ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪ ನಾಯಕನಾಗಿ ಎಫ್ ಡು ಪ್ಲೆಸಿಸ್ ಆಯ್ಕೆ

ಎಫ್ ಡು ಪ್ಲೆಸಿಸ್ | PC : PTI
ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ಹಿರಿಯ ಬ್ಯಾಟರ್ ಎಫ್ ಡು ಪ್ಲೆಸಿಸ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ(ಐಪಿಎಲ್) ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪ ನಾಯಕನಾಗಿ ನೇಮಕಗೊಂಡಿದ್ದಾರೆ.
ಡೆಲ್ಲಿ ಫ್ರಾಂಚೈಸಿ ಸೋಮವಾರದಂದು ಸಾಮಾಜಿಕ ಜಾಲತಾಣದ ಮೂಲಕ ಪ್ಲೆಸಿಸ್ ನೇಮಕವನ್ನು ಪ್ರಕಟಿಸಿದೆ.
‘‘ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪ ನಾಯಕನಾಗಿ ಆಯ್ಕೆಯಾಗಿರುವುದಕ್ಕೆ ತುಂಬಾ ಖುಷಿಯಾಗಿದೆ. ಡೆಲ್ಲಿ ತಂಡದಲ್ಲಿ ಶ್ರೇಷ್ಠ ಹಾಗೂ ಅದ್ಭುತ ಆಟಗಾರರಿದ್ದಾರೆ. ನನಗೆ ನಿಜವಾಗಿಯೂ ತುಂಬಾ ಖುಷಿಯಾಗಿದ್ದು, ಎಲ್ಲದ್ದಕ್ಕೂ ಸಜ್ಜಾಗಿರುವೆ’’ ಎಂದು ಫ್ರಾಂಚೈಸಿ ಹಂಚಿಕೊಂಡಿರುವ ವೀಡಿಯೊದ ಕುರಿತು ಪ್ಲೆಸಿಸ್ ಪ್ರತಿಕ್ರಿಯಿಸಿದರು.
ದಿಲ್ಲಿ ಮೂಲದ ತಂಡವು ಕಳೆದ ವರ್ಷ ಜಿದ್ದಾದಲ್ಲಿ ನಡೆದಿದ್ದ ಮೆಗಾ ಹರಾಜಿನ ವೇಳೆ 2 ಕೋಟಿ ರೂ. ಮೂಲ ಬೆಲೆಗೆ ಪ್ಲೆಸಿಸ್ ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಹರಾಜಿಗಿಂತ ಮೊದಲು ಆರ್‌ಸಿಬಿ ತಂಡವು ಪ್ಲೆಸಿಸ್ ರನ್ನು ಬಿಡುಗಡೆಗೊಳಿಸಿತ್ತು.
ಈ ಬೆಳವಣಿಗೆಯಿಂದ ಡು ಪ್ಲೆಸಿಸ್ ಅವರು ಡೆಲ್ಲಿ ತಂಡ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಮೈದಾನದ ಒಳಗೆ ಹಾಗೂ ಹೊರಗೆ ನಾಯಕ ಅಕ್ಷರ್ ಪಟೇಲ್ ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಿಗೆ ಡು ಪ್ಲೆಸಿಸ್ ನೆರವಾಗಲಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಆಫ್ರಿಕಾದ ನಾಯಕನಾಗಿದ್ದ ಡು ಪ್ಲೆಸಿಸ್ 2022ರಿಂದ 2024ರ ತನಕ ಆರ್‌ಸಿಬಿ ತಂಡದ ನಾಯಕತ್ವವಹಿಸಿದ್ದರು. ನಾಯಕ ಅಕ್ಷರ್ ಪಟೇಲ್‌ರೊಂದಿಗೆ ಡು ಪ್ಲೆಸಿಸ್ ತನ್ನ ಅಪಾರ ಅನುಭವ ಹಂಚಿಕೊಳ್ಳಲಿದ್ದಾರೆ.
ಆರ್‌ಸಿಬಿ ನಾಯಕನಾಗಿದ್ದಾಗ ಡು ಪ್ಲೆಸಿಸ್ 42 ಪಂದ್ಯಗಳಲ್ಲಿ ತಂಡದ ನಾಯಕತ್ವವಹಿಸಿದ್ದು, ಈ ಪೈಕಿ 21ರಲ್ಲಿ ಜಯ ಹಾಗೂ 21ರಲ್ಲಿ ಸೋಲನುಭವಿಸಿದ್ದರು. ಗೆಲುವು-ಸೋಲು ಅನುಪಾತದಲ್ಲಿ ಸಮತೋಲನ ಕಾಯ್ದುಕೊಂಡಿದ್ದಾರೆ. ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ ತಂಡವು ಎರಡು ಬಾರಿ ಪ್ಲೇ ಆಫ್‌ಗೆ ತಲುಪಿತ್ತು. ಆದರೆ ಎರಡೂ ಬಾರಿಯೂ ಎಲಿಮಿನೇಟರ್ ಸುತ್ತಿನಲ್ಲಿ ಸೋತಿತ್ತು. ಹಿಂದಿನ 5 ಐಪಿಎಲ್ ಋತುಗಳಲ್ಲಿ 74 ಇನಿಂಗ್ಸ್‌ಗಳಲ್ಲಿ 2,718 ರನ್ ಗಳಿಸಿದ್ದಾರೆ.
ಡು ಪ್ಲೆಸಿಸ್ ಹಾಗೂೂ ಅಕ್ಷರ್ ಅವರು ಅಮೂಲಾಗ್ರ ಬದಲಾವಣೆ ಕಂಡಿರುವ ಮುಖ್ಯ ಕೋಚ್ ಹೇಮಂಗ್ ಬದಾನಿ, ಕ್ರಿಕೆಟ್ ನಿರ್ದೇಶಕ ವೇಣುಗೋಪಾಲ್ ರಾವ್, ಬೌಲಿಂಗ್ ಕೋಚ್ ಮುನಾಫ್ ಪಟೇಲ್, ಸಹಾಯಕ ಕೋಚ್ ಮ್ಯಾಥ್ಯೂ ಮೋಟ್, ಮೆಂಟರ್ ಕೆವಿನ್ ಪೀಟರ್ಸನ್, ಫೀಲ್ಡಿಂಗ್ ಕೋಚ್‌ಗಳಾದ ಜ್ಞಾನೇಶ್ವರ ರಾವ್ ಹಾಗೂ ಅಂಟೋನ್ ರೌಕ್ಸ್ ಅವರನ್ನೊಳಗೊಂಡ ಕೋಚಿಂಗ್ ಸಿಬ್ಬಂದಿಯೊಂದಿಗೆ ಕೆಲಸ ಮಾಡಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮಾ.24ರಂದು ವಿಶಾಖಪಟ್ಟಣದಲ್ಲಿ ಲಕ್ನೊ ಸೂಪರ್ ಜೈಂಟ್ಸ್(ಎಲ್‌ಎಸ್‌ಜಿ)ತಂಡದ ವಿರುದ್ಧ ಆಡುವ ಮೂಲಕ 2025ರ ಐಪಿಎಲ್ ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.