ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿ ಶಿಕ್ಷೆಗೆ ತಡೆ ನೀಡಿದ ಸುಪ್ರೀಮ್ ಕೋರ್ಟ್
Modi Surname Case: Supreme Court Stays Punishment Of Rahul Gandhi
Update: 2023-08-09 17:16 GMT
ಇಂದಲ್ಲದಿದ್ದರೆ ನಾಳೆ, ನಾಳೆ ಅಲ್ಲದಿದ್ದರೆ ನಾಡಿದ್ದು ಸತ್ಯ ಗೆದ್ದೇ ಗೆಲ್ಲುತ್ತದೆ ಎಂದಿದ್ದಾರೆ ರಾಹುಲ್ ಗಾಂಧಿ. ಕೊನೆಗೂ ಸತ್ಯ ಗೆದ್ದಿದೆ. ದೇಶದ ಪರಮೋಚ್ಚ ನ್ಯಾಯಾಲಯ ಅದನ್ನು ಎತ್ತಿ ಹಿಡಿದಿದೆ. ಮುಂದಿನ ವಾರ ಸಂಸತ್ತಿನಲ್ಲಿ ಇಂಡಿಯಾ ಮೈತ್ರಿಕೂಟ ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಚರ್ಚೆಗೆ ಬರಲಿದೆ. ಈವರೆಗೆ ಸಂಸತ್ತಿನಲ್ಲಿ ಮಣಿಪುರ ಬಗ್ಗೆ ಹೇಳಿಕೆಯನ್ನೇ ಕೊಡದ ಪ್ರಧಾನಿ ಮೋದಿ ಈಗ ಅನಿವಾರ್ಯವಾಗಿ ಸಂಸತ್ತನ್ನು ಎದುರಿಸಲೇಬೇಕಿದೆ. ಆಗ ಲೋಕಸಭೆಯಲ್ಲಿ ಪ್ರತಿಪಕ್ಷದ ಮುಂದಿನ ಸಾಲಿನಲ್ಲಿ ರಾಹುಲ್ ಗಾಂಧಿ ಹಾಜರಿದ್ದರೆ ಮೋದೀಜಿ ಅವರನ್ನು ಎದುರಿಸಬೇಕಾಗುತ್ತದೆ. ರಾಹುಲ್ ಕೇಳುವ ನಿಷ್ಠುರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಹರಿತ ಹೇಳಿಕೆಗಳಿಗೆ ಕಿವಿಯಾಗಬೇಕಾಗುತ್ತದೆ.
ತಾನು ಹೇಳಿದ್ದ ಮಾತಿಗಾಗಿ ತನ್ನ ಲೋಕಸಭಾ ಸದಸ್ಯತ್ವ ಹಾಗು ತನ್ನ ಮನೆಯನ್ನೂ ಪಣಕ್ಕಿಟ್ಟರು ರಾಹುಲ್ ಗಾಂಧಿ. ಆದರೂ ಅವರು ಸೋಲೊಪ್ಪಲಿಲ್ಲ. ಕ್ಷಮೆ ಯಾಚಿಸಲಿಲ್ಲ. ಈಗವರು ಗೆದ್ದಿದ್ದಾರೆ. ರಾಹುಲ್ ಗೆ ಜಾಮೀನು ಕೊಡಬಹುದಾದ ಪ್ರಕರಣದಲ್ಲಿ ಗರಿಷ್ಟ ಶಿಕ್ಷೆ ಕೊಟ್ಟಿದ್ದು, ಅದರ ಬೆನ್ನಿಗೇ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಿದ್ದು - ಈ ಎರಡೂ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ " ಇದು ನ್ಯಾಯೋಚಿತ ಕ್ರಮವಲ್ಲ, ಸರಕಾರ ನ್ಯಾಯಾಲಯದಲ್ಲಿ ಇದರ ವಿರುದ್ಧ ವಾದಿಸಲಿದೆ " ಎಂದು ಹೇಳಿದ್ದರೆ ಅವರ ಘನತೆ ಹೆಚ್ಚುತ್ತಿತ್ತು. ನಮ್ಮ ಪ್ರಜಾಪ್ರಭುತ್ವದ ಸೌಂದರ್ಯ ಇನ್ನಷ್ಟು ಬೆಳಗುತ್ತಿತ್ತು. ಆದರೆ ಮೋದಿಜಿ ಹಾಗೆ ಮಾಡಲಿಲ್ಲ.
