ಪತ್ರಕರ್ತೆಯ ಪ್ರಶ್ನೆಗೆ ಕೆರಳಿದ ಮೋದಿ ಬೆಂಬಲಿಗ Vivek Agnihotri
ಅವರಿಗೆ ಪ್ರಶ್ನೆಗಳು ತೀರಾ ಕಿರಿಕಿರಿ ತರುತ್ತವೆ. ಪ್ರಶ್ನೆಗಳೆಂದರೆ ಅವರಿಗೆ ಭಾರೀ ಅಲರ್ಜಿ. ಅವರಿಗೆ ಏನಿದ್ದರೂ ತಮ್ಮ ಮಾತನ್ನು ಉಳಿದವರು ಕೇಳಬೇಕು. ಏಕೆಂದರೆ ನೇರ ನಿಖರ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿರುವುದಿಲ್ಲ. ಪ್ರಶ್ನೆ ಕೇಳಿದ ಕೂಡಲೇ ಅವರೊಳಗಿನ ಪೊಳ್ಳುತನ ಬಯಲಾಗಿಬಿಡುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನವೊಂದು ೧೫ ವರ್ಷಗಳ ಬಳಿಕವೂ ಚರ್ಚೆಯಾಗುತ್ತಲೇ ಇದೆ. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಕರಣ್ ಥಾಪರ್ ಕೇಳಿದ ಪ್ರಶ್ನೆಯಿಂದ ತೀವ್ರ ಕಸಿವಿಸಿಗೊಂಡ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ " ದೋಸ್ತಿ ಬನೀ ರಹೇ " ಅಂದ್ರೆ "ನಮ್ಮ ಸ್ನೇಹ ಹೀಗೇ ಇರ್ಲಿ" ಎಂದು ಹೇಳುತ್ತಾ ಸಂದರ್ಶನದಿಂದ ದಿಢೀರನೆ ಎದ್ದು ಬಿಟ್ಟರು.
ಬಹುಶಃ ಅವರು ಕರಣ್ ಥಾಪರ್ ಅವರಿಂದ ಅಷ್ಟು ನಿಷ್ಠುರ ಪ್ರಶ್ನೆಯನ್ನು ನಿರೀಕ್ಷಿಸಿರಲೇ ಇಲ್ಲ. ಆಮೇಲೆ ಮೋದಿಜಿ ಮತ್ತೆ ಎರಡು ಬಾರಿ ಗುಜರಾತ್ ಸಿಎಂ ಆದರು. 2014 ರಲ್ಲಿ ದೇಶದ ಪ್ರಧಾನಿಯೂ ಆದರು. ಆದರೆ ಎಂದೂ ಅಂತಹ ಇನ್ನೊಂದು ಸಂದರ್ಭ ಬರಲೇ ಇಲ್ಲ. ಏಕೆಂದರೆ ಆಮೇಲೆ ಮೋದೀಜಿ ಅಂತಹ ಯಾವುದೇ ನಿಷ್ಠುರ ಪತ್ರಕರ್ತನಿಗೆ ಸಂದರ್ಶನ ನೀಡಲೇ ಇಲ್ಲ.
ಪ್ರಧಾನಿ ಆದ ಮೇಲಂತೂ ಅವರು ನೀಡಿರುವ ಸಂದರ್ಶನಗಳು ಅವರೇ ಪತ್ರಕರ್ತರನ್ನು ಪ್ರಶ್ನಿಸುತ್ತಾರೋ ಎಂಬಂತೆ ನಡೆಯುತ್ತಿವೆ. " ನೀವು ಮಾವಿನ ಹಣ್ಣು ಹೇಗೆ ತಿಂತೀರಿ " , " ನೀವು ನಿದ್ದೇನೆ ಮಾಡೋದಿಲ್ಲ, ಅದೆಷ್ಟು ಗಂಟೆ ಕೆಲಸ ಮಾಡ್ತೀರಿ " " ನಿಮ್ಮ ಜೇಬಲ್ಲಿ ಪರ್ಸ್ ಇಟ್ಕೊಳ್ತೀರಾ " ಇಂತಹವೇ ಪ್ರಶ್ನೆಗಳನ್ನು ಕೇಳುವವರಿಗೆ ಅವರು ಇಂಟರ್ವ್ಯೂ ಕೊಡ್ತಾರೆ.
