ಮೋದಿ ಸರಕಾರ ಹೇಳೋದೇನು ? ಅರ್ಥಶಾಸ್ತ್ರಜ್ಞ ಅಶೋಕ ಮೋದಿ ಹೇಳೋದೇನು ?

What does the Modi government say? What does economist Ashoka Modi say?

Update: 2023-09-13 17:16 GMT
Editor : Ismail | Byline : ಆರ್. ಜೀವಿ

 ಅಶೋಕ ಮೋದಿ  

ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಮೋದಿ ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತಲೇ ಇದೆ.

ದೇಶದಲ್ಲಿ ಜಿ 20 ಶೃಂಗ ಸಭೆ ನಡೆಯುವ ಹೊತ್ತಿಗೆ ಆ ಬಡಾಯಿ ತಾರಕಕ್ಕೇರಿದೆ. ಆದರೆ ಆ ಬಡಾಯಿ ಅಬ್ಬರದ ಸದ್ದು ಅಡಗುವ ಹಾಗೆ, ವಾಸ್ತವ ಬೇರೆಯೇ ಇದೆ ನೋಡಿ ಎಂದು ಹಿರಿಯ ಅರ್ಥಶಾಸ್ತ್ರಜ್ಞರೊಬ್ಬರು ಲೆಕ್ಕ ಬಯಲು ಮಾಡಿದ್ದಾರೆ.

ಮೋದಿ ಸರ್ಕಾರ ಆರ್ಥಿಕತೆಯ ವಿಚಾರವನ್ನು ಜಗತ್ತಿನ ಮುಂದಿಡುವಾಗ ತನಗೆ ಅನುಕೂಲಕರ ಅಂಕಿಅಂಶಗಳನ್ನು ಮಾತ್ರವೇ ಲೆಕ್ಕಕ್ಕೆ ತೆಗೆದುಕೊಂಡು, ಉಳಿದದ್ದನ್ನು ಬಚ್ಚಿಡುತ್ತದೆ, ವಾಸ್ತವವನ್ನು ಮರೆಮಾಚುತ್ತದೆ ಎಂಬುದು ಆ ಅರ್ಥಶಾಸ್ತ್ರಜ್ಞರ ವಾದ. ಅವರು, ಹೇಳುತ್ತಿರುವ ಪ್ರಕಾರ, ಈ ವರ್ಷ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತ ಸರ್ಕಾರ ತೋರಿಸಿರುವ ಶೇ.7.8 ಜಿಡಿಪಿ ದರ ಸುಳ್ಳು. ಅದು ವಾಸ್ತವವಾಗಿ ಶೇ.4.5 ಮಾತ್ರ ಆಗುತ್ತದೆ.

ಈ ವಿಚಾರವನ್ನು ಬಯಲಿಗೆಳೆದಿರುವವರು ಖ್ಯಾತ ಅರ್ಥಶಾಸ್ತ್ರಜ್ಞ ಅಶೋಕ ಮೋದಿ. ಅವರು ಅಮೆರಿಕದ ಪ್ರಿನ್ಸ್ ಟನ್ ವಿವಿಯಲ್ಲಿ ಅರ್ಥಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರು. ದೆಹಲಿಯ ಸೇಂಟ್ ಕೊಲಂಬಾ ಶಾಲೆಯಲ್ಲಿ ಎಪ್ಪತ್ತರ ದಶಕದ ಆರಂಭದಲ್ಲಿ ಅಧ್ಯಯನ ಮಾಡಿದವರು.

ಐಐಟಿ ಮದ್ರಾಸ್‌ನಿಂದ ಎಲೆಕ್ಟ್ರಾನಿಕ್ಸ್ನಲ್ಲಿ ಬಿಟೆಕ್ ಪದವಿ ನಂತರ ತಿರುವನಂತಪುರಂನಲ್ಲಿರುವ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್‌ನಲ್ಲಿ ಅರ್ಥಶಾಸ್ತ್ರ ಅಧ್ಯಯನ. ಅಲ್ಲಿ ಎಂಫಿಲ್ ಪದವಿ, ಬಳಿಕ ಬೋಸ್ಟನ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಗಳಿಸಿದರು.

ವಿಶ್ವ ಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಅರ್ಥಶಾಸ್ತ್ರಜ್ಞರಾಗಿ ಸುದೀರ್ಘ ಅನುಭವವುಳ್ಳವರು ಡಾ.ಅಶೋಕ ಮೋದಿ.

ಬಡಾಯಿಯೇ ಬಂಡವಾಳ ಮಾಡಿಕೊಂಡಿರುವ ಮೋದಿ ಸರ್ಕಾರ, ಈಗ ಜಿ20 ವಿಶ್ವನಾಯಕರ ಮುಂದೆಯೂ ಅದನ್ನೇ ಮಾಡುತ್ತದೆಯೆ ಗೊತ್ತಿಲ್ಲ.

ಆದರೆ, ಜಿ20 ಶೃಂಗಸಭೆಗೆ ವಿಶ್ವದ ನಾಯಕರು ದೆಹಲಿಯಲ್ಲಿ ಬಂದಿಳಿದ ಹೊತ್ತಲ್ಲಿಯೇ ಪ್ರಕಟವಾಗಿರುವ ಅಶೋಕ ಮೋದಿ ಬರಹ, ಈ ಸರ್ಕಾರದ ಬಡಾಯಿಗೆ ಬಲವಾದ ಪೆಟ್ಟು ಕೊಟ್ಟಂತಿದೆ. ಪ್ರಾಜೆಕ್ಟ್ ಸಿಂಡಿಕೇಟ್‌ಗಾಗಿ ಬರೆದ 'ಇಂಡಿಯಾಸ್ ಫೇಕ್ ಗ್ರೋತ್ ಸ್ಟೋರಿ' ಅಂದ್ರೆ ಎಂಬ ಲೇಖನದಲ್ಲಿ ಅಶೋಕ ಮೋದಿ, ಜಿಡಿಪಿ ವಿಚಾರದಲ್ಲಿ ಮೋದಿ ಸರ್ಕಾರದ ಬಣ್ಣ ಬಯಲು ಮಾಡಿದ್ದಾರೆ.

ಪ್ರಾಜೆಕ್ಟ್ ಸಿಂಡಿಕೇಟ್‌, ವಿವಿಧ ಜಾಗತಿಕ ವಿಷಯಗಳ ಕುರಿತು ವ್ಯಾಖ್ಯಾನ ಮತ್ತು ವಿಶ್ಲೇಷಣೆಯನ್ನು ಪ್ರಕಟಿಸುವ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯಾಗಿದ್ದು, ಅಲ್ಲಿ ಪ್ರಕಟವಾಗಿರುವ ಅಶೋಕ ಮೋದಿಯವರ ವಿಚಾರ ಸಹಜವಾಗಿಯೇ ಕೇಂದ್ರ ಸರ್ಕಾರದ ನಿದ್ದೆಗೆಡಿಸಿದ ಹಾಗಿದೆ.

ಹಾಗಾಗಿಯೇ ಅಷ್ಟೇ ವೇಗದಲ್ಲಿ ಅದು ಪ್ರತಿಕ್ರಿಯೆಯನ್ನೂ ಕೊಟ್ಟು, ಅಶೋಕ ಮೋದಿಯವರ ಆರೋಪವನ್ನು ಅಲ್ಲಗಳೆದಿದೆ. ದೇಶದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರು ಅಶೋಕ ಮೋದಿಯವರ ತಕರಾರನ್ನು ತಿರಸ್ಕರಿಸಿ ಭಾರತ ತನ್ನ ಅಭಿವೃದ್ಧಿ ಲೆಕ್ಕಾಚಾರದಲ್ಲಿ ನಿರಂತರತೆಯನ್ನು ಕಾಯ್ದುಕೊಂಡು ಬಂದಿದೆ. ಭಾರತದ ಡೇಟಾ ವ್ಯವಸ್ಥೆಗಳ ವಿನ್ಯಾಸ ಖರ್ಚಿಗಿಂತ ಆದಾಯದ ಸಂಖ್ಯೆ ಆಧರಿಸಿ ಲೆಕ್ಕಾಚಾರ ಮಾಡಲು ಸೂಕ್ತವಾಗಿದೆ. ಖರ್ಚಿಗಿಂತ ಆದಾಯ ಹೆಚ್ಚಿಲ್ಲದ ಸಂದರ್ಭದಲ್ಲೂ ನಾವು ಇದೇ ಲೆಕ್ಕಾಚಾರ ಅನುಸರಿಸಿದ್ದೇವೆ" ಎಂದು ಹೇಳಿದ್ದಾರೆ.

