ಜನರಿಗೆ ದ್ರೋಹ ಮಾಡಿದವರನ್ನು ವಾಪಸ್ ಕರೆಸಿಕೊಳ್ಳುವ ಅನಿವಾರ್ಯತೆ ಏನು ?
ಅವತ್ತು ಮಂತ್ರಿಗಿರಿಗಾಗಿ ಬಿಜೆಪಿ ಹಿಂದೆ ಓಡಿದ್ದರು. ಈಗ ಪುತ್ರರ ರಾಜಕೀಯ ಭವಿಷ್ಯಕ್ಕಾಗಿ ಮರಳಿ ಕಾಂಗ್ರೆಸ್ ಬಾಗಿಲಲ್ಲಿ ನಿಂತಿದ್ದಾರೆ. ಇಂಥವರನ್ನು ಕರೆದು ಮಣೆ ಹಾಕುವುದು ಕಾಂಗ್ರೆಸ್ ಗೆ ಎಷ್ಟರ ಮಟ್ಟಿಗೆ ಶೋಭೆ ತರಲಿದೆ?. ಆಪರೇಷನ್ ಹಸ್ತ ಚರ್ಚೆ ಜೋರಾಗಿರುವ ಹೊತ್ತಿನಲ್ಲಿ ಇಂಥದೊಂದು ಪ್ರಶ್ನೆಯನ್ನು ಎತ್ತಲೇಬೇಕಾಗಿದೆ. ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ಮತ ಹಾಕಿದ ಜನ ಇವತ್ತು ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
ಯಾಕೆಂದರೆ, ಅಂದು ಇವರು ತಮ್ಮ ಸ್ವಾರ್ಥಕ್ಕೋಸ್ಕರ ಬಿಜೆಪಿಯ ಬೆನ್ನ ಹಿಂದೆ ನಿಂತು, ಇಲ್ಲಿದ್ದ ಕಾಂಗ್ರೆಸ್ - ಜೆಡಿಎಸ್ ಸರಕಾರ ಉರುಳಿಸಿದರು. ಆಮೇಲೆ ರಾಜ್ಯದಲ್ಲಿ ಅತ್ಯಂತ ಜನವಿರೋಧಿ ಸರ್ಕಾರ ಬರಲು ಕಾರಣರಾದರು. ಇಂಥವರನ್ನು ಮತ್ತೆ ಕರೆದುಕೊಳ್ಳುವ ಮೂಲಕ ಕಾಂಗ್ರೆಸ್ ಕೂಡ ಅಂಥದೇ ಜನವಿರೋಧಿ ಹೆಜ್ಜೆ ಇಡಲಿದೆಯೆ?.
ಈಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ, ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಮತ್ತೆ ಕಾಂಗ್ರೆಸ್‌ಗೆ ಮರಳಲು ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ. ಹಾಗಂತ ಅವರೇನೂ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬರುತ್ತಿಲ್ಲ. ಈಗ ಕಾಂಗ್ರೆಸ್ ಕಡೆ ಮುಖ ಮಾಡಲು ಮುಖ್ಯ ಕಾರಣ, ಅವರಿಗೆ ಈಗ ತಮ್ಮ ಪುತ್ರರ ರಾಜಕೀಯ ಭವಿಷ್ಯವನ್ನು ರೂಪಿಸುವ ಅಗತ್ಯ ಬಿದ್ದಿರುವುದು. ಹೇಗಾದರೂ ಮಾಡಿ ಪುತ್ರ ನಿಶಾಂತ್ ವಿಧಾನಸಭೆ ಚುನಾವಣೆಯ ಅಭ್ಯರ್ಥಿಯಾಗುವಂತೆ ಮಾಡಬೇಕೆಂಬುದು ಸೋಮಶೇಖರ್ ಉದ್ದೇಶ.
ಹಾಗೆಯೇ, ಪುತ್ರ ವಿವೇಕ್ ಗೆ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ದೊರಕಿಸುವ ಮೂಲಕ ರಾಜಕೀಯದಲ್ಲಿ ತಮ್ಮ ಕುಟುಂಬದ ವಾರಸುದಾರಿಕೆ ಮುಂದುವರಿಸುವತ್ತ ಹೆಬ್ಬಾರ್ ಆಸಕ್ತರಾಗಿದ್ದಾರೆ. ಆದರೆ, ಯಡಿಯೂರಪ್ಪ ಅವರಂಥ ನಾಯಕರನ್ನೇ ಬದಿಗೆ ಸರಿಸಿರುವ ಬಿಜೆಪಿ ವರಿಷ್ಠರು, ಅಧಿಕಾರಕ್ಕಾಗಿ ಸದಾ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡುವ ಈ ನಾಯಕರ ಆಸೆಗೆ ಇಂಬಾಗಿ ನಿಲ್ಲುವುದು ಸಾಧ್ಯವೆ?
