ವಂಚನೆ ಪ್ರಕರಣ | ಮಾಜಿ ಕ್ರಿಕೆಟಿಗ ನಮನ್ ಓಜಾ ತಂದೆಗೆ 7 ವರ್ಷ ಜೈಲು ಶಿಕ್ಷೆ
ಭೋಪಾಲ್ : ಮಧ್ಯಪ್ರದೇಶದ ಬೆತುಲ್‌ನಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಯಲ್ಲಿ ವಂಚನೆ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ನಮನ್ ಓಜಾ ತಂದೆ ವಿನಯ್ ಓಜಾಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣ ನಡೆದು 11 ವರ್ಷಗಳ ನಂತರ ತೀರ್ಪು ಹೊರ ಬಂದಿದೆ. ವಿನಯ್ ಓಜಾ ಸೇರಿದಂತೆ ನಾಲ್ವರಿಗೆ ಶಿಕ್ಷೆ ಪ್ರಕಟಿಸಲಾಗಿದೆ.
2013ರಲ್ಲಿ ಬೆತುಲ್‌ನ ಮುಲ್ತಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಜೌಲ್ಖೇಡಾ ಗ್ರಾಮದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯಲ್ಲಿ 1.25 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳವಾರ, ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಬ್ಯಾಂಕ್ ಆಫ್ ಮಹಾರಾಷ್ಟ್ರದ ಜೌಲ್ಖೇಡಾ ಶಾಖೆಯಲ್ಲಿ ನೀಡಿರುವ ವಂಚನೆ ಪ್ರಕರಣದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿತು. ಈ ಹೈ-ಪ್ರೊಫೈಲ್ ಪ್ರಕರಣದಲ್ಲಿ, ಮಾಸ್ಟರ್ ಮೈಂಡ್, ಅಭಿಷೇಕ್ ರತ್ನಂ ಮತ್ತು ಇತರ ಆರೋಪಿಗಳನ್ನು ದೋಷಿ ಎಂದು ಘೋಷಿಸಲಾಗಿದೆ ಮತ್ತು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದಲ್ಲಿ ಪ್ರಮುಖ ಆರೋಪಿ ಅಭಿಷೇಕ್ ರತ್ನಂಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 80 ಲಕ್ಷ ರೂ. ದಂಡ ವಿಧಿಸಲಾಗಿದೆ. ಮಾಜಿ ಕ್ರಿಕೆಟಿಗ ನಮನ್ ಓಜಾ ಅವರ ತಂದೆ ವಿನಯ್ ಓಜಾ ಆ ಸಮಯದಲ್ಲಿ ಬ್ಯಾಂಕ್ ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರೂ ಕೂಡ ಅಪರಾಧಿ ಎಂದು ಸಾಬೀತಾಗಿದೆ. ವಿನಯ್ ಓಜಾ ಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ. ದಂಡ ವಿಧಿಸಲಾಗಿದೆ. ಬ್ಯಾಂಕ್‌ಗೆ ಸಂಬಂಧಿಸಿದ ಇಬ್ಬರು ಬ್ರೋಕರ್‌ಗಳಾದ ಧನರಾಜ್ ಪವಾರ್ ಮತ್ತು ಲಖನ್ ಹಿಂಗ್ವೆ ಅವರಿಗೆ ತಲಾ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 7 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಪ್ರಮುಖ ಆರೋಪಿ ಅಭಿಷೇಕ್ ರತ್ನಂ 2013ರಲ್ಲಿ ಬ್ಯಾಂಕ್ ಅಧಿಕಾರಿಗಳ ಪಾಸ್‌ವರ್ಡ್‌ಗಳನ್ನು ಬಳಸಿಕೊಂಡು ವಂಚನೆ ನಡೆಸಿದ್ದ ಎಂದು ತಿಳಿದು ಬಂದಿದೆ.
ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಸಾಬ್ಲೆ ಈ ಕುರಿತು ಹೇಳಿಕೆ ನೀಡಿದ್ದು, ತನಿಖೆಯ ವೇಳೆ ಬ್ಯಾಂಕ್ ಅಧಿಕಾರಿಗಳ ಪಾಸ್‌ವರ್ಡ್ ಬಳಸಿ ಅವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ತನಿಖೆಯ ವೇಳೆ ಬ್ಯಾಂಕಿನ ಕ್ಯಾಷಿಯರ್ ಆಗಿದ್ದ ದೀನಾನಾಥ್ ರಾಥೋಡ್ ಈಗಾಗಲೇ ಸಾವನ್ನಪ್ಪಿದ್ದಾರೆ. ಐಡಿ ಮತ್ತು ಪಾಸ್‌ವರ್ಡ್ ಅನ್ನು ದುರ್ಬಳಕೆ ಮಾಡಿಕೊಂಡಿರುವ ಟ್ರೈನಿ ಬ್ರಾಂಚ್ ಮ್ಯಾನೇಜರ್ ನಿಲೇಶ್ ಚಾತ್ರೋಲ್ ಅವರು ತಪ್ಪಿತಸ್ಥರಲ್ಲ ಎಂದು ಸಾಬೀತಾದ್ದರಿಂದ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿತು. ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಭಿಷೇಕ್ ರತ್ನಂ ಮತ್ತು ವಿನಯ್ ಓಜಾ ಏಜೆಂಟ್‌ಗಳ ಮೂಲಕ ನಕಲಿ ಖಾತೆಗಳನ್ನು ತೆರೆದು 1.25 ಕೋಟಿ ರೂ. ವಂಚಿಸಿದ್ದರು.