ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದ ಮೋದಿ
ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಬಂದು ಹೋಗಿದ್ದು ಈಗ ರಾಜ್ಯ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೊದಲೇ ರಾಜ್ಯ ಬಿಜೆಪಿ ಗೊಂದಲದ ಗೂಡಾಗಿದೆ. ಚುನಾವಣೆ ನಡೆದು ಹೊಸ ಸರಕಾರ ಬಂದು ತಿಂಗಳು ಮೂರು ಕಳೆದರೂ ಇನ್ನೂ ವಿಪಕ್ಷ ನಾಯಕನ ನೇಮಕವಾಗಿಲ್ಲ. ಒಂದು ಅಧಿವೇಶನವೂ ವಿಪಕ್ಷ ನಾಯಕನಿಲ್ಲದೆಯೇ ನಡೆದು ಹೋದ ವಿಚಿತ್ರ ದಾಖಲೆಗೆ ಬಿಜೆಪಿ ಕಾರಣವಾಯಿತು.
ಅತ್ತ ರಾಜ್ಯಾಧ್ಯಕ್ಷ ಸ್ಥಾನದ ಅವಧಿ ಮುಗಿದಿದ್ದರೂ ಹೊಸ ರಾಜ್ಯಾಧ್ಯಕ್ಷರ ನೇಮಕವೂ ಆಗಿಲ್ಲ. ಮೋದಿ, ಶಾ ಹೇಳದೆ ಈ ಎರಡೂ ಹುದ್ದೆಗಳಿಗೆ ನೇಮಕ ಅಂತಿಮವಾಗಲ್ಲ. ಆದರೆ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನಿಂದ ತೀವ್ರ ಸಿಟ್ಟಾಗಿರುವ ಮೋದಿ, ಶಾ ಜೋಡಿ ಕರ್ನಾಟಕ ಬಿಜೆಪಿ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮನಸ್ಸೇ ಮಾಡುತ್ತಿಲ್ಲ. ಹಾಗಾಗಿ ರಾಜ್ಯ ಬಿಜೆಪಿ ಪಾಲಿಗೆ ಈಗ ತ್ರಿಶಂಕು ಸ್ಥಿತಿ.
ಈ ನಡುವೆ ಬಿಜೆಪಿಗೆ ಕಾಂಗ್ರೆಸ್ ನಿಂದ ಬಂದು ಇಲ್ಲಿ ಶಾಸಕ , ಸಚಿವರೂ ಆಗಿದ್ದವರು ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿ ನಿಂತಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರೋ ಹೊತ್ತಲ್ಲಿ ಶಾಸಕರು ಕಾಂಗ್ರೆಸ್ ಸೇರಿದರೆ ಅದರಿಂದ ಭಾರೀ ನಷ್ಟ ಖಚಿತ. ಆದರೆ ಅವರನ್ನು ತಡೆಯೋದು ಹೇಗೆ ಎಂಬುದೇ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಯುತ್ತಿಲ್ಲ.
ಇಷ್ಟೆಲ್ಲಾ ಗೊಂದಲ ಸಾಲದು ಎಂಬಂತೆ ರಾಜ್ಯಕ್ಕೆ ಬಂದಿದ್ಧ ಪ್ರಧಾನಿ ಮೋದಿ ಅವರು ಬಿಜೆಪಿ ನಾಯಕರಿಗೆ ಭಾರೀ ಮುಜುಗರದ ಸ್ಥಿತಿ ತಂದಿಟ್ಟು ಹೋಗಿದ್ದಾರೆ. ಬುಧವಾರ ಇಸ್ರೋ ಚಂದ್ರಯಾನ 3 ಯಶಸ್ವಿಯಾದ ಬೆನ್ನಿಗೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ , ಸ್ಪೀಕರ್ ಯು ಟಿ ಖಾದರ್ ಸಹಿತ ರಾಜ್ಯದ ಗಣ್ಯರು ಇಸ್ರೋಗೆ ಭೇಟಿ ನೀಡಿ ಅಲ್ಲಿನ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಕೆಲವು ಕೇಂದ್ರ ಸಚಿವರೂ ಇಸ್ರೋಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದ ವೀಡಿಯೋಗಳು ವೈರಲ್ ಆಗಿದ್ದವು.