ಈ ಅನುಮಾನ ಈ ಇಬ್ಬರು ನಾಯಕರನ್ನೂ ಕಾಡುತ್ತಿದೆ. ಹಾಗಾಗಿಯೇ ಅವರು ಆತಂಕದಲ್ಲಿ ಬಿದ್ದಿದ್ದಾರೆ. ತಮ್ಮ ಪುತ್ರರ ರಾಜಕೀಯ ಭವಿಷ್ಯಕ್ಕೆ ಬಿಜೆಪಿ ಬಾಗಿಲು ತೆರೆಯದಿದ್ದರೆ ಏನು ಗತಿ ಎಂಬುದು ಈಗ ಅವರೆದುರು ಇರುವ ಪ್ರಶ್ನೆ. ಹಾಗಾಗಿಯೇ. ಕಾಂಗ್ರೆಸ್ ಬಾಗಿಲನ್ನು ತಟ್ಟುವ ಪ್ರಯತ್ನದಲ್ಲಿ ಇಬ್ಬರೂ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ಉದ್ದೇಶ ಯಾವ ಜನಸೇವೆಯೂ ಅಲ್ಲ, ಇವರದು ಬಿಜೆಪಿ ವಿರೋಧೀ ಧೋರಣೆಯೂ ಅಲ್ಲ, ಕಾಂಗ್ರೆಸ್ ತತ್ವಗಳಲ್ಲಿ ನಂಬಿಕೆಯಿಟ್ಟು ಹಿಂತಿರುಗಿ ಬರಲು ಬಯಸುತ್ತಿರುವವರೂ ಅಲ್ಲ.
ಉದ್ದೇಶ ಒಂದೇ: ತಮ್ಮ ಪುತ್ರರ ರಾಜಕೀಯ ಭವಿಷ್ಯವನ್ನು ಭದ್ರಗೊಳಿಸುವುದು. ಬಿಜೆಪಿಯಲ್ಲಿ ಅದು ಆಗದೇ ಹೋದಲ್ಲಿ ಕಾಂಗ್ರೆಸ್ನಲ್ಲಿ ದಮ್ಮಯ್ಯ ಹಾಕಿಯಾದರೂ ಸಾಧ್ಯವಾಗಿಸಿಕೊಳ್ಳಬಹುದು ಎಂಬ ಹಳೇ ಸಲಿಗೆಯ ನಂಬಿಕೆಯೂ ಅವರಲ್ಲಿ ಇದ್ದಿರಲು ಸಾಕು. ಈ ಇಬ್ಬರೂ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದು ಶಾಸಕರಾಗಿ, ಸಚಿವರಾದ ನಂತರ ಅವರವರ ಕ್ಷೇತ್ರಗಳಲ್ಲಿ ಅವರ ಪುತ್ರರೇ ಹೆಚ್ಚು ದರ್ಬಾರು ನಡೆಸಿದ್ದರು ಎಂಬುದೂ ಗುಟ್ಟಿನ ವಿಚಾರವೇನಲ್ಲ. ಈಗ ಪುತ್ರರನ್ನು ಚುನಾವಣಾ ರಾಜಕೀಯಕ್ಕೆ ಇಳಿಸಿ, ಕುಟುಂಬದ ಹಿಡಿತ ಮುಂದುವರಿಸುವತ್ತ ಇಬ್ಬರೂ ಮನಸ್ಸು ಮಾಡಿದ್ದಾರೆ.
