40-45 ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬುದರ ಮರ್ಮವೇನು ? | BL Santhosh
ರಾಜ್ಯದಲ್ಲಿ ಅಡ್ಡದಾರಿಯಿಂದ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಈಗ ಎಲ್ಲ ಕಳೆದುಕೊಂಡು ಕೂತಿದ್ದರೂ ಮತ್ತೊಮ್ಮೆ ಅಡ್ಡದಾರಿ ಹಿಡಿಯುವ ಹುನ್ನಾರದಲ್ಲಿದೆಯೆ?. ಅಥವಾ ಎದ್ದೇಳಲಾರದಂಥ ಹೊಡೆತ ತಿಂದು ಬಿದ್ದಿರುವ ಹತಾಶೆಯಲ್ಲಿ ಅದು ಒಳಗೊಳಗೇ ಒಡೆದು ಹೋಳಾಗುತ್ತಿದೆಯೆ?.
ಗುರುವಾರದ ಒಂದೆರಡು ವಿದ್ಯಮಾನಗಳು ಇಂಥ ಅನುಮಾನ ಮೂಡಲು ಕಾರಣವಾಗಿವೆ. ಅದೇನು ಎಂದು ನೋಡುವ ಮೊದಲು ಬಿಜೆಪಿ ರಾಜ್ಯದಲ್ಲಿ ಎಂಥ ದಿಕ್ಕೆಟ್ಟ ಸ್ಥಿತಿಯನ್ನು ಎದುರಿಸುತ್ತಿದೆ ಅನ್ನುವುದನ್ನು ಸ್ವಲ್ಪ ಗಮನಿಸಬೇಕು.
ಭಾರೀ ಬಹುಮತದೊಂದಿಗೆ ಗೆದ್ದ ಕಾಂಗ್ರೆಸ್ ಸರ್ಕಾರ ರಚಿಸಿ ನೂರು ದಿನಗಳೇ ದಾಟಿವೆ ಮತ್ತು ಅದು ತನ್ನ ಗ್ಯಾರಂಟಿ ಭರವಸೆಗಳನ್ನೂ ಈಡೇರಿಸಿದೆ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಆಡಿಕೊಂಡು ನಕ್ಕಿದ್ದ , ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸುವುದು ಸಾಧ್ಯವೇ ಇಲ್ಲ ಎಂದು ಜನರನ್ನು ಎತ್ತಿಕಟ್ಟಲು ಶತಪ್ರಯತ್ನ ಮಾಡಿದ್ದ ಬಿಜೆಪಿಗೆ ತನ್ನ ಕೆಲಸಗಳ ಮೂಲಕವೇ ಕಾಂಗ್ರೆಸ್ ಉತ್ತರಿಸಿದ್ದೂ ಆಗಿದೆ. ಆದರೆ ಅದೇ ಬಿಜೆಪಿಯ ಗತಿ ರಾಜ್ಯದಲ್ಲಿ ಯಾವ ಮಟ್ಟಕ್ಕೆ ಬಂದು ಮುಟ್ಟಿದೆ ?.
