ನನ್ನ ಮಗಳನ್ನು ಕ್ರೀಡೆಗಳಲ್ಲಿ ಪ್ರೋತ್ಸಾಹಿಸಿದ್ದೇ ತಪ್ಪು: ಖೇಲ್‌ರತ್ನಕ್ಕೆ ಕಡೆಗಣಿಸಿದ ಸರಕಾರದ ವಿರುದ್ಧ ಮನು ಭಾಕರ್ ತಂದೆ ಆಕ್ರೋಶ

Update: 2024-12-24 15:28 GMT

ಮನು ಭಾಕರ್ | PTI 

ಹೊಸದಿಲ್ಲಿ : ಈ ವರ್ಷ ಧ್ಯಾನ್‌ ಚಂದ್ ಖೇಲ್ ರತ್ನ ಪ್ರಶಸ್ತಿಯಿಂದ ತನ್ನ ಮಗಳನ್ನು ನಿರ್ಲಕ್ಷಿಸಿರುವ ಸರಕಾರದ ವಿರುದ್ಧ ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಅವಳಿ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದ ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್ ಅವರು ವಾಗ್ದಾಳಿ ನಡೆಸಿದ್ದಾರೆ.

ಕ್ರೀಡೆಗಳಲ್ಲಿ ತನ್ನ ವೃತ್ತಿಜೀವನ ಕಂಡುಕೊಳ್ಳಲು ತನ್ನ ಮಗಳನ್ನು ಪ್ರೋತ್ಸಾಹಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಕಿಶನ್ ಅವರು ತಮ್ಮ ಮಕ್ಕಳನ್ನು ಒಲಿಂಪಿಕ್ಸ್ ಕ್ರೀಡೆಗಳಿಂದ ದೂರ ಇರಿಸಿ ಎಂದು ಇತರ ಹೆತ್ತವರಿಗೆ ಸಲಹೆ ನೀಡಿದರು.

ಪುತ್ರಿ ಮನುವನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಿದ್ದು ನನ್ನ ತಪ್ಪು. ನಿಮ್ಮ ಮಕ್ಕಳನ್ನು ಕ್ರೀಡೆಗಳಲ್ಲಿ ತೊಡಗಿಸಬೇಡಿ, ಅವರ ವಿದ್ಯಾಭ್ಯಾಸದತ್ತ ಗಮನ ನೀಡಿ ಅವರನ್ನು ಐಎಎಸ್/ಐಪಿಎಸ್ ಅಥವಾ ಯುಪಿಎಸ್‌ಸಿ ಅಧಿಕಾರಿಗಳಾಗಲು ನೆರವು ನೀಡಿ. ಆ ಮೂಲಕ ನಿಮ್ಮ ಮಕ್ಕಳು ಸಾವಿರಾರು ಕ್ರೀಡಾಪಟುಗಳ ಮೇಲೆ ಅಧಿಕಾರ ಚಲಾಯಿಸಲು ಶಕ್ತರಾಗುವಂತೆ ಮಾಡಿ ಎಂದು ಇಡೀ ದೇಶದ ಪೋಷಕರಲ್ಲಿ ಹೇಳಲು ಬಯಸುವೆ ಎಂದರು.

ಸರಕಾರವು 2036ರ ಒಲಿಂಪಿಕ್ಸ್ ಆತಿಥ್ಯದ ಕುರಿತು ಮಾತನಾಡುತ್ತಿದೆ. ನೀವು ಪ್ರೋತ್ಸಾಹ ನೀಡದೆ ಇದ್ದರೆ ಕ್ರೀಡಾಪಟುಗಳು ಎಲ್ಲಿಂದ ಬರುತ್ತಾರೆ. ನಾನೊಬ್ಬ ಪೋಷಕನಾಗಿ, ಒಲಿಂಪಿಕ್ಸ್ ಕ್ರೀಡೆಗಳಲ್ಲಿ ನಿಮ್ಮ ಮಕ್ಕಳನ್ನು ತೊಡಗಿಸಬೇಡಿ ಎಂದು ಇತರ ಪಾಲಕರಿಗೆ ಹೇಳಲು ಬಯಸುವೆ. ಅವರನ್ನು ವಿದ್ಯಾಭ್ಯಾಸದತ್ತ ತೊಡಗಿಸಿ ಐಎಎಸ್/ಐಪಿಎಸ್ ಅಧಿಕಾರಿಯನ್ನಾಗಿ ಮಾಡಿ ಲಕ್ಷಾಂತರ ಆಟಗಾರರ ಪೈಕಿ ಯಾರು ಖೇಲ್‌ರತ್ನ ಪಡೆಯಬೇಕೆಂದು ನಿರ್ಧರಿಸುವ ಅಧಿಕಾರವನ್ನು ಪಡೆಯುವಂತೆ ಮಾಡಿ ಎಂದು ಸಲಹೆ ನೀಡಿದರು.

ಈ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮನು ಭಾಕರ್ ಅವರು ಸ್ವಾತಂತ್ರೋತ್ತರ ಭಾರತದಲ್ಲಿ ಒಂದೇ ಒಲಿಂಪಿಕ್ಸ್‌ ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಅತ್ಲೀಟ್ ಎನಿಸಿಕೊಂಡಿದ್ದರು.

ಮನು ಅವರ ಕೋಚ್ ಜಸ್ಪಾಲ್ ರಾಣಾ ಕೂಡ ಕ್ರೀಡಾ ಸಚಿವಾಲಯ, ಭಾರತದ ಕ್ರೀಡಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ರೈಫಲ್ ಸಂಸ್ಥೆಯನ್ನು ತೀವ್ರವಾಗಿ ಟೀಕಿಸಿದ್ದು, ಧ್ಯಾನ್‌ ಚಂದ್ ಖೇಲ್‌ ರತ್ನ ಪ್ರಶಸ್ತಿ ಶಿಫಾರಸು ಮಾಡುವಾಗ ಭಾಕರ್ ಅವರ ಸಾಧನೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ನಾನು ಎಲ್ಲರನ್ನೂ ಹೊಣೆಯನ್ನಾಗಿ ಮಾಡುವೆ. ಮನು ಪ್ರಶಸ್ತಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದ್ದು ಹೇಗೆ? ಒಂದೇ ಒಲಿಂಪಿಕ್ಸ್‌ ನಲ್ಲಿ ಎರಡು ಒಲಿಂಪಿಕ್ಸ್ ಪದಕಗಳನ್ನು ಜಯಿಸಿದ ಮೊದಲ ಭಾರತೀಯ ಅತ್ಲೀಟ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ. ಮನು ಹೆಸರು ಅರ್ಜಿ ಸಲ್ಲಿಸದೇ ಇದ್ದರೂ ಪಟ್ಟಿಯಲ್ಲಿರಬೇಕಾಗಿತ್ತು. ಈ ರೀತಿಯ ಅವಮಾನವು ಅವರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ರಾಣಾ ಪಿಟಿಐ ವೀಡಿಯೊಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News