ಪುತ್ರರ ರಾಜಕೀಯ ಭವಿಷ್ಯ ರೂಪಿಸುವುದಕ್ಕಾಗಿ ಈ ಇಬ್ಬರೂ ನಾಯಕರು ತಾವು ಲೋಕಸಭೆಗೆ ಸ್ಪರ್ಧಿಸುವುದಕ್ಕೂ ರೆಡಿ, ಆದರೆ ತಮ್ಮ ಪುತ್ರರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ಸಿಗಬೇಕು ಎಂಬ ಷರತ್ತನ್ನು ಮುಂದಿಟ್ಟು ಆ ದಿಸೆಯಲ್ಲಿ ಕಾಂಗ್ರೆಸ್ ನಾಯಕರನ್ನು ಒಲಿಸುವ ಎಲ್ಲ ತಯಾರಿಯನ್ನೂ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇದೆಲ್ಲ ಒಂದೆಡೆಯಾದರೆ, ಇಂಥವರನ್ನು ಅಂದರೆ ಸ್ವಾರ್ಥ ರಾಜಕಾರಣ, ಕುಟುಂಬ ರಾಜಕಾರಣ ಮಾಡುವವರನ್ನು, ಆಮಿಷಕ್ಕೆ ಒಳಗಾಗುವವರನ್ನು ಕಾಂಗ್ರೆಸ್ ನಾಯಕರು ಮತ್ತೆ ಸೇರಿಸಿಕೊಳ್ಳಲಿದ್ದಾರೆಯೆ ಎಂಬುದು ಇನ್ನೊಂದೆಡೆ. ಈಗಾಗಲೇ ಇರುವ ವರದಿಗಳ ಪ್ರಕಾರ, ಕಾಂಗ್ರೆಸ್ ಬಿಟ್ಟು ಹೋಗಿ ಈಗ ಬಿಜೆಪಿಯಲ್ಲಿ ಶಾಸಕರಾಗಿರುವವರು ಕ್ಷೇತ್ರದ ಅಭಿವೃದ್ಧಿ, ಅನುದಾನ ವಿಚಾರ ಮೊದಲಾದ ನೆಪಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯ ಅವರನ್ನೂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತಲೇ ಇದ್ದಾರೆ.
ಎಸ್ ಟಿ ಸೋಮಶೇಖರ್ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ಈಗಾಗಲೇ ತಮ್ಮ ವಿರುದ್ಧ ಪಕ್ಷದವರೇ ಪಿತೂರಿ ನಡೆಸಿದ್ದಾಗಿ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಸೋಮಶೇಖರ್ ಅವರ ಮನವೊಲಿಕೆ ಯತ್ನವೂ ಬಿಜೆಪಿಯಲ್ಲಿ ನಡೆದಿದೆ ಎನ್ನಲಾಗಿದೆ. ಸೋಮಶೇಖರ್ ಯಾರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೋ ಅಂಥ ಇಬ್ಬರು ಯಶವಂತಪುರ ಮಂಡಲ ಮಟ್ಟದ ಮುಖಂಡರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ ಎಂಬ ಸುದ್ದಿಯೂ ಇದೆ.
ಇದಾದ ಮೇಲೆಯೂ ಸೋಮಶೇಖರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೇಲ್ನೋಟಕ್ಕೆ ಇದು ಅನುದಾನ ವಿಚಾರಕ್ಕಾಗಿ ಚರ್ಚಿಸಲು ಮಾಡಿದ ಭೇಟಿಯಾಗಿದೆ. ಈ ನಡುವೆ, ಸೋಮಶೇಖರ್ ಅವರನ್ನು ಪಕ್ಷಕ್ಕೆ ಕರೆತರುವ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ಅವರು ತನಗೆ ಒಪ್ಪಿಸಿರುವುದಾಗಿ ನೆಲಮಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಹೇಳಿಕೊಂಡಿದ್ದಾರೆ.
ಬಿಜೆಪಿಯಲ್ಲಿ ತಮಗೆ ಉಳಿಗಾಲ ಇಲ್ಲ, ಪಿತೂರಿ ನಡೆಯುತ್ತಿದೆ ಎಂದು ಸೋಮಶೇಖರ್ ಬೆಂಬಲಿಗರೂ ಹೇಳುತ್ತಿರುವುದಾಗಿ ಶ್ರೀನಿವಾಸ್ ಬಹಿರಂಗಪಡಿಸಿರುವುದು ವರದಿಯಾಗಿದೆ. ಇನ್ನು ಶಿವರಾಮ್ ಹೆಬ್ಬಾರ್ ಕೂಡ, ಕಾಂಗ್ರೆಸ್ಗೆ ಮರಳುವ ವಿಚಾರವನ್ನು ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ, ಬೆಂಗಳೂರಿನಲ್ಲಿ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳುವೆ ಎಂದು ಉತ್ತರ ಕನ್ನಡದಲ್ಲಿ ಮಾಧ್ಯಮಗಳಿಗೆ ತಿಳಿಸಿರುವುದು ಗೊತ್ತಾಗಿದೆ.
