IPL 2025 |ಆರ್‌ಸಿಬಿಗೆ ಸೋಲುಣಿಸಿದ ಗುಜರಾತ್ ಟೈಟಾನ್ಸ್

Update: 2025-04-02 23:01 IST
IPL 2025 |ಆರ್‌ಸಿಬಿಗೆ ಸೋಲುಣಿಸಿದ ಗುಜರಾತ್ ಟೈಟಾನ್ಸ್

Photo credit: X/@IPL

  • whatsapp icon

ಬೆಂಗಳೂರು: ಜೋಸ್ ಬಟ್ಲರ್(ಔಟಾಗದೆ 73 ರನ್, 39 ಎಸೆತ, 5 ಬೌಂಡರಿ, 6 ಸಿಕ್ಸರ್) ಹಾಗೂ ಸಾಯಿ ಸುದರ್ಶನ್(49 ರನ್, 36 ಎಸೆತ,7 ಬೌಂಡರಿ,1 ಸಿಕ್ಸರ್) ಅಮೋಘ ಬ್ಯಾಟಿಂಗ್ ಹಾಗೂ ಮುಹಮ್ಮದ್ ಸಿರಾಜ್(3-19) ಬೌಲಿಂಗ್ ಸಾಹಸದಿಂದ ಐಪಿಎಲ್‌ನ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿದೆ. ಹ್ಯಾಟ್ರಿಕ್ ಗೆಲುವಿನ ಹಾದಿಯಲ್ಲಿದ್ದ ಆರ್‌ಸಿಬಿಗೆ ಆಘಾತ ನೀಡಿದೆ.

ಟೂರ್ನಿಯಲ್ಲಿ ಮೊದಲ ಸೋಲು ಕಂಡಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ ಕಿಂಗ್ಸ್ ಅಗ್ರ ಸ್ಥಾನಕ್ಕೇರಿದೆ.

ಗೆಲ್ಲಲು 170 ರನ್ ಗುರಿ ಚೇಸ್ ಮಾಡಿದ ಗುಜರಾತ್ ತಂಡವು 17.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 63 ರನ್ ಸೇರಿಸಿದ ಬಟ್ಲರ್ ಹಾಗೂ ರುದರ್‌ಫೋರ್ಡ್(ಔಟಾಗದೆ 30, 18 ಎಸೆತ, 1 ಬೌಂಡರಿ, 3 ಸಿಕ್ಸರ್)ಇನ್ನೂ 13 ಎಸೆತ ಬಾಕಿ ಇರುವಾಗಲೇ ಗುಜರಾತ್‌ಗೆ ಗೆಲುವು ತಂದುಕೊಟ್ಟರು.

ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆರ್‌ಸಿಬಿ ತಂಡವು ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ದಿಟ್ಟ ಹೋರಾಟದ(54 ರನ್, 40 ಎಸೆತ, 1 ಬೌಂಡರಿ, 5 ಸಿಕ್ಸರ್)ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ವೇಗದ ಬೌಲರ್ ಮುಹಮ್ಮದ್ ಸಿರಾಜ್(3-19) ಹಾಗೂ ಸ್ಪಿನ್ನರ್ ಸಾಯಿ ಕಿಶೋರ್(2-22)ಮುಂದಾಳತ್ವದಲ್ಲಿ ಗುಜರಾತ್ ತಂಡ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಆತಿಥೇಯರನ್ನು 170 ರೊಳಗೆ ಕಟ್ಟಿ ಹಾಕಿತು.

2ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ (7 ರನ್)ವಿಕೆಟನ್ನು ಕಳೆದುಕೊಂಡ ಆರ್‌ಸಿಬಿ ಆರಂಭಿಕ ಆಘಾತ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ದೇವದತ್ತ ಪಡಿಕ್ಕಲ್(4 ರನ್)ದೊಡ್ಡ ಮೊತ್ತ ಗಳಿಸದೆ ಸಿರಾಜ್‌ಗೆ ಕ್ಲೀನ್‌ಬೌಲ್ಡಾದರು. ಫಿಲ್ ಸಾಲ್ಟ್ 14 ರನ್ ಗಳಿಸಿ ಸಿರಾಜ್‌ಗೆ ಕ್ಲೀನ್‌ಬೌಲ್ಡಾದರು. ನಾಯಕ ರಜತ್ ಪಾಟಿದಾರ್(12 ರನ್)ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಆಗ ಆರ್‌ಸಿಬಿ 42 ರನ್‌ಗೆ 4 ವಿಕೆಟ್ ಕಳೆದುಕೊಂಡಿತು.

