ನೀಲ್ಸನ್ ಗ್ರೇಸ್‌ನೋಟ್ ಪ್ರಕಾರ ಭಾರತ ಟಾಪ್-30ಕ್ಕೆ ಏರಲಾರದು
ಹೊಸದಿಲ್ಲಿ, ಜು.23: ಭಾರತವು ಟೋಕಿಯೊ ಒಲಿಂಪಿಕ್ಸ್ನಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು ಸಹಿತ ಒಟ್ಟು ಏಳು ಪದಕಗಳನ್ನು ಜಯಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಒಲಿಂಪಿಕ್ಸ್ನಲ್ಲಿ ಇದೇ ಮೊದಲ ಬಾರಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಭಾರತವು ಪದಕಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಭಾರತವು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಟಾಪ್-50ಯಿಂದ ಟಾಪ್-30ಕ್ಕೇರುವ ವಿಶ್ವಾಸ ಇಡಲಾಗಿದೆ. ಆದರೆ, ಅಂಕಿ-ಅಂಶ ವಿಶ್ಲೇಷಣೆಯನ್ನು ಪೂರೈಸುವ ನೀಲ್ಸನ್ ಗ್ರೇಸ್‌ನೋಟ್ ಸ್ಪೋರ್ಟ್ಸ್ ಪ್ರಕಾರ ಭಾರತವು ಪದಕಪಟ್ಟಿಯಲ್ಲಿ ಅಗ್ರ-30ರಲ್ಲಿ ಸ್ಥಾನ ಪಡೆಯಲಾರದು.
ಒಲಿಂಪಿಕ್ ಗೇಮ್ಸ್ ನಲ್ಲಿ ಸಾಮಾನ್ಯವಾಗಿ ಪ್ರಾಬಲ್ಯ ಸಾಧಿಸುವ ಅಮೆರಿಕ ಗರಿಷ್ಠ ಪದಕಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಆದರೆ, ಹೆಚ್ಚು ಚಿನ್ನದ ಪದಕ ಗೆಲ್ಲುವ ಮೂಲಕ ಚೀನಾವು ಅಮೆರಿಕವನ್ನು ಹಿಂದಿಕ್ಕುವ ಸಾಧ್ಯತೆಯಿದೆ ಎಂದು ಗ್ರೇಸ್‌ನೋಟ್ ಭವಿಷ್ಯ ನುಡಿದಿದೆ.
ಅಮೆರಿಕವು 39 ಚಿನ್ನ, 32 ಬೆಳ್ಳಿ ಹಾಗೂ 41 ಕಂಚು ಸಹಿತ ಒಟ್ಟು 112 ಪದಕಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಮತ್ತೊಂದೆಡೆ ಚೀನಾವು 34 ಚಿನ್ನ, 27 ಬೆಳ್ಳಿ ಹಾಗೂ 25 ಕಂಚು ಸಹಿತ ಒಟ್ಟು 86 ಪದಕಗಳನ್ನು ಗೆಲ್ಲುವ ಸಾಧ್ಯತೆಯಿದೆ.
ಅಮೆರಿಕ ಹಾಗೂ ಚೀನಾದ ನಂತರ ಬ್ರಿಟನ್(ಒಟ್ಟು 63-17 ಚಿನ್ನ), ಫ್ರಾನ್ಸ್(ಒಟ್ಟು 60-27 ಚಿನ್ನ), ಆಸ್ಟ್ರೇಲಿಯ(ಒಟ್ಟು 54-15 ಚಿನ್ನ), ಜಪಾನ್(ಒಟ್ಟು 47, 13 ಚಿನ್ನ), ಇಟಲಿ(46-11), ಜರ್ಮನಿ(35-11), ನೆದರ್‌ಲ್ಯಾಂಡ್ಸ್(34-16), ದಕ್ಷಿಣ ಕೊರಿಯಾ(26-9) ಸ್ಥಾನ ಪಡೆಯುವ ಸಾಧ್ಯತೆಯಿದೆ.
ಕೊರೋನದಿಂದಾಗಿ 2021ಕ್ಕೆ ಮುಂದೂಡಲ್ಪಟ್ಟಿದ್ದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅಮೆರಿಕವು ಒಟ್ಟು ಪದಕ ಸಂಖ್ಯೆ ಹಾಗೂ ಚಿನ್ನದ ಪದಕ ಬೇಟೆಯಲ್ಲಿ ಅಗ್ರ ಸ್ಥಾನವನ್ನು ಪಡೆದಿತ್ತು. ಚೀನಾ 2ನೇ ಸ್ಥಾನ ಗಳಿಸಿತ್ತು.
ಗೆದ್ದ ಪದಕಗಳ ಒಟ್ಟು ಸಂಖ್ಯೆ ಹಾಗೂ ಇತರರು ಗಳಿಸಿದ ಚಿನ್ನದ ಪದಕಗಳ ಸಂಖ್ಯೆಯನ್ನು ಆಧರಿಸಿ ಗ್ರೇಸ್‌ನೋಟ್ ಶ್ರೇಯಾಂಕಗಳಿಗೆ ಆದ್ಯತೆ ನೀಡುತ್ತದೆ.
ಫ್ರಾನ್ಸ್ನಲ್ಲಿ ನಡೆಯುವ ಮುಂಬರುವ ಒಲಿಂಪಿಕ್ಸ್ನಲ್ಲಿ ಆತಿಥೇಯ ರಾಷ್ಟ್ರದ ಪದಕಗಳ ಸಂಖ್ಯೆಯು ಹೆಚ್ಚಾಗುವ ನಿರೀಕ್ಷೆ ಇದೆ. ಟೋಕಿಯೊ ಗೇಮ್ಸ್ಗಿಂತ ಮೂರು ಪಟ್ಟು ಹೆಚ್ಚು ಚಿನ್ನದ ಪದಕ ಗೆಲ್ಲಬಹುದು. ಪ್ಯಾರಿಸ್ ಒಲಿಂಪಿಕ್ಸ್ ಪದಕಗಳು ಅನನ್ಯವಾಗಿರಲಿದ್ದು ಇದು ಸಾಂಪ್ರದಾಯಿಕ ಐಫೆಲ್ ಟವರ್‌ನ ಸಣ್ಣ ಕಬ್ಬಿಣದ ತುಣಕನ್ನು ಒಳಗೊಂಡಿರುತ್ತದೆ.
2021ರಲ್ಲಿ ಟೋಕಿಯೊ ಒಲಿಂಪಿಕ್ಸ್ ಆತಿಥ್ಯವಹಿಸಿದ್ದ ಜಪಾನ್ 27 ಚಿನ್ನ ಸಹಿತ ಒಟ್ಟು 58 ಪದಕಗಳನ್ನು ಜಯಿಸಿ ದಾಖಲೆ ನಿರ್ಮಿಸಿತ್ತು. ಆದರೆ ಈ ಬಾರಿ ಜಪಾನ್‌ನ ಪದಕ ಸಂಖ್ಯೆಯು ಕಡಿಮೆಯಾಗುವ ಸಾಧ್ಯತೆಯಿದೆ.