ಹೊಸ ಸರ್ಕಾರ ಬಂದು ನೂರು ದಿನಗಳು ದಾಟಿದ ನಂತರವೂ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಲ್ಲ. ಮೇಲ್ಮನೆಯಲ್ಲಿಯೂ ವಿರೋಧ ಪಕ್ಷದ ನಾಯಕನಿಲ್ಲ. ಪ್ರತಿಪಕ್ಷ ನಾಯಕನೇ ಇಲ್ಲದೆ ಅಧಿವೇಶನವೂ ನಡೆದುಹೋಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ, ಕರ್ನಾಟಕದ ಇತಿಹಾಸದಲ್ಲಿಯೇ ವಿಧಾನಸಭೆ ಪ್ರತಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆದದ್ದೇ ಇರಲಿಲ್ಲ. ಬಿಜೆಪಿಯಿಂದಾಗಿ ಅದೂ ಆಗಿಹೋಯಿತು. ಬಿಜೆಪಿಯ ದುರ್ಗತಿ, ಇನ್ನೂ ಪ್ರತಿಪಕ್ಷ ನಾಯಕನನ್ನು ಆರಿಸಿಕೊಳ್ಳಲು ಆಗಲಿಲ್ಲ ಎಂಬುದಕ್ಕಷ್ಟೆ ಸೀಮಿತವಾಗಿಲ್ಲ. ಅದರ ರಾಜ್ಯ ಘಟಕದ ಅಧ್ಯಕ್ಷರ ಅವಧಿ ಮುಗಿದೂ ಬಹು ಕಾಲವೇ ಆಯಿತು. ಪಕ್ಷಕ್ಕೊಬ್ಬ ನಾಯಕನೂ ಈವರೆಗೆ ಅದಕ್ಕೆ ಸಿಕ್ಕಿದಂತಿಲ್ಲ.
ಇದೆಂಥ ದುರ್ಗತಿ ಎಂದರೆ, ಒಂದು ಹಂತದಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿಯವರನ್ನೇ ಪ್ರತಿಪಕ್ಷ ನಾಯಕನೆಂದು ಒಪ್ಪಿಕೊಳ್ಳುವುದಕ್ಕೂ ಬಿಜೆಪಿ ಮುಂದಾಗಿತ್ತೆಂಬ ವದಂತಿಗಳಿದ್ದವು. ಈ ಎಲ್ಲ ಸಂಗತಿಗಳ ವಿಚಾರವಾಗಿ ಕಾಂಗ್ರೆಸ್ ಆಡಿಕೊಳ್ಳುವುದು ಹಾಗಿರಲಿ, ಬಹುಶಃ ಬಿಜೆಪಿಯ ರಾಜ್ಯ ನಾಯಕರೇ ಬೇಸತ್ತು ಹೋದಂತಿದೆ. ತಮ್ಮ ಮೇಲೆ ದೆಹಲಿ ನಾಯಕರು ನಂಬಿಕೆ ಕಳೆದುಕೊಂಡಿದ್ದಾರೆಯೆ ಎಂಬ ಭಯ ಮತ್ತು ಬೇಗುದಿ ಬಹುಶಃ ರಾಜ್ಯ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ಮೊನ್ನೆ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಾಗಲಂತೂ ರಾಜ್ಯದ ಘಟಾನುಘಟಿ ಬಿಜೆಪಿ ನಾಯಕರನ್ನು ಬೀದಿಯಲ್ಲೇ ನಿಲ್ಲಿಸಿದ್ದು ಇನ್ನಷ್ಟು ಅವಮಾನಕ್ಕೆ ಕಾರಣವಾಯಿತು. ಅದು ಒಳಗೊಳಗೇ ಅಸಮಾಧಾನದ ಹೊಗೆಗೂ ಸಣ್ಣ ಮಟ್ಟಿನ ಆಕ್ರೋಶಕ್ಕೂ ಕಾರಣವಾಗಿರುವ ಹಾಗಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ , ಹೈಕಮಾಂಡ್ ನಲ್ಲಿ ಪ್ರಭಾವೀ ನಾಯಕ ಬಿಎಲ್ ಸಂತೋಷ್ ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಒಂದು ಸಭೆ ನಡೆಸುತ್ತಾರೆ.
ಈ ಸಭೆ ಯಾಕಾಗಿ ? ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಅಭಿಯಾನಕ್ಕಾಗಿ. ಮತದಾರರ ಚೇತನ ಮಹಾಭಿಯಾನ ಎಂಬುದರ ಭಾಗವಾಗಿ ನಡೆದಿದ್ದ ಆ ಸಭೆಗೆ ರಾಜ್ಯ ಬಿಜೆಪಿಯ ಪ್ರಮುಖ ನಾಯಕರೇ ಗೈರಾಗಿದ್ದರು. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯಂಥ ನಾಯಕರೇ ಆ ಸಭೆಗೆ ಬಂದಿರಲಿಲ್ಲ .