ಇಂತಹ ಮಹತ್ವದ ಸಂದರ್ಭಗಳಲ್ಲಿ ಅಲ್ಲೇ ಇದ್ದು ಭಾಷಣ ಮಾಡಿ ಟಿವಿಗಳಲ್ಲಿ ಮಿಂಚುವ ಪ್ರಧಾನಿ ಮೋದಿಯವರಿಗೆ ಈ ಬೆಳವಣಿಗೆ ಒಂದಿಷ್ಟು ಕಸಿವಿಸಿ ತಂದಿರಬಹುದು. ಜೋಹಾನ್ಸ್ ಬರ್ಗ್ ನಿಂದ ಅವರು ವಿಕ್ರಂ ಲ್ಯಾಂಡರ್ ಇಳಿಯುವಾಗಲೇ ನೇರ ಪ್ರಸಾರದಲ್ಲಿ ಬಂದು ಲ್ಯಾಂಡರ್ ಜೊತೆಗೇ ತಾವೂ ಕಾಣಿಸಿಕೊಂಡಿದ್ದರು. ಆದರೂ ಇಸ್ರೋಗೆ ತಾವು ಭೇಟಿ ನೀಡುವ ಮೊದಲೇ ಸಿಎಂ, ಡಿಸಿಎಂ ಹೋಗಿದ್ದು ಅವರಿಗೆ ಇರಿಸುಮುರುಸು ಉಂಟು ಮಾಡಿರುವ ಸಾಧ್ಯತೆ ಇದ್ದೇ ಇದೆ.
ಹಾಗಾಗಿ ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅಲ್ಲಿಂದ ನೇರವಾಗಿ ಬೆಂಗಳೂರಿಗೇ ಬೆಳ್ಳಂಬೆಳಗ್ಗೆ ಬಂದಿಳಿದಿದ್ದಾರೆ. ಅಷ್ಟೇ ಅಲ್ಲ, ಶಿಷ್ಟಾಚಾರದ ಪ್ರಕಾರ ನನ್ನನ್ನು ಸ್ವಾಗತಿಸಲು ಸಿಎಂ, ಡಿಸಿಎಂ, ರಾಜ್ಯಪಾಲರು ಬರೋದು ಬೇಡ ಎಂದೂ ಅವರೇ ಹೇಳಿಬಿಟ್ಟಿದ್ದಾರೆ.
ಎಲ್ಲಿವರೆಗೆಂದರೆ ಅವರು ಬರುವಾಗ ವಿಮಾನ ನಿಲ್ದಾಣದಲ್ಲಿದ್ದು ಸ್ವಾಗತಿಸಲು ರಾಜ್ಯ ಬಿಜೆಪಿಯ ಘಟಾನುಘಟಿ ನಾಯಕರಿಗೂ ಅವಕಾಶ ಕೊಟ್ಟಿಲ್ಲ. ಕೇವಲ ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿಯಂತಹ ಹಿರಿಯ ಅಧಿಕಾರಿಗಳು ಮಾತ್ರ ಪ್ರಧಾನಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ.
