ನಾಳೆಯಿಂದ ನಾಲ್ಕನೇ ಟೆಸ್ಟ್ ಆರಂಭ | ಆಸ್ಟ್ರೇಲಿಯದ ವಿರುದ್ಧ ಭಾರತಕ್ಕೆ ನಿರ್ಣಾಯಕ ಪಂದ್ಯ
ಮೆಲ್ಬರ್ನ್: ಪ್ರತಿಷ್ಠಿತ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ಗುರುವಾರದಿಂದ ಆರಂಭವಾಗಲಿರುವ ನಿರ್ಣಾಯಕ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತದ ಕ್ರಿಕೆಟ್ ತಂಡವು ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.
ಒಂದು ವೇಳೆ ಭಾರತ ಈ ಪಂದ್ಯವನ್ನು ಗೆದ್ದುಕೊಂಡರೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. ಒಂದೊಮ್ಮೆ ಆಸ್ಟ್ರೇಲಿಯ ಜಯ ದಾಖಲಿಸಿದರೆ ದಶಕದ ನಂತರ ಭಾರತ ವಿರುದ್ಧ ಮೊದಲ ಸರಣಿಯನ್ನು ಗೆಲ್ಲುವ ಹಾದಿಯಲ್ಲಿರಲಿದೆ. ಭಾರತ ಸೋಲುಂಡರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ)ಫೈನಲ್ ತಲುಪುವ ಅವಕಾಶ ಕೈಜಾರಲಿದೆ.
ಸದ್ಯ ಐದು ಪಂದ್ಯಗಳ ಸರಣಿಯು 1-1ರಿಂದ ಸಮಬಲಗೊಂಡಿದ್ದು, ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಬಗೆಹರಿಸಿಕೊಳ್ಳಬೇಕಾಗಿರುವ ನಾಯಕ ರೋಹಿತ್ ಶರ್ಮಾ ಒತ್ತಡದಲ್ಲಿದ್ದಾರೆ. ಕೆ.ಎಲ್.ರಾಹುಲ್ ಬದಲಿಗೆ ರೋಹಿತ್ ಅವರೇ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ ಎಂಬ ಊಹಾಪೋಹ ಹರಡಿದೆ.
ಭಾರತದ ಬ್ಯಾಟಿಂಗ್ ಸರದಿಯ ಅಗ್ರ ಕ್ರಮಾಂಕದಲ್ಲಿ ಬದಲಾವಣೆಯಾಗಲಿದೆ ಎಂಬ ವದಂತಿ ಹಬ್ಬಿದೆ. ಒಂದು ವೇಳೆ ರೋಹಿತ್ ಇನಿಂಗ್ಸ್ ಆರಂಭಿಸಿದರೆ ರಾಹುಲ್ ಅವರು 3ನೇ ಕ್ರಮಾಂಕದಲ್ಲಿ ಆಡಬಹುದು. ಆಗ ತಂಡದಲ್ಲಿ ಶುಭಮನ್ ಗಿಲ್ ಸ್ಥಾನ ಡೋಲಾಯಮಾನವಾಗಲಿದೆ. ಧ್ರುವ್ ಜುರೆಲ್ ಅವರು ಬದಲಿ ಆಟಗಾರನಾಗಿ ಆಡಬಹುದು.
ರೋಹಿತ್ 2019ರಲ್ಲಿ ಆರಂಭಿಕ ಸ್ಥಾನಕ್ಕೆ ಭಡ್ತಿ ಪಡೆದಿದ್ದರು. ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್‌ಗೋಸ್ಕರ ಇತ್ತೀಚೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಈ ತಂತ್ರಗಾರಿಕೆಯು ಯಶಸ್ಸು ಕಂಡಿಲ್ಲ. ರೋಹಿತ್ ಇನಿಂಗ್ಸ್ ಆರಂಭಿಸಿದರೆ ಗಿಲ್ ಸ್ಥಾನ ಕಳೆದುಕೊಳ್ಳುತ್ತಾರೋ ಅಥವಾ 5ನೇ ಕ್ರಮಾಂಕದಲ್ಲಿ ಆಡುತ್ತಾರೋ ಎಂದು ನೋಡಬೇಕಾಗಿದೆ.
ಸರಣಿಯು ಸಮಬಲಗೊಂಡಿರುವ ಹಿನ್ನೆಲೆಯಲ್ಲಿ ಎಂಸಿಜಿ ಟೆಸ್ಟ್ ಗೆಲ್ಲುವ ತಂಡ ಮುನ್ನಡೆ ಪಡೆಯಲಿದೆ.
