥಿತಿಯಲ್ಲಿಯೇ ಇರುತ್ತದೆ ಎನ್ನಲಾಗಿದೆ.

ಸುಲ್ತಾನರ ಖಾಸಗಿ ಮೃಗಾಲಯ ಕೂಡ ಇದ್ದು, 30 ಬಂಗಾಳ ಹುಲಿಗಳನ್ನು ಹೊಂದಿದೆ. ಅಲ್ಲದೆ ವಿವಿಧ ಪಕ್ಷಿ ಪ್ರಭೇದಗಳು ಇವೆ. ಸುಲ್ತಾನರು ಒಂದು ಬಾರಿ ಕ್ಷೌರಕ್ಕಾಗಿಯೇ 20 ಸಾವಿರ ಡಾಲರ್ ತೆರುತ್ತಾರಂತೆ. ಯಾಕೆಂದರೆ ಅವರಿಗೆ ಕ್ಷೌರ ಮಾಡುವವರು ಲಂಡನ್ ನಿಂದ ಬರುತ್ತಾರೆ. ಒಮ್ಮೆ ಅವರು ಮಗಳ ಹುಟ್ಟು ಹಬ್ಬ ಆಚರಣೆಗಾಗಿ ಮೈಕೆಲ್ ಜಾಕ್ಸನ್ ಕಾರ್ಯಕ್ರಮ ಏರ್ಪಡಿಸಿದ್ದರು. ಇದಕ್ಕಾಗಿ ಜಾಕ್ಸನ್ಗೆ ಕೋಟಿಗಟ್ಟಲೆ ಹಣ ನೀಡಿದ್ದರು.

ಮಗಳ ಮದುವೆಯನ್ನು ಎರಡು ವಾರಗಳವರೆಗೆ ನಡೆಸಿದ್ದರು. ಮದುವೆಗಾಗಿ ಇಡಿ ದೇಶದಲ್ಲೇ ರಜೆ ಘೋಷಿಸಲಾಗಿತ್ತು. ಮೈಕೆಲ್ ಜಾಕ್ಸನ್, ಬ್ರಿಟ್ನಿ ಸ್ಪಿಯರ್ ಅಂಥ ಹಲವು ಕಲಾವಿದರಿಂದ ಕಾರ್ಯಕ್ರಮ ಇತ್ತು. ಒಮ್ಮೆ ಪತ್ನಿ ಹುಟ್ಟುಹಬ್ಬಕ್ಕಾಗಿಯೂ ಅವರು ಏರ್ ಬಸ್ ಖರೀದಿ ಮಾಡಿದ್ದರು. ಮಗಳ ಬಳಿ ವಿಶ್ವದಲ್ಲೇ ಅತಿ ದೊಡ್ಡ ಬಾರ್ಬಿ ಗೊಂಬೆ ಸಂಗ್ರಹವಿದೆ. 3 ಸಾವಿರಕ್ಕೂ ಹೆಚ್ಚು ಗೊಂಬೆಗಳಿವೆ ಎನ್ನಲಾಗುತ್ತದೆ.

ಸುಲ್ತಾನಮರ ಆಳ್ವಿಕೆಯಲ್ಲಿ ಬ್ರೂನೈ ಜನತೆ ಉನ್ನತ ಜೀವನಮಟ್ಟವನ್ನು ಕಾಪಾಡಿಕೊಂಡಿದೆ ಎಂಬುದು ನೆಮ್ಮದಿಯ ವಿಷಯ.

2014ರಲ್ಲಿ ಬ್ರೂನೈ ಕಟ್ಟುನಿಟ್ಟಾದ ಷರಿಯಾ ಕಾನೂನು ದಂಡ ಸಂಹಿತೆಯನ್ನು ಅಳವಡಿಸಿಕೊಂಡಾಗ ಅಂತರರಾಷ್ಟ್ರೀಯ ಟೀಕೆಗೂ ತುತ್ತಾಯಿತು. ಕಡೆಗೆ ಆ ಕಾನೂನನ್ನು ವಾಪಸ್ ಪಡೆಯಲಾಯಿತು.

ಈ ವಿವಾದಗಳ ಹೊರತಾಗಿಯೂ, ಸುಲ್ತಾನ್ ಬೋಲ್ಕಿಯಾ ಬ್ರೂನಿಯ ಸಾಂಸ್ಕೃತಿಕ ಪರಂಪರೆ ಮತ್ತು ಇಸ್ಲಾಮಿಕ್ ಅಸ್ಮಿತೆಯನ್ನು ಸಂರಕ್ಷಿಸುವ ಪ್ರಯತ್ನಗಳಿಗಾಗಿ ಖ್ಯಾತರಾಗಿದ್ದಾರೆ.



PC: NDTV 

 



Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!