2ನೇ ಟಿ-20: ಪಾಕಿಸ್ತಾನದ ವಿರುದ್ಧ ಕಿವೀಸ್ಗೆ 5 ವಿಕೆಟ್ ಜಯ
Photo : @ICC
ಡುನೆಡಿನ್: ಆರಂಭಿಕ ಬ್ಯಾಟರ್ಗಳಾದ ಟಿಮ್ ಸೀಫರ್ಟ್(45 ರನ್, 22 ಎಸೆತ,3 ಬೌಂಡರಿ, 5 ಸಿಕ್ಸರ್)ಹಾಗೂ ಫಿನ್ ಅಲ್ಲೆನ್(38 ರನ್, 16 ಎಸೆತ, 1 ಬೌಂಡರಿ, 5 ಸಿಕ್ಸರ್)ಬಿರುಸಿನ ಬ್ಯಾಟಿಂಗ್ ಬಲದಿಂದ ಆತಿಥೇಯ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವು ಪಾಕಿಸ್ತಾನ ತಂಡದ ವಿರುದ್ಧ ಮಳೆಬಾಧಿತ 2ನೇ ಟಿ-20 ಅಂತರ್ರಾಷ್ಟ್ರೀಯ ಪಂದ್ಯವನ್ನು 5 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿದೆ.
ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದ ಕಾರಣ ಮಂಗಳವಾರ ಪಂದ್ಯವು ವಿಳಂಬವಾಗಿ ಆರಂಭವಾಯಿತು. 15 ಓವರ್ಗಳಿಗೆ ಸೀಮಿತಗೊಂಡಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡವು ನಾಯಕ ಸಲ್ಮಾನ್ ಅಲಿ ಅಘಾ(46 ರನ್,28 ಎಸೆತ, 4 ಬೌಂಡರಿ, 3 ಸಿಕ್ಸರ್)ಏಕಾಂಗಿ ಹೋರಾಟದ ನೆರವಿನಿಂದ 9 ವಿಕೆಟ್ಗಳ ನಷ್ಟಕ್ಕೆ 135 ರನ್ ಗಳಿಸಿತು.
ಗೆಲ್ಲಲು 136 ರನ್ ಗುರಿ ಪಡೆದಿದ್ದ ನ್ಯೂಝಿಲ್ಯಾಂಡ್ ವಿರುದ್ಧ ಬೌಲಿಂಗ್ ದಾಳಿ ಆರಂಭಿಸಿದ ಶಾಹೀನ್ ಶಾ ಅಫ್ರಿದಿ ಮೇಡನ್ ಓವರ್ ಎಸೆದರು. ಆ ನಂತರ ಅಬ್ಬರದ ಬ್ಯಾಟಿಂಗ್ ಮಾಡಿದ ಸೀಫರ್ಟ್ ಹಾಗೂ ಅಲ್ಲೆನ್ ಮುಂದಿನ 12 ಎಸೆತಗಳಲ್ಲಿ 7 ಸಿಕ್ಸರ್ಗಳನ್ನು ಸಿಡಿಸಿದರು.
ಈ ಇಬ್ಬರು ಬ್ಯಾಟರ್ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನ್ಯೂಝಿಲ್ಯಾಂಡ್ ತಂಡವು ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿದ್ದು, 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಸೀಫರ್ಟ್ ಹಾಗೂ ಅಲ್ಲೆನ್ ತಲಾ ಐದು ಸಿಕ್ಸರ್ಗಳನ್ನು ಸಿಡಿಸಿದ್ದು ನ್ಯೂಝಿಲ್ಯಾಂಡ್ ತಂಡವು ಸುಲಭವಾಗಿ ಗುರಿ ತಲುಪಿತು. ಮೊದಲ ಓವರ್ನಲ್ಲಿ ರನ್ ಗಳಿಸಲು ಸಾಧ್ಯವಾಗದೆ ಇದ್ದಾಗ 2ನೇ ಓವರ್ನ ಮೊದಲನೇ,3ನೇ ಹಾಗೂ 6ನೇ ಎಸೆತದಲ್ಲಿ ಅಲ್ಲೆನ್ ಅವರು ಸಿಕ್ಸರ್ ಸುರಿಮಳೆಗೈದರು. ಸೀಫರ್ಟ್ ಮುಂದಿನ ಓವರ್ನಲ್ಲಿ ಮೊದಲೆರಡು ಹಾಗೂ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ಗಳನ್ನು ಸಿಡಿಸಿ ನ್ಯೂಝಿಲ್ಯಾಂಡ್ ತಂಡವು ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಲು ನೆರವಾದರು.