ಹಾಗಾಗಿ ಶುಕ್ರವಾರ ರಾಹುಲ್ ಗಾಂಧಿ ಗೆಲ್ಲುವಾಗ ಮೋದಿ ಸೋತರು. ಹೆಜ್ಜೆಹೆಜ್ಜೆಗೂ ಪ್ರಶ್ನಿಸುವ ಪ್ರತಿಪಕ್ಷ ನಾಯಕನನ್ನು ಹೇಗಾದರೂ ಮಣಿಸಲೇಬೇಕೆಂದು ಜಿದ್ದಿಗೆ ಬಿದ್ದವರಂತೆ ವರ್ತಿಸಿದ್ದ ಬಿಜೆಪಿ ನಾಯಕರು ಈಗ ಅದೇ ನಾಯಕನ ಪ್ರಶ್ನೆಗಳನ್ನು ಎದುರಿಸಬೇಕಾಗಿದೆ. ಒಬ್ಬರ ಬೆನ್ನಲ್ಲೊಬ್ಬರು ಕೇಸ್ಗಳನ್ನು ಹಾಕಿ, ಪ್ರಶ್ನಿಸುವುದಕ್ಕೆ, ತಮ್ಮ ಬಂಡವಾಳ ಬಯಲು ಮಾಡುವುದಕ್ಕೆ ಅವಕಾಶವೇ ಇರದಂತೆ ಮಾಡಬೇಕೆಂದು ಹೊರಟಿದ್ದ ಬಿಜೆಪಿ ನಾಯಕರಿಗೆಲ್ಲ ದೊಡ್ಡ ಹಿನ್ನಡೆಯಾಗಿದೆ.
ಕಡೆಗೂ ಸತ್ಯವನ್ನು ದಮನಿಸಲು ಎಷ್ಟೇ ಅಪ್ರಜಾಸತ್ತಾತ್ಮಕ ಮಾರ್ಗಗಳಲ್ಲಿ ಪ್ರಯತ್ನಿಸಿದರೂ, ಸತ್ಯದ ಪರವಾದ ಬಲವೊಂದು ಒದಗಿಬರುವ ಹಾಗೆ ಈ ದೇಶದ ನ್ಯಾಯವ್ಯವಸ್ಥೆಯಿನ್ನೂ ದೃಢವಾಗಿದೆ ಎಂಬ ನಿರಾಳತೆ ದೇಶದಲ್ಲಿ ಸತ್ಯಕ್ಕಾಗಿ ಹೋರಾಡುವ ಎಲ್ಲರಲ್ಲೂ ಮೂಡುವಂತಾಗಿದೆ. ಮೋದಿ ಉಪನಾಮ ಹೇಳಿಕೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೀಡಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ದೇಶದ ರಾಜಕೀಯದಲ್ಲಿ ಮಾತ್ರವಲ್ಲ ಒಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಮಹತ್ವದ ವಿದ್ಯಮಾನ. ನ್ಯಾಯಮೂರ್ತಿ ಬಿ.ಆರ್ ಗವಾಯಿ, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಹಾಗು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು ಇವತ್ತು ಈ ಮಹತ್ವದ ತೀರ್ಪು ಕೊಟ್ಟಿದ್ದಾರೆ. ರಾಹುಲ್ ಗಾಂಧಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ವಾದಗಳೆದುರು ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರ ವಕೀಲ ಮಹೇಶ್ ಜೇಟ್ಮಲಾನಿ ಅವರ ವಾದ ನಿಲ್ಲಲಿಲ್ಲ.
ಸಂಸದ ಸ್ಥಾನದಿಂದ ಅನರ್ಹಗೊಳಿಸುವುದರಿಂದ ಆ ಕ್ಷೇತ್ರಕ್ಕೆ ನಷ್ಟವಾಗಲಿದೆ ಮತ್ತು ವಿಚಾರಣಾ ನ್ಯಾಯಾಲಯದ ಆದೇಶದ ಪರಿಣಾಮಗಳು ವ್ಯಾಪಕ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಆ ಮೂಲಕ, ಸಂಸದರಾಗಿ ಮುಂದುವರಿಯುವ ಅವರ ಹಕ್ಕನ್ನೂ ಅವರನ್ನು ಆರಿಸಿದ್ದ ಜನತೆಯ ಹಕ್ಕನ್ನೂ ನ್ಯಾಯಾಲಯ ಕಾದಿದೆ. ಮೋದಿ ಸರ್ಕಾರದ ವಿರುದ್ಧದ ಪ್ರಬಲ ದನಿಯಾಗಿದ್ದ ರಾಹುಲ್ ಅವರನ್ನು ಮೌನವಾಗಿಸಲೆಂದೇ, ಹೂಡಲಾದ ಪ್ರಕರಣದಲ್ಲಿ ಎರಡು ವರ್ಷಗಳ ಗರಿಷ್ಟ ಶಿಕ್ಷೆ ವಿಧಿಸಿ ಸೂರತ್ ಕೋರ್ಟ್ ತೀರ್ಪು ಪ್ರಕಟವಾದ ಬೆನ್ನಲ್ಲೇ ರಾಹುಲ್ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.
ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 8(3) ರ ಪ್ರಕಾರ ಅವರ ಸದಸ್ಯತ್ವ ರದ್ದಾಗಿತ್ತು. ಕೇವಲ ಒಂದು ದಿನ ಕಡಿಮೆಯ ಶಿಕ್ಷೆ ಘೋಷಿಸಿದ್ದರೆ ಅವರ ಸದಸ್ಯತ್ವ ರದ್ದಾಗುತ್ತಿರಲಿಲ್ಲ. ವಿಶೇಷವಾಗಿ ಈ ಅಪರಾಧದಲ್ಲಿ ಜಾಮೀನು ಕೊಡಬಹುದು . ಕನಿಷ್ಠ ಟ್ರಯಲ್ ಕೋರ್ಟ್ ನ ನ್ಯಾಯಮೂರ್ತಿಗಳು ಯಾಕೆ ಆ ಗರಿಷ್ಟ ಶಿಕ್ಷೆ ನೀಡಲಾಯಿತು ಎಂದು ಎಲ್ಲೂ ಹೇಳಿಲ್ಲ. . ರಾಹುಲ್ ಗಾಂಧಿಯ ಅರ್ಜಿಯನ್ನು ವಜಾಗೊಳಿಸುವುದಕ್ಕೆ ಹೈ ಕೋರ್ಟ್ ಕೂಡ ಕಾರಣವೇ ಹೇಳಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.
ರಾಹುಲ್ ಪ್ರಕರಣದ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರು ಈ ಹಿಂದೆ ವಕೀಲರಾಗಿದ್ದಾಗ ಗುಜರಾತ್ ಹತ್ಯಾಕಾಂಡದಲ್ಲಿ ಜೈಲು ಸೇರಿದ್ದ ಸಚಿವೆ ಮಾಯಾ ಕೊಡ್ನಾನಿ ಪರ ವಾದಿಸಿದ್ದರು. ಸೂರತ್ ನ್ಯಾಯಾಲಯದ ನ್ಯಾಯಾಧೀಶರು ವಕೀಲರಾಗಿದ್ದಾಗ ಅಮಿತ್ ಶಾ ಪರ ವಾದಿಸಿದವರು. ಇದನ್ನು ಕೇವಲ ಮಾಹಿತಿಗಾಗಿ ನಿಮಗೆ ಹೇಳುತ್ತಿದ್ದೇವೆ. ಅವರ ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಗೂ ಈ ಎರಡೂ ಮಾಹಿತಿಗಳಿಗೂ ಯಾವುದೇ ಸಂಬಂಧವಿಲ್ಲ.
ತಮ್ಮನ್ನು ಪ್ರಶ್ನಿಸುವ ನಾಯಕನಿಗೆ ಸಂಸತ್ತಿನ ಪ್ರವೇಶಕ್ಕೆ ಅವಕಾಶ ಇಲ್ಲವಾಗಿಸುವ ಆ ಕೆಲಸ ಅತ್ಯಂತ ಅವಸರದಿಂದ ನಡೆದಿತ್ತು. ಅವರು ಮುಂದಿನ ಚುನಾವಣೆಗೆ ನಿಲ್ಲುವ ಅವಕಾಶವೂ ಇಲ್ಲವಾಗಿತ್ತು. ಈ ದೇಶವನ್ನು ವಂಚಿಸಿದವರ ವಿರುದ್ಧ ಮಾತನಾಡಿದ ಕಾರಣಕ್ಕೆ, ಮಾತಿನ ಭರದಲ್ಲಿ ಒಂದು ಉಪನಾಮದ ಮೇಲೆ ಕಮೆಂಟ್ ಮಾಡಿದ್ದನ್ನೇ ನೆಪವಾಗಿರಿಸಿಕೊಂಡು, ಮಹಾಪರಾಧವೆಂಬಂತೆ ಬಿಂಬಿಸಲಾಗಿತ್ತು.
