"120 ಕಿಮೀ ವೇಗದ ಬೌಲರ್": ಸಂಜಯ್ ಮಾಂಜ್ರೇಕರ್ ಹೇಳಿಕೆಗೆ ತಿರುಗೇಟು ನೀಡಿದ ಭಾರತದ ಮಾಜಿ ವೇಗಿ ವಿನಯ್ ಕುಮಾರ್

Update: 2024-11-25 17:29 GMT

 ವಿನಯ್ ಕುಮಾರ್ , ಸಂಜಯ್ ಮಾಂಜ್ರೇಕರ್ | PC : PTI 

ಹೊಸದಿಲ್ಲಿ: ಭಾರತ ತಂಡದ ಮಾಜಿ ಬ್ಯಾಟರ್ ಹಾಗೂ ಹಾಲಿ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಮುಜುಗರಕ್ಕೀಡಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ, ಮುಹಮ್ಮದ್ ಶಮಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಅವರ ಆಕ್ರೋಶಕ್ಕೆ ತುತ್ತಾಗಿದ್ದ ಸಂಜಯ್ ಮಾಂಜ್ರೇಕರ್, ಈ ಬಾರಿ ಭಾರತ ತಂಡದ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಕುರಿತೂ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅವರ ಆಕ್ರೋಶಕ್ಕೂ ತುತ್ತಾಗಿದ್ದಾರೆ.

ಪರ್ತ್ ನಲ್ಲಿ ಭಾರತ-ಆಸ್ಟ್ರೇಲಿಯ ತಂಡದ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ನ ಮೂರನೆ ದಿನದಾಟದಂದು ವೀಕ್ಷಕ ವಿವರಣೆಯ ಸಂದರ್ಭದಲ್ಲಿ ಮಾರ್ಕ್ ನಿಕೋಲಸ್ ಹಾಗೂ ರಸೆಲ್ ಅರ್ನಾಲ್ಡ್ ರೊಂದಿಗೆ ಚರ್ಚೆ ನಡೆಸುತ್ತಿದ್ದ ಸಂಜಯ್ ಮಾಂಜ್ರೇಕರ್, ವಿನಯ್ ಕುಮಾರ್ ಅವರನ್ನು 120 ಕಿಮೀ ವೇಗದ ಬೌಲರ್ ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದರು.

“ಭಾರತದಲ್ಲಿನ ಹುಲ್ಲಿನಿಂದ ಕೂಡಿರುವ ಪಿಚ್ ಗಳು ವಿನಯ್ ಕುಮಾರ್ ರಂಥ ಮಧ್ಯಮ ವೇಗದ ಬೌಲರ್ ಗಳಿಗೆ ನೆರವು ನೀಡುವ ಮೂಲಕ, ಅಂಥವರು ಹೆಚ್ಚು ವಿಕೆಟ್ ಗಳಿಸಲು ಕಾರಣವಾಗುತ್ತಿವೆ” ಎಂದು ಸಂಜಯ್ ಮಾಂಜ್ರೇಕರ್ ಹೇಳಿದ್ದರು.

ಮುಂದುವರಿದು, “ಆದರೆ, ಆ ದಿನಗಳು ಮುಗಿದಿವೆ ಎಂದು ನನಗನ್ನಿಸುತ್ತಿದೆ. ಹಿಂದೆಲ್ಲ ವಿನಯ್ ಕುಮಾರ್ ರಂತಹ ಮಧ್ಯಮ ವೇಗಿಗಳು ವಿಕೆಟ್ ಗಳಿಕೆಯ ಪಟ್ಟಿಯಲ್ಲಿ ಮೇಲಿರುತ್ತಿದ್ದರು. ಯಾಕೆಂದರೆ, ಹುಲ್ಲಿರುವ ಪಿಚ್ ಮೇಲೆ ಸೂಕ್ತ ಸ್ಥಳದಲ್ಲಿ ಚೆಂಡೆಸೆಯಬೇಕಿತ್ತು ಹಾಗೂ ಅವರಿಗೆ ವಿಕೆಟ್ ಗಳು ದೊರೆಯುತ್ತಿದ್ದವು” ಎಂದು ಬದಲಾಗಿರುವ ದೇಶೀಯ ಕ್ರಿಕೆಟ್ ಪರಿಸ್ಥಿತಿಯನ್ನು ಉಲ್ಲೇಖಿಸಿ ಸಂಜಯ್ ಮಾಂಜ್ರೇಕರ್ ಹೇಳಿದ್ದರು.