ವಿಚಾರ ಏನೆಂದರೆ, ಮೊದಲ ತ್ರೈಮಾಸಿಕದಲ್ಲಿ ಅಂದ್ರೆ ಏಪ್ರಿಲ್-ಜೂನ್ ನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ.7.8 ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್ಎಸ್ಒ) ಪ್ರಕಟಿಸಿದೆ.

ಆದರೆ, ಜಿಡಿಪಿ ಶೇ.7.8ರಷ್ಟಿದೆ ಎಂದು ಎನ್ಎಸ್ಒ ತಪ್ಪಾಗಿ ಹೇಳಿದೆ. ನಿಜವಾದ ಅಂಕಿಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಅದು ಶೇ.4.5 ಆಗುತ್ತದೆ ಎಂದು ಆಶೋಕ ಮೋದಿ ವಾದಿಸಿದ್ದಾರೆ. ಹಾಗಾದರೆ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಮೋದಿ ಸರಕಾರದ ಪ್ರಚಾರದ ಬಗ್ಗೆಯೇ ಗಂಭೀರ ಪ್ರಶ್ನೆಗಳು ಏಳುತ್ತವೆ.

ಎನ್ಎಸ್ಒ ಪ್ರಕಟಿಸಿರುವ ಜಿಡಿಪಿ ದರ ಉತ್ಪ್ರೇಕ್ಷಿಸಿ ಹೇಳಿದ್ದಾಗಿದೆ. ಮತ್ತು ಕಟು ವಾಸ್ತವವನ್ನು ಮರೆಮಾಚಿದೆ ಎಂದಿದ್ದಾರೆ ಅವರು.

ಅವರು ತಮ್ಮ ಲೇಖನದಲ್ಲಿ ಹೇಳಿರುವುದೇನು?

ನಿಜವಾದ ಜಿಡಿಪಿ ಲೆಕ್ಕ ಹಾಕುವಾಗ ಆದಾಯ ಪರಿಗಣನೆ ಒಂದು ವಿಧಾನವಾದರೆ, ವೆಚ್ಚ ಪರಿಗಣನೆ ಮತ್ತೊಂದು ಬಗೆ. ಆದಾಯ ಪರಿಗಣನೆ ವಿಧಾನದಲ್ಲಿ ದೇಶದಲ್ಲಿನ ಉತ್ಪನ್ನ ಮತ್ತು ಸೇವೆಗಳಿಂದ ದೊರೆಯುವ ಗಳಿಕೆ ಮತ್ತು ತೆರಿಗೆಯ ಲೆಕ್ಕವಿರುತ್ತದೆ. ಅದರ ಸೂತ್ರ: ಜಿಡಿಪಿ = GVA (ಅಂದ್ರೆ, ಸರಕು ಮತ್ತು ಸೇವೆಗಳ ಮೌಲ್ಯ) + ನಿವ್ವಳ ತೆರಿಗೆ

ವೆಚ್ಚ ಪರಿಗಣನೆ ವಿಧಾನದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳ ವೆಚ್ಚ, ಷೇರುಗಳು, ಬಂಗಾರ, ರಫ್ತು ಮೌಲ್ಯದಲ್ಲಿನ ಬದಲಾವಣೆಗಳು ಒಳಗೊಳ್ಳುತ್ತವೆ. ಮತ್ತಿದರಲ್ಲಿ ಆಮದು ಮೌಲ್ಯವನ್ನು ಕಳೆಯಲಾಗುತ್ತದೆ. ಅದರ ಸೂತ್ರ: ಜಿಡಿಪಿ = ಖಾಸಗಿ ವೆಚ್ಚ + ಸರ್ಕಾರದ ಖರ್ಚು + ಒಟ್ಟು ಸ್ಥಿರ ಬಂಡವಾಳ + ಷೇರು, ಬಂಗಾರದಂಥವುಗಳ ಮೌಲ್ಯದಲ್ಲಿನ ಬದಲಾವಣೆ + ರಫ್ತು – ಆಮದು.

ತಾತ್ವಿಕವಾಗಿ ಆದಾಯ ಮತ್ತು ಖರ್ಚು ಈ ಎರಡೂ ಸಮವಾಗಿರಬೇಕು.