ಶಿಕ್ಷೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ್ದ ಗುಜರಾತ್ ಹೈಕೋರ್ಟ್, ರಾಹುಲ್ ದೋಷಿಯೆಂಬ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು ಮತ್ತು ಶಿಕ್ಷೆ ತಡೆಯಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂದಿತ್ತು. ದೇಶಾದ್ಯಂತ 10 ಪ್ರಕರಣಗಳನ್ನು ರಾಹುಲ್ ಎದುರಿಸುತ್ತಿದ್ಧಾರೆ ಎಂದೂ ಅದು ಅರ್ಜಿ ವಜಾಗೊಳಿಸುವಾಗ ಹೇಳಿತ್ತು. ದೇಶಾದ್ಯಂತ ಇದ್ದ ಆ ಪ್ರಕರಣಗಳನ್ನು ಗಮನಿಸಿದ್ದ ಅದಕ್ಕೆ, ಆ ಪ್ರಕರಣಗಳನ್ನು ಅವರ ಮೇಲೆ ಯಾರು ಯಾವ ಉದ್ದೇಶದಿಂದ ಹಾಕಿದ್ದಾರೆ ಎಂಬುದು ಕೂಡ ಗಮನಕ್ಕೆ ಬಂದಿರುತ್ತದೆ.
ಈ ವಿಚಾರವನ್ನೇ, ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋಗುವಾಗ ರಾಹುಲ್ ಒಂದು ಪ್ರಮುಖ ಆಧಾರವಾಗಿ ಉಲ್ಲೇಖಿಸಿದ್ದರು. ಅಪರಾಧ ಸಾಬೀತಾಗಿಲ್ಲದಿರುವಾಗಲೂ, ಬಾಕಿ ಉಳಿದಿರುವ ಪ್ರಕರಣಗಳನ್ನು ಅಪರಾಧಕ್ಕೆ ಪೂರಕವೆಂದು ಹೈಕೋರ್ಟ್ ಪರಿಗಣಿಸಿರುವುದು ಮಾತ್ರವಲ್ಲ, ಆಡಳಿತ ಪಕ್ಷ ಬಿಜೆಪಿಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳೇ ಅವೆಲ್ಲ ಪ್ರಕರಣಗಳನ್ನು ದಾಖಲಿಸಿದವರು ಎಂಬ ಪ್ರಮುಖ ಅಂಶವನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂಬುದನ್ನು ಹೇಳಿದ್ದರು.
ಅಂತಿಮವಾಗಿ, ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸಂಸದ ಸ್ಥಾನದಿಂದ ರಾಹುಲ್ ಅನರ್ಹತೆಗೆ ಕಾರಣವಾಗಿದ್ದ ಗರಿಷ್ಠ ಎರಡು ವರ್ಷಗಳ ಶಿಕ್ಷೆಯನ್ನು ಸಮರ್ಥಿಸಲು ವಿಚಾರಣಾ ನ್ಯಾಯಾಲಯ ಹಾಗು ಹೈಕೋರ್ಟ್ ಕಾರಣವನ್ನೇ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸತ್ಯವನ್ನು ಪ್ರತಿಪಾದಿಸುವವರನ್ನು ಮೌನವಾಗಿಸಲು ನಡೆದಿದ್ದ ರಾಜಕೀಯ ಯತ್ನವೊಂದಕ್ಕೆ ಈ ಮೂಲಕ ಸೋಲಾಗಿದ್ದು, ರಾಹುಲ್ ಸಂಸದ ಸ್ಥಾನದಲ್ಲಿ ಮುಂದುವರಿಯುವುದು ಸಾಧ್ಯವಾಗಿದೆ ಮತ್ತು ಅವರು ಲೋಕಸಭಾ ಚುನಾವಣೆಗೂ ಸ್ಪರ್ಧಿಸಬಹುದಾಗಿದೆ. ಆದರೆ ಈ ಕುರಿತ ಲೋಕಸಭಾ ಸ್ಪೀಕರ್ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ. 24 ಗಂಟೆಯೊಳಗೆ ರಾಹುಲ್ ಗಾಂಧಿಯ ಲೋಕಸಭೆಯ ಸದಸ್ಯತ್ವವನ್ನು ರದ್ದು ಪಡಿಸಲಾಗಿತ್ತು. ಈಗ ನೋಡೋಣ ಎಷ್ಟು ಬೇಗ ಅದನ್ನು ಮರು ಸ್ಥಾಪಿಸುತ್ತಾರೆ ಎಂದು ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಸುಪ್ರಿಂ ಕೋರ್ಟ್ನ ಈ ತೀರ್ಪಿನಿಂದ ಸಿಕ್ಕಿರುವ ಗೆಲುವನ್ನು ದ್ವೇಷದ ವಿರುದ್ಧ ಪ್ರೀತಿಯ ಗೆಲುವು ಎಂದು ಕಾಂಗ್ರೆಸ್ ಬಣ್ಣಿಸಿದೆ. ಆದರೆ, ಹೇಳಿಕೆ ನೀಡುವಾಗ ಎಚ್ಚರಿಕೆ ಮತ್ತು ಸಂಯಮದಿಂದಿರಬೇಕು ಎಂದು ಕೋರ್ಟ್ ಎಚ್ಚರಿಸಿರುವುದನ್ನೂ ರಾಹುಲ್ ಅವರಂಥ ನಾಯಕರು ಗಮನದಲ್ಲಿಡಬೇಕಿದೆ. ಯಾಕೆಂದರೆ, ಸತ್ಯವನ್ನು ಪ್ರತಿಪಾದಿಸುವ ಹೊತ್ತಲ್ಲಿನ ಸಣ್ಣ ಮೈಮರೆವು ಕೂಡ, ಹಾಗೆ ಸತ್ಯವನ್ನು ನಿರೂಪಿಸುವ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ದಾರಿಯಿಂದಲೇ ಪೂರ್ತಿಯಾಗಿ ಬದಿಗೆ ಸರಿಸಿಬಿಡಬಹುದಾದ ಅಪಾಯವನ್ನು ತರಬಲ್ಲುದು ಎಂಬುದಕ್ಕೆ ಈ ಉಪನಾಮ ಹೇಳಿಕೆ ಪ್ರಕರಣ ಒಂದು ನಿದರ್ಶನ.