ಯಡಿಯೂರಪ್ಪ, ಬೊಮ್ಮಾಯಿ ಮಾತ್ರವಲ್ಲ, ಹಿಂದೆ ಇದೇ ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ಗೆ ಕೈಕೊಟ್ಟು ಬಂದು ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳೂ ಆಗಿದ್ದ ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಥರದ ಹಲವು ನಾಯಕರೂ ಬಿಎಲ್ ಸಂತೋಷ್ ಸಭೆಗೆ ಕೈಕೊಟ್ಟಿದ್ದರು. ಬಿಜೆಪಿಯಿಂದ ಶೋಕಾಸ್ ನೊಟೀಸ್ ಪಡೆದು ಅಸಮಾಧಾನದಲ್ಲಿರುವ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಕೂಡ ಸಭೆಗೆ ಹಾಜರಾಗಿರಲಿಲ್ಲ. ಮಾಜಿ ಸಚಿವರಾದ ಸೋಮಣ್ಣ, ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರೂ ಇರಲಿಲ್ಲ.
ಈ ಸಭೆಯಲ್ಲಿ ಬಿಎಲ್ ಸಂತೋಷ್ ಆಡಿದ ಒಂದು ಮಾತು ಬಿಜೆಪಿಯನ್ನು ಇನ್ನಷ್ಟು ಅಪಹಾಸ್ಯಕ್ಕೆ ಈಡು ಮಾಡಿತು. "40-45 ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ, ದಿಲ್ಲಿಯ ಒಪ್ಪಿಗೆ ಸಿಕ್ಕರೆ ಒಂದು ದಿನದ ಕೆಲಸ" ಎಂಬ ಸಂತೋಷ್ ಹೇಳಿಕೆ ಅತ್ಯಂತ ಹಾಸ್ಯಾಸ್ಪದವಾಗಿ, ಒಂದು ಗೊಡ್ಡು ಬೆದರಿಕೆ ಮಾತ್ರವಾಗಿ ಕಂಡಿದ್ದು ಸುಳ್ಳಲ್ಲ.
ಅವರಿಗೆ ಸ್ವತಃ ಬಿಜೆಪಿ ಶಾಸಕರೊಂದಿಗೇ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ, ಇನ್ನು ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ಧಾರೆ ಎನ್ನುವುದು ಶತಮಾನದ ಜೋಕ್ ಎಂದು ಕಾಂಗ್ರೆಸ್ ಸರಿಯಾಗಿಯೇ ಕುಟುಕಿತು. ಮಾತ್ರವಲ್ಲ, ಮತ್ತೂ ಒಂದು ಸವಾಲನ್ನು ಕಾಂಗ್ರೆಸ್ ಹಾಕಿತು.
ಒಂದು ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ. ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲೆಸೆದರು. ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕ, ಮೇಲ್ಮನೆ ವಿಪಕ್ಷ ನಾಯಕನನ್ನು ಆರಿಸಿ ತೋರಿಸಲಿ ಎಂದೂ ಅವರು ಸವಾಲು ಹಾಕಿದರು.
ಚುನಾವಣೆಯ ತಂತ್ರಗಾರಿಕೆ ಮಕಾಡೆ ಮಲಗಿ ಹೀನಾಯ ಸೋಲು ಅನುಭವಿಸಿದಾಗ ಇದೇ ಸಂತೋಷ್ ಗಂಟು ಮೂಟೆ ಕಟ್ಟಿಕೊಂಡು ನಾಪತ್ತೆಯಾಗಿದ್ದರು. . ಸುಳ್ಳು ಹೇಳಿಕೊಂಡು ತಿರುಗುವ ಮೊದಲು ಸಂತೋಷ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಂಪರ್ಕ ಹಾಗೂ ವಿಶ್ವಾಸವನ್ನು ಹೊಂದಲು ಪ್ರಯತ್ನಿಸಲಿ ಎಂದು ಕಾಂಗ್ರೆಸ್ ತಿವಿದಿದೆ.
ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ಸಭೆ ನಡೆಸಬೇಕಿತ್ತು, ನೂತನ ರಾಜ್ಯಾಧ್ಯಕ್ಷರ ನೇಮಕಕ್ಕಾದರೂ ಸಭೆ ನಡೆಸಬೇಕಿತ್ತು. ಆದರೆ ಒಬ್ಬ ವ್ಯಕ್ತಿಯ ಪ್ರತಿಷ್ಠೆಯ ಹಪಹಪಿಯನ್ನು ಸಂತೈಸಲು ಸಭೆ ನಡೆಸಿದೆ, ಬಿಜೆಪಿಯ ಅಸಮಧಾನಿತರು ಈ ಸಭೆಯಿಂದ ದೂರ ಉಳಿಯುವ ಮೂಲಕ #BJPvsBJP ಕಿತ್ತಾಟ ಮತ್ತೊಮ್ಮೆ ಬಹಿರಂಗವಾಗಿದೆ ಹಾಗೂ ಬಿಎಲ್ ಸಂತೋಷ್ ಅವರಿಗೆ ನಯಾಪೈಸೆ ಕಿಮ್ಮತ್ತಿಲ್ಲ ಎಂಬುದು ಅನಾವರಣಗೊಂಡಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದಿಷ್ಟೂ ಒಂದು ಭಾಗವಾದರೆ, ಈ ವಿದ್ಯಮಾನವನ್ನೇ ಇನ್ನೂ ಒಂದು ನೆಲೆಯಲ್ಲಿ ನೋಡುವ ಅಗತ್ಯ ಇದೆ. ಕಾಂಗ್ರೆಸ್ ಹೇಳಿದ ಹಾಗೆ, ಅದರ ಶಾಸಕರು ತನ್ನ ಸಂಪರ್ಕದಲ್ಲಿರುವುದಾಗಿ ಸಂತೋಷ್ ಹೇಳಿರುವುದು ಒಂದು ಮಹಾ ಸುಳ್ಳಿನ ಹಾಗೆಯೇ ಕಾಣುತ್ತಿದ್ದರೂ, ಇದಕ್ಕಿಂತ ಬೇರೆ ಮರ್ಮವೇನಾದರೂ ಸಂತೋಷ್ ಮಾತಿನ ಹಿಂದೆ ಇದೆಯೆ ಎಂಬ ಅನುಮಾನವೂ ಏಳುತ್ತದೆ.
ಪ್ರಶ್ನೆಗಳೇನೆಂದರೆ, ಇಲ್ಲಿ ಯಾರಿಗೂ ಗೊತ್ತಿಲ್ಲದೇ ಇರೋದು ಏನಾದರೂ ಸಂತೋಷ್ ಅವರಿಗೆ ಗೊತ್ತಿದೆಯೇ?. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರವೇನಾದರೂ ನಡೆಯುತ್ತಿದೆಯೇ?. ಒಂದು ವೇಳೆ ಅಂಥ ಷಡ್ಯಂತ್ರವೊಂದು ತೆರೆಮರೆಯಲ್ಲಿ ನಡೆಯುತ್ತಿರುವುದೇ ಹೌದಾದರೆ ಸಂತೋಷ್ ಕೂಡ ಅದರಲ್ಲಿ ಶಾಮೀಲಾಗಿದ್ದಾರೆಯೇ?. ಈಗಾಗಲೇ ಗೊತ್ತಿರುವಂತೆ, ತೆಲಂಗಾಣದಲ್ಲಿ ಬಿಎಲ್ ಸಂತೋಷ್ ಮೇಲೆ ಅಲ್ಲಿನ ಬಿ ಆರ್ ಎಸ್ ಶಾಸಕರಿಗೆ ಲಂಚ ಕೊಟ್ಟು ಖರೀದಿಸಲು ಯತ್ನಿಸಿದ ಆರೋಪದಲ್ಲಿ ಕೇಸು ದಾಖಲಾಗಿತ್ತು.
