ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ಮರಳಲು ಬಾಕ್ಸಿಂಗ್ ಸಕಲ ಸಿದ್ಧತೆ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಸುದೀರ್ಘ ವಿವಾದ ಮತ್ತು ಆಡಳಿತಾತ್ಮಕ ಕಲಹದ ಬಳಿಕ, 2028ರ ಲಾಸ್ ಏಂಜಲಿಸ್ ಒಲಿಂಪಿಕ್ ಗೇಮ್ಸ್‌ಗೆ ಬಾಕ್ಸಿಂಗ್ ಅಧಿಕೃತವಾಗಿ ಮರಳಲು ವೇದಿಕೆ ಸಿದ್ಧವಾಗಿದೆ.
2028ರ ಒಲಿಂಪಿಕ್ಸ್‌ಗೆ ಬಾಕ್ಸಿಂಗನ್ನು ಸೇರ್ಪಡೆಗೊಳಿಸುವ ಪ್ರಸ್ತಾವಕ್ಕೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ)ಕಾರ್ಯಕಾರಿ ಮಂಡಳಿ ಅನುಮೋದನೆ ನೀಡಿದೆ ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಘೋಷಿಸಿದ್ದಾರೆ. ಐಒಸಿ ಸುಮಾರು 100 ಸದಸ್ಯರ ಅಂತಿಮ ಅನುಮೋದನೆಯು ಈ ವಾರದಲ್ಲಿ ಲಭಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಆಡಳಿತ, ಆರ್ಥಿಕ ಅಸ್ಥಿರತೆ ಮತ್ತು ಪ್ರಾಮಾಣಿಕತೆ ಕುರಿತ ಕಳವಳಗಳ ಹಿನ್ನೆಲೆಯಲ್ಲಿ, 2019ರಲ್ಲಿ ರಶ್ಯ ನೇತೃತ್ವದ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೊಸಿಯೇಶನ್ (ಐಬಿಎ) ಜೊತೆಗಿನ ಸಂಪರ್ಕಗಳನ್ನು ಐಒಸಿ ಕಡಿದುಕೊಂಡಿತ್ತು.
ಬಳಿಕ, 2023ರಲ್ಲಿ ಐಒಸಿ ಅಭೂತಪೂರ್ವ ಕ್ರಮವೊಂದನ್ನು ತೆಗೆದುಕೊಂಡು, ಐಬಿಎ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದನ್ನು ಶಾಶ್ವತವಾಗಿ ನಿಷೇಧಿಸಿತು. ಐಬಿಎಯ ಕೆಲವು ಸದಸ್ಯರು ವರ್ಲ್ಡ್ ಬಾಕ್ಸಿಂಗ್ ಎಂಬ ಹೆಸರಿನಲ್ಲಿ ನೂತನ ಆಡಳಿತ ಮಂಡಳಿಯೊಂದನ್ನು ಸ್ಥಾಪಿಸುವ ಮುನ್ನ ಐಒಎ ಈ ಪ್ರಹಾರ ನೀಡಿತ್ತು.
‘‘ಈ ಪ್ರಸ್ತಾವವನ್ನು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸದಸ್ಯರು ಅಂಗೀಕರಿಸುತ್ತಾರೆ ಎನ್ನುವ ಬಗ್ಗೆ ನನಗೆ ಅಗಾಧ ವಿಶ್ವಾಸವಿದೆ. ಬಳಿಕ, ಬಾಕ್ಸರ್‌ಗಳ ರಾಷ್ಟ್ರೀಯ ಫೆಡರೇಶನ್‌ಗಳು ವರ್ಲ್ಡ್ ಬಾಕ್ಸಿಂಗ್‌ನಿಂದ ಮಾನ್ಯತೆ ಪಡೆದರೆ ಲಾಸ್ ಏಂಜಲಿಸ್ ಒಲಿಂಪಿಕ್ಸ್ ಕ್ರೀಡಾಕೂಟ 2028ರಲ್ಲಿ ಜಗತ್ತಿನ ಎಲ್ಲಾ ಬಾಕ್ಸರ್‌ಗಳು ಖಂಡಿತವಾಗಿಯೂ ಪಾಲ್ಗೊಳ್ಳಬಹುದು’’ ಎಂದು ಬಾಕ್ ಹೇಳಿದರು.
2021ರ ಟೋಕಿಯೊ ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗಳಲ್ಲಿ ಬಾಕ್ಸಿಂಗ್ ಸ್ಪರ್ಧೆಗಳನ್ನು ಐಒಸಿ ಪ್ರತ್ಯೇಕವಾಗಿ ನಡೆಸಿತ್ತು. ಆದರೆ, ಲಾಸ್ ಏಂಜಲಿಸ್ ಗೇಮ್ಸ್‌ಗೆ ಮೊದಲು ವಿಶ್ವ ಬಾಕ್ಸಿಂಗ್‌ನೊಂದಿಗೆ ಹೊಸ ಭಾಗೀದಾರಿಕೆ ನಡೆಸಲು ಅದು ತೀರ್ಮಾನಿಸಿತ್ತು.