ಬಾರ್ಡರ್-ಗಾವಸ್ಕರ್ ಟ್ರೋಫಿ | ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಸುಭದ್ರ ಸ್ಥಿತಿಯಲ್ಲಿ ಆಸ್ಟ್ರೇಲಿಯ
ಮೆಲ್ಬೋರ್ನ್: ಇಲ್ಲಿನ ಎಂಸಿಜಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯ-ಭಾರತ ತಂಡಗಳ ನಡುವೆ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಸುಭದ್ರ ಸ್ಥಿತಿಯಲ್ಲಿರುವ ಆಸ್ಟ್ರೇಲಿಯ ತಂಡ, ಮೊದಲ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದೆ.
ಆರಂಭಿಕ ಬ್ಯಾಟರ್ ಗಳಾದ ಸ್ಯಾಮ್ ಕೊನ್ಸ್ಟಾಸ್ (60) ಹಾಗೂ ಉಸ್ಮಾನ್ ಖ್ವಾಜಾ (57), ಮಧ್ಯಮ ಕ್ರಮಾಂಕದ ಬ್ಯಾಟರ್ ಗಳಾದ ಮಾರ್ನಸ್ ಲಾಬುಶೇನ್ (72) ಹಾಗೂ ಸ್ಟೀವ್ ಸ್ಮಿತ್ (ಔಟಾಗದೆ 68) ರ ಅರ್ಧಶತಕಗಳ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯ ತಂಡ 311 ರನ್ ಗಳಿಸಿದೆ. ಆಸ್ಟ್ರೇಲಿಯ ತಂಡದ ಇನ್ನೂ ನಾಲ್ಕು ವಿಕೆಟ್ ಗಳು ಬಾಕಿಯಿದ್ದು, ಶತಕದತ್ತ ಕಣ್ಣು ನೆಟ್ಟಿರುವ ಸ್ಟೀವ್ ಸ್ಮಿತ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್ (8) ಕ್ರೀಸಿನಲ್ಲಿದ್ದಾರೆ.
ಭಾರತ ತಂಡದ ಪರ ಮತ್ತೊಮ್ಮೆ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ ಜಸ್ ಪ್ರೀತ್ ಬುಮ್ರಾ, ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಶ್ ರ ವಿಕೆಟ್ ಪಡೆದು ಮಿಂಚಿದರು. ಅದರಲ್ಲೂ ಸರಣಿಯುದ್ದಕ್ಕೂ ಭಾರತ ತಂಡದ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ ಟ್ರಾವಿಸ್ ಹೆಡ್ ರನ್ನು ಶೂನ್ಯಕ್ಕೇ ಔಟ್ ಮಾಡಿ, ಪೆವಿಲಿಯನ್ ಗೆ ವಾಪಸ್ ಕಳಿಸಿದರು.
ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಹಾಗೂ ಆಕಾಶ್ ದೀಪ್ ತಲಾ ಒಂದು ವಿಕೆಟ್ ಪಡೆದರು.