ಸರ್ಕಾರವೇ ವಂಚಕರ, ಅತ್ಯಾಚಾರಿಗಳ, ಕೊಲೆಗಡುಗರ, ದ್ವೇಷ ಹರಡುವವರ ರಕ್ಷಣೆಗೆ ನಿಂತಿರುವ ಹೊತ್ತು ಇದು. ಅವರು ಹರಡುವ ಸುಳ್ಳುಗಳ ವೇಗ ತೀವ್ರವಾಗಿರುತ್ತದೆ. ಅವರ ಅಬ್ಬರ, ಅರಚಾಟದ ನಡುವೆ ಸತ್ಯ ಸಾಬೀತಾಗಲು ಹೆಚ್ಚು ಸಮಯ ಬೆಕಾಗುತ್ತದೆ. ಹಾಗೆ ಬೇಕಾದ ಕಾಲವನ್ನೇ ಕಸಿದುಬಿಡುವ ಹುನ್ನಾರಗಳು ಸುತ್ತಲೂ ಹೊಂಚಿರುವಲ್ಲಿ ಜವಾಬ್ದಾರಿಯುತ ನಾಯಕರು ಆದಷ್ಟೂ ಜಾಗೃತೆಯಿಂದ ಇರಬೇಕಿದೆ.
ದಿಲ್ಲಿ ವಿವಿಯ ಪ್ರೊಫೆಸರ್ ಸಾಯಿ ಬಾಬಾ ಅವರನ್ನು ನಕ್ಸಲ್ ನಂಟಿನ ಆರೋಪದಿಂದ ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್ ನ ನ್ಯಾಯಾಧೀಶ ರೋಹಿತ್ ದೇವ್ ನಿನ್ನೆ ನ್ಯಾಯಾಲಯದಲ್ಲೇ ರಾಜೀನಾಮೆ ಘೋಷಿಸಿದ್ದಾರೆ. ನನ್ನ ಆತ್ಮ ಗೌರವಕ್ಕೆ ಧಕ್ಕೆ ತಂದುಕೊಂಡು ಇಲ್ಲಿ ಮುಂದುವರಿಯಲಾರೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಈಗ ರಾಹುಲ್ ಅವರಿಗೆ ಸಿಕ್ಕಿರುವ ಈ ಬಿಗ್ ರಿಲೀಫ್ ಅವರನ್ನು ವಯನಾಡ್ ಜನತೆಯ ನಾಯಕನನ್ನಾಗಿ ಮುಂದುವರಿಸಲಿದೆ. ಪ್ರಜಾಪ್ರಭುತ್ವದಲ್ಲಿನ ಹಕ್ಕುಗಳಿಗೆ ಸಿಕ್ಕ ಜಯವಾಗಿಯೂ ಈ ತೀರ್ಪು ಮಹತ್ವದ್ದಾಗಿದೆ. ಈ ಪ್ರಕರಣದ ಸಂದರ್ಭದಲ್ಲಿ ಗಮನಿಸಬೇಕಿರುವ ಇನ್ನೊಂದು ವಿಚಾರವೆಂದರೆ, ತಾವು ಯಾವ ತಪ್ಪನ್ನೂ ಮಾಡಿಲ್ಲ ಎಂಬ ತಮ್ಮ ಪ್ರಾಮಾಣಿಕ ನಿಲುವಿಗೆ ಸಂಬಂಧಿಸಿ ರಾಹುಲ್ ಕಡೆಯವರೆಗೂ ರಾಜಿಯಾಗಲಿಲ್ಲ ಎಂಬುದು.