ವಿಮಾನ ನಿಲ್ದಾಣದಿಂದ ಇಸ್ರೋಗೆ ಹೋದ ಪ್ರಧಾನಿ ಅಲ್ಲಿ ಒಂದು ಗಂಟೆ ಕಳೆದು ವಿಜ್ಞಾನಿಗಳನ್ನು ಉದ್ದೇಶಿಸಿ ಭಾವನಾತ್ಮಕ ಭಾಷಣ ಮಾಡಿದ್ದಾರೆ. ಅವರನ್ನು ಹೃದಯ ತುಂಬಿ ಅಭಿನಂದಿಸಿದ್ದಾರೆ. ಆಮೇಲೆ ಹೇಗೂ ಬೆಂಗಳೂರಿಗೆ ಬಂದಾಗಿದೆ. ಜನ ನೋಡಲಿ ಎಂದು ಒಂದು ರೋಡ್ ಷೋ ಮಾಡಿದ್ದಾರೆ. ಆ ರೋಡ್ ಷೋ ಮಾಡುವಾಗಲಾದರೂ ತಮ್ಮ ಅಕ್ಕಪಕ್ಕ ರಾಜ್ಯ ಬಿಜೆಪಿ ನಾಯಕರನ್ನು ನಿಲ್ಲಿಸಿಕೊಂಡಿಲ್ಲ. ಇಂತಹ ಶೋಗಳಲ್ಲಿ ಹಾಗೆ ಅಕ್ಕಪಕ್ಕ ಬೇರೆ ನಾಯಕರನ್ನು ಪ್ರಧಾನಿ ನಿಲ್ಲಿಸೋದಿಲ್ಲ. ಆದರೆ ಸೌಜನ್ಯಕ್ಕೆ ಹತ್ತಿರ ಕರೆದು ಮಾತನಾಡಿಸಿಯೂ ಇಲ್ಲ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆರ್ ಅಶೋಕ್ ಸಹಿತ ಹಿರಿಯ ನಾಯಕರು ಬೀದಿಯಲ್ಲಿ ಬ್ಯಾರಿಕೇಡ್ ಗಳ ಆಚೆ ಜನಸಾಮಾನ್ಯರೊಂದಿಗೆ ನಿಂತು ಪ್ರಧಾನಿಗೆ ಕೈ ಬೀಸಿದ್ದಾರೆ. ಹೇಗಾದರೂ ಪ್ರಧಾನಿಯ ದೃಷ್ಟಿ ನಮ್ಮ ಮೇಲೆ ಬೀಳಲಿ ಎಂದು ಶಾಸಕ ಮುನಿರತ್ನ ಬ್ಯಾರಿಕೇಡ್ ನ ಮೇಲೆಯೇ ಹತ್ತಿ ನಿಲ್ಲಲು ಪ್ರಯತ್ನಿಸಿದ್ದೂ ಆಯಿತು.
ಕಾಂಗ್ರೆಸ್ ಗೆ ಇದು ಸುವರ್ಣಾವಕಾಶ ಒದಗಿಸಿದೆ. ಅದನ್ನು ಸಂಪೂರ್ಣ ಬಳಸಿಕೊಂಡ ಕಾಂಗ್ರೆಸ್ ನ ಎಲ್ಲ ಪ್ರಮುಖ ನಾಯಕರೂ ಬಿಜೆಪಿ ಮುಖಂಡರ ಕಾಲೆಳೆದಿದ್ದಾರೆ. ತಮಾಷೆ ಮಾಡಿದ್ದಾರೆ. ಅಯ್ಯೋ.. ನಿಮಗೆ ಇದೆಂತಹ ಪರಿಸ್ಥಿತಿ ಬಂದು ಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದೆಲ್ಲದರಿಂದ ರಾಜ್ಯ ಬಿಜೆಪಿ ನಾಯಕರಿಗೆ ಭಾರೀ ಅವಮಾನವಾಗಿದೆ. ಆದರೆ ಏನು ಮಾಡೋದು. ಎದುರಲ್ಲಿ ಇದ್ದಿದ್ದು ಪ್ರಧಾನಿ ಮೋದಿ. ಏನಾದರೂ ಹೇಳಲು ಸಾಧ್ಯವೇ ... ಉಹುಂ... ಏನೂ ಹೇಳಲೂ ಆಗದು, ಏನು ಮಾಡಲೂ ಆಗದು. ಅದಕ್ಕಾಗಿ ರಾಜ್ಯ ಬಿಜೆಪಿ ನಾಯಕರು ಏನೇನೋ ಹೇಳಿ ಬ್ಯಾರಿಕೇಡ್ ಆಚೆ ಬೀದಿಯಲ್ಲಿ ನಿಂತಿದ್ದನ್ನು ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. "ನಾವಿರೋದೇ ಜನರ ನಡುವೆ, ಅದು ನಮಗೆ ಹೆಮ್ಮೆ" ಅಂತ ಏನೇನೋ ನೆಪ ಹೇಳುತ್ತಿದ್ದಾರೆ.