ಅದರರ್ಥ, ಅವರು ಕೂಡ ಒಂದು ಕಾಲನ್ನು ಪಕ್ಷದಿಂದ ಹೊರಗಿಟ್ಟಿದ್ದಾರೆ. ಆದರೆ ಅವರಿಗೂ ಸೋಮಶೇಖರ್ ಅವರಿಗೂ ಈಗ ಕಾಂಗ್ರೆಸ್ನಿಂದ ಸಿಗಬೇಕಿರುವ ಭರವಸೆ ಒಂದೇ. ಅದು, ಅವರ ಪುತ್ರರ ರಾಜಕೀಯ ಭವಿಷ್ಯದ ಕುರಿತದ್ದು. ಹಾಗಾದರೆ, ಬಾಂಬೇ ಬಾಯ್ಸ್ ಗುಂಪಿನ ಕೆಲವರನ್ನು, ಅದರಲ್ಲೂ ಈ ಇಬ್ಬರೂ ನಾಯಕರನ್ನು ಮತ್ತೆ ಸೇರಿಸಿಕೊಳ್ಳಲು ಕಾಂಗ್ರೆಸ್ ತಯಾರಾಗಿದೆಯೆ?
ಅವರು ಹೇಳಿದ್ದಕ್ಕೆಲ್ಲ ಹೂಂ ಎಂದು ಮರಳಿ ಸೇರಿಸಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ಗೆ ಬಂದಿದೆಯೆ?. ಅಂದು ಜನವಿರೋಧಿ ಸರ್ಕಾರ ಬರಲು ಕಾರಣರಾಗಿದ್ದ ಇವರನ್ನು ನಿಜವಾಗಿಯೂ ಮರಳಿ ಸೇರಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದೇ ಹೌದಾದರೆ, ಪಕ್ಷಕ್ಕೆ, ನಾಡಿಗೆ ದ್ರೋಹವೆಸಗಿದವರನ್ನೇ ವಾಪಸ್ ಕರೆದುಕೊಂಡ ಹಾಗಾಗುವುದಿಲ್ಲವೆ?
ಪ್ರಳಯವಾದರೂ ಪಕ್ಷ ಬಿಟ್ಟುಹೋದ 14 ಮಂದಿಯನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಲೇ ಬಂದಿದ್ದರು. ಯಾವುದೇ ಕಾರಣಕ್ಕೂ ಪಕ್ಷಕ್ಕೆ ಅವರ ಮರುಸೇರ್ಪಡೆ ಸಾಧ್ಯವಿಲ್ಲ ಎಂದೇ ಸಿದ್ದರಾಮಯ್ಯ ಹಿಂದೆ ಹಲವು ಬಾರಿ ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್ ಚುನಾವಣಾ ಪ್ರಚಾರದ ಉದ್ದಕ್ಕೂ ಇವರಿಂದಾದ ದ್ರೋಹದ ಬಗ್ಗೆ ಮತ್ತು ಬಿಜೆಪಿಯ ಜನವಿರೋಧಿ ಸರ್ಕಾರದ ಬಗ್ಗೆ ಖಡಕ್ ಆದ ಮಾತುಗಳಿದ್ದವು.
ಆ ಸ್ಪಷ್ಟತೆ ಮತ್ತು ಅದೇ ಬದ್ಧತೆ ಈಗಲೂ ಕಾಂಗ್ರೆಸ್ಗೆ ಇದ್ದಲ್ಲಿ, ಇಂಥ ನಾಯಕರನ್ನು ಮರಳಿ ಸೇರಿಸಿಕೊಳ್ಳುವ ವಿಚಾರದಲ್ಲಿ ಅದು ಗಂಭೀರವಾಗಿ ಯೋಚಿಸಿ ಹೆಜ್ಜೆಯಿಡಬೇಕಾಗಿದೆ. ಯಾರು ಅಂದು, ಇದ್ದ ಸರ್ಕಾರದ ಪತನಕ್ಕೆ ಕಾರಣವಾಗಿ ಜನವಿರೋಧಿ ಸರ್ಕಾರವೊಂದು ಬರಲು ಕಾರಣರಾದರೊ ಅಂಥವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವ ತಯಾರಿ ನಡೆದಿರೋದೇ ನಿಜವಾಗಿದ್ದಲ್ಲಿ ಅದು ರಾಜಕಾರಣದಲ್ಲಿ ಸಾಮಾನ್ಯ ಸಂಗತಿ ಎನ್ನಿಸಿದರೂ, ಯಾವುದರ ವಿರುದ್ಧ ತಾವು ಹೋರಾಡಿ ಈ ಚುನಾವಣೆಯನ್ನು ಗೆದ್ದೆವು ಎಂಬುದನ್ನು ಕಾಂಗ್ರೆಸ್ ನಾಯಕರು ಮರೆಯಬಾರದು.