90 ಎಸೆತಗಳಲ್ಲಿ 136 ರನ್ ಗುರಿ ಪಡೆದಿದ್ದ ನ್ಯೂಝಿಲ್ಯಾಂಡ್ ತಂಡಕ್ಕೆ 5 ಓವರ್ಗಳ ಪವರ್ ಪ್ಲೇ ನಂತರ 60 ಎಸೆತಗಳಲ್ಲಿ 70 ರನ್ ಅಗತ್ಯವಿತ್ತು. ಟಿಮ್ ಸೀಫರ್ಟ್ ಹಾಗೂ ಅಲ್ಲೆನ್ ಔಟಾದಾಗ ನ್ಯೂಝಿಲ್ಯಾಂಡ್ ತಂಡದ ಸ್ಕೋರ್ 87ಕ್ಕೆ 2 ಆಗಿತ್ತು.
16 ಎಸೆತಗಳಲ್ಲಿ ಔಟಾಗದೆ 21 ರನ್ ಗಳಿಸಿದ್ದ ಮೈಕಲ್ ಹೇ ನ್ಯೂಝಿಲ್ಯಾಂಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಜಹಾನ್ದಾದ್ ಖಾನ್ ಬೌಲಿಂಗ್ನಲ್ಲಿ ಬೌಂಡರಿ ಗಳಿಸಿದ ಬ್ರೆಸ್ವೆಲ್ ಅವರು ಕಿವೀಸ್ 13.1 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 137 ರನ್ ಗಳಿಸಲು ನೆರವಾದರು.
ಯುನಿವರ್ಸಿಟಿ ಓವಲ್ ಪಿಚ್ನಲ್ಲಿ ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು.
ಮೊದಲ ಟಿ-20 ಪಂದ್ಯದಲ್ಲಿ 14 ರನ್ ನೀಡಿ 4 ವಿಕೆಟ್ಗಳನ್ನು ಪಡೆದು ನ್ಯೂಝಿಲ್ಯಾಂಡ್ಗೆ 9 ವಿಕೆಟ್ ಗೆಲುವು ತಂದುಕೊಟ್ಟಿದ್ದ ಜೇಕಬ್ ಡಫಿ ಅವರು ಇನಿಂಗ್ಸ್ನ 4ನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ಹಸನ್ ನವಾಝ್(0) ವಿಕೆಟನ್ನು ಉರುಳಿಸಿದರು.
1 ವಿಕೆಟ್ ನಷ್ಟಕ್ಕೆ 19 ರನ್ ಗಳಿಸಿದ್ದ ಪಾಕಿಸ್ತಾನ ತಂಡ ಚೇತರಿಕೆಯ ಹಾದಿಯಲ್ಲಿತ್ತು. ಆಗ ನ್ಯೂಝಿಲ್ಯಾಂಡ್ ಬೌಲರ್ಗಳು ತಮ್ಮ ಲಯ ಕಂಡುಕೊಂಡರು. ಚಾಂಪಿಯನ್ಸ್ ಟ್ರೋಫಿಯ ವೇಳೆ ಕಾಣಿಸಿಕೊಂಡಿದ್ದ ಗಾಯದಿಂದ ಚೇತರಿಸಿಕೊಂಡು ವಾಪಸಾಗಿರುವ ಬೆನ್ ಸಿಯರ್ಸ್ 4ನೇ ಓವರ್ನ ಮೊದಲ ಎಸೆತದಲ್ಲಿ ಇನ್ನೋರ್ವ ಆರಂಭಿಕ ಆಟಗಾರ ಮುಹಮ್ಮದ್ ಹಾರಿಸ್(11 ರನ್) ವಿಕೆಟನ್ನು ಪಡೆದರು.
ಪಾಕಿಸ್ತಾನ ತಂಡವು ಪವರ್ ಪ್ಲೇ ಅಂತ್ಯದ ವೇಳೆಗೆ 2 ವಿಕೆಟ್ಗಳ ನಷ್ಟಕ್ಕೆ 36 ರನ್ ಗಳಿಸಿತು. ಪ್ರತಿ ದಾಳಿ ಸಂಘಟಿಸಿದ ಸಲ್ಮಾನ್ ಅವರು ಜಿಮ್ಮಿ ನೀಶಾಮ್ ಎಸೆದ 7ನೇ ಓವರ್ನಲ್ಲಿ 12 ರನ್ ಕಲೆ ಹಾಕಿದರು.
