ಬೆಂಗಳೂರಿನಲ್ಲಿ RCBಯ ಹೊಸ ಜೆರ್ಸಿ ಅನಾವರಣ

Update: 2025-03-18 20:41 IST
ಬೆಂಗಳೂರಿನಲ್ಲಿ RCBಯ ಹೊಸ ಜೆರ್ಸಿ ಅನಾವರಣ

Photo : @RCBTweets

  • whatsapp icon

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB)ತಂಡದ ʼಅನ್ಬಾಕ್ಸ್ʼ ಕಾರ್ಯಕ್ರಮ ಸೋಮವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ತನ್ನ ಸಹ ಆಟಗಾರರೊಂದಿಗೆ ಆರ್ಸಿಬಿ ಜೆರ್ಸಿ ಧರಿಸಿ ವಿರಾಟ್ ಕೊಹ್ಲಿ ಮೈದಾನಕ್ಕೆ ಪ್ರವೇಶಿಸುತ್ತಿದ್ದಂತೆಯೇ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

RCB ತಂಡದ 2025ರ ಆವೃತ್ತಿಯ ಐಪಿಎಲ್ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಈ ವೇಳೆ ಪ್ರೇಕ್ಷಕರು ಈ ಸಂಭ್ರಮದಲ್ಲಿ ಭಾಗಿಯಾದರು.

ಕಾರ್ಯಕ್ರಮದಲ್ಲಿ ಆರ್ಸಿಬಿ ತಂಡದ ಹೊಸ ಜೆರ್ಸಿಯನ್ನು ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು. ಕಾರ್ಯಕ್ರಮಗಳ ನೇರ ಪ್ರಸಾರದ ಜೊತೆಗೆ ವಿರಾಟ್ ಕೊಹ್ಲಿ ಹಾಗೂ ನೂತನ ನಾಯಕ ರಜತ್ ಪಾಟಿದಾರ್ ಜೊತೆಗೆ ಸಂವಹನವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ನಂತರ ವಿರಾಟ್ ಹಾಗೂ ಅವರ ಸಹ ಆಟಗಾರರು ಕ್ರೀಡಾಂಗಣಕ್ಕೆ ಒಂದು ಸುತ್ತುಬಂದು ಉತ್ಸಾಹಭರಿತ ಬೆಂಬಲಿಗರತ್ತ ಕೈಬೀಸಿದರು.

2008ರಲ್ಲಿ ಐಪಿಎಲ್ ಪಂದ್ಯಾವಳಿ ಆರಂಭವಾದ ನಂತರ ವಿರಾಟ್ ಕೊಹ್ಲಿ ಅವರು ತಂಡದ ದಿಗ್ಗಜ ಆಟಗಾರರಾಗಿದ್ದು, ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಹುರಿದುಂಬಿಸಿದರು. ಉತ್ಸಾಹದಿಂದ ಅಭಿಮಾನಿಗಳನ್ನು ಸ್ವಾಗತಿಸಿದ ಕೊಹ್ಲಿ ಅವರು ಪ್ರೇಕ್ಷಕರತ್ತ ಚೆಂಡನ್ನು ಎಸೆದು ಮತ್ತಷ್ಟು ಖುಷಿಪಡಿಸಿದರು.

ಆರ್ಸಿಬಿ ಅನ್ಬಾಕ್ಸ್ ಈವೆಂಟ್-2025ರಲ್ಲಿ ಡಿಜೆ ಟಿಮ್ಮಿ ಟ್ರಂಪೆಟ್, ಸಂಜಿತ್ ಹೆಗಡೆ, ಐಶ್ವರ್ಯಾ ರಂಗರಾಜನ್, ಹನುಮಾನಕೈಂಡ್, ಆಲ್ ಓಕೆ, ಡಿಜೆ ಚೇತನ್, ಎಂಜೆ ರಾಕೇಶ್, ಸವಾರಿ ಬ್ಯಾಂಡ್ ಹಾಗೂ ಬೆಸ್ಟ್ ಕೆಪ್ಟ್ ಸೀಕ್ರೆಟ್ ಸಹಿತ ಹಲವಾರು ಪ್ರದರ್ಶಕರು ಭಾಗವಹಿಸಿದ್ದರು.

2025ರ ಆವೃತ್ತಿಯ ಐಪಿಎಲ್ನಲ್ಲಿ ಎಫ್ಡು ಪ್ಲೆಸಿಸ್ ಬದಲಿಗೆ ರಜತ್ ಪಾಟಿದಾರ್ ಆರ್ಸಿಬಿ ತಂಡದ ನೇತೃತ್ವವಹಿಸಲಿದ್ದಾರೆ. ಮುಂಬರುವ ಐಪಿಎಲ್ ನಲ್ಲಿ ಡು ಪ್ಲೆಸಿಸ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ.

ಮಾ.22ರಂದು ಕೋಲ್ಕತಾದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುವ ಮೂಲಕ RCB ತಂಡ 2025ರ ಆವೃತ್ತಿಯ ಐಪಿಎಲ್ ಅಭಿಯಾನವನ್ನು ಆರಂಭಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News