ಈಗ ಲೋಕಸಭಾ ಚುನಾವಣೆ ಗೆಲ್ಲಲು ಈ ಜನದ್ರೋಹಿ ನಾಯಕರ ಆಸರೆ ಪಡೆಯುವುದು ಅವರಿಲ್ಲದೆಯೇ ತಮ್ಮನ್ನು ಆಶೀರ್ವದಿಸಿ ಅಧಿಕಾರ ದೊರಕಿಸಿ ಕೊಟ್ಟ ಕನ್ನಡಿಗರಿಗೆ ಮಾಡುವ ದ್ರೋಹವಲ್ಲವೇ ?. ಹಾಗೆ ಒಂದು ವೇಳೆ ಮರೆತು, ಜನಮತಕ್ಕೆ ದ್ರೋಹವೆಸಗಿದ್ದವರಿಗೆ ಮತ್ತೆ ಮಣೆ ಹಾಕಿದರೆ ಅದು ಈಗ ಕಾಂಗ್ರೆಸ್ ಜನರಿಗೆ ಎಸಗಬಹುದಾದ ದ್ರೋಹವಾಗುವುದಿಲ್ಲವೆ?
ಕಾಂಗ್ರೆಸ್ ನಲ್ಲಿ ಮೊದಲೇ ವಂಶ ಪಾರಂಪರ್ಯ ರಾಜಕಾರಣ ಮೆರೆಯುತ್ತಿದೆ. ಲೋಕಸಭಾ ಚುನಾವಣೆಗೂ ಹಲವು ನಾಯಕರ ಮಕ್ಕಳು ಟಿಕೆಟ್ ಲಾಬಿ ನಡೆಸುತ್ತಿದ್ದಾರೆ. ಇದು ಪಕ್ಷಕ್ಕಾಗಿ ದಶಕಗಳಿಂದ ದುಡಿದ ಕಾರ್ಯಕರ್ತರಿಗೆ ತೀವ್ರ ನಿರಾಶೆ ತಂದಿದೆ. ತಾವು ವರ್ಷಗಟ್ಟಲೆ ದುಡಿದರೂ ಒಬ್ಬರು ಶಾಸಕರು ನಿವೃತ್ತರಾಗುವಾಗ ಅವರ ಮಗ ಅಥವಾ ಮಗಳೇ ಬಂದು ಅಲ್ಲಿ ಶಾಸಕರಾಗ್ತಾರೆ ಅನ್ನೋ ಸಂದೇಶ ರವಾನೆಯಾದ್ರೆ ಅದು ಯಾವ ಪಕ್ಷಕ್ಕೂ ಒಳಿತಲ್ಲ.
ಕಾಂಗ್ರೆಸ್ ವಿಧಾನಸಭಾ ಚುನಾವಣೆಯನ್ನು ಗೆದ್ದಿರುವುದು ಅದರ ಕಾರ್ಯಕರ್ತರ ಶ್ರಮ ಹಾಗು ಕನ್ನಡಿಗರ ಆಶೀರ್ವಾದದಿಂದ. ಆಗ ಈ ಜನದ್ರೋಹಿ ನಾಯಕರೆಲ್ಲರೂ ಬಿಜೆಪಿಯಲ್ಲಿದ್ದರು. ಕಾಂಗ್ರೆಸ್ ಬಗ್ಗೆ, ಕಾಂಗ್ರೆಸ್ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದರು. ಈಗ ಜನರೇ ಭರ್ಜರಿ ಬಹುಮತ ಕೊಟ್ಟು ಸರಕಾರ ತಂದ ಮೇಲೆ ಪುನಃ ನಾವು ಅದೇ ಜನದ್ರೋಹಿಗಳನ್ನು ವಾಪಸ್ ಕರೆಸಿಕೊಳ್ಳುತ್ತೇವೆ, ಅವರಿದ್ದರೆ ನಮಗೆ ಮುಂದಿನ ಚುನಾವಣೆ ಗೆಲ್ಲಲು ಅನುಕೂಲವಾಗುತ್ತೆ ಅಂತ ಕಾಂಗ್ರೆಸ್ ಹೇಳೋದು ಈ ನಾಡಿನ ಜನರಿಗೆ ಮಾಡುವ ದ್ರೋಹವಾಗುತ್ತದೆ.
