ರೋಹಿತ್ ಬಳಿ ಬ್ಯಾಟ್ ಕೇಳಿದ ರಿಂಕು ಸಿಂಗ್ ಕಾಲೆಳೆದ ತಿಲಕ್ ವರ್ಮಾ; ವಿಡಿಯೋ ವೈರಲ್

ರಿಂಕು ಸಿಂಗ್ | PC : PTI
ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ವಿರುದ್ಧ ಸೋಮವಾರ ಕೋಲ್ಕತಾ ನೈಟ್ ರೈಡರ್ಸ್‌ನ ಪಂದ್ಯದ ನಂತರ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಅವರು ಒಂದು ತಮಾಷೆಯ ಕ್ಷಣಕ್ಕೆ ಸಾಕ್ಷಿಯಾದರು.
ರಿಂಕು ಸಿಂಗ್ ಅವರು ರೋಹಿತ್ ಬಳಿ ಬ್ಯಾಟ್ ಕೇಳಿದಾಗ ಮುಂಬೈ ಬ್ಯಾಟರ್ ತಿಲಕ್ ವರ್ಮಾ ಅವರು ರಿಂಕುವನ್ನು ಲೇವಡಿ ಮಾಡಿರುವ ಕಿರು ವೀಡಿಯೊವನ್ನು ಮುಂಬೈ ತಂಡವು ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ವೀಡಿಯೊದಲ್ಲಿ ರಿಂಕು ಅವರು ರೋಹಿತ್ ಶರ್ಮಾ ಬಳಿ ಬ್ಯಾಟ್ ನೀಡುವಂತೆ ಕೇಳಿಕೊಳ್ಳುತ್ತಾರೆ. ಅದಕ್ಕೆ ತಮಾಷೆ ಮಾಡಿದ ತಿಲಕ್, ‘‘ಅವರ ಹೆಸರಲ್ಲೇ ಇಂತಹ ಉತ್ತಮ ಬ್ಯಾಟ್ ಇದೆ. ಆದರೂ ಬ್ಯಾಟನ್ನು ಕೇಳುತ್ತಿದ್ದಾರೆ’’ ಎಂದರು. ತಿಲಕ್ ಅವರ ಈ ಮಾತು ಎಲ್ಲರಲ್ಲೂ ನಗು ಮೂಡಿಸಿತು. ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಹಾಸ್ಯ ಪ್ರಸಂಗದಲ್ಲಿ ಸೇರಿಕೊಂಡರು.
ವೀಡಿಯೊದ ಅಂತ್ಯದಲ್ಲಿ ಕೆಕೆಆರ್‌ನ ಯುವ ಆಟಗಾರ ಎ.ರಘುವಂಶಿ ಬ್ಯಾಟ್ ಹಿಡಿದು ನಗುತ್ತಿರುವುದು ಕಂಡುಬಂದಿದೆ.
ರಿಂಕು ಸಿಂಗ್ ಅಗ್ರ ಆಟಗಾರರಿಂದ ಬ್ಯಾಟ್ ಕೇಳುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ವಿರಾಟ್ ಕೊಹ್ಲಿ ಅವರಿಂದಲೂ ರಿಂಕು ಬ್ಯಾಟ್ ಸ್ವೀಕರಿಸಿದ್ದರು.
ಆದರೆ ಇತ್ತೀಚೆಗೆ ಕೊಹ್ಲಿ ಅವರನ್ನು ಸಂಪರ್ಕಿಸಿದ್ದ ರಿಂಕು ಮತ್ತೊಂದು ಬ್ಯಾಟ್ ಕೊಡುವಂತೆ ಕೇಳಿದ್ದರು. ಈ ಹಿಂದೆ ನಿಮ್ಮಿಂದ ಪಡೆದ ಬ್ಯಾಟ್ ಸ್ಪಿನ್ನರ್ ಎದುರು ಆಡುವಾಗ ತುಂಡಾಯಿತು ಎಂದು ರಿಂಕು ಒಪ್ಪಿಕೊಂಡಿದ್ದರು. ಇದರಿಂದ ಕೊಹ್ಲಿ ಅಸಮಾಧಾನಗೊಂಡಿದ್ದರು.
ನಾನು ವಿರಾಟ್‌ರಿಂದ ಮತ್ತೊಂದು ಬ್ಯಾಟ್ ಸ್ವೀಕರಿಸಿದ್ದೇನೆ ಎಂದು ರಿಂಕು ನಂತರ ವೈರಲ್ ವೀಡಿಯೊದಲ್ಲಿ ಖಚಿತಪಡಿಸಿದ್ದರು.
ಇತ್ತೀಚೆಗೆ ಕೆಕೆಆರ್ ಆಟಗಾರ ರಿಂಕು ಭಾರತದ ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಂದಲೂ ಬ್ಯಾಟ್ ನೀಡುವಂತೆ ವಿನಂತಿಸಿದ್ದು ಕಂಡುಬಂದಿತ್ತು. ಈ ಮೂಲಕ ಕೆಲವು ಶ್ರೇಷ್ಠ ಆಟಗಾರರಿಂದ ಬ್ಯಾಟ್ ಸಂಗ್ರಹಿಸುವ ತನ್ನ ಸಂಪ್ರದಾಯವನ್ನು ರಿಂಕು ಮುಂದುವರಿಸಿದ್ದರು.