ಅಡಿಲೇಡ್‌ನಲ್ಲಿ ಹೀನಾಯವಾಗಿ ಸೋತಿದ್ದ ಭಾರತ ತಂಡಕ್ಕೆ ಮಳೆ ಬಾಧಿತ ಬ್ರಿಸ್ಬೇನ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ. ಎಂಸಿಜಿಯಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವ ಭಾರತ ತಂಡವು 2014ರಿಂದ ಟೆಸ್ಟ್ ಪಂದ್ಯದಲ್ಲಿ ಅಜೇಯವಾಗುಳಿದಿದೆ.
ಭಾರತ ತಂಡವು ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನದಿಂದಾಗಿ 2018-19 ಹಾಗೂ 2020-21ರಲ್ಲಿ ಎಂಸಿಜಿಯಲ್ಲಿ ನಡೆದಿರುವ ಹಿಂದಿನ ಎರಡು ಟೆಸ್ಟ್ ಪಂದ್ಯಗಳನ್ನು ಜಯಿಸಿದೆ.
2018ರಲ್ಲಿ ಚೇತೇಶ್ವರ ಪೂಜಾರ ಅವರ ಮ್ಯಾರಥಾನ್ ಇನಿಂಗ್ಸ್ ನೆರವಿನಿಂದ ಭಾರತ ತಂಡವು 7 ವಿಕೆಟ್‌ಗಳ ನಷ್ಟಕ್ಕೆ 443 ರನ್ ಗಳಿಸಿತ್ತು. ಆ ನಂತರ ಜಸ್‌ಪ್ರಿತ್ ಬುಮ್ರಾ ಅವರ ಅಮೋಘ ಬೌಲಿಂಗ್ ಸಹಾಯದಿಂದ ಭಾರತ ತಂಡವು 137 ರನ್ ಅಂತರದಿಂದ ಜಯ ಸಾಧಿಸಿತ್ತು.
2020ರಲ್ಲಿ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಭಾರತದ ಪಾಲಿಗೆ ಇನ್ನಷ್ಟು ವಿಶೇಷವಾಗಿತ್ತು. ಅಡಿಲೇಡ್‌ನಲ್ಲಿ ಕೇವಲ 36 ರನ್‌ಗೆ ಆಲೌಟಾಗಿದ್ದ ಭಾರತ ತಂಡವು ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಮೆಲ್ಬರ್ನ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ 8 ವಿಕೆಟ್‌ಗಳ ಅಂತರದಿಂದ ಗೆದ್ದಿತ್ತು. ಐಕಾನಿಕ್ ಮೈದಾನದಲ್ಲಿ ಸೋಲು ಆಸ್ಟ್ರೇಲಿಯದ ಪ್ರತಿಷ್ಠೆಗೆ ಧಕ್ಕೆ ತಂದಿತ್ತು.
ಯುವ ಆಟಗಾರರು ಹಾಗೂ ಅನುಭವಿ ಆಟಗಾರರ ಮಿಶ್ರಣವಿರುವ ಪ್ರಸಕ್ತ ಭಾರತೀಯ ತಂಡವು ಸಂಪೂರ್ಣ ಬಲಿಷ್ಠ ತಂಡವಾಗಿ ಕಾಣುತ್ತಿಲ್ಲ.
ಜೈಸ್ವಾಲ್, ರಿಷಭ್ ಪಂತ್, ಗಿಲ್, ರಾಹುಲ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಸಹಿತ ಭಾರತದ ಬ್ಯಾಟರ್‌ಗಳು ಆಸ್ಟ್ರೇಲಿಯ ತಂಡದ ವಿರುದ್ಧ ತನ್ನ ಶ್ರೇಷ್ಠ ಪ್ರದರ್ಶನ ನೀಡುವ ಅಗತ್ಯವಿದೆ. ಆಸ್ಟ್ರೇಲಿಯ ತಂಡ ಫೇವರಿಟ್ ತಂಡವಾಗಿರದೆ ಇದ್ದರೂ ಉತ್ತಮ ಬದ್ಧತೆ ಪ್ರದರ್ಶಿಸುತ್ತಿದೆ.