ಲೆಗ್ ಸ್ಪಿನ್ನರ್ ಇಶ್ ಸೋಧಿ 7ನೇ ಓವರ್ನ 4ನೇ ಹಾಗೂ 6ನೇ ಎಸೆತದಲ್ಲಿ ಇರ್ಫಾನ್ ಖಾನ್(11 ರನ್)ಹಾಗೂ ಖುಷ್ದಿಲ್ ಶಾ(2 ರನ್)ವಿಕೆಟ್ಗಳನ್ನು ಉರುಳಿಸಿದರು. ಆಗ ಪಾಕಿಸ್ತಾನ 52 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡಿತು.
ಸಿಯರ್ಸ್ ಎಸೆದ 8ನೇ ಓವರ್ನಲ್ಲಿ 10 ರನ್ ಹಾಗೂ ಸೋಧಿ ಎಸೆದ 9ನೇ ಓವರ್ನಲ್ಲಿ ಇನ್ನೂ 13 ರನ್ ಕಲೆ ಹಾಕಿದ ಸಲ್ಮಾನ್ ಅಲಿ ತಂಡದ ಸ್ಕೋರಿಂಗ್ ರೇಟ್ ಏರಿಸಲು ಯತ್ನಿಸಿದರು. ಸಿಯರ್ಸ್ ಅವರು ಸಲ್ಮಾನ್ ಅಲಿ ಇನಿಂಗ್ಸ್ಗೆ ತೆರೆ ಎಳೆದರು.
ಶಾದಾಬ್ ಖಾನ್(26 ರನ್)10ನೇ ಓವರ್ನಲ್ಲಿ ಸಿಯರ್ಸ್ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿದರು. ಬ್ರೆಸ್ವೆಲ್ ಎಸೆದ 11ನೇ ಓವರ್ನಲ್ಲಿ 14 ರನ್ ಸೂರೆಗೈದರು. ಡಫಿ ಎಸೆದ 12ನೇ ಓವರ್ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಗಳಿಸಿ ಅವರಿಗೇ ವಿಕೆಟ್ ಒಪ್ಪಿಸಿದರು.
14 ಎಸೆತಗಳಲ್ಲಿ 22 ರನ್ ಕೊಡುಗೆ ನೀಡಿದ ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನ ತಂಡವು ಕೊನೆಯ 3 ಓವರ್ಗಳಲ್ಲಿ 25 ರನ್ ಗಳಿಸುವಲ್ಲಿ ನೆರವಾದರು.
ನ್ಯೂಝಿಲ್ಯಾಂಡ್ ಪರ ಬೌಲಿಂಗ್ ವಿಭಾಗದಲ್ಲಿ ಇಶ್ ಸೋಧಿ (2-17), ಜೇಕಬ್ ಡಫಿ (2-20), ಬೆನ್ ಸಿಯರ್ಸ್ (2-23) ಹಾಗೂ ಜೇಮ್ಸ್ ನೀಶಾಮ್ (2-26)ತಲಾ ಎರಡು ವಿಕೆಟ್ಗಳನ್ನು ಪಡೆದರು.
‘‘ನಾವು ಮೊದಲ ಪಂದ್ಯಕ್ಕಿಂತ ಈ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದೇವೆ. ನಮ್ಮ ಬ್ಯಾಟಿಂಗ್ ಚೆನ್ನಾಗಿತ್ತು. ಆದರೆ, ಇನ್ನಷ್ಟು ರನ್ ಗಳಿಸುವ ಅಗತ್ಯವಿತ್ತು’’ಎಂದು ಸಲ್ಮಾನ್ ಅಲಿ ಹೇಳಿದ್ದಾರೆ.
ಮೊದಲ ಓವರ್ನಲ್ಲಿ ಸತತ ಆರು ಟಾಟ್ ಬಾಲ್ಗಳನ್ನು ಎದುರಿಸಿದ್ದ ಟಿಮ್ ಸೀಫರ್ಟ್ ಅವರು ಶಾಹೀನ್ ಅಫ್ರಿದಿ ಎಸೆದ ಮುಂದಿನ ಓವರ್ನ ಮೊದಲೆರಡು ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಕೊನೆಯ ಎಸೆತಗಳಲ್ಲಿ ಇನ್ನೂ 2 ಸಿಕ್ಸರ್ ಸಿಡಿಸಿದರು. ಈಮೂಲಕ ಒಂದೇ ಓವರ್ನಲ್ಲಿ 4 ಸಿಕ್ಸರ್ ಸಿಡಿಸಿದರು. ಈ ಸಾಹಸಕ್ಕೆ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಪಾತ್ರರಾದರು.