ಆಸ್ಟ್ರೇಲಿಯ ಟೆಸ್ಟ್ ಸರಣಿ ಬಳಿಕ ರೋಹಿತ್ ನಿವೃತ್ತಿ?

Update: 2024-12-27 15:43 GMT

ರೋಹಿತ್ ಶರ್ಮಾ | PTI 

ಮುಂಬೈ : ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ರನ್ ಗಳಿಸುವಲ್ಲಿ ಮತ್ತೊಮ್ಮೆ ವಿಫಲರಾಗಿದ್ದಾರೆ. ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಎರಡನೇ ದಿನವಾದ ಶುಕ್ರವಾರ ಅವರು ಕೇವಲ 3 ರನ್ ಗೆ ಔಟಾಗಿ ನಿರ್ಗಮಿಸಿದರು.

ಇದು ರೋಹಿತ್ ಅವರ ಇನ್ನೊಂದು ಕಳಪೆ ನಿರ್ವಹಣೆಯಾಗಿದೆ. ಅವರು ತನ್ನ ಕೊನೆಯ ನಾಲ್ಕು ಇನಿಂಗ್ಸ್ ಗಳಲ್ಲಿ ಕೇವಲ 22 ರನ್ ಗಳನ್ನು ಗಳಿಸಿದ್ದಾರೆ.

ಇದು ಅವರ ಭವಿಷ್ಯದ ಬಗ್ಗೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಹಾಲಿ ಸರಣಿಯ ಬಳಿಕ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಗೊಳ್ಳುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಈಗ ಮೆಲ್ಬರ್ನ್ ನಲ್ಲಿದ್ದಾರೆ ಮತ್ತು ರೋಹಿತ್ ಭವಿಷ್ಯದ ಬಗ್ಗೆ ಅವರು ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ವರದಿ ಹೇಳುತ್ತದೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್(ಡಬ್ಲ್ಯುಟಿಸಿ) ಫೈನಲ್ ಪ್ರವೇಶಿಸಲು ಭಾರತ ವಿಫಲವಾದರೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಗೊಳ್ಳುತ್ತಾರೆ ಎನ್ನುವುದು ವ್ಯಾಪಕ ಅಭಿಪ್ರಾಯವಾಗಿದೆ ಎಂದು ಪಿಟಿಐ ವರದಿ ಹೇಳುತ್ತದೆ.

ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯು ಈಗ 1-1ರಲ್ಲಿ ಸಮಬಲದಲ್ಲಿದೆ. ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸುವ ಭಾರತದ ಕನಸು ನನಸಾಗಲು ಆಸ್ಟ್ರೇಲಿಯ ವಿರುದ್ಧದ ಕೊನೆಯ ಎರಡು ಟೆಸ್ಟ್ ಗಳು ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News