ಈ ಪ್ರಕರಣದಲ್ಲಿ ತಾವು ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲವೆಂಬುದನ್ನೇ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಅವರು ಪ್ರತಿಪಾದಿಸಿದ್ದರು. ತಾವು ಕ್ಷಮೆ ಕೋರುವುದೇ ಆಗಿದ್ದಲ್ಲಿ, ರಾಜಿಯಾಗಲು ಬಯಸಿದ್ದಲ್ಲಿ ಅದನ್ನು ಯಾವತ್ತೋ ಮಾಡಿರುತ್ತಿದ್ದೆ ಎಂದು ರಾಹುಲ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಎದುರಾಳಿಯನ್ನು ಮಣಿಸಿಬಿಡಬೇಕು, ಅವರು ಕ್ಷಮೆ ಯಾಚಿಸುವಂತೆ ಮಾಡುವ ಮೂಲಕ, ತಾನು ತಪ್ಪೆಸಗಿದ್ದೇನೆ ಎಂದು ಅವರೇ ಒಪ್ಪುವಂತೆ ಮಾಡಬೇಕೆಂಬ ಬಿಜೆಪಿ ತಂತ್ರವೂ ರಾಹುಲ್ ದೃಢತೆಯೆದುರು ಫಲ ಕೊಟ್ಟಿರಲಿಲ್ಲ.
ಅದು ರಾಹುಲ್ ಅವರ ಪ್ರಾಮಾಣಿಕತೆ ಮಾತ್ರವಲ್ಲ, ಪ್ರಬುದ್ಧತೆಗೂ ಸಾಕ್ಷಿ. ಭಾರತ್ ಜೋಡೋ ಯಾತ್ರೆಯಂಥ, ದೇಶದ ಜನರೊಂದಿಗಿನ ಒಂದು ಐತಿಹಾಸಿಕ ಮುಖಾಮುಖಿಯಂತಿದ್ದ ಕಾರ್ಯಕ್ರಮದ ಮೂಲಕ ರಾಹುಲ್ ತಾವೆಷ್ಟು ಪ್ರಬುದ್ಧ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯುದ್ದಕ್ಕೂ ರಾಹುಲ್ ಅವರು ಮುಖ್ಯವಾಗಿ ಪ್ರತಿಪಾಸಿದ್ದು ಮೂರು ವಿಚಾರಗಳನ್ನು.
ಮೊದಲನೆಯದಾಗಿ, ಬಡವರಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಬೇಡಿಕೆ.
ಎರಡನೆಯದಾಗಿ, ಬಂಡವಾಳಶಾಹಿಯ ಖಂಡನೆ ಮತ್ತು ಸವಾಲು.
ಮೂರನೆಯದು, ದ್ವೇಷ ಮತ್ತು ಧರ್ಮಾಂಧತೆಯ ವಿರುದ್ಧ ಮಾತು.
ರಾಹುಲ್ ಅವರ ಈ ಮೂರು ನಿಲುವುಗಳು ದೇಶಾದ್ಯಂತ ಜನರ ಮನಗೆದ್ದಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಯಾತ್ರೆಯುದ್ದಕ್ಕೂ ವ್ಯಕ್ತವಾದ ಜನಬೆಂಬಲ ಕೂಡ, ದೇಶ ಹೊಸದೊಂದು ಮುಖಕ್ಕಾಗಿ ತವಕಿಸುತ್ತಿದೆ ಎಂಬುದನ್ನೇ ನಿರೂಪಿಸಿತ್ತು. ಈ ಯಾತ್ರೆ ಹಿಂದೂ-ಮುಸ್ಲಿಂ ನಡುವಿನ ಭಿನ್ನಾಭಿಪ್ರಾಯವನ್ನು ಕಡಿಮೆ ಮಾಡಿದೆ, ವಾಸ್ತವವಾಗಿ ಸಾಮಾಜಿಕ ಮಾಧ್ಯಮ ಮತ್ತು ಸಮಾಜದಲ್ಲಿನ ದ್ವೇಷದ ಮಟ್ಟವನ್ನು ಕಡಿಮೆ ಮಾಡಿದೆ ಎಂಬ ಅಭಿಪ್ರಾಯಗಳೂ ಇವೆ.