ಆಸ್ಟ್ರೇಲಿಯ ತಂಡವು ಯುವ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ. ಕೇವಲ 11 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ 19ರ ಹರೆಯದ ಕಾನ್‌ಸ್ಟಾಸ್ ಅವರು ಜಸ್‌ಪ್ರಿತ್ ಬುಮ್ರಾರನ್ನು ದಿಟ್ಟವಾಗಿ ಎದುರಿಸಬೇಕಾಗಿದೆ. ಬುಮ್ರಾ ಅವರು ನಾಥನ್ ಮೆಕ್‌ಸ್ವೀನಿ ವೃತ್ತಿಜೀವನಕ್ಕೆ ಮಾರಕವಾಗಿದ್ದನ್ನು ಮರೆಯುವಂತಿಲ್ಲ.
ಗಾಯದಿಂದ ಚೇತರಿಸಿಕೊಂಡು ವಾಪಸಾಗಿರುವ ಟ್ರಾವಿಸ್ ಹೆಡ್ ಆಸ್ಟ್ರೇಲಿಯಕ್ಕೆ ಶಕ್ತಿ ತುಂಬಿದ್ದಾರೆ. ಸರಣಿಯಲ್ಲಿ 89, 140 ಹಾಗೂ 152 ರನ್ ಗಳಿಸಿರುವ ಹೆಡ್ ಅವರು ಭಾರತೀಯ ಬೌಲರ್‌ಗಳಿಗೆ ಗಣನೀಯ ಪ್ರಮಾಣದಲ್ಲಿ ಸವಾಲಾಗಿದ್ದಾರೆ.
ಮೆಲ್ಬರ್ನ್‌ನಲ್ಲಿ ಗರಿಷ್ಠ ತಾಪಮಾನದ ನಿರೀಕ್ಷೆಯು ತಂಡದ ಆಯ್ಕೆಯ ಮೇಲೆ ಪ್ರಭಾವ ಬೀರಬಹುದು. ಮೆಲ್ಬರ್ನ್ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗದೇ ಇದ್ದರೂ ಭಾರತ ತಂಡವು ಹೆಚ್ಚುವರಿ ಸ್ಪಿನ್ನರ್ ಆಡಿಸುವ ಸಾಧ್ಯತೆಯಿದೆ.
ನಾಥನ್ ಲಿಯೊನ್, ಎಂಸಿಜಿ ಪಿಚ್‌ನಲ್ಲಿ ಈ ಹಿಂದೆ ಮಿಂಚಿದ್ದರು. ಲಿಯೊನ್ ಅವರು ವಾಶಿಂಗ್ಟನ್ ಸುಂದರ್‌ಗಿಂತ ಹೆಚ್ಚು ಅನುಭವಿ ಬೌಲರ್. ಭಾರತ ತಂಡವು ಸುಂದರ್‌ರನ್ನು ಆಡುವ 11ರ ಬಳಗದಲ್ಲಿ ಹೇಗೆ ಸೇರಿಸಿಕೊಳ್ಳಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ನಿತೇಶ್ ರೆಡ್ಡಿ ಅವರನ್ನು ಕೈಬಿಡುವ ಸಾಧ್ಯತೆ ಕಾಣುತ್ತಿಲ್ಲ. ಆಕಾಶ್ ದೀಪ್ ಬದಲಿಗೆ ಬೇರೊಬ್ಬ ವೇಗದ ಬೌಲರ್‌ನ್ನು ಆಡಿಸುವ ಸಾಧ್ಯತೆಯಿದೆ.
ಎಂಸಿಜಿಯ ಸೂತ್ರ ಸರಳವಾಗಿದೆ. ಇಲ್ಲಿ ಟಾಸ್ ಪ್ರಾಮುಖ್ಯತೆ ಪಡೆಯದೆ, ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಗಳಿಸುವುದು ಮುಖ್ಯವಾಗುತ್ತದೆ. ಆ ನಂತರ ಅಸ್ಥಿರ ಬೌನ್ಸ್ ಮೂಲಕ ಎದುರಾಳಿಯನ್ನು ಆಲೌಟ್ ಮಾಡಬೇಕಾಗಿದೆ. ಆದರೆ ಇತ್ತೀಚೆಗಿನ ಎಂಸಿಜಿ ದಾಖಲೆಗಳು ವಿಭಿನ್ನವಾಗಿದೆ. ಎಂಸಿಜಿಯಲ್ಲಿ ಹಿಂದಿನ 4 ವರ್ಷಗಳಲ್ಲಿ ಕೇವಲ ಒಮ್ಮೆ ಮಾತ್ರ 400ಕ್ಕೂ ಅಧಿಕ ರನ್ ದಾಖಲಾಗಿದೆ. ಹಿಂದಿನ 4 ಟೆಸ್ಟ್ ಪಂದ್ಯಗಳಲ್ಲಿ ತಂಡಗಳು 200 ರನ್ ಗಡಿದಾಟಲು ಪರದಾಟ ನಡೆಸಿವೆ.