ಏಕೆಂದರೆ ಇತರರು ಉತ್ಪನ್ನಗಳನ್ನು ಖರೀದಿಸಿದಾಗ ಮಾತ್ರ ಉತ್ಪಾದಕರು ಆದಾಯ ಗಳಿಸಬಹುದು.

ಆದರೆ ವಾಸ್ತವದಲ್ಲಿ ಆದಾಯ ಮತ್ತು ವೆಚ್ಚಗಳ ಅಂಕಿಅಂಶಗಳು ಎಲ್ಲ ದೇಶಗಳಲ್ಲಿಯೂ ಭಿನ್ನವಾಗಿರುತ್ತವೆ.

ಅಪೂರ್ಣ ಡೇಟಾವನ್ನು ಆಧರಿಸಿದ ಲೆಕ್ಕಾಚಾರ ಇದಕ್ಕೆ ಕಾರಣ.

ಈ ಕೊರತೆಯ ಕಾರಣಕ್ಕೆ, ಅದನ್ನು ಮರೆಮಾಚಿ ಎರಡನ್ನೂ ಸರಿದೂಗಿಸಲು ಎನ್ ಎಸ್ ಒ ಸಾಮಾನ್ಯವಾಗಿ ಆದಾಯ ಪರಿಗಣನೆ ಮೂಲಕ ಜಿಡಿಪಿಯನ್ನು ಲೆಕ್ಕ ಹಾಕುತ್ತದೆ. ಅದು ವೆಚ್ಚಕ್ಕಿಂತ ಹೆಚ್ಚಿರುತ್ತದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆದಾಯ 40,37,144 ಕೋಟಿ ರೂ. ಆಗಿರುವುದರಿಂದ ಜಿಡಿಪಿ ಬೆಳವಣಿಗೆ ದರ ಶೇ.7.8 ಎಂದು ತೋರಿಸುತ್ತಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಇದು 37,44,285 ಕೋಟಿ ರೂ. ಇತ್ತು.

ಆದರೆ ಜಿಡಿಪಿಯನ್ನು ವೆಚ್ಚದ ಪರಿಗಣನೆ ಮೂಲಕ ಲೆಕ್ಕಹಾಕಿದರೆ, 39,23,126 ಕೋಟಿ ರೂ. ಅಂದರೆ ಕೇವಲ ಶೇ.1.4ರಷ್ಟು ಹೆಚ್ಚಿದೆ.

ಕಳೆದ ವರ್ಷ 38,70,737 ಕೋಟಿ ರೂ. ಇತ್ತು. ಸಾಮಾನ್ಯವಾಗಿ, ಬೆಳವಣಿಗೆಯ ದರಗಳನ್ನು ಲೆಕ್ಕ ಹಾಕಲು ಆದಾಯ ಮತ್ತು ವೆಚ್ಚದ ವ್ಯತ್ಯಾಸ ಅಷ್ಟೊಂದು ಮುಖ್ಯವಾಗುವುದಿಲ್ಲ. ಏಕೆಂದರೆ ಆದಾಯ ಮತ್ತು ವೆಚ್ಚಗಳು ಸ್ವಲ್ಪ ಭಿನ್ನವಾಗಿದ್ದರೂ ಒಂದೇ ರೀತಿಯಲ್ಲಿರುತ್ತವೆ.

ಆದರೆ ಒಮ್ಮೊಮ್ಮೆ ಮಾತ್ರ ಎರಡರ ನಡುವೆ ಅಂತರ ಹೆಚ್ಚಿರುತ್ತದೆ. ಹಾಗಾದಾಗ, ಆರ್ಥಿಕತೆ ಮೌಲ್ಯಮಾಪನದ ಮೇಲೆ ಭಾರೀ ಪರಿಣಾಮ ಉಂಟಾಗುತ್ತದೆ. ಈ ವರ್ಷ ತಲೆದೋರಿರುವುದೂ ಇದೇ ಸಮಸ್ಯೆ. ಆದಾಯ ಮತ್ತು ವೆಚ್ಚ ಎರಡನ್ನೂ ಪರಿಗಣಿಸುವುದು ಸರಿಯಾದ ವಿಧಾನ.