ಆದರೆ, ಸಂಜಯ್ ಮಾಂಜ್ರೇಕರ್ ಹೇಳಿಕೆಯಿಂದ ಅಸಮಾಧಾನಗೊಂಡಿರುವ ವಿನಯ್ ಕುಮಾರ್, “ಸಂಜಯ್ ಭಾಯಿ, ನಿಮ್ಮ ಸ್ಪೀಡ್ ಗನ್ ತುರ್ತಾಗಿ ರಿಪೇರಿಗೊಳಗಾಗಬೇಕಿದೆ ಎಂದು ಎಲ್ಲ ಗೌರವಗೊಳೊಂದಿಗೆ ಹೇಳಲು ಬಯಸುತ್ತೇನೆ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

“120 ಕಿಮೀ, ನಿಜವಾಗಲೂ? ದೇವರ ಕೃಪೆಯಿಂದ ನಾನು ಆ ಸಾಧನೆಯ ಬಗ್ಗೆ ಹೆಮ್ಮೆ ಪಡಲು ಬಯಸುತ್ತೇನೆ. ನನಗೆ ನನ್ನ ವೃತ್ತಿ ಜೀವನದ ಬಗ್ಗೆ ಸಮಾಧಾನ, ತೃಪ್ತಿ ಹಾಗೂ ಸಂತೋಷವಿದೆ” ಎಂದು ವಿನಯ್ ಕುಮಾರ್ ಬರೆದುಕೊಂಡಿದ್ದಾರೆ.

“ಐಪಿಎಲ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ 100 ವಿಕೆಟ್ ಪಡೆದ ಬೌಲರ್ ನಾನಾಗಿದ್ದು, ಇದು ನನ್ನ ಸ್ಥಿರತೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ವಿನಯ್ ಕುಮಾರ್ ಥರದ ಮಧ್ಯಮ ವೇಗಿ 100 ಐಪಿಎಲ್ ವಿಕೆಟ್ ಪಡೆದ ಪ್ರಪ್ರಥಮ ಭಾರತೀಯ ಬೌಲರ್ ಆಗಲು ನಿಜಕ್ಕೂ ಕಠಿಣ ಪರಿಶ್ರಮ ಪಟ್ಟಿದ್ದಾನೆ ಹಾಗೂ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾನೆ. ನಾನು ನನ್ನ ಬೌಲಿಂಗ್ ಬಗ್ಗೆ ಹೆಮ್ಮೆ ಪಡುತ್ತೇನೆ. ಹೀಗಿದ್ದರೂ, ಶುಭಾಶಯಗಳು ಮತ್ತು ಗೌರವಗಳು” ಎಂದೂ ತಮ್ಮ ಸಾಧನೆಯ ಮೈಲಿಗಲ್ಲಿನ ಕುರಿತು ಒತ್ತಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ, ಪದೇ ಪದೇ ಗಾಯಗೊಳ್ಳುತ್ತಿರುವುದರಿಂದ ಐಪಿಎಲ್ ಹರಾಜಿನಲ್ಲಿ ಭಾರತ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ ಮೌಲ್ಯ ಕಡಿಮೆಯಾಗಲಿದೆ ಎಂದು ಹೇಳಿ ಮುಹಮ್ಮದ್ ಶಮಿಯ ಆಕ್ರೋಶಕ್ಕೆ ಸಂಜಯ್ ಮಾಂಜ್ರೇಕರ್ ಗುರಿಯಾಗಿದ್ದರು. ಅವರಿಗೆ ತಿರುಗೇಟು ನೀಡಿದ್ದ ಮುಹಮ್ಮದ್ ಶಮಿ, “ನಿಮ್ಮ ಜ್ಞಾನವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಭವಿಷ್ಯದಲ್ಲಿ ಬೇಕಾಗಬಹುದು” ಎಂದು ವ್ಯಂಗ್ಯವಾಡಿದ್ದರು. ಶನಿವಾರ ನಡೆದ ಐಪಿಎಲ್ ಹರಾಜಿನಲ್ಲಿ ಮತ್ತೆ ರೂ. 10 ಕೋಟಿ ಮೊತ್ತಕ್ಕೆ ಮುಹಮ್ಮದ್ ಶಮಿ ಮಾರಾಟವಾಗಿದ್ದರು. ಈ ಹಿಂದಿನ ಋತುವಿನಲ್ಲೂ ಕೂಡಾ ಅವರ ಹರಾಜು ಮೌಲ್ಯ ರೂ. 10 ಕೋಟಿ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News