ಮುಂಬೈ ಕ್ರಿಕೆಟ್ ತಂಡ ತೊರೆದು ಗೋವಾ ಸೇರಲು ನಿರ್ಧರಿಸಿದ ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್ | PC : PTI
ಮುಂಬೈ: ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮುಂಬರುವ ದೇಶಿ ಋತುವಿಗಿಂತ ಮೊದಲು ಮುಂಬೈ ಕ್ರಿಕೆಟ್ ತಂಡವನ್ನು ತೊರೆದು ಗೋವಾ ತಂಡವನ್ನು ಸೇರಲು ನಿರ್ಧರಿಸಿದ್ದಾರೆ.
ಟೀಮ್ ಇಂಡಿಯಾ ಆಟಗಾರನಿಂದ ಈ ಕುರಿತಂತೆ ಇ-ಮೇಲ್ ಸ್ವೀಕರಿಸಿದ್ದೇವೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಖಚಿತಪಡಿಸಿದೆ. ವೈಯಕ್ತಿಕ ಕಾರಣದಿಂದಾಗಿ ತಾನು ಗೋವಾ ತಂಡವನ್ನು ಸೇರುತ್ತಿದ್ದು, ಇದಕ್ಕಾಗಿ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ)ನೀಡುವಂತೆ ಕೋರುತ್ತೇನೆ ಎಂದು ಜೈಸ್ವಾಲ್ ತನ್ನ ಇ-ಮೇಲ್‌ನಲ್ಲಿ ತಿಳಿಸಿದ್ದಾರೆಂದು ಎಂಸಿಎ ಮೂಲಗಳು ತಿಳಿಸಿವೆ.
‘‘ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ಸೌಭಾಗ್ಯ ನನಗೆ ಲಭಿಸಿದೆ. ಕ್ರಿಕೆಟ್ ಸಂಸ್ಥೆಯು ಒದಗಿಸಿದ ಅವಕಾಶಗಳಿಂದ ಸಾಕಷ್ಟು ಪ್ರಯೋಜನ ಪಡೆದಿದ್ದೇನೆ. ಆದರೆ ನನ್ನ ವೃತ್ತಿಜೀವನದ ಆಕಾಂಕ್ಷೆಗಳು ಹಾಗೂ ವೈಯಕ್ತಿಕ ಸಂದರ್ಭಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ ನನ್ನ ದೇಶಿ ಕ್ರಿಕೆಟ್ ಪ್ರಯಾಣ ಮುಂದುವರಿಸಲು ಗೋವಾಕ್ಕೆ ವರ್ಗಾವಣೆಯಾಗಲು ನಾನು ನಿರ್ಧರಿಸಿದ್ದೇನೆ’’ಎಂದು ಜೈಸ್ವಾಲ್ ಎಂಸಿಎಗೆ ಬರೆದ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.
ಗೋವಾ ಕ್ರಿಕೆಟ್ ಅಸೋಸಿಯೇಶನ್(ಜಿಸಿಎ)ಅಧಿಕಾರಿಗಳು ಕೂಡ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.
ಪ್ಲೇಟ್ ವಿಭಾಗದಲ್ಲಿ ಸ್ಪರ್ಧಿಸಿದ ನಂತರ ಗೋವಾ ತಂಡ ಇತ್ತೀಚೆಗೆ ಎಲೈಟ್ ಗ್ರೂಪ್‌ಗೆ ಭಡ್ತಿ ಪಡೆದಿರುವುದರಿಂದ ಜೈಸ್ವಾಲ್ ಅವರ ನಿರ್ಧಾರವು ಅಚ್ಚರಿ ಮೂಡಿಸಿದೆ. ಅರ್ಜುನ್ ತೆಂಡುಲ್ಕರ್ ಹಾಗೂ ಸಿದ್ದೇಶ್ ಲಾಡ್ ಕೂಡ ಈ ಹಿಂದೆ ಮುಂಬೈ ತೊರೆದು ಗೋವಾ ತಂಡವನ್ನು ಸೇರಿದ್ದರು.
23ರ ಹರೆಯದ ಜೈಸ್ವಾಲ್ ಈ ವರ್ಷದ ಜನವರಿಯಲ್ಲಿ ಜಮ್ಮು-ಕಾಶ್ಮೀರದ ವಿರುದ್ಧ ಮುಂಬೈ ತಂಡದ ಪರ ಕೊನೆಯ ಬಾರಿ ರಣಜಿ ಪಂದ್ಯವನ್ನು ಆಡಿದ್ದು, ಒಟ್ಟು 30 ರನ್ ಗಳಿಸಿದ್ದರು. ಆದರೆ ಕಾಲುನೋವಿನ ಕಾರಣಕ್ಕೆ ವಿದರ್ಭ ವಿರುದ್ಧ ಮುಂಬೈ ಆಡಿದ್ದ ಸೆಮಿ ಫೈನಲ್ ಪಂದ್ಯದಿಂದ ಹಿಂದೆ ಸರಿದಿದ್ದರು.