ಅಪ್ಪಿತಪ್ಪಿಯೂ ರವೀಶ್ ಕುಮಾರ್, ಅಜಿತ್ ಅಂಜುಮ್, ಪುಣ್ಯ ಪ್ರಸೂನ್ ಬಾಜಪೇಯಿ, ಅಭಿಸಾರ ಶರ್ಮಾ ಅವರಂತಹ ಪತ್ರಕರ್ತರಿಗೆ ಮೋದೀಜಿ ಇಂಟರ್ವ್ಯೂ ಕೊಡೋದೇ ಇಲ್ಲ. ಮೋದೀಜಿ ಅವರ ಸಂಪುಟದ ಸಚಿವರು, ಅವರ ಕಟ್ಟಾ ಬೆಂಬಲಿಗರು ಮೋದೀಜಿ ಅವರ ಮಾದರಿಯನ್ನೇ ಅನುಸರಿಸುತ್ತಿದ್ದಾರೆ.
ಮೋದೀಜಿಯ ಕಟ್ಟಾ ಅನುಯಾಯಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯಂತೂ ಪ್ರಶ್ನೆ ಕೇಳಿದರೆ ಸಾಕು ಪತ್ರಕರ್ತರ ಮೇಲೆ ಉರಿದು ಬೀಳುತ್ತಾರೆ. ಅವರ ಕ್ಷೇತ್ರದಲ್ಲಿ ಪತ್ರಕರ್ತನೊಬ್ಬ ಪ್ರಶ್ನೆ ಕೇಳಿದ್ದಕ್ಕೆ ಆತನಿಗೆ ಎಲ್ಲರೆದುರೇ ಬೈದದ್ದಲ್ಲದೆ ಆತನ ಪತ್ರಿಕೆಯ ಮಾಲಕರಿಗೆ ಫೋನ್ ಮಾಡಿ ಆತನ ಉದ್ಯೋಗವನ್ನೇ ಕಿತ್ತುಕೊಂಡಿದ್ದಾರೆ.
ತೀರಾ ಮೊನ್ನೆ ತಮ್ಮದೇ ಬಳಗದ ಭಟ್ಟಂಗಿ ನಿರೂಪಕ ಸುಧೀರ್ ಚೌಧರಿ ತೀರಾ ಅಪರೂಪಕ್ಕೆ ಟೊಮೆಟೊ ಬೆಲೆ ಏರಿಕೆ ಬಗ್ಗೆ ಒಂದು ಪ್ರಶ್ನೆ ಕೇಳಿದ್ದನ್ನು ಸ್ಮೃತಿ ಇರಾನಿ ಸಹಿಸಲಿಲ್ಲ. ದೊಡ್ಡ ಸಮಾರಂಭದಲ್ಲಿ ಎಲ್ಲರೆದುರೇ " ನಿಮ್ಮ ಜೈಲಿನ ದಿನಗಳ ಬಗ್ಗೆ ಕೇಳಿದರೆ ಹೇಗೆ " ಎಂದು ಸುಧೀರ್ ಗೆ ಭಯಂಕರ ಅವಮಾನ ಮಾಡಿ ಬಿಟ್ಟರು.
