ನಾಳೆಯಿಂದ (ಫೆ.23) ನಾಲ್ಕನೇ ಟೆಸ್ಟ್: ಭಾರತ-ಇಂಗ್ಲೆಂಡ್ ಗೆ ಗೆಲ್ಲುವ ತವಕ

Update: 2024-02-22 15:58 GMT

ಭಾರತ , ಇಂಗ್ಲೆಂಡ್ ತಂಡ | Photo: PTI 

ರಾಂಚಿ: ಜಾರ್ಖಂಡ್ ರಾಜಧಾನಿಯಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯವು ಭಾರತ ಹಾಗೂ ಇಂಗ್ಲೆಂಡ್ ತಂಡಗಳಿಗೆ ಮಹತ್ವದ್ದಾಗಿದ್ದು, ಉಭಯ ತಂಡಗಳು ಐದು ಪಂದ್ಯಗಳ ಸರಣಿಯಲ್ಲಿ ಮೇಲುಗೈ ಸಾಧಿಸುವತ್ತ ಚಿತ್ತಹರಿಸಿವೆ.

ಕೆಲಸದ ಒತ್ತಡ ಕಡಿಮೆ ಮಾಡಲು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ಟೀಮ್ ಮ್ಯಾನೇಜ್ಮೆಂಟ್ ವಿಶ್ರಾಂತಿ ನೀಡಿದ್ದು, ಬುಮ್ರಾ ಅನುಪಸ್ಥಿತಿಯು ಭಾರತೀಯ ಕ್ರಿಕೆಟ್ ತಂಡಕ್ಕೆ ಸವಾಲಾಗಿ ಪರಿಣಮಿಸಿದೆ. ಸರಣಿಯ ಮೊದಲ 3 ಪಂದ್ಯಗಳಲ್ಲಿ ಒಟ್ಟು 17 ವಿಕೆಟ್ಗಳನ್ನು ಉರುಳಿಸಿ ಭಾರತದ ಯಶಸ್ಸಿನಲ್ಲಿ ಬುಮ್ರಾ ದೊಡ್ಡ ಕೊಡುಗೆ ನೀಡಿದ್ದಾರೆ. ಆತಿಥೇಯರು ಈ ಪಂದ್ಯದಲ್ಲಿ ಪ್ರಾಬಲ್ಯ ಕಾಯ್ದುಕೊಳ್ಳಬೇಕಾದರೆ ಬುಮ್ರಾ ಅನುಪಸ್ಥಿತಿ ಕಾಡದಂತೆ ನೋಡಿಕೊಳ್ಳಬೇಕಾಗಿದೆ.

ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತದ ಬ್ಯಾಟಿಂಗ್ ಸರದಿಯು ಬಲಿಷ್ಠವಾಗಿದೆ.ಯುವ ಪ್ರತಿಭಾವಂತ ಆಟಗಾರರಾದ ಯಶಸ್ವಿ ಜೈಸ್ವಾಲ್, ಸರ್ಫರಾಝ್ ಖಾನ್ ಹಾಗೂ ಶುಭಮನ್ ಗಿಲ್ ಭಾರತದ ಬ್ಯಾಟಿಂಗ್ ಗೆ ಶಕ್ತಿ ತುಂಬುತ್ತಿದ್ದಾರೆ. ಇದು ತಂಡದ ಶಕ್ತಿ ಹಾಗೂ ಪ್ರತಿರೋಧಿಸುವ ಗುಣವನ್ನು ತೋರಿಸುತ್ತಿದೆ.

ಬುಮ್ರಾ ಬದಲಿಗೆ ಬಂಗಾಳದ ಆಟಗಾರರಾದ ಮುಕೇಶ್ ಕುಮಾರ್ ಹಾಗೂ ಆಕಾಶ್ ದೀಪ್ ರಲ್ಲಿ ಯಾರನ್ನು ಆಡಿಸಬೇಕೆಂಬ ಬಗ್ಗೆ ಆಯ್ಕೆ ಸಮಿತಿಯು ಗೊಂದಲದಲ್ಲಿದೆ.

ಮತ್ತೊಂದೆಡೆ ಇಂಗ್ಲೆಂಡ್ ತಂಡ 3ನೇ ಟೆಸ್ಟ್ ಪಂದ್ಯದ ಹೀನಾಯ ಸೋಲಿನಿಂದ ಹೊರಬಂದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ರಾಂಚಿಯ ವಾತಾವರಣದ ಲಾಭ ಪಡೆಯಲು ಇಂಗ್ಲೆಂಡ್ ತಂಡ ಆಫ್ ಸ್ಪಿನ್ನರ್ ಶುಐಬ್ ಬಶೀರ್ ರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಂಡಿದೆ. ಭಾರತದ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸುವತ್ತ ಚಿತ್ತಹರಿಸಿದೆ.