ಆದಾಯ ಮತ್ತು ಖರ್ಚು ಎರಡನ್ನೂ ಆರ್ಥಿಕತೆ ಲೆಕ್ಕಾಚಾರದ ಭಾಗವಾಗಿ ಗುರುತಿಸುವುದು ಮತ್ತು ಆರ್ಥಿಕತೆಯನ್ನು ನಿರ್ಣಯಿಸಲು ಅವುಗಳನ್ನು ಒಟ್ಟುಗೂಡಿಸುವುದು ಸೂಕ್ತ ಕ್ರಮ.

ಆದಾಯ ಮತ್ತು ವೆಚ್ಚ ಎರಡನ್ನೂ ಪರಿಗಣಿಸುವ ವಿಧಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಢಿಯಲ್ಲಿದೆ. ಆಸ್ಟ್ರೇಲಿಯ, ಜರ್ಮನ್ ಮತ್ತು ಬ್ರಿಟನ್ ಸರ್ಕಾರಗಳು ಆದಾಯ ಮತ್ತು ವೆಚ್ಚಗಳೆರಡರಿಂದಲೂ ಮಾಹಿತಿಯನ್ನು ಬಳಸಿಕೊಂಡು ಜಿಡಿಪಿಯನ್ನು ತೋರಿಸುತ್ತವೆ.

ಅಮೆರಿಕ ತನ್ನ ಆರ್ಥಿಕತೆಯನ್ನು ಲೆಕ್ಕಹಾಕುವ ಪ್ರಾಥಮಿಕ ಆಧಾರವಾಗಿ ವೆಚ್ಚವನ್ನು ಪರಿಗಣಿಸುತ್ತದೆ. ಆದರೆ ಭಾರತದಲ್ಲಿ ಆದಾಯವನ್ನು ಪರಿಗಣಿಸಲಾಗುತ್ತದೆ. ಆದಾಯವನ್ನು ಮಾತ್ರ ಪರಿಗಣಿಸುವ ಎನ್ಎಸ್ಒ ವಿಧಾನ ಅಂತಾರಾಷ್ಟ್ರೀಯವಾಗಿ ಬಳಕೆಯಲ್ಲಿರುವ ರೂಢಿಯ ಸ್ಪಷ್ಟ ಉಲ್ಲಂಘನೆ.

ಆದಾಯ ಮತ್ತು ವೆಚ್ಚದ ನಡುವೆ ವ್ಯತ್ಯಾಸವಿರುವುದನ್ನು ಮತ್ತು ಡೇಟಾದ ಅಪೂರ್ಣತೆಯನ್ನು ಒಪ್ಪಿಕೊಳ್ಳಬೇಕೇ ಹೊರತು, ಅದನ್ನು ಮರೆಮಾಚುವುದಲ್ಲ ಎಂಬುದು ಅಶೋಕ ಮೋದಿಯವರ ವಾದ. ಅನೇಕ ಭಾರತೀಯರು ಕಷ್ಟದಲ್ಲಿರುವಾಗ ಮತ್ತು ವಿದೇಶಿಗಳಿಂದ ಭಾರತೀಯ ಸರಕುಗಳಿಗೆ ಸೀಮಿತ ಬೇಡಿಕೆ ಇರುವಾಗ, ವೆಚ್ಚದಲ್ಲಿ ಏರಿಕೆಯಾಗದಿರುವ ಕಟು ವಾಸ್ತವವನ್ನು ಎನ್ಎಸ್ಒ ಮುಚ್ಚಿಡುತ್ತಿದೆ ಎಂಬುದು ಅವರ ತಕರಾರು.