ಈ ಯಾತ್ರೆಯನ್ನು ನಿಲ್ಲಿಸಲು ಕೇಂದ್ರಸರ್ಕಾರ ಪ್ರಯತ್ನಿಸಿತ್ತೆಂಬ ಆರೋಪಗಳೂ ಇದ್ದವು. ರಾಹುಲ್ ಜನಪ್ರಿಯತೆ ಜಿಜೆಪಿ ನಾಯಕರ ಹೊಟ್ಟೆಯುರಿಸಿತ್ತು ಎಂಬುದನ್ನು ಇಲ್ಲವೆನ್ನುವಂತಿಲ್ಲ. ಭಾರತ್ ಜೋಡೋ ಯಾತ್ರೆಯ ಬಗ್ಗೆ ದುರಹಂಕಾರದಿಂದ ಟೀಕಿಸಿದ್ದವರಿಗೆ ಅದು ಎಂಥ ಆಪ್ತವಾದ ಸೇತುವೆಯನ್ನು ಸದ್ದಿಲ್ಲದೆ ಕಟ್ಟತೊಡಗಿದೆ ಎಂಬುದೂ ಮನವರಿಕೆಯಾಗಿತ್ತು. ಮತ್ತು ಅದೇ ಅವರನ್ನು ಭಯಕ್ಕೂ ತಳ್ಳಿತ್ತು.
ದೇಶದ ಉದ್ದಗಲವನ್ನು ಕ್ರಮಿಸಿದ್ದ ರಾಹುಲ್ ಅವರ ನಡಿಗೆ ಕಾಂಗ್ರೆಸ್ ಪಾಲಿಗೂ ಹೊಸ ಶಕ್ತಿಯನ್ನು ತುಂಬಿದೆ ಎಂಬುದು ನಿಜ. ದೇಶದಲ್ಲಿ ದ್ವೇಷ ಹೊತ್ತಿ ಉರಿಯುತ್ತಿರುವಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕಿದೆ ಎಂಬ ಅವರ ಪ್ರತಿಪಾದನೆ, ಇಡೀ ದೇಶದ ಅಂತಃಚೇತನವನ್ನು ತಟ್ಟದೇ ಇಲ್ಲ. ಪ್ರಶ್ನಿಸುತ್ತಿದ್ದ ನಾಯಕನನ್ನು ದೂರವಿಡಬೇಕು, ಜೈಲಿಗೆ ತಳ್ಳಬೇಕು ಎಂದಿದ್ದ ಎದುರಾಳಿಗಳ ತಂತ್ರಕ್ಕೆ ದೊಡ್ಡ ಸೋಲಾಗಿದೆ. ಅವರೆದುರಿಗೆ ಈಗ ಹೊಸ, ಇನ್ನಷ್ಟು ಚೈತನ್ಯ ತುಂಬಿಕೊಂಡ, ಇನ್ನಷ್ಟು ಎತ್ತರಕ್ಕೇರಿರುವ ರಾಹುಲ್ ಮತ್ತೆ ಬಂದು ನಿಲ್ಲಲಿದ್ದಾರೆ.
ತುದಿಗಾಲಲ್ಲಿ ಕಾದುನಿಂತವರಂತೆ ಅತ್ಯಾತುರದಲ್ಲಿ ರಾಹುಲ್ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ್ದವರು ಈಗ ರಾಹುಲ್ ಅವರನ್ನು ಎದುರುಗೊಳ್ಳಬೇಕಿದೆ. ಅನರ್ಹತೆಗೆ ಅಷ್ಟೊಂದು ಅವಸರ ತೋರುವ ಬದಲು ಸಂಯಮದಿಂದ ಕಾದಿದ್ದರೆ ಅದಕ್ಕಿರಬಹುದಾದ ಘನತೆಯೇ ಬೇರೆಯಿತ್ತು. ಆದರೆ ಸತ್ಯವನ್ನು ಒಪ್ಪಿಕೊಳ್ಳಲಾರದ, ಮತ್ತು ಅಂಥ ಸತ್ಯವನ್ನು ಹೇಳುವ ಎಲ್ಲರನ್ನೂ, ಸಣ್ಣ ನೆಪ ಸಿಕ್ಕರೂ ಸಾಕು ಅದನ್ನೇ ಅಸ್ತ್ರವಾಗಿಸಿ ಹೊಡೆದುಹಾಕುವ ಹಂತಕ ಮನಃಸ್ಥಿತಿಯೊಂದು ಇವತ್ತಿನ ರಾಜಕಾರಣದಲ್ಲಿ ಯುದ್ಧೋನ್ಮಾದಿ ಸ್ವರೂಪದಲ್ಲಿದೆ. ಅದು ತಮ್ಮ ಎದುರಾಳಿಗಳನ್ನು ಸಹಿಸುವುದಿಲ್ಲ. ಅವರ ಆತ್ಮಸ್ಥೈರ್ಯವನ್ನೇ ನಾಶವಾಗಿಸಲು ಯತ್ನಿಸುತ್ತದೆ.