ಆಕ್ರಮಣಕಾರಿ ಬಾಝ್ಬಾಲ್ ತಂತ್ರಕ್ಕೆ ಮೊರೆ ಹೋಗಿ ಟೀಕೆ ಎದುರಿಸುತ್ತಿರುವ ಇಂಗ್ಲೆಂಡ್ ತಂಡ ಭಾರತವನ್ನು ಅದರದೆ ನೆಲದಲ್ಲಿ ದಿಟ್ಟವಾಗಿ ಎದುರಿಸುವ ವಿಶ್ವಾಸದಲ್ಲಿದೆ.

ರಾಂಚಿಯ ಪಿಚ್ ಬ್ಯಾಟ್ ಹಾಗೂ ಬಾಲ್ಗೆ ಸಮನಾಗಿ ನೆರವಾಗುವ ಸಾಧ್ಯತೆಯಿದೆ. ಈ ಪಿಚ್ ಬ್ಯಾಟರ್ಗಳು ಹಾಗೂ ಸ್ಪಿನ್ನರ್ಗಳಿಗೆ ನೆರವಾಗುತ್ತಾ ಬಂದಿದೆ. ತಂಡಗಳು ತಕ್ಷಣ ಬದಲಾಗುವ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗಿದೆ.

ಇಂಗ್ಲೆಂಡ್ ತಂಡ 3ನೇ ಟೆಸ್ಟ್ ಪಂದ್ಯವನ್ನು 434 ರನ್ನಿಂದ ಹೀನಾಯವಾಗಿ ಸೋತಿದ್ದು, ಸದ್ಯ 5 ಪಂದ್ಯಗಳ ಸರಣಿಯಲ್ಲಿ 1-2 ಹಿನ್ನಡೆಯಲ್ಲಿದೆ..

ಸರಣಿಯು ನಾಲ್ಕನೇ ಟೆಸ್ಟ್ ಪಂದ್ಯವು ಎರಡೂ ತಂಡಗಳಿಗೆ ಮುಖ್ಯವಾಗಿದೆ. ಭಾರತ ತಂಡಕ್ಕೆ ಈ ಪಂದ್ಯದಲ್ಲಿನ ಗೆಲುವು ಸರಣಿ ವಶಪಡಿಸಿಕೊಳ್ಳಲು ನೆರವಾಗುವ ಜೊತೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಸಹಾಯ ಮಾಡಲಿದೆ.

ಇದೇ ವೇಳೆ ಇಂಗ್ಲೆಂಡ್ ತಂಡವು ಈ ಪಂದ್ಯದಲ್ಲಿ ಪುಟಿದೆದ್ದು ಸರಣಿಯನ್ನು ಸಮಬಲಗೊಳಿಸುವ ಇರಾದೆಯಲ್ಲಿದೆ. ಈ ಮೂಲಕ ಧರ್ಮಶಾಲಾದಲ್ಲಿ ಮಾರ್ಚ್ 7ರಂದು ಆರಂಭವಾಗುವ ಐದನೇ ಹಾಗೂ ಅಂತಿಮ ಟೆಸ್ಟ್ ಗೆ ರೋಚಕ ಸ್ಪರ್ಶ ನೀಡಲು ಬಯಸಿದೆ.

ತಂಡಗಳು

ಭಾರತ: ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ ಜುರೆಲ್(ವಿಕೆಟ್ ಕೀಪರ್), ಕೆ.ಎಸ್.ಭರತ್ (ವಿಕೆಟ್ ಕೀಪರ್), ದೇವದತ್ತ ಪಡಿಕ್ಕಲ್, ಆರ್.ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್ ಹಾಗೂ ಆಕಾಶ್ ದೀಪ್.

ಇಂಗ್ಲೆಂಡ್ 11ರ ಬಳಗ: ಬೆನ್ ಸ್ಟೋಕ್ಸ್(ನಾಯಕ), ಝಾಕ್ ಕ್ರಾವ್ಲೆ, ಬೆನ್ ಡಕೆಟ್, ಜೋ ರೂಟ್,ಜಾನಿ ಬೈರ್ಸ್ಟೋವ್, ಶುಐಬ್ ಬಶೀರ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಒಲಿ ಪೋಪ್, ಒಲಿ ರಾಬಿನ್ಸನ್ ಹಾಗೂ ಜೇಮ್ಸ್ ಆ್ಯಂಡರ್ಸನ್.

ಪಂದ್ಯ ಆರಂಭದ ಸಮಯ: 9:30

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News