ಹಾಗಿರುವಾಗ, ಅಂಥದೇ ತಂತ್ರಗಾರಿಕೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೂಡಲಾಗಿದೆಯೆ ಎಂಬ ಪ್ರಶ್ನೆ ಸಹಜ. ಸಂತೋಷ್ ಮಾತಿನ ಧಾಟಿ ಅದಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂತೋಷ್ ಅವರ ಯಾವ ದಾಳಗಳೂ ಫಲ ಕೊಡಲಿಲ್ಲ. ಬದಲಿಗೆ ಬಿಜೆಪಿಗೇ ತಿರುಗುಬಾಣ ಆದವು. ಬಿಜೆಪಿ ತನ್ನ ಚಾಣಾಕ್ಷ ನಡೆಗಳು ಎಂದು ಹೇಳಿಕೊಂಡದ್ದೆಲ್ಲ ಮುಗ್ಗರಿಸಿ ಮುಗ್ಗರಿಸಿ ಬಿದ್ದಿತ್ತು. ಸಂತೋಷ್ ಏಕಪಕ್ಷೀಯ ತೀರ್ಮಾನಗಳ ಬಗ್ಗೆ ಪಕ್ಷದಲ್ಲಿ ಒಳಗೊಳಗೇ ಭಾರೀ ಅಸಮಾಧಾನವೆದ್ದಿತ್ತು.
ಅಂಥ ಅಸಮಾಧಾನದ ಭಾಗವಾಗಿಯೇ ಬಿಜೆಪಿಯಿಂದ ಹೊರ ಬಿದ್ದು ಕಾಂಗ್ರೆಸ್ ಸೇರಿದ್ದವರು ಮಾಜಿ ಸಿಎಂ ಜಗದೀಶ್ ಶೆಟ್ಟರ್. ಪಕ್ಷದಿಂದ ಹೊರಬಿದ್ದ ಹೊತ್ತಲ್ಲಿಯೇ ಸಂತೋಷ್ ಬಗೆಗಿನ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದ ಶೆಟ್ಟರ್, ಈಗ ಮತ್ತೆ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಶೆಟ್ಟರ್ ಟೀಕೆ ನೇರವಾಗಿ ಸಂತೋಷ್ ಅವರ ಆಪರೇಷನ್ ಚಾಳಿಯನ್ನೇ ಕುರಿತು ಇರುವುದು, ಈಗಿನ ಸನ್ನಿವೇಶದಲ್ಲಿ ಬಹಳ ಮಹತ್ವ ಪಡೆದಿದೆ. ಸಂತೋಷ್ ಮಾಡಿಕೊಂಡು ಬಂದಿದ್ದೇ ಅದು ಎಂಬುದನ್ನು ಬಿಜೆಪಿಯಲ್ಲಿದ್ದ ಹಿರಿಯ ನಾಯಕರೊಬ್ಬರು ಈಗ ಬಹಿರಂಗವಾಗಿ ಹೇಳುತ್ತಿರುವುದು, ಇಡೀ ಬಿಜೆಪಿಯ ಕುತಂತ್ರವನ್ನೂ ಬಯಲು ಮಾಡುತ್ತಿದೆ.