ಅಶೋಕ ಮೋದಿಯವರ ಈ ಲೆಕ್ಕಾಚಾರ ಹಾಗು ವಾದವನ್ನು ಭಾರತದ ಎಲ್ಲ ಆರ್ಥಿಕ ತಜ್ಞರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಬೆಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಇಕಾನಾಮಿಕ್ಸ್ ಯುನಿವರ್ಸಿಟಿಯ ಉಪಕುಲಪತಿ ಎನ್ ಆರ್ ಭಾನುಮೂರ್ತಿ ಪ್ರಕಾರ " ಭಾರತ ವಿಶ್ವಸಂಸ್ಥೆ ಅಂಗೀಕೃತ ನ್ಯಾಷನಲ್ ಅಕೌಂಟ್ಸ್ ೨೦೦೮ ನ್ನು ಅನುಸರಿಸುತ್ತಿದೆ. ಈ ತ್ರೈಮಾಸಿಕ ಅಭಿವೃದ್ಧಿ ದರಗಳಲ್ಲಿ ಕಂಡು ಬರುವ ಈ ಸಮಸ್ಯೆ ಹೊಸತೂ ಅಲ್ಲ, ಕೇವಲ ಭಾರತಕ್ಕೆ ಸೀಮಿತವೂ ಅಲ್ಲ. ಅಭಿವೃದ್ಧಿಯ ತ್ರೈಮಾಸಿಕ ಲೆಕ್ಕಾಚಾರದಲ್ಲಿ ಅದರದ್ದೇ ಆದ ರಿಸ್ಕ್ ಗಳಿವೆ " .

ಜಿ20 ನಾಯಕರ ಎದುರಿನಲ್ಲಿ ದೆಹಲಿಯನ್ನು ವೈಭವಯುತವಾಗಿ ತೋರಿಸಲು ಬಡವರು, ದುರ್ಬಲರನ್ನೆಲ್ಲ ದೂರ ಅಟ್ಟಿ, ಕೊಳೆಗೇರಿಗಳನ್ನು ಹಸಿರು ಹೊದಿಕೆಯಿಂದ ಮರೆಮಾಚಿ, ಬೀದಿಬದಿ ವ್ಯಾಪಾರಿಗಳನ್ನು ಕೂಡ ಹೊದಿಕೆಯಡಿ ಅಡಗಿಸಿರುವ ಮೋದಿ ಸರ್ಕಾರ, ಜಿಡಿಪಿಯಂಥ ಆರ್ಥಿಕತೆ ಮೌಲ್ಯಮಾಪನದ ವಿಚಾರದಲ್ಲಿಯೂ ಅದೇ ಹಸಿರು ಹೊದಿಕೆ ಹಾಕುವ ಕೆಲಸ ಮಾಡಿತೆ ? ಆ ಬಗ್ಗೆ ಮುಕ್ತ ಚರ್ಚೆ ಆಗಬೇಕಿದೆ.

ತಾನು ಮಾತ್ರವೇ ವಿಜೃಂಭಿಸಬೇಕೆನ್ನುವ ಮೋದಿ ಸರ್ಕಾರ, ತನಗೆ ಅಪಥ್ಯವಾಗುವ ಎಲ್ಲವನ್ನೂ ಮರೆಮಾಚುತ್ತಲೇ ಬಂದಿದೆ ಅಥವಾ ನಿರಾಕರಿಸುತ್ತಲೇ ಬಂದಿದೆ. ಅದು ನೆಹರು ಕಾಲದ ಅಮೋಘ ಸಾಧನೆಗಳನ್ನು ನಿರಾಕರಿಸುತ್ತದೆ. ಈ ದೇಶದ ವೈವಿಧ್ಯತೆಯನ್ನು ಕಾಣಿಸುವ ಇತಿಹಾಸವನ್ನು ನಿರಾಕರಿಸುತ್ತದೆ. ಮತ್ತು ಎಲ್ಲ ಸತ್ಯಗಳನ್ನೂ ಮರೆಮಾಚುತ್ತದೆ.

ದೇಶದ ಆರ್ಥಿಕ ಸ್ಥಿತಿಯ ಚಿತ್ರವನ್ನು ಕೊಡುವಾಗಲೂ ಅದೇ ಕೆಲಸವನ್ನು ಮಾಡುತ್ತಿದೆ, ಈ ದೇಶದ ಬಡವರನ್ನು, ಬಡತನವನ್ನು ಅಡಗಿಸಿಡುತ್ತ, ತಾನು ಮೆರೆಯಲು ಅನುಕೂಲವಾಗುವ ಸುಳ್ಳುಗಳನ್ನು ಮಾತ್ರವೇ ಮುಂದೆ ಮಾಡುತ್ತಿದೆ ಎಂದು ಹಿರಿಯ ತಜ್ಞರು ಆಧಾರ ಸಮೇತ ಹೇಳುತ್ತಿರುವಾಗ ಆ ಬಗ್ಗೆ ಗಂಭೀರ ಚರ್ಚೆ ಆಗಬೇಕಲ್ಲವೇ ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!