ಹಾಗಾದರೆ ಈ ಹಿಂದೆಲ್ಲ ಪ್ರಧಾನಿ ಬಂದಾಗಲೂ ನೀವು ಹೀಗೇ ಜನರೊಂದಿಗೆ ಬೀದಿಯಲ್ಲಿ ನಿಲ್ತಾ ಇದ್ರಾ ಎಂದು ಕೇಳಿದರೆ ಅವರಲ್ಲಿ ಉತ್ತರವಿಲ್ಲ. ಇನ್ನು ಮುಂದೆಯೂ ಪ್ರಧಾನಿ ಬಂದಾಗ ಹಾಗೇ ನಿಲ್ತೀರಾ ಎಂದು ಕೇಳಿದರೂ ಅವರ ಪ್ರತಿಕ್ರಿಯೆ ಇಲ್ಲ. ರಾಜ್ಯ ಬಿಜೆಪಿ ನಾಯಕರಿಗೆ ಇಂತಹದೊಂದು ತೀರಾ ಇಕ್ಕಟ್ಟಿನ ಸ್ಥಿತಿಯನ್ನು ತಂದಿಟ್ಟು ಹೋಗಿದ್ದಾರೆ ಪ್ರಧಾನಿ ಮೋದಿ.
ಸಿಎಂ, ಡಿಸಿಎಂ, ರಾಜ್ಯಪಾಲರನ್ನು ಸ್ವಾಗತಕ್ಕೆ ಬರಬೇಡಿ ಎಂದು ಹೇಳಿದ್ದಾದ್ರೂ ಅರ್ಥ ಆಗುತ್ತೆ. ಆದರೆ ಪಕ್ಷದ ಮುಖಂಡರನ್ನೇ ಹತ್ತಿರ ಬಿಟ್ಟುಕೊಳ್ಳದ ಪ್ರಧಾನಿ ಮೋದಿ ರಾಜ್ಯದ ಜನರಿಗೆ ಅದೇನು ಸಂದೇಶ ಕೊಟ್ಟು ಹೋದರು ಎಂದು ರಾಜ್ಯ ಬಿಜೆಪಿ ಮುಖಂಡರು ಯೋಚಿಸುತ್ತಿದ್ದಾರೆ.
ಚುನಾವಣೆಯಲ್ಲಿ ಸೋತಿದ್ದಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಅಕ್ಕಿ ಮಾರಾಟಕ್ಕೆ ನಿರ್ಬಂಧ ಹಾಕಿದರು. ಬಿಜೆಪಿಯನ್ನು ಸೋಲಿಸಿದ್ದಕ್ಕೆ ಕನ್ನಡಿಗರ ಮೇಲೆಯೇ ಪ್ರಧಾನಿ ಮೋದಿ ಸೇಡು ತೀರಿಸಿಕೊಂಡರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಈಗ ನೋಡಿದ್ರೆ ಪ್ರಧಾನಿಗೆ ರಾಜ್ಯ ಬಿಜೆಪಿ ನಾಯಕರ ಮೇಲೂ ಅಷ್ಟೇ ಅಸಮಾಧಾನ ಇರೋ ಹಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕೇವಲ ರಾಜ್ಯ ಮುಖಂಡರು ಮಾತ್ರ ಕಾರಣವೇ ? ಪ್ರತಿ ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂದು ಯಾವುದಾದರೂ ಪಕ್ಷ ಗ್ಯಾರಂಟಿ ಹೇಳಲು ಸಾಧ್ಯವೇ ? ಅಷ್ಟಕ್ಕೂ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ಕೂಡ ಬಂದು ರಾಜ್ಯಾದ್ಯಂತ ಪ್ರಚಾರ ಮಾಡಿದ್ರಲ್ವಾ ?. ಹಾಗಾಗಿ ಕೇವಲ ರಾಜ್ಯ ಬಿಜೆಪಿ ನಾಯಕರ ಮೇಲೆ ಇಷ್ಟೊಂದು ಅಸಮಾಧಾನವೇಕೆ ಎಂದು ಕೇಳುತ್ತಿದ್ದಾರೆ ಕನ್ನಡಿಗರು.