ಈ ಬಾಂಬೆ ಬಾಯ್ಸ್ ನಿಂದಾಗಿ ಬಂದ ಬಿಜೆಪಿ ಸರ್ಕಾರ ಈ ರಾಜ್ಯದಲ್ಲಿ ಮಾಡಿರುವ ರಾದ್ಧಾಂತ ಒಂದೆರಡಲ್ಲ. ಸರಣಿ ಭ್ರಷ್ಟಾಚಾರ, ಕೋಮುವಾದ, ಕಾನೂನು ಸುವ್ಯವಸ್ಥೆ ಕುಸಿತ, ಜನರ ಬವಣೆ, ಸಮಾಜದಲ್ಲಿ ಅಶಾಂತಿ ಹೀಗೆ ಈ ನಾಡಿನ ಜನರಿಗೆ ಬಹಳ ಕಾಟ ಕೊಟ್ಟ ಸರಕಾರ ಅದು. ಆ ಸರಕಾರದ ಪ್ರತಿಯೊಂದು ಪ್ರಮಾದಗಳ ಹೊಣೆಯನ್ನು ಈ ಬಾಂಬೆ ಬಾಯ್ಸ್ ಶಾಸಕರೇ ಹೊರಬೇಕು. ಅವರು ಅಲ್ಲೇ ಇರಲು ಪ್ರತಿಯೊಂದು ರೀತಿಯಲ್ಲೂ ಫಿಟ್.
ಅವರು ದಿಢೀರನೆ ಕೈಕೊಟ್ಟು ಹೋದಾಗ ಅವರ ಕ್ಷೇತ್ರದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ. ಕಾಂಗ್ರೆಸ್ ಮತದಾರರು ಕಾಂಗ್ರೆಸ್ ಗೇ ಮತ ಹಾಕಿದ್ದಾರೆ. ಈಗ ಮತ್ತೆ ಅವರನ್ನೇ ಕರೆದುಕೊಂಡು ಬಂದು ಇವರೇ ನಿಮ್ಮ ನಾಯಕರು ಎಂದು ಹೇಳಿದರೆ ಅವರಿಗೆ ಅದೆಷ್ಟು ಅವಮಾನ ?
ಇನ್ನು ಅವರನ್ನು ಸಿದ್ದರಾಮಯ್ಯ ಅವರೇ ಬಿಜೆಪಿಗೆ ಕಳಿಸಿದ್ದರು ಎಂದು ಕುಮಾರಸ್ವಾಮಿಯವರು ಹಲವು ಬಾರಿ ಆರೋಪ ಮಾಡಿದ್ದಾರೆ. ಈಗ ಮತ್ತೆ ಅವರನ್ನು ಪಕ್ಷಕ್ಕೆ ಕರೆತಂದರೆ ಕುಮಾರಸ್ವಾಮಿ ಆರೋಪ ನಿಜವೇ ಎಂಬ ಪ್ರಶ್ನೆಯೂ ಜನರಲ್ಲಿ ಏಳಲಿದೆ. ಅವರನ್ನು ಮತ್ತೆ ಪಕ್ಷಕ್ಕೆ ಕರೆತಂದು ತಮ್ಮನ್ನು ಬೆಂಬಲಿಸಿದ ಜನರನ್ನು ಮುಜುಗರಕ್ಕೆ ಈಡು ಮಾಡುವ ಹೆಜ್ಜೆಯನ್ನು ಕಾಂಗ್ರೆಸ್ ಇಡಲೇ ಬಾರದು ಎಂಬುದು ಈ ನಾಡಿನ ಜನರ ಆಗ್ರಹ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗು ಕಾಂಗ್ರೆಸ್ ವರಿಷ್ಠರು ಇದನ್ನು ಗಂಭೀರವಾಗಿ ಯೋಚಿಸಬೇಕಿದೆ.