ಈಗ ಮೋದೀಜಿ ಅವರ ಕಟ್ಟಾ ಬೆಂಬಲಿಗ, ದ್ವೇಷ ಹಾಗು ಅಸಹಿಷ್ಣುತೆ ಹರಡುವಲ್ಲಿ ಮುಂಚೂಣಿಯಲ್ಲಿರುವ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯ ಸರದಿ. ಈತ ಸೋಷಿಯಲ್ ಮೀಡಿಯಾದಲ್ಲಿ ಮೋದಿ ಹಾಗು ಬಿಜೆಪಿಯ ಕಟ್ಟಾ ಬೆಂಬಲಿಗ. ಸಂದರ್ಭ ಸಿಕ್ಕಾಗಲೆಲ್ಲ ಸುಳ್ಳುಗಳ ಮೂಲಕ ದ್ವೇಷ ಹರಡುತ್ತಾನೆ. ಇತರ ನಟರು, ನಿರ್ದೇಶಕರ ಬಗ್ಗೆ ಸುಳ್ಳು ಸುಳ್ಳೇ ಆರೋಪ ಮಾಡುತ್ತಾನೆ. ತಾನೊಬ್ಬ ಕ್ರಾಂತಿಕಾರಿ ಚಿತ್ರ ನಿರ್ದೇಶಕ ಎಂದು ತನ್ನನ್ನು ತಾನೇ ಬಣ್ಣಿಸಿಕೊಳ್ಳುತ್ತಾನೆ. ಬಿಜೆಪಿ ಪ್ರಚಾರಕ್ಕೆ ತಕ್ಕಂತಹ ಸಿನಿಮಾ ಮಾಡಿ ಅದನ್ನು ಬಿಜೆಪಿಯಿಂದ ಪ್ರಚಾರ ಮಾಡಿಸಿ ಲಾಭ ಬಾಚಿಕೊಳ್ಳುತ್ತಾನೆ.
ಈತನ ಸುಳ್ಳುಗಳ ಕಂತೆಯ ಚಿತ್ರ ಕಾಶ್ಮೀರ್ ಫೈಲ್ಸ್ ಅನ್ನು ಸ್ವತಃ ಪ್ರಧಾನಿ ಮೋದಿ, ಕೇಂದ್ರ, ರಾಜ್ಯ ಬಿಜೆಪಿ ಸರಕಾರಗಳು, ಬಿಜೆಪಿ ಮುಖಂಡರು ಮುಂದೆ ನಿಂತು ಪ್ರೋತ್ಸಾಹಿಸಿ ಕೋಟಿ ಕೋಟಿ ಹಣ ಬಾಚಿದ್ದು ಈ ದೇಶದ ಸಣ್ಣ ಮಕ್ಕಳಿಗೂ ಗೊತ್ತಿರುವ ಸತ್ಯ. ಆಮೇಲೆ ಅದು ಅತ್ಯಂತ ಕೆಟ್ಟ ಚಿತ್ರ ಎಂದು ಕೇಂದ್ರ ಸರಕಾರವೇ ಆಹ್ವಾನಿಸಿದ ಅಂತರ್ ರಾಷ್ಟ್ರೀಯ ಚಿತ್ರ ನಿರ್ದೇಶಕ ಸರಕಾರದ್ದೇ ಕಾರ್ಯಕ್ರಮದಲ್ಲಿ ಹೇಳಿದ್ದೂ ಆಯಿತು.
ಆದರೆ ಇತ್ತೀಚಿಗೆ ಆ ಸಿನಿಮಾದ ಬಗ್ಗೆ ಆತನಿಗೆ ಎಬಿಸಿ ನ್ಯೂಸ್ ಇನ್ ಡೆಪ್ತ್ ಎಂಬ ವಿದೇಶಿ ಮಾಧ್ಯಮದ ಪತ್ರಕರ್ತೆ ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಾದ ವಿವೇಕ್ ಅಗ್ನಿಹೋತ್ರಿ ಸಂದರ್ಶನದಿಂದ ನಡುವೆಯೇ ಎದ್ದು ಬಿಟ್ಟಿದ್ದಾರೆ. ನನ್ನ ಸಿನಿಮಾವನ್ನು ಪ್ರಧಾನಿ ಮೋದಿ ಪ್ರಚಾರ ಮಾಡಲೇ ಇಲ್ಲ ಎಂದು ಹಸಿ ಹಸಿ ಸುಳ್ಳು ಹೇಳಿದ್ದಾರೆ. ಅದರ ಜೊತೆಜೊತೆಗೆ ಬಿಜೆಪಿಯವರು ಪ್ರಚಾರ ಮಾಡಿದ್ದರೆ ನಿಮಗೇನು ಸಮಸ್ಯೆ ಎಂದು ಉಲ್ಟಾ ಪ್ರಶ್ನೆ ಹಾಕಿದ್ದಾರೆ.