ಆಗ 5ನೇ ವಿಕೆಟ್‌ಗೆ 52 ರನ್ ಜೊತೆಯಾಟ ನಡೆಸಿದ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಶರ್ಮಾ (33 ರನ್, 21 ಎಸೆತ, 5 ಬೌಂಡರಿ, 1 ಸಿಕ್ಸರ್)ತಂಡವನ್ನು ಆಧರಿಸಿದರು. ಜಿತೇಶ್ ಹಾಗೂ ಆಲ್‌ರೌಂಡರ್ ಕೃನಾಲ್ ಪಾಂಡ್ಯ(5 ರನ್) ವಿಕೆಟ್ ಕೈಚೆಲ್ಲಿದಾಗ ಟಿಮ್ ಡೇವಿಡ್ ಜೊತೆ ಕೈಜೋಡಿಸಿದ ಲಿವಿಂಗ್‌ಸ್ಟೋನ್ 7ನೇ ವಿಕೆಟ್‌ಗೆ 46 ರನ್ ಸೇರಿಸಿ ಆರ್‌ಸಿಬಿ ಗೌರವಾರ್ಹ ಮೊತ್ತ ಗಳಿಸುವಲ್ಲಿ ನೆರವಾದರು.

ಲಿವಿಂಗ್‌ಸ್ಟೋನ್ 18.2ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಡೇವಿಡ್(32 ರನ್, 18 ಎಸೆತ, 3 ಬೌಂಡರಿ, 2 ಸಿಕ್ಸರ್)ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಪ್ರಸಿದ್ಧ ಕೃಷ್ಣಗೆ ಕ್ಲೀನ್‌ಬೌಲ್ಡಾದರು.

ಗುಜರಾತ್ ಟೈಟಾನ್ಸ್ ತಂಡವು ವೇಗದ ಬೌಲರ್ ಕಾಗಿಸೊ ರಬಾಡ ಬದಲಿಗೆ ಆಲ್‌ರೌಂಡರ್ ಅರ್ಷದ್ ಖಾನ್‌ಗೆ ಅವಕಾಶ ನೀಡಿತು. ಆರ್‌ಸಿಬಿ ತಂಡವು ತನ್ನ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿರುವ ಆರ್‌ಸಿಬಿ ಈ ವರ್ಷ ತವರು ನೆಲದಲ್ಲಿ ಆಡಿರುವ ಮೊದಲ ಪಂದ್ಯ ಇದಾಗಿದೆ.

ಸಂಕ್ಷಿಪ್ತ ಸ್ಕೋರ್

ಆರ್‌ಸಿಬಿ: 20 ಓವರ್‌ಗಳಲ್ಲಿ 169/8

(ಲಿವಿಂಗ್‌ಸ್ಟೋನ್ 54, ಜಿತೇಶ್ ಶರ್ಮಾ 33, ಟಿಮ್ ಡೇವಿಡ್ 32, ಮುಹಮ್ಮದ್ ಸಿರಾಜ್ 3-19, ಸಾಯಿ ಕಿಶೋರ್ 2-22, ಅರ್ಷದ್ ಖಾನ್ 1-17, ಪ್ರಸಿದ್ಧ ಕೃಷ್ಣ 1-26, ಇಶಾಂತ್ ಶರ್ಮಾ 1-27)

ಗುಜರಾತ್ ಟೈಟಾನ್ಸ್:17.5 ಓವರ್‌ಗಳಲ್ಲಿ 170/2

(ಬಟ್ಲರ್ ಔಟಾಗದೆ 73, ಸುದರ್ಶನ್ 49, ರುದರ್‌ಫೋರ್ಡ್ ಔಟಾಗದೆ 30, ಭುವನೇಶ್ವರ್ 1-23)

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News