ಬಿಸಿಲಿನ ಆಘಾತಕ್ಕೆ ಆಸ್ಟ್ರೇಲಿಯ ಕ್ರಿಕೆಟಿಗ ಕುಸಿದು ಬಿದ್ದು ಸಾವು
Photo: Facebook
ಅಡಿಲೇಡ್: ಅಡಿಲೇಡ್ ನಲ್ಲಿ ಶನಿವಾರ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಬಿಸಿಲಿನ ಆಘಾತಕ್ಕೆ ಒಳಗಾಗಿ ಪಾಕಿಸ್ತಾನ ಮೂಲದ ಆಸ್ಟ್ರೇಲಿಯ ಕ್ರಿಕೆಟಿಗ ಜುನೈದ್ ಝಫರ್ ಖಾನ್ ಕುಸಿದು ಬಿದ್ದು ಮೃತಪಟ್ಟ ಘಟನೆಯೊಂದು ವರದಿಯಾಗಿದೆ.
ಅಡಿಲೇಡ್ನ ಕಾನ್ಕಾರ್ಡಿಯ ಕಾಲೇಜು ಓವಲ್ ನಲ್ಲಿ ಓಲ್ಡ್ ಕಾನ್ಕಾರ್ಡಿಯನ್ಸ್ ಮತ್ತು ಪ್ರಿನ್ಸ್ ಆಲ್ಫ್ರೆಡ್ ಓಲ್ಡ್ ಕಾಲೇಜಿಯನ್ಸ್ ನಡುವೆ ನಡೆದ ಪಂದ್ಯದ ವೇಳೆ ಸಂಜೆ ಸುಮಾರು 4 ಗಂಟೆಗೆ ದುರಂತ ನಡೆದಿದೆ. ವೈದ್ಯಕೀಯ ಸಿಬ್ಬಂದಿಯು ಜುನೈದ್ ಗೆ ತಕ್ಷಣ ಚಿಕಿತ್ಸೆ ನೀಡಿದರೂ ಅವರು ಬದುಕುಳಿಯಲಿಲ್ಲ.
ಘಟನೆ ನಡೆದಾಗ ಸ್ಥಳದ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ಮೀರಿತ್ತು. ಅಡಿಲೇಡ್ ಟರ್ಫ್ ಕ್ರಿಕೆಟ್ ಅಸೋಸಿಯೇಶನ್ ನಿಯಮಗಳ ಪ್ರಕಾರ, ಉಷ್ಣತೆ 42 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ಪಂದ್ಯವನ್ನು ನಿಲ್ಲಿಸಬೇಕು.
ನಲ್ವತ್ತು ವರ್ಷ ದಾಟಿರುವ ಜುನೈದ್ ಅವರು ಓಲ್ಡ್ ಕಾನ್ಕಾರ್ಡಿಯನ್ಸ್ ಕ್ರಿಕೆಟ್ ಕ್ಲಬ್ ನ ಸದಸ್ಯರಾಗಿದ್ದರು. ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಜೀವನ ರೂಪಿಸುವುದಕ್ಕಾಗಿ 2013ರಲ್ಲಿ ಪಾಕಿಸ್ತಾನದಿಂದ ಅಡಿಲೇಡ್ಗೆ ಹೋಗಿದ್ದರು.