ಬರೀ ಆಪರೇಶನ್ ಮಾಡಿ ಸರ್ಕಾರ ರಚನೆ ಮಾಡೋದಾ? ಬೆಳಗ್ಗೆಯಿಂದ ಸಾಯಂಕಾಲದವರೆಗೂ ಆಪರೇಶನ್ ಮಾಡುವುದೇ ಬಿಜೆಪಿಯ ಕೆಲಸ. ಇಡೀ ರಾಷ್ಟ್ರದಲ್ಲಿ ಆಪರೇಶನ್ ಮಾಡೋದು ಎಂದು ಕಟುವಾಗಿಯೇ ಶೆಟ್ಟರ್ ಟೀಕಿಸಿದ್ದಾರೆ. ನಾಳೆಯಿಂದಲೇ ಆಪರೇಶನ್ ಸ್ಟಾರ್ಟ್ ಮಾಡಲಿ. ಕಾಂಗ್ರೆಸ್‌ಗೆ 136 ಸೀಟ್ ಬಂದಿದೆ. ರಾಜ್ಯದಲ್ಲಿ ಗಟ್ಟಿ ಮುಟ್ಟಾದ ಸರ್ಕಾರವಿದೆ. ಯಾರು ರಾಜೀನಾಮೆ ಕೊಟ್ಟು ಹೋಗುತ್ತಾರೆ ನೋಡೋಣ ಎಂದು ಅವರು ಸವಾಲೆಸೆಯುವ ಹಾಗೆ ಹೇಳಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿರುವ ಬಿಜೆಪಿ, ಮುಳುಗುತ್ತಿರುವ ಹಡಗಿನಂತಾಗಿದೆ. ಇದಕ್ಕೆ ಕಾರಣ ಬಿಜೆಪಿ ಕೆಲವೇ ಜನರ ಕೈಯಲ್ಲಿರೋದು ಎಂದು ಶೆಟ್ಟರ್ ನೇರವಾಗಿ ಸಂತೋಷ್ ಅವರನ್ನೇ ಟೀಕಿಸಿದ್ದಾರೆ.
ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದನ್ನು ಬಿಟ್ಟುಬಿಡಲಿ. ಪಕ್ಷದಲ್ಲಿರುವ ಶಾಸಕರು, ಮಾಜಿ ಶಾಸಕರನ್ನು ಉಳಿಸಿಕೊಳ್ಳಲಿ. ಅವರು ಬಿಜೆಪಿ ಅಸ್ತಿತ್ವ ಉಳಿಸಿಕೊಂಡರೆ ಸಾಕು ಎಂದಿದ್ದಾರೆ. ಒಂದೆಡೆ, ಬಿಜೆಪಿಗೆ ಕೈಕೊಟ್ಟು ಹಲವರು ಕಾಂಗ್ರೆಸ್ ಕಡೆಗೆ ಹೊಗಲಿದ್ದಾರೆ ಎಂಬ ಮಾತುಗಳಿರುವಾಗಲೇ, ಸಂತೋಷ್ 40-45 ಎಂಬ ನಂಬರ್ ವಿಚಾರ ತೇಲಿಬಿಟ್ಟಿರುವುದು ಸಣ್ಣ ಸಂಚಲನಕ್ಕೂ ಟೀಕೆಗೂ ಅಪಹಾಸ್ಯಕ್ಕೂ ಕಾರಣವಾಗಿದೆ.
ಅವರ ಶಾಸಕರೇ ಅವರ ಹಿಡಿತದಲ್ಲಿ ಇಲ್ಲದಿರುವ ಹೊತ್ತಲ್ಲಿನ ಸಂತೋಷ್ ಬಾಯಲ್ಲಿನ ಈ ನಂಬರ್ ಮಾತು ಷಡ್ಯಂತ್ರದ ಭಾಗವೊ ಅಥವಾ ಬಿಜೆಪಿ ಬತ್ತಳಿಕೆಯಲ್ಲಿ ಹೇರಳವಾಗಿರುವ ಬೊಗಳೆಗಳಲ್ಲಿ ಮತ್ತೊಂದೊ ಎಂಬುದು ಸದ್ಯಕ್ಕೆ ಪ್ರಶ್ನೆಯಾದರೂ, ರಾಜ್ಯ ಬಿಜೆಪಿಯ ಸ್ಥಿತಿ ಸಂತೋಷಮಯವಾಗಿಲ್ಲ ಎಂಬುದನ್ನು ಸ್ವತಃ ಸಂತೋಷ್ ಕೂಡ ಮರೆಮಾಚುವುದು ಸಾಧ್ಯವಿಲ್ಲ.