► ಟೀಮ್ ನ್ಯೂಸ್
ಸ್ಯಾಮ್ ಕಾನ್‌ಸ್ಟಾಸ್ ಅವರು ಆಸ್ಟ್ರೇಲಿಯದ ಪರ ಚೊಚ್ಚಲ ಪಂದ್ಯ ಆಡುವುದು ಕ್ರಿಸ್ಮಸ್ ದಿನದಂದೇ ಖಚಿತವಾಗಿದೆ. ಬೋಲ್ಯಾಂಡ್ ಅವರು ಗಾಯಗೊಂಡಿರುವ ಜೋಶ್ ಹೇಝಲ್‌ವುಡ್ ಬದಲಿಗೆ ಆಡಲಿದ್ದಾರೆ. ಕ್ರಿಸ್ಮಸ್ ದಿನವೇ ಹೆಡ್ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
ರೋಹಿತ್ ಶರ್ಮಾರ ಬ್ಯಾಟಿಂಗ್ ಕ್ರಮಾಂಕವು ಚರ್ಚೆಗೆ ಗ್ರಾಸವಾಗಿದೆ. ಭಾರತವು ಆರಂಭಿಕ ಜೋಡಿ ಜೈಸ್ವಾಲ್-ರಾಹುಲ್‌ರನ್ನು ಬೇರ್ಪಡಿಸುವ ಸಾಧ್ಯತೆ ಇಲ್ಲ. 8ನೇ ಕ್ರಮಾಂಕದಲ್ಲಿ ನಿತೇಶ್ ಕುಮಾರ್ ರೆಡ್ಡಿ ಮುಂದುವರಿಯುತ್ತಾರೋ, ಇನ್ನೋರ್ವ ಸ್ಪೆಷಲಿಸ್ಟ್ ವೇಗಿಯನ್ನು ಆಯ್ಕೆ ಮಾಡಲಾಗುತ್ತದೆಯೋ, ಪರ್ಯಾಯ ಆಲ್‌ರೌಂಡರ್ ಆಗಿ ಸುಂದರ್ ಆಡುತ್ತಾರೋ ಎಂದು ಕಾದುನೋಡಬೇಕಾಗಿದೆ.
► ತಂಡಗಳು
ಭಾರತ(ಸಂಭಾವ್ಯ): ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್‌ಕೀಪರ್), ರೋಹಿತ್ ಶರ್ಮಾ(ನಾಯಕ), ರವೀಂದ್ರ ಜಡೇಜ, ನಿತೇಶ್ ಕುಮಾರ್ ರೆಡ್ಡಿ/ಸುಂದರ್, ಆಕಾಶ್ ದೀಪ್, ಜಸ್‌ಪ್ರಿತ್ ಬುಮ್ರಾ, ಮುಹಮ್ಮದ್ ಸಿರಾಜ್.
ಆಸ್ಟ್ರೇಲಿಯ: ಉಸ್ಮಾನ್ ಖ್ವಾಜಾ, ಸ್ಯಾಮ್ ಕಾನ್‌ಸ್ಟಾಸ್, ಲ್ಯಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ(ವಿಕೆಟ್‌ಕೀಪರ್), ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯೊನ್, ಸ್ಕಾಟ್ ಬೋಲ್ಯಾಂಡ್.
► ಪಿಚ್ ಹಾಗೂ ವಾತಾವರಣ
ಎಂಸಿಜಿ ಪಿಚ್ ವೇಗದ ಬೌಲರ್‌ಗಳ ಸ್ವರ್ಗವಾಗಿದೆ. ಮೊದಲ ದಿನದಾಟದಲ್ಲಿ ಉಷ್ಣಾಂಶದ ಮನ್ಸೂಚನೆ ಲಭಿಸಿದೆ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪಬಹುದು. ಎರಡನೇ ದಿನ ಮಳೆ ಬೀಳುವ ಸಾಧ್ಯತೆಯಿದೆ. 3ನೇ ದಿನದಾಟದ ನಂತರ ಉತ್ತಮ ಹವಾಮಾನ ಇರಲಿದೆ.