ದೇಶ ಈ ಸತ್ಯವನ್ನು ನೋಡುತ್ತಿದೆ. ಮತ್ತು ಪ್ರಜಾಪ್ರಭುತ್ವದ ಎಲ್ಲ ಸತ್ವ, ಸತ್ಯಗಳನ್ನು ಧಿಕ್ಕರಿಸುವವರಂತೆ ಆಡಳಿತ ನಡೆಸುತ್ತಿರುವವರ ವಿರುದ್ಧದ ಪ್ರಬಲ ಪ್ರತಿಶಕ್ತಿಯ ಬೆಂಬಲಕ್ಕೆ ನಿಲ್ಲುವ ಮನಃಸ್ಥಿತಿಯೊಂದು ದೇಶದೊಳಗೆ ನಿಧಾನವಾಗಿಯಾದರೂ ಜಾಗೃತಗೊಳ್ಳುತ್ತಿದೆ ಎಂದು ಭಾವಿಸಬಹುದು. ಈ ಹಂತದಲ್ಲಿ, ಪ್ರತಿಪಕ್ಷಗಳ ಮೈತ್ರಿಕೂಟ INDIA ಪ್ರತಿ ಹಂತದಲ್ಲಿಯೂ ಎಚ್ಚರದಿಂದಿರಬೇಕು. ರಾಹುಲ್ ಅವರಿಗೆ ದೊರೆತ ಈ ಜಯ, ಸತ್ಯವನ್ನು ಪ್ರತಿಪಾದಿಸುವ ನಿಲುವಿನಿಂದ ಒಂದಾಗಿರುವ ಪ್ರತಿಪಕ್ಷಗಳ ಪಾಲಿನ ಬಲವಾಗಲಿದೆ.
ಕೆಲವು ದಿನಗಳ ಹಿಂದೆ ರಾಜ್ಯಸಭೆಯಲ್ಲಿ ಕೇಂದ್ರ ವಿದೇಶ ರಾಜ್ಯ ಮಂತ್ರಿ ಮೀನಾಕ್ಷಿ ಲೇಖಿ ವಿಪಕ್ಷಗಳಿಗೆ "ನೀವು ಸುಮ್ಮನಿರಿ ಇಲ್ಲದಿದ್ದರೆ ಈಡಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ" ಎಂದು ಬೆದರಿಕೆ ಹಾಕಿದ್ದರು ಮತ್ತೆ ಅವರು ಇದು ತಮಾಷೆ ಎಂದಿದ್ದರು. ಪ್ರಜಾಸತ್ತಾತ್ಮಕ ಹಕ್ಕೊಂದನ್ನು ಕಸಿಯುವ ಯತ್ನದಲ್ಲಿ ತನಗಾಗಿರುವ ಸೋಲನ್ನು ಸರ್ಕಾರ ಅರಗಿಸಿಕೊಳ್ಳಲು ಒಳಗೊಳಗೇ ಕುಗ್ಗುವ ಈ ಸಮಯ ಪ್ರತಿಪಕ್ಷಗಳ ಪಾಲಿನ ಹೊಸ ಭರವಸೆಯೇ ಆಗಿದೆ.
ಸತ್ಯವನ್ನು ಎಷ್ಟೇ ಅಡಗಿಸಲು ಯತ್ನಿಸಿದರೂ, ಅದು ತಾತ್ಕಾಲಿಕ ಮಾತ್ರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ದ್ವೇಷದ ಮೂಲಕವೇ ಆಳುತ್ತೇನೆ ಎಂಬವರ ಎದುರು ಮೊಹಬ್ಬತ್ತಿನ ಅಂಗಡಿಯಾಗಬಲ್ಲ ಪ್ರತಿಪಕ್ಷ ಕೂಟಕ್ಕೆ ಜನರ ಒಲವು ಗಳಿಸುವ ಎಲ್ಲ ಅವಕಾಶಗಳೂ ಇವೆ. ಒಟ್ಟಾರೆ ಚುನಾವಣೆಯಲ್ಲಿ ಸೋತರೂ ರಾಹುಲ್ ನ್ಯಾಯಾಲಯದಲ್ಲಿ ಗೆದ್ದರು. ಜನತಾ ನ್ಯಾಯಾಲಯದಲ್ಲೂ ಅವರದೇ ಹವಾ. ಎಲ್ಲ ಅಧಿಕಾರ ಇದ್ದೂ ಒಬ್ಬ ಸಂಸದನಿಗೆ ನ್ಯಾಯ ಕೊಡಿಸದೆ ಮೋದಿ ಸೋತರು.