ಕಾಶ್ಮೀರಿ ಫೈಲ್ಸ್ ಮುಸ್ಲಿಮರ ವಿರುದ್ಧದ ದ್ವೇಷ ಅಭಿಯಾನದ ಅಜೆಂಡಾ ಆಗಿ ಬಳಕೆಯಾಯಿತು ಎಂಬ ಪ್ರಶ್ನೆಗೆ ಹಾರಿಕೆಯ ಉತ್ತರ ಕೊಟ್ಟಿದ್ದಾರೆ ವಿವೇಕ್ ಅಗ್ನಿಹೋತ್ರಿ. ಆ ಚಿತ್ರ ನೋಡಿ ಮುಸ್ಲಿಂ ದ್ವೇಷ ಹರಡಿದ್ರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದಿದ್ದಾರೆ.
ಅಷ್ಟು ಹೇಳಿ ಸಂದರ್ಶನವನ್ನು ದಿಢೀರನೆ ನಿಲ್ಲಿಸಿ ಮೈಕ್ ತೆಗೆದಿದ್ದಾರೆ ವಿವೇಕ್ ಅಗ್ನಿಹೋತ್ರಿ. ಆ ಸಂದರ್ಶನದ ವೀಡಿಯೊ ಬಳಸಬಾರದು ಎಂದು ಆ ಪತ್ರಕರ್ತೆಗೆ ಎಚ್ಚರಿಕೆ ನೀಡಿದ್ದಾರೆ. ನನ್ನ ಬಗ್ಗೆ ನೆಗಟಿವ್ ಆಗಿ ಸಂದರ್ಶನ ಪ್ರಸಾರ ಮಾಡಿದರೆ ನಾನು ರಿಯಾಕ್ಟ್ ಮಾಡಬೇಕಾಗುತ್ತೆ ಎಂದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಹಸಿ ಹಸಿ ಸುಳ್ಳುಗಳ ಸಿನಿಮಾ ಮಾಡಿ ಕೋಟಿಗಟ್ಟಲೆ ರೂಪಾಯಿ ಹಾಗು ಪ್ರಚಾರ ಎರಡನ್ನೂ ಬಾಚಿಕೊಂಡ ಇದೇ ವಿವೇಕ್ ಅಗ್ನಿಹೋತ್ರಿಗೆ ಪತ್ರಕರ್ತೆಯ ಪ್ರಶ್ನೆ ಕೇಳುವ ಹಕ್ಕನ್ನು ಗೌರವಿಸುವುದು ಗೊತ್ತಿಲ್ಲ.
ಕಾಶ್ಮೀರಿ ಪಂಡಿತರ ಕಗ್ಗೊಲೆ ಬಗ್ಗೆ ಕ್ರಾಂತಿಕಾರಿ ಸಿನಿಮಾ ಮಾಡಿದ್ದೇನೆ ಎಂದು ತಾನೇ ಹೇಳಿಕೊಂಡು ಓಡಾಡುವ ಈತ ಅಲ್ಲಿ ಕಾಶ್ಮೀರಿ ಪಂಡಿತರು ಒಬ್ಬೊಬ್ಬರೇ ಈ ಸರಕಾರದ ಅವಧಿಯಲ್ಲಿ ಪ್ರಾಣ ಕಳಕೊಳ್ಳುತ್ತಿರುವ ಬಗ್ಗೆ ಚಕಾರ ಎತ್ತುವುದಿಲ್ಲ. ಈತ ಹಾಡಿ ಹೊಗಳುವ ಪ್ರಧಾನಿ ಮೋದಿಯ ಮೂಗಿನಡಿಯಲ್ಲೇ ಪಂಡಿತರು ನಮ್ಮನ್ನು ಕೇಳೋರೇ ಇಲ್ಲ ಎಂದು ಗೋಳು ಹೊಯ್ದುಕೊಳ್ಳುತ್ತಿರೋದು ಈತನಿಗೆ ಕಾಣೋದಿಲ್ಲ.
ಅತ್ತ ಉತ್ತರ ಪ್ರದೇಶದಲ್ಲಿ ಪ್ರಶ್ನೆ ಕೇಳಿದರೆ ಪತ್ರಕರ್ತರ ಮೇಲೆ ಕೇಸು ದಾಖಲಾಗುತ್ತದೆ. ಅವರ ಬಂಧನವಾಗುತ್ತದೆ. ವರದಿ ಮಾಡಲು ಹೋಗುವ ಪತ್ರಕರ್ತನನ್ನು ವರ್ಷಗಟ್ಟಲೆ ಜೈಲಿನಲ್ಲಿ ಇಡಲಾಗುತ್ತದೆ. ಒಟ್ಟಾರೆ ಇವರಿಗೆ ಪ್ರಶ್ನೆ ಕೇಳಬಾರದು. ಪ್ರಶ್ನೆ ಅಂದರೆ ಇವರಿಗೆ ಆಗಿ ಬರೋದಿಲ್ಲ.
ಏನಿದ್ದರೂ ತಮ್ಮ ಮನ್ ಕೀ ಬಾತ್ ಹೇಳ್ತಾರೆ. ಅದನ್ನು ಜನ ಕೇಳಿಕೊಂಡು ಮೋದಿಯವರು ಹೇಳಿದ್ದ ಕರ್ತವ್ಯ ಕಾಲ್ ನಲ್ಲಿ ತಮ್ಮ ಕರ್ತವ್ಯ ನಿಭಾಯಿಸಬೇಕು. ಅಷ್ಟೇ. ಜನ ತಮ್ಮ ಮನ್ ಕೀ ಬಾತ್ ಹೇಳಲು ಹೋಗಿ ಇವರನ್ನು ಪ್ರಶ್ನಿಸಬಾರದು. ನೀವು ಹೀಗೆಲ್ಲ ಹೇಳಿದ್ದಿರಿ. ಈಗ ಹೀಗೇಕೆ ಮಾಡುತ್ತಿದ್ದೀರಿ ಎಂದು ಕೇಳಿದರೆ ಅದು ಅಪರಾಧ.
ವರ್ಷಗಟ್ಟಲೆ ತಮ್ಮದೇ ಭಟ್ಟಂಗಿತನ ಮಾಡುತ್ತಿದ್ದಾತ ಕೂಡ ನೆಪಕ್ಕೆ ಒಂದು ಪ್ರಶ್ನೆ ಕೇಳಿದರೆ ಅದನ್ನೂ ಇವರು ಸಹಿಸುವುದಿಲ್ಲ. ಅಧಿಕಾರ ಬೇಕು, ಪ್ರಚಾರ ಬೇಕು, ಜನಪ್ರಿಯತೆ ಬೇಕು, ಅದರ ಜೊತೆ ಬರುವ ಸಮೃದ್ಧಿ - ಎಲ್ಲವೂ ಬೇಕು. ಆದರೆ ಪ್ರಶ್ನೆ ಬೇಡ. ಉತ್ತರದಾಯಿತ್ವ ಇವರಿಗಿಲ್ಲ. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅನಿವಾರ್ಯವಾಗಿರುವ ಪ್ರಶ್ನೆಗಳನ್ನೇ ನಿಷೇಧಿಸಿದ ಪರಿಸ್ಥಿತಿಯನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಈ ಹೊತ್